ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆಯಾಗುವಂತಿಲ್ಲ

ಸಂಸತ್ತು ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವಿನ ಸೆಣಸಾಟದಲ್ಲಿ ಸ್ಪಷ್ಟವಾಗಿ ಹೊರಹೊಮ್ಮಿರುವ ಅಂಶವೆಂದರೆ, ಎಲ್ಲ ಕಾನೂನುಗಳು, ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಾಂಗದ ಮರುಪರಿಶೀಲನೆಗೆ ಒಳಪಟ್ಟಿವೆ. ಸಂವಿಧಾನದ ಮೂಲಸ್ವರೂಪವನ್ನು ಉಲ್ಲಂಘಿಸುವಂಥ ಅಥವಾ ಅತಿಕ್ರಮಿಸುವಂಥ ಕಾನೂನುಗಳನ್ನು ಸವೋಚ್ಚ ನ್ಯಾಯಾಲಯ ರದ್ದುಗೊಳಿಸುವ ಸಾಧ್ಯತೆಯಿದೆ.

ಸಂವಿಧಾನ ತಿದ್ದುಪಡಿ ವಿಷಯ ಆಗೀಗ ಚರ್ಚೆಯಾಗುವುದನ್ನು ನಾವು ಗಮನಿಸಬಹುದು. ತನ್ನ ಶಾಸನಾತ್ಮಕ ವ್ಯಾಪ್ತಿಯೊಳಗೆ ಕಾನೂನುಗಳನ್ನು ಜಾರಿಗೆ ತರುವ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳ ತಿದ್ದುಪಡಿ ಅಥವಾ ರದ್ದತಿಯ ಅಧಿಕಾರಗಳನ್ನು ಸಂಸತ್ತಿಗೆ ಭಾರತೀಯ ಸಂವಿಧಾನವು ಪ್ರದಾನಿಸಿದೆ. ಸಂಸತ್ತು ತನ್ನ ಈ ‘ಮೂಲಭೂತ’ ಅಧಿಕಾರಗಳನ್ನು ಚಲಾಯಿಸುವುದರ ಜತೆಜತೆಗೆ, ಸಂವಿಧಾನದ ಯಾವುದೇ ಉಪಬಂಧಗಳನ್ನು ಮಾರ್ಪಡಿಸುವ, ಬದಲಾಯಿಸುವ, ರದ್ದುಮಾಡುವ ಅಥವಾ ಸಂವಿಧಾನಕ್ಕೆ ಹೊಸ ಉಪಬಂಧಗಳನ್ನು ಸೇರ್ಪಡೆ ಮಾಡುವ ಮೂಲಕ ಅದಕ್ಕೆ ತಿದ್ದುಪಡಿ ತರುವ ಅಧಿಕಾರವನ್ನೂ ಹೊಂದಿದೆ. ವಿಧಿ 368ರ ಅನುಸಾರ, ಮೂರು ವಿಧಾನಗಳಲ್ಲಿ ಸಂವಿಧಾನದ ತಿದ್ದುಪಡಿ ಮಾಡಬಹುದು. ಅವೆಂದರೆ,

1) ಸರಳ ಬಹುಮತದ ವಿಧಾನ- ಉದಾಹರಣೆಗೆ ಹೊಸ ರಾಜ್ಯಗಳ ಸೃಷ್ಟಿಯ ವಿಷಯದಲ್ಲಿರುವಂತೆ; 2) ವಿಶೇಷ ಬಹುಮತದ (ಮೂರನೇ ಎರಡರಷ್ಟು) ವಿಧಾನ- ಅಂದರೆ ಸಂವಿಧಾನದ ಕೆಲವೊಂದು ಪ್ರಮುಖ ಗುಣವೈಶಿಷ್ಟ್ಯಗಳನ್ನು ತಿದ್ದುಪಡಿಮಾಡಬೇಕಾಗಿ ಬಂದಾಗ; 3) ಪ್ರಸ್ತಾವಿತ ತಿದ್ದುಪಡಿಯು ದೇಶದ ಒಕ್ಕೂಟ ವ್ಯವಸ್ಥೆಯ ಯಾವುದೇ ಗುಣವೈಶಿಷ್ಟ್ಯಗಳನ್ನು ಸ್ಥೂಲವಾಗಿ ಪ್ರಸ್ತಾಪಿಸಿದಲ್ಲಿ ರಾಜ್ಯಗಳ ಒಟ್ಟು ಸಂಖ್ಯೆಯ ಅರ್ಧದಷ್ಟು ಭಾಗದಿಂದ ಊರ್ಜಿತಗೊಳಿಸಲ್ಪಟ್ಟಿರುವ ವಿಶೇಷ ಬಹುಮತದ ವಿಧಾನ. ಈಗ ಉದ್ಭವಿಸುವ ಪ್ರಶ್ನೆ- ಸಂವಿಧಾನದ ಪ್ರತಿಯೊಂದು ಭಾಗವನ್ನೂ ಸಂಸತ್ತು ತಿದ್ದುಪಡಿ ಮಾಡಬಹುದೇ ಅಥವಾ ಸಂವಿಧಾನದ ಪ್ರಧಾನ ತಿರುಳೇ ಎನಿಸಿರುವ, ಮಿಕ್ಕ ಉಪಬಂಧಗಳಿಗಿಂತ ಹೆಚ್ಚು ಮಹತ್ವದ್ದು ಎಂಬ ಕಾರಣದಿಂದಾಗಿ ನಿರ್ದಿಷ್ಟ ಭಾಗಗಳನ್ನು ರದ್ದುಮಾಡಲು ಆಗದೆ? ಸಂಸತ್ತಿನ ವಿಶೇಷ ಬಹುಮತದ ಆಧಾರದ ಮೇಲೆ ಸಂವಿಧಾನವನ್ನೇ ರದ್ದುಮಾಡಿಬಿಡಬಹುದೇ?

ವಿಧಿ 368ನ್ನು ಸರಳವಾಗಿ ಓದಿದರೂ ಸಾಕು ಸಂಸತ್ತಿಗೆ ಸ್ವತಂತ್ರಾಧಿಕಾರ ಇರುವುದು ಮತ್ತು ಅದು ಸಂವಿಧಾನದ ಎಲ್ಲ ಭಾಗಗಳನ್ನೂ ಒಳಗೊಂಡಿದೆ ಎಂಬುದು ಅರ್ಥವಾಗಿಬಿಡುತ್ತದೆ. ಆದಾಗ್ಯೂ, ನಾಲ್ಕು ದಶಕಗಳಿಗೂ ಹಿಂದೆ 1973ರ ಏಪ್ರಿಲ್​ನಲ್ಲಿ, ‘ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ’ ಐತಿಹಾಸಿಕ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಅಸಾಧಾರಣ ಕ್ರಿಯಾಶೀಲತೆ ಮತ್ತು ಧೈರ್ಯ ಪ್ರದರ್ಶಿಸಿ, ಭಾರತೀಯ ನ್ಯಾಯಶಾಸ್ತ್ರದ ಇತಿಹಾಸದಲ್ಲೇ ಅತಿಪ್ರಸಿದ್ಧ ಎನಿಸುವಂಥ ಹೊಸ ಪರಿಕಲ್ಪನೆಯನ್ನು ಪ್ರಸ್ತಾವಿಸಿತು. ನ್ಯಾಯಾಂಗದ ಇತಿಹಾಸದಲ್ಲೇ ಅತಿದೊಡ್ಡದು ಎನಿಸಿಕೊಂಡ (ಹದಿಮೂರು ನ್ಯಾಯಮೂರ್ತಿಗಳ) ನ್ಯಾಯಪೀಠವು 7-6ರಷ್ಟಿದ್ದ ಅತಿಸೂಕ್ಷ್ಮ ಬಹುಮತದಿಂದ ಈ ತೀರ್ಪು ನೀಡಿತು. ಭಾರತೀಯ ಸಮಾಜದ ಪಾಲಿಗೆ ಪರಮಪವಿತ್ರವಾಗಿರುವ ಸಂವಿಧಾನದ ಕೆಲವೊಂದು ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ, ಅಂದಗೆಡಿಸುವ ಅಥವಾ ಊನಗೊಳಿಸುವ ಅಧಿಕಾರ ಸಂಸತ್ತಿಗಿಲ್ಲ ಎನ್ನುವ ಮೂಲಕ, ನಿರಂತರ ವಿಸ್ತರಿಸುತ್ತಲೇ ಇದ್ದ ಶಾಸಕಾಂಗದ ಕೈಗಳನ್ನು ತಡೆದು ನಿಲ್ಲಿಸಿತು. ಈ ತೀರ್ವನಕ್ಕೆ ಜಾಗತಿಕ ಮಟ್ಟದಲ್ಲಿ ಯಾವುದೇ ಪೂರ್ವನಿದರ್ಶನವಿರಲಿಲ್ಲ ಮತ್ತು ಅದು ದೇಶದಲ್ಲಿನ ಪ್ರತಿಯೊಂದು ಸಾಮಾಜಿಕ ಸ್ತರಕ್ಕೂ ಆಕಾರ ನೀಡುವಂತಿತ್ತು.

ಹಾಗಂತ, ಸಂವಿಧಾನ ಮೂಲಭೂತ ಮೂಲಭೂತ ವೈಶಿಷ್ಟ್ಯವೇನೆಂಬ ಬಗ್ಗೆ ಸಮಗ್ರಪಟ್ಟಿಯೊಂದನ್ನು ಸವೋಚ್ಚ ನ್ಯಾಯಾಲಯ ರೂಪಿಸಲಿಲ್ಲ. ಮುಖ್ಯ ನ್ಯಾಯಮೂರ್ತಿ ಸಿಕ್ರಿ ಅವರ ಅನುಸಾರ, ಸಂವಿಧಾನದ ಪರಮಾಧಿಕಾರ, ಸರ್ಕಾರದ ಗಣತಂತ್ರಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸ್ವರೂಪ, ಅದಕ್ಕಿರುವ ಜಾತ್ಯತೀತ ಮತ್ತು ಒಕ್ಕೂಟ ಸ್ವರೂಪ/ವೈಶಿಷ್ಟ್ಯ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳಿಗೆ ನೀಡಲಾಗಿರುವ ಅಧಿಕಾರಗಳ ಎಲ್ಲೆ ಗುರುತಿಸುವಿಕೆ, ಸಂವಿಧಾನದ ಭಾಗ 3ರಲ್ಲಿ ಅಂತರ್ಗತವಾಗಿರುವ ಸ್ವಾತಂತ್ರ್ಯಗಳು ಮತ್ತು ಹಕ್ಕುಗಳು ಮತ್ತು ಭಾಗ 4ರಲ್ಲಿ ನೀಡಲಾಗಿರುವಂತೆ ಪ್ರಜಾಕಲ್ಯಾಣ ಸರ್ಕಾರವೊಂದನ್ನು ನಿರ್ವಿುಸುವುದಕ್ಕಿರುವ ಅಧಿಕೃತ ಆದೇಶ- ಇವೆಲ್ಲವೂ ಸದರಿ ಮೂಲಭೂತ ಸ್ವರೂಪದಲ್ಲಿ ಸೇರಿಕೊಂಡಿವೆ. ಈ ತೀರ್ಪಿನಲ್ಲಿ ಬಹುಮತಾಭಿಪರಾಯ ನೀಡಿದ ಇತರ ನ್ಯಾಯಮೂರ್ತಿಗಳು, ಇವುಗಳಲ್ಲದೆ ಇತರ ಕೆಲವನ್ನು ಕೂಡ ಮೂಲಭೂತ ಸ್ವರೂಪದವು ಎಂಬುದಾಗಿ ವಿವರಿಸಿದರಲ್ಲದೆ, ಅವಶ್ಯಕತೆಯಿದೆ ಎಂದು ತೋರಿದಾಗ ಹೊಸ ಮೂಲಭೂತ ವೈಶಿಷ್ಟ್ಯಗಳನ್ನು ರೂಪಿಸುವುದನ್ನು ‘ತರುವಾಯದಲ್ಲಿ ಬರುವ ಪರಿಣತ, ಅಂತಬೋಧೆಯುಳ್ಳ ನ್ಯಾಯಾಧೀಶರ ಪೀಳಿಗೆಗಳಿಗೆ’ ವಹಿಸಿದರು.

ಈ ತೀರ್ಪನ್ನು ಅವಲೋಕಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಅಂದರೆ, ಯಾವ ತತ್ತ್ವವು ಮೂಲಭೂತ ಸ್ವರೂಪದ ಭಾಗವಾಗಿರಬೇಕು ಎಂಬುದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಅತ್ಯವಶ್ಯವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಮತ್ತು ನಮ್ಮ ಸಂವಿಧಾನವು ಕಾರ್ಯಾಚರಿಸುವಂಥ ಐತಿಹಾಸಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿಸರಕ್ಕೆ ಅನುಸಾರವಾಗಿ ಮಾತ್ರವೇ ಇದನ್ನು ನಿರ್ಣಯಿಸಬಹುದಾಗಿರುತ್ತದೆ. ‘ಮಿನರ್ವ ಮಿಲ್ಸ್ ವರ್ಸಸ್ ಕೇಂದ್ರ ಸರ್ಕಾರ (1980)’ ಪ್ರಕರಣದಲ್ಲಿ ನ್ಯಾಯಾಂಗವು ಮೂಲಭೂತ ಸ್ವರೂಪವನ್ನು ವ್ಯಾಖ್ಯಾನಿಸಿದ ಪರಿ ಹೀಗಿತ್ತು- ‘ನಿಮ್ಮ ಪೀಳಿಗೆಯ ಅಗತ್ಯಗಳೇನು ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆಯಾದ್ದರಿಂದ, ನಿಮ್ಮ ಹಿತರಕ್ಷಣೆಗೆಂದು ರಾಷ್ಟ್ರಸ್ಥಾಪಕರು ಬದ್ಧತೆಯಿಂದ ರೂಪಿಸಿರುವಂಥ ‘ವಿಧ್ಯುಕ್ತ ದಸ್ತಾವೇಜನ್ನು’ ಕೂಡ ತಿದ್ದುಪಡಿ ಮಾಡಬಹುದು. ಆದರೆ ಸಂವಿಧಾನ ಎಂಬುದು ಒಂದು ಅಮೂಲ್ಯ ಸ್ವತ್ತಾಗಿರುವುದರಿಂದ, ನೀವು ಅದರ ಅಸ್ಮಿತೆಯನ್ನು ಹಾಳುಮಾಡಲಾಗದು’. ಈ ರೀತಿಯಾಗಿ, ಸಂವಿಧಾನದ ಅಸ್ಮಿತೆಯು ನಾಶವಾಗುವುದಕ್ಕೆ ಕಾರಣವಾಗುವಂಥ, ಅದರ ಯಾವುದೇ ಉಪಬಂಧಕ್ಕೆ ಹಾನಿಯುಂಟುಮಾಡುವಂಥ, ನಾಶಪಡಿಸುವಂಥ, ರದ್ದುಪಡಿಸುವಂಥ, ಬದಲಿಸುವಂಥ ಅಥವಾ ಮಾರ್ಪಡಿಸುವಂಥ ಯಾವುದೇ ಕ್ರಮಕ್ಕೆ ಮುಂದಾಗದಂತೆ ಶಾಸಕಾಂಗವು ಪ್ರತಿಬಂಧಿಸಲ್ಪಟ್ಟಿದೆ.

ಕೇಶವಾನಂದ ಭಾರತಿ ಪ್ರಕರಣದ ನಂತರ, ಸವೋಚ್ಚ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ಮೂಲಭೂತ ಸ್ವರೂಪದ ಸಿದ್ಧಾಂತವನ್ನು ಅನ್ವಯಿಸಿದೆ. ಇದರ ಅನ್ವಯಿಕೆ ಪ್ರಾಯಶಃ ಮೊದಲಿಗೆ ಕಂಡುಬಂದಿದ್ದು ‘ಇಂದಿರಾ ಗಾಂಧಿ ವರ್ಸಸ್ ರಾಜ್ ನಾರಾಯಣ್ (1975)’ ಪ್ರಕರಣದಲ್ಲಿ. ಅಂದಿನ ಪ್ರಧಾನ ಮಂತ್ರಿ ಎಸಗಿದ್ದರೆನ್ನಲಾದ ಚುನಾವಣಾ ಅಪರಾಧಗಳು ಮತ್ತು ಸಂವಿಧಾನದ 39ನೇ ತಿದ್ದುಪಡಿಗೆ ಅನುಮೋದಿಸಿದ್ದರ ಹಿಂದಿನ ನಿಜವಾದ ಉದ್ದೇಶ- ಇವು ಈ ಪ್ರಕರಣದ ಕೇಂದ್ರಬಿಂದುವಾಗಿದ್ದವು. ಈ ಪ್ರರಕಣದ ಕುರಿತು ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂದಿರಾ ಆಯ್ಕೆಯನ್ನು ರಾಜ್ ನಾರಾಯಣ್ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇಂದಿರಾ ಗಾಂಧಿಯವರು ಸದರಿ ಚುನಾವಣೆಯಲ್ಲಿ ಅಕ್ರಮ ಪರಿಪಾಠಗಳ ಮೊರೆಹೋಗುವಂಥ ಅಪರಾಧ ಮಾಡಿರುವುದನ್ನು ಮನವರಿಕೆ ಮಾಡಿಕೊಂಡ ನ್ಯಾಯಾಲಯ, ಮುಂದಿನ 6 ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅವರನ್ನು ಅನರ್ಹಗೊಳಿಸಿತು. ಈ ತೀರ್ಪನ್ನು ಇಂದಿರಾ ಸವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು ಹಾಗೂ ಉಚ್ಚ ನ್ಯಾಯಾಲಯದ ತೀರ್ಪಿನ ಕುರಿತಾಗಿ ಷರತ್ತುಬದ್ಧ ತಡೆಯೂ ದಕ್ಕಿತು. ಇದಾಗುತ್ತಿದ್ದಂತೆಯೇ, ತುರ್ತಪರಿಸ್ಥಿತಿಯ ಹೇರಿಕೆಯಾಯಿತು. ಸವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಗಳು ತೀರ್ವನವಾಗುವುದು ಬಾಕಿಯಿರುವಾಗ ಮತ್ತು ತುರ್ತಪರಿಸ್ಥಿತಿಯ ಸಂದರ್ಭದಲ್ಲಿ, ಸಂವಿಧಾನಕ್ಕೆ 39ನೇ ತಿದ್ದುಪಡಿಯನ್ನು (1975) ಸಂಸತ್ತು ಜಾರಿಮಾಡಿತು; ಇದರಿಂದಾಗಿ ಚುನಾವಣಾ ಸಂಬಂಧಿತ ಶಾಸನಗಳಿಗಿರುವ ತಿದ್ದುಪಡಿಗಳನ್ನು 9ನೇ ಷೆಡ್ಯೂಲ್ ಅಡಿಯಲ್ಲಿ ಇರಿಸಿ ಯಾವುದೇ ರೀತಿಯಲ್ಲಿ ಪ್ರಶ್ನಿಸಲಾಗದಂತೆ ಅವಕ್ಕೆ ಪ್ರತಿರಕ್ಷೆ/ವಿನಾಯಿತಿ ಒದಗುವಂತಾಗಿದ್ದು ಮಾತ್ರವೇ ಅಲ್ಲ, ನ್ಯಾಯಾಲಯದ ನಡಾವಳಿ/ಕಲಾಪಗಳನ್ನು ಮತ್ತಷ್ಟು ನಿರರ್ಥಕಗೊಳಿಸಲೆಂದು ವಿಧಿ 71 ಮತ್ತು ವಿಧಿ 329ಎ ಹೆಸರಿನ ಎರಡು ಹೊಸ ವಿಧಿಗಳು ಜಾರಿಯಾಗುವಂತಾಯಿತು. ಈ ತಿದ್ದುಪಡಿಯ ಮೂಲಕ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್ ಅವರುಗಳ ಚುನಾವಣೆಗಳು ನ್ಯಾಯಾಲಯಗಳ ಸೂಕ್ಷ್ಮ ಪರಿಶೀಲನೆಯ ವ್ಯಾಪ್ತಿಯಿಂದಾಚೆ ಇರುವಂಥವು ಹಾಗೂ ಚುನಾವಣಾ ಸಂಬಂಧಿತ ಕಾನೂನುಗಳು/ನಿಯಮಗಳಿಂದ ಮುಕ್ತವಾಗಿರುವಂಥವು ಎಂದು ಘೋಷಿಸಲ್ಪಟ್ಟವು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ವಿಧಿ 328ಎ (4) ಅನ್ನೂ ಜಾರಿಮಾಡಲಾಯಿತು; ಮೇಲ್ಮನವಿದಾರರ ಚುನಾವಣೆಯನ್ನು ಸಿಂಧುವಾಗಿಸಲು ಹಾಗೂ ಎಲ್ಲ ಚುನಾವಣಾ ಕಾನೂನುಗಳು/ನಿಯಮಗಳ ಕಟ್ಟುನಿಟ್ಟಿನಿಂದ ಹಾಗೂ ನ್ಯಾಯಾಲಯದಲ್ಲಿ ಬಾಕಿಯಿರುವ ಕಲಾಪಗಳಿಂದ ಮೇಲ್ಮನವಿದಾರರಂಥ ಚುನಾಯಿತ ವ್ಯಕ್ತಿಗಳನ್ನು ಪ್ರತಿರಕ್ಷಿಸಲು ಅಥವಾ ಅವರಿಗೆ ವಿನಾಯಿತಿ ನೀಡಲು ಈ ವಿಧಿಯ ಜಾರಿಯಾಯಿತು. ಅಂತಿಮವಾಗಿ, ನ್ಯಾಯಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು 39ನೇ ತಿದ್ದುಪಡಿಯನ್ನು ಎತ್ತಿಹಿಡಿದರಾದರೂ, 328ಎ (4) ವಿಧಿಯು ಸಂವಿಧಾನದ ಮೂಲಭೂತ ಸ್ವರೂಪವನ್ನು ಉಲ್ಲಂಘಿಸುವ ರೀತಿಯಲ್ಲಿದೆ ಎನ್ನುವ ಮೂಲಕ ಅದನ್ನು ರದ್ದುಪಡಿಸಿದರು. ಪ್ರಜಾಪ್ರಭುತ್ವವು ಸಂವಿಧಾನದ ಒಂದು ಮೂಲಭೂತ ವೈಶಿಷ್ಟ್ಯವಾಗಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಇದು ಒಳಗೊಂಡಿದೆ. ಅಷ್ಟೇ ಅಲ್ಲ, ನ್ಯಾಯಾಂಗಕ್ಕಿರುವ ಮರುಪರಿಶೀಲನಾ ಅಧಿಕಾರವು ಸಂವಿಧಾನದ ಮೂಲಭೂತ ವೈಶಿಷ್ಟ್ಯವಾಗಿದೆ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ನಿಟ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ವೈ.ವಿ. ಚಂದ್ರಚೂಡ್, ನಾಲ್ಕು ಮೂಲಭೂತ ವೈಶಿಷ್ಟ್ಯಗಳನ್ನು ತಿದ್ದುಪಡಿ ಮಾಡಲಾಗದು ಎಂದು ಪರಿಗಣಿಸಿದರು. ಅವೆಂದರೆ- 1) ನಾಗರಿಕ ಆಡಳಿತ ವ್ಯವಸ್ಥೆಯ ಸಾರ್ವಭೌಮ, ಪ್ರಜಾಸತ್ತಾತ್ಮಕ ಮತ್ತು ಗಣತಂತ್ರಾತ್ಮಕ ಸ್ಥಾನಮಾನ; 2) ವ್ಯಕ್ತಿಯೊಬ್ಬನಿಗಿರುವ ಸ್ಥಾನಮಾನ ಮತ್ತು ಅವಕಾಶಗಳಲ್ಲಿನ ಸಮಾನತೆ; 3) ಜಾತ್ಯತೀತತೆ ಹಾಗೂ ಆತ್ಮಸಾಕ್ಷಿಯ/ಧರ್ಮಪ್ರಜ್ಞೆಯ ಮತ್ತು ಧರ್ಮದ ಸ್ವಾತಂತ್ರ್ಯ; 4) ಕಾನೂನಿನ ನಿಯಮ.

ತುರ್ತಪರಿಸ್ಥಿತಿ ಅಂತ್ಯವಾಗುವ ಹೊತ್ತಿಗೆ, ಅಂದರೆ 1977ರ ಮಾರ್ಚ್​ನಲ್ಲಿ ಮತ್ತೊಮ್ಮೆ 42ನೇ ತಿದ್ದುಪಡಿಯ ಜಾರಿಯಾಯಿತು; ಇದನ್ನು ‘ಮಿನಿ-ಸಂವಿಧಾನ’ ಎಂದೇ ಸರ್ವೆಸಾಮಾನ್ಯವಾಗಿ ಕರೆಯಲಾಗುತ್ತದೆ. ಇದು ಉಂಟುಮಾಡಿದ ಅನೇಕ ಬದಲಾವಣೆಗಳ ಪೈಕಿ, ನ್ಯಾಯಾಂಗದ ಮರುಪರಿಶೀಲನೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಅಧಿಕಾರವನ್ನು ಸವೋಚ್ಚ ನ್ಯಾಯಾಲಯದ ವಶದಿಂದ ತೆಗೆದುಹಾಕಿದ್ದು ಅತ್ಯಂತ ಗಮನಾರ್ಹವಾದುದು ಎನ್ನಬೇಕು. ‘ಮಿನರ್ವ ಮಿಲ್ಸ್ ಲಿಮಿಟೆಡ್ ವರ್ಸಸ್ ಕೇಂದ್ರ ಸರ್ಕಾರ (1980)’ ಪ್ರಕರಣದಲ್ಲಿ ಈ 42ನೇ ತಿದ್ದುಪಡಿಯನ್ನು ಸವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ನ್ಯಾಯಾಲಯವು ಸಂವಿಧಾನದ ಮೂಲಭೂತ ಸ್ವರೂಪವನ್ನು ಮರುದೃಢೀಕರಿಸಿತು ಹಾಗೂ ವಿಧಿ 368ರ ಅನುಸಾರ, ಸಂಸತ್ತು ತನ್ನ ತಿದ್ದುಪಡಿ ಅಧಿಕಾರವನ್ನು ವಿಸ್ತರಿಸುವಂತಿಲ್ಲ, ತನ್ಮೂಲಕ ಸಂವಿಧಾನದ ಸ್ಥಾಪಿತ ಮೌಲ್ಯಗಳನ್ನು ರದ್ದುಗೊಳಿಸುವ ಇಲ್ಲವೇ ನಿರಾಕರಿಸುವ ಅಥವಾ ಅದರ ಮೂಲಭೂತ ಹಾಗೂ ಅತ್ಯಾವಶ್ಯಕ ವೈಶಿಷ್ಟ್ಯಗಳನ್ನು ನಾಶಗೊಳಿಸುವ ಹಕ್ಕನ್ನು ಪಡೆಯಲಾಗದು ಎಂದು ಹೇಳಿತು. ಸೀಮಿತ ಅಧಿಕಾರವನ್ನು ಪಡೆದಿರುವ ವ್ಯವಸ್ಥೆಯು, ಅದನ್ನು ‘ಅಸೀಮ’ ಅಧಿಕಾರವಾಗಿ ಮಾರ್ಪಡಿಸುವುದಕ್ಕೆ ಆ ಅಧಿಕಾರವನ್ನು ಚಲಾಯಿಸಲಾಗದು ಎಂದು ಒತ್ತಿಹೇಳಿತು. ಅಷ್ಟೇ ಅಲ್ಲ, ತಿದ್ದುಪಡಿಗಿರುವ ಇಂಥದೊಂದು ಸೀಮಿತ ಅಧಿಕಾರವು, ನಮ್ಮ ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಮತ್ತು ಈ ಕಾರಣದಿಂದಾಗಿ ಅಂಥದೊಂದು ಅಧಿಕಾರಕ್ಕಿರುವ ಮಿತಿಗಳನ್ನು ನಾಶಪಡಿಸಲಾಗದು ಎಂಬುದಾಗಿಯೂ ನ್ಯಾಯಾಲಯ ಸ್ಪಷ್ಟಪಡಿಸಿತು.

ಸಂಸತ್ತು ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವಿನ ಈ ಸೆಣಸಾಟದಲ್ಲಿ ಒಂದಂತೂ ಸ್ಪಷ್ಟವಾಗಿ ಹೊರಹೊಮ್ಮಿದೆ. ಅದೆಂದರೆ, ಎಲ್ಲ ಕಾನೂನುಗಳು ಮತ್ತು ಸಾಂವಿಧಾನಿಕ ತಿದ್ದುಪಡಿಗಳು ಈಗ ನ್ಯಾಯಾಂಗದ ಮರುಪರಿಶೀಲನೆಗೆ ಒಳಪಟ್ಟಿವೆ ಹಾಗೂ ಸಂವಿಧಾನದ ಮೂಲಭೂತ ಸ್ವರೂಪ/ವೈಶಿಷ್ಟ್ಯವನ್ನು ಉಲ್ಲಂಘಿಸುವಂಥ ಅಥವಾ ಅತಿಕ್ರಮಿಸುವಂಥ ಕಾನೂನುಗಳನ್ನು ಸವೋಚ್ಚ ನ್ಯಾಯಾಲಯವು ರದ್ದುಗೊಳಿಸುವ ಸಾಧ್ಯತೆಯಿದೆ. ಒಟ್ಟಾರೆ ಹೇಳುವುದಾದರೆ, ಸಂವಿಧಾನ ತಿದ್ದುಪಡಿಗೆ ಸಂಸತ್ತಿಗಿರುವ ಅಧಿಕಾರವು ಪರಿಪೂರ್ಣವಾಗಿಲ್ಲ ಅಥವಾ ಇದು ಸ್ವತಂತ್ರ ಅಧಿಕಾರವಲ್ಲ ಹಾಗೂ ಎಲ್ಲ ಸಾಂವಿಧಾನಿಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಸವೋಚ್ಚ ನ್ಯಾಯಾಲಯವು ಅಂತಿಮ ನಿರ್ಣಯಕಾರ/ನಿಯಂತ್ರಕನಾಗಿದೆ ಮತ್ತು ವಿವರಣೆಗಾರನಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)