Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ನ್ಯಾಯಾಂಗವೂ ತಂತ್ರಜ್ಞಾನ ಕ್ರಾಂತಿಯ ಭಾಗವಾಗಲಿ

Tuesday, 13.03.2018, 3:05 AM       No Comments

‘ನ್ಯಾಯಾಲಯ’ ಎಂಬ ಶಬ್ದ ಅಥವಾ ಪರಿಕಲ್ಪನೆಯ ಆರಂಭದಲ್ಲಿ ‘ಇ’ ಎಂಬುದನ್ನು ಹಾಗೇಸುಮ್ಮನೆ ಸೇರಿಸಲಷ್ಟೇ ತಂತ್ರಜ್ಞಾನದ ಬಳಕೆಯಾಗಬಾರದು; ನ್ಯಾಯಾಂಗ ವ್ಯವಸ್ಥೆಯ ಸಮಯವು ವಿವೇಚನಾಯುತವಾಗಿ ಬಳಕೆಯಾಗುವಂತಾಗುವುದಕ್ಕೂ ತಂತ್ರಜ್ಞಾನದ ಅಳವಡಿಕೆ-ಅನ್ವಯ ಆಗಬೇಕು.

ದೇಶದ ಸಾಂವಿಧಾನಿಕ ಆಧಾರಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯು ಮಾಹಿತಿ ಮತ್ತು ಸಂವಹನಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿರುವುದರ ಅಗತ್ಯದ ಕುರಿತು ಹಿಂದಿನ ಕಂತಿನಲ್ಲಿ ಸ್ಥೂಲವಾಗಿ ವಿವರಿಸಲಾಗಿತ್ತು. ಈ ನಿಟ್ಟಿನಲ್ಲಿನ ಮತ್ತಷ್ಟು ಹೊಳಹುಗಳ ಕುರಿತು ಈಗ ಅವಲೋಕಿಸೋಣ.

ನ್ಯಾಯಾಲಯಗಳಲ್ಲಿ ತಂತ್ರಜ್ಞಾನದ ಬಳಕೆ: ವೈವಿಧ್ಯಮಯ ಕಾರ್ಯಗಳ ನಿರ್ವಹಣೆಗೆಂದು ವೈಜ್ಞಾನಿಕ ಜ್ಞಾನವನ್ನು ಕಾರ್ಯತಃ ಅನ್ವಯಿಸುವಿಕೆಯೇ ತಂತ್ರಜ್ಞಾನದ ಬಳಕೆ ಎನಿಸಿಕೊಳ್ಳುತ್ತದೆ. ಆದರೆ ನ್ಯಾಯಾಂಗದಲ್ಲಿ, ಪ್ರಕರಣಗಳಿಗೆ ಸಂಬಂಧಿಸಿದ ದತ್ತಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ, ನಿರ್ವಹಣಾ ವರದಿಗಳು ಮತ್ತು ನ್ಯಾಯಾಲಯದ ದಾಖಲೆಪತ್ರಗಳನ್ನು ರೂಪಿಸುವಂಥ ಬೃಹತ್ ಕಂಪ್ಯೂಟರ್ ವ್ಯವಸ್ಥೆಗಳು ಎಂಬ ಪರಿಕಲ್ಪನೆ ಇದೆ. ತಂತ್ರಜ್ಞಾನವನ್ನು ಇಂಥ ಸೀಮಿತ ಪರಿಭಾಷೆಯಲ್ಲಿ ಅವಲೋಕಿಸುವ ಅಗತ್ಯವೇನೂ ಇಲ್ಲ. ವಿಡಿಯೋ ತಂತ್ರಜ್ಞಾನ, ಗತಿಶೀಲತೆ, ಪ್ರಯೋಜನ, ದತ್ತಾಂಶಗಳ ಹಂಚಿಕೆ, ಸ್ವಯಂಚಾಲಿತ ವಿಷಯ ನಿರ್ವಹಣೆ, ದತ್ತಾಂಶಗಳ ಮರುಗಳಿಕೆ ಇವೇ ಮೊದಲಾದವು ಕಳೆದ ಎರಡು ದಶಕಗಳ ಅವಧಿಯಲ್ಲಿ ನ್ಯಾಯಾಲಯಗಳಲ್ಲಿ ಕಂಡುಬಂದಿರುವ ತಾಂತ್ರಿಕ ನಾವೀನ್ಯಗಳಲ್ಲಿ ಸೇರಿವೆ.

ನ್ಯಾಯಾಲಯಗಳಲ್ಲಿ ಮೂರು ಸಾಮಾನ್ಯ ಉಪಯೋಗಗಳಿಗಾಗಿ ತಂತ್ರಜ್ಞಾನದ ಬಳಕೆಯಾಗುತ್ತದೆ. ಮೊದಲನೆಯದಾಗಿ, ಆಡಳಿತ ನಿರ್ವಹಣೆಗೆ ಬೆಂಬಲವೀಯುತ್ತದೆ; ಪ್ರಕರಣಗಳ ಹೊರೆಯ ಹೆಚ್ಚಳ ಮತ್ತು ಜಟಿಲತೆಯನ್ನು ಬಿಡಿಸುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಎರಡನೆಯದಾಗಿ, ದಿನನಿತ್ಯದ ಕಾರ್ಯಭಾರಗಳನ್ನು ಕ್ಷಿಪ್ರವಾಗಿ ನಿರ್ವಹಿಸಲು ಹಾಗೂ ಉಪಯುಕ್ತ ಮಾಹಿತಿಯು ಹೆಚ್ಚಿನ ಪ್ರಮಾಣದಲ್ಲಿ ನ್ಯಾಯಾಲಯಕ್ಕೆ ದಕ್ಕುವಂತಾಗಲು ಇದು ಒತ್ತಾಸೆಯಾಗಿ ನಿಲ್ಲಬಲ್ಲದು. ಮೂರನೆಯದಾಗಿ, ನ್ಯಾಯದಾನದ ಕಾರ್ಯನಿರ್ವಹಣೆಯು ಸಮರ್ಪಕವಾಗಿರುವುದಕ್ಕೆ ಅಗತ್ಯವಾದ ಕಾರ್ಯಭಾರಗಳು ನೆರವೇರುವುದಕ್ಕೆ ಇದು ನೆರವಾಗಬಲ್ಲದು; ಇದರಿಂದಾಗಿ ನ್ಯಾಯಾಧೀಶರ ಕಾರ್ಯವೂ ಸರಾಗವಾಗುತ್ತದೆ.

ಇಷ್ಟು ಮಾತ್ರವಲ್ಲದೆ, ಪ್ರಕರಣಗಳನ್ನು ವಿಭಿನ್ನ ನ್ಯಾಯಾಲಯಗಳಿಗೆ ವರ್ಗೀಕರಿಸಲು, ಪ್ರಕರಣಗಳ ಫೈಸಲಾತಿ ವೇಗ, ಯಾವ ತೆರನಾದ ವಿಷಯಗಳಿಗೆ ಹೆಚ್ಚು ಸಮಯದ ಅಗತ್ಯವಿದೆ ಎಂಬುದನ್ನೆಲ್ಲ ಲೆಕ್ಕಿಸಲು ಕೂಡ ತಂತ್ರಜ್ಞಾನ ನೆರವಾಗುತ್ತದೆ. ಇದರಿಂದ ಆಡಳಿತಾತ್ಮಕ ನಿರ್ಣಯಗಳನ್ನು ಕೂಡ ಸಮರ್ಥವಾಗಿ ತಳೆಯಲು ಸಾಧ್ಯವಿದೆ. ದಿನಚರಿಗಳು, ಪ್ರಕರಣಗಳು ಮತ್ತು ಕಾರ್ಯಕ್ರಮಗಳ ಕಾರ್ಯಯೋಜನೆ ಸಿದ್ಧಪಡಿಸುವಿಕೆಗೆ ಕೂಡ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು.

ಅಂತರ್ಜಾಲದ ಬಳಕೆ ಮತ್ತು ನ್ಯಾಯದಾನ: ಸಂವಹನೆ ಹಾಗೂ ಮಾಹಿತಿಯ ಹಂಚಿಕೆಗಾಗಿರುವ ಒಂದು ಸಾಧನವಾಗಿ ಅಂತರ್ಜಾಲ ಮಾಧ್ಯಮಕ್ಕಿರುವ ಪಟುತ್ವ ಸರಿಸಾಟಿಯಲ್ಲದ್ದು. 10 ದಶಲಕ್ಷ ಬಳಕೆದಾರರನ್ನು ತಲುಪುವುದಕ್ಕೆ ದೂರದರ್ಶನದಂಥ ವ್ಯವಸ್ಥೆ 25ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಂಡರೆ, ಕಂಪ್ಯೂಟರ್​ಗಳು 10ಕ್ಕಿಂತ ಹೆಚ್ಚು ವರ್ಷಗಳನ್ನು ತೆಗೆದುಕೊಂಡವು. ಆದರೆ ಈ ನಿಟ್ಟಿನಲ್ಲಿ ಅಂತರ್ಜಾಲ ವ್ಯವಸ್ಥೆಗೆ ಹಿಡಿದ ಕಾಲಾವಧಿ 5 ವರ್ಷಕ್ಕೂ ಕಡಿಮೆ. 2000ನೇ ಇಸವಿಯ ಹೊತ್ತಿಗೆ ಭಾರತದಲ್ಲಿದ್ದ ಅಂತರ್ಜಾಲ ಬಳಕೆದಾರರ ಸಂಖ್ಯೆ 5,557,455ರಷ್ಟು (ಅಥವಾ ಭಾರತದ ಒಟ್ಟು ಜನಸಂಖ್ಯೆಯ ಶೇ. 0.5ರಷ್ಟು) ಮಾತ್ರ; ಆದರೆ 2016ರ ಹೊತ್ತಿಗೆ ಇದು ಮುಟ್ಟಿದ ಮಟ್ಟ 462,124,989ರಷ್ಟು (ಅಥವಾ ಭಾರತದ ಒಟ್ಟು ಜನಸಂಖ್ಯೆಯ ಶೇ. 35ರಷ್ಟು).

ವಕೀಲಿಕೆಯ ಹೊಸಸ್ವರೂಪವೊಂದಕ್ಕೆ ಜನ್ಮನೀಡುವಲ್ಲಿಯೂ ಅಂತರ್ಜಾಲದ ಪಾತ್ರವಿದೆ- ಅದುವೇ ‘ಆನ್​ಲೈನ್ ಅಹವಾಲು ವ್ಯವಸ್ಥೆ’. ಈ ವ್ಯವಸ್ಥೆ ಗಣನೀಯ ಪ್ರಮಾಣದ ಯಶಸ್ಸನ್ನೂ ಕಂಡಿದೆ. ಜನನಪೂರ್ವ ಲಿಂಗಪತ್ತೆ/ಲಿಂಗದ ಆಯ್ಕೆಯ ಪ್ರಕ್ರಿಯೆಯು ಭಾರತದಲ್ಲಿ ಅಪರಾಧವಾಗಿರುವುದರ ಹೊರತಾಗಿಯೂ, ಭ್ರೂಣಲಿಂಗ ಪತ್ತೆ/ಆಯ್ಕೆಯ ಪರಿಪಾಠ ಅಬಾಧಿತವಾಗಿ ಮುಂದುವರಿದಿದೆ. ಈ ಚಟುವಟಿಕೆಗೆ ಸಂಬಂಧಿಸಿದ ಜಾಹೀರಾತುಗಳು ಅಂತರ್ಜಾಲದಲ್ಲಿ ಅತಿರೇಕ ಪ್ರಮಾಣದಲ್ಲಿ ವ್ಯಾಪಿಸಿದ್ದವು. ಲಿಂಗಪತ್ತೆ/ಆಯ್ಕೆಯ ಪರಿಣಾಮವಾಗಿ 6 ಲಕ್ಷಕ್ಕಿಂತ ಹೆಚ್ಚು ಹೆಣ್ಣುಶಿಶುಗಳ ನಷ್ಟವಾಗಿರುವುದರ ಕುರಿತು ವ್ಯಾಕುಲಗೊಂಡ ಸುಮಾರು 11,903 ಬೆಂಬಲಿಗರು 2013ರಲ್ಲಿ ಅಖಾಡಕ್ಕಿಳಿದರು; ಇನ್ನೂ ಹುಟ್ಟೇ ಇಲ್ಲದ ಶಿಶುವೊಂದರ ಲಿಂಗ ಆಯ್ಕೆ/ಪತ್ತೆಯ ಚಟುವಟಿಕೆಯನ್ನು ಪ್ರವರ್ತಿಸುವ ಪ್ರಕಟಣೆಗಳ ಪ್ರದರ್ಶನ ಹಾಗೂ ಮಾರಾಟವನ್ನು ಫ್ಲಿಪ್​ಕಾರ್ಟ್ ನಿಷೇಧಿಸಬೇಕು ಎಂದು ಅವರು ಅಹವಾಲು ಸಲ್ಲಿಸಿ, ಅದರಲ್ಲಿ ಯಶಸ್ವಿಯೂ ಆದರು! 2016ರಲ್ಲಿ, 2,37,108 ಅಹವಾಲುದಾರರು ಆನ್​ಲೈನ್ ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಂಡು, ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೇರದಂತೆ ಸರ್ಕಾರದ ಮನವೊಲಿಸಿದರು.

ಅಂತರ್ಜಾಲ ಮತ್ತು ತಂತ್ರಜ್ಞಾನ ನಿಜಕ್ಕೂ ಇಷ್ಟರಮಟ್ಟಿಗೆ ಶಕ್ತಿಯುತವಾಗಿರುವುದೇ ಹೌದಾದಲ್ಲಿ, ನಮ್ಮ ಸಮಾಜದಲ್ಲೀಗ ತಾಂಡವವಾಡುತ್ತಿರುವ ಅಸಮಾನತೆ ಎಂಬ ಸಮಸ್ಯೆಯ ಆಳಕ್ಕಿಳಿದು ಪರಿಹಾರೋಪಾಯವೊಂದನ್ನು ಅವು ಕಟ್ಟಿಕೊಡಬಲ್ಲವೇ? ನಗರ-ಗ್ರಾಮೀಣ ಅಂತರವನ್ನು ಅವು ತುಂಬಬಲ್ಲವೇ? ಅಂತರ್ಜಾಲದ ಪ್ರಯೋಜನಗಳು ಜನರನ್ನು ಅಭ್ಯುದಯದ ಪಥದತ್ತ ಕೊಂಡೊಯ್ಯುವ ಚಾಲಕಶಕ್ತಿಗಳಾಗಬಲ್ಲವೇ? ಹಾಗಾದಲ್ಲಿ ಅದು ನಿಜಕ್ಕೂ ಅದ್ಭುತವೇ.

ಕಾನೂನು ಮತ್ತು ತಂತ್ರಜ್ಞಾನ: ಕಾನೂನಿನ ವ್ಯಾಖ್ಯಾನ ಹಾಗೂ ಅನ್ವಯಿಸುವಿಕೆಯ ಪ್ರಕ್ರಿಯೆ ಕೂಡ ತಂತ್ರಜ್ಞಾನಕ್ಕೆ ಸರಿಹೊಂದಿಕೊಳ್ಳುವ ರೀತಿಯಲ್ಲಿ ಮತ್ತು ಅದನ್ನು ನೆಚ್ಚಿ ಬೆಳೆಯಬೇಕಾಗಿ ಬಂತು. 2014ರಲ್ಲಿ, ಅಮೆರಿಕದ ಸವೋಚ್ಚ ನ್ಯಾಯಾಲಯಕ್ಕೆ ಬಂದ ಸ್ವಾರಸ್ಯಕರ ಪ್ರಕರಣವೊಂದು(“Riley V/s California’) ಉಲ್ಲೇಖನೀಯ. ಬಂಧನಕ್ಕೆ ಸಂಬಂಧಿಸಿದ ಒಂದು ಪ್ರಸಂಗವಾಗಿ ಸೆಲ್​ಫೋನ್​ಗಳನ್ನು ತಪಾಸಣೆ ಮಾಡಬಹುದೇ ಎಂಬುದು ಅದರಲ್ಲಿನ ಪ್ರಶ್ನೆಯಾಗಿತ್ತು. ಬಂಧನದ ಸಂದರ್ಭದಲ್ಲಿ ಸೆಲ್​ಫೋನ್ ಒಂದರ ಡಿಜಿಟಲ್ ವಸ್ತು-ವಿಷಯವನ್ನು ವಾರಂಟ್ ಇಲ್ಲದೆಯೇ ತಪಾಸಿಸುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು ಅಸಾಂವಿಧಾನಿಕ ಎಂಬ ತೀರ್ಪು ಹೊರಬಿತ್ತು. ‘ಸೆಲ್​ಫೋನ್ ಆಗಮನಕ್ಕೂ ಮುಂಚಿನ’ ಕಾಲಾವಧಿಯ ಪರೀಕ್ಷೆಗಳನ್ನು ‘ಸೆಲ್​ಫೋನ್ ಆಗಮನಾನಂತರದ’ ಕಾಲಾವಧಿಗೆ ಅನ್ವಯಿಸುವುದರ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ವ್ಯಕ್ತಿಯೋರ್ವನ ಹಕ್ಕನ್ನು ಸಂರಕ್ಷಿಸುವುದರ ಅಗತ್ಯದ ನಡುವಿನ ಅಸಮಂಜಸತೆಯನ್ನು ಗುರುತಿಸಿದ ನ್ಯಾಯಾಲಯ, ವ್ಯಕ್ತಿಯೊಬ್ಬನಿಗೆ ಸೇರಿದ ವ್ಯಾಲೆಟ್ ಒಂದನ್ನು ವಾರಂಟ್ ಇಲ್ಲದೆಯೇ ತಪಾಸಣೆ ಮಾಡುವುದು ಅನುಜ್ಞಾರ್ಹವಾಗಿರಬಹುದಾದರೂ, ಆತನ ಸೆಲ್​ಫೋನ್ ಅನ್ನು

ವಾರಂಟ್ ಇಲ್ಲದೆಯೇ ತಪಾಸಿಸುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ ಎಂದಿತು.

ಸಾಂವಿಧಾನಿಕ ಮೂಲತತ್ತ್ವಗಳು ವಿಕಸನಗೊಳ್ಳಬೇಕಿರುವ ಮತ್ತು ಅನ್ವಯಗೊಳ್ಳಬೇಕಿರುವ ಪ್ರಸಕ್ತ ಕಾಲಘಟ್ಟದ ಗುಣಾತ್ಮಕ ವೈಶಿಷ್ಟ್ಯವನ್ನು ಆ ಪ್ರಕರಣದಲ್ಲಿ ಅಮೆರಿಕದ ಸವೋಚ್ಚ ನ್ಯಾಯಾಲಯ ಹೀಗೆ ಮಾತುಗಳಲ್ಲಿ ಹಿಡಿದಿಟ್ಟಿದೆ: ‘ಉದಾಹರಣೆಗೆ, ಅಂತರ್ಜಾಲ ವ್ಯವಸ್ಥೆಯಿರುವ ಫೋನ್ ಒಂದರಲ್ಲಿ ಅಂತರ್ಜಾಲ ಶೋಧ ಮತ್ತು ಅವಲೋಕನದ ಇತಿಹಾಸವನ್ನು ಕಂಡುಕೊಳ್ಳಬಹುದು ಮತ್ತು ಇದು ವ್ಯಕ್ತಿಯೊಬ್ಬನ ಖಾಸಗಿ ಆಸಕ್ತಿಗಳು ಅಥವಾ ಕಾಳಜಿಗಳನ್ನು ಅನಾವರಣಗೊಳಿಸಬಹುದು. ವ್ಯಕ್ತಿಯೊಬ್ಬ ಎಲ್ಲಿದ್ದ, ಎಲ್ಲೆಲ್ಲಿ ಹೋಗಿದ್ದ ಎಂಬುದನ್ನು ಕೂಡ ಸೆಲ್​ಫೋನ್​ನ ದತ್ತಾಂಶಗಳು ಹೊರಗೆಡವಬಲ್ಲವು. ಅನೇಕ ಸ್ಮಾರ್ಟ್​ಫೋನ್​ಗಳಲ್ಲಿ, ವ್ಯಕ್ತಿಯೊಬ್ಬನು ಪಟ್ಟಣವೊಂದರ ಆಸುಪಾಸಿನಲ್ಲಿ ಮಾತ್ರವಲ್ಲದೆ ನಿರ್ದಿಷ್ಟ ಕಟ್ಟಡವೊಂದರ ವ್ಯಾಪ್ತಿಯಲ್ಲಿ ನಿಮಿಷ ನಿಮಿಷಕ್ಕೂ ಮಾಡಿದ ನಿರ್ದಿಷ್ಟ ಚಲನೆಗಳನ್ನು ಈ ವೈಶಿಷ್ಟ್ಯವು ಮರುರೂಪಿಸಬಲ್ಲದು. ಇನ್ನು ಅತ್ಯಾಧುನಿಕ ಸೆಲ್​ಫೋನ್​ಗಳು ಕೇವಲ ತಾಂತ್ರಿಕ ಸಾಧನ-ಸಲಕರಣೆಯಾಗಷ್ಟೇ ಉಳಿದಿಲ್ಲ. ಅವುಗಳಲ್ಲಿ ಅಂತರ್ಗತವಾಗಿರುವ ಅಂಶಗಳಿಂದಾಗಿ ಅನೇಕ ಅಮೆರಿಕನ್ನರ ಪಾಲಿಗೆ ಅವು ‘ಜೀವನದ ಗೌಪ್ಯತೆಗಳಾಗಿ’ ಪರಿಣಮಿಸಿಬಿಟ್ಟಿವೆ. ವ್ಯಕ್ತಿಯೊಬ್ಬನು ಇಂಥ ಮಾಹಿತಿಯನ್ನು ತನ್ನ ಕೈಯಲ್ಲೇ ಅಡಕವಾಗಿರುವಂತೆ ಒಯ್ಯುವುದಕ್ಕೆ ತಂತ್ರಜ್ಞಾನವು ಈಗ ಅನುವು ಮಾಡಿಕೊಟ್ಟಿದೆಯೆಂದ ಮಾತ್ರಕ್ಕೆ, ಅಂಥ ಮಾಹಿತಿಯು ಸಂರಕ್ಷಣಾಯೋಗ್ಯವಲ್ಲ ಎಂದರ್ಥವಲ್ಲ’.

‘ವರ್ಲ್ಡ್ ವೈಡ್ ವೆಬ್’ನ ಸೃಷ್ಟಿಕರ್ತನಾದ ಟಿಮ್ ಬರ್ನರ್ಸ್-ಲೀ ಹೇಳಿರುವಂತೆ, ‘ಅಂತರ್ಜಾಲದಲ್ಲಿ ಲಭ್ಯವಿರುವ ವ್ಯಾಪಕ ಮಾಹಿತಿ ವ್ಯವಸ್ಥೆಯ ಶಕ್ತಿಯು ಅದರ ಸರ್ವವ್ಯಾಪಕತೆಯಲ್ಲಿದೆ. ಕುಂದುಕೊರತೆ-ಅಸಾಮರ್ಥ್ಯಗಳೇನೇ ಇರಲಿ, ಪ್ರತಿಯೊಬ್ಬರಿಗೂ ಇದರ ಪ್ರವೇಶಲಭ್ಯತೆ ದೊರಕುವಂತಾಗುವುದು ಅತ್ಯಗತ್ಯ ಅಂಶವಾಗಿದೆ’. ಒಂದು ಕಾಲಕ್ಕೆ ತೀರಾ ವ್ಯಾಪಕವಾಗಿರುವಂತೆ ತೋರುತ್ತಿದ್ದ ಅಸಮಾನತೆಗಳು, ಬದಲಾಗುತ್ತಿರುವ ಈ ಚಿತ್ರಣದೆದುರು ಈಗ ಇಲ್ಲವಾಗುತ್ತಿವೆ. ನ್ಯಾಯಾಂಗ ವ್ಯವಸ್ಥೆಯೂ ಇಂಥದೊಂದು ಕ್ರಾಂತಿಯಲ್ಲಿ ಪಾಲ್ಗೊಳ್ಳಬಾರದೇಕೆ?

ವ್ಯಕ್ತಿಯೊಬ್ಬ ಮೇಲ್ಪಂಕ್ತಿಯೊಂದರ ಅನುಸರಣೆಗಾಗಿ ಎದ್ದುನಿಂತಾಗ ಅಥವಾ ಅಥವಾ ಅಸಮಾನತೆಯ ವಿರುದ್ಧ ಪ್ರತಿಭಟಿಸಿದಾಗ, ಸಣ್ಣದೊಂದು ಭರವಸೆಯ ಅಲೆಯನ್ನು ಆತ ಹೊಮ್ಮಿಸುತ್ತಾನೆ; ಲಕ್ಷಾಂತರ ದಿಟ್ಟಜನರ ಮೂಲಕ ಹಾದುಬರುವ ಈ ಅಲೆಗಳು ಅಂತಿಮವಾಗಿ ಪ್ರವಾಹವಾಗಿ ಪರಿಣಮಿಸಿ, ದಬ್ಬಾಳಿಕೆ ಮತ್ತು ಪ್ರತಿರೋಧದ ಗಟ್ಟಿಗೋಡೆಗಳನ್ನು ಗುಡಿಸಿ ಬಿಸಾಡುವಷ್ಟು ಪರಿಣಾಮಕಾರಿಯಾಗಿರುತ್ತವೆ. ಈಗ, ಅಂತರ್ಜಾಲ ವ್ಯವಸ್ಥೆಯಿಂದಾಗಿ ವೇಗವರ್ಧಿತವಾಗಿರುವ ನ್ಯಾಯನೀಡಿಕೆ ವ್ಯವಸ್ಥೆಯಲ್ಲಿ ಭಾಗೀದಾರರಾಗುವ ಎಲ್ಲ ಪಾತ್ರಧಾರಿಗಳನ್ನೊಳಗೊಂಡ ಸಮಷ್ಟಿ ಬಲವೊಂದು, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವುದರಿಂದಾಗುವ ಪರಿಣಾಮವನ್ನು ಊಹಿಸಿಕೊಳ್ಳಿ. ಕಾನೂನು ಎಂಬುದು ಸಾಮಾಜಿಕ ಬದಲಾವಣೆಗಿರುವ ಒಂದು ಸಾಧನ ಎಂಬುದಾಗಿ ರೋಸ್ಕೋ ಪೌಂಡ್ 20ನೇ ಶತಮಾನದ ಆರಂಭದಲ್ಲಿ ಹೇಳಿದ್ದು ಅಂದಿಗೆ ಸರಿಯಾಗೇ ಇತ್ತು; ಈಗ, 21ನೇ ಶತಮಾನದ ಆರಂಭದಲ್ಲಿ, ತಂತ್ರಜ್ಞಾನವೆಂಬುದು ಸಾಮಾಜಿಕ ಬದಲಾವಣೆಗಿರುವ ಒಂದು ಅತ್ಯಂತ ಶಕ್ತಿಯುತ ಸಾಧನವಾಗಿದೆ ಎಂಬುದನ್ನು ಮರೆಯದಿರೋಣ.

ನ್ಯಾಯಾಂಗ ವ್ಯವಸ್ಥೆಯ ಸಮಯವು ವಿವೇಚನಾಯುತವಾಗಿ ಬಳಕೆಯಾಗುವಂತಾಗುವುದಕ್ಕೂ ತಂತ್ರಜ್ಞಾನದ ಅಳವಡಿಕೆ-ಅನ್ವಯ ಆಗಬೇಕು. ಅಷ್ಟೇ ಅಲ್ಲ, ಗ್ರಾಮೀಣ ಭಾರತ ಮತ್ತು ಆಧುನಿಕ ಭಾರತದ ನಡುವೆ ಪ್ರತ್ಯೇಕತೆ ಉಂಟುಮಾಡುವ ಸಾಧನವಾಗಿ ತಂತ್ರಜ್ಞಾನದ ಬಳಕೆಯಾಗುವಂತಾಗಬಾರದು; ಬದಲಿಗೆ ರಾಜ್ಯದ ಮೂಲೆಯಲ್ಲಿರುವ ವ್ಯಕ್ತಿಗೂ ನ್ಯಾಯಾಂಗ ವ್ಯವಸ್ಥೆಯು ಎಟುಕುವಂತಾಗುವ ರೀತಿಯಲ್ಲಿ ಅದರ ಅಳವಡಿಕೆಯಾಗಬೇಕು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್​ ಜನರಲ್​) 

Leave a Reply

Your email address will not be published. Required fields are marked *

Back To Top