ಚುನಾವಣಾ ಆಯೋಗದ ಸಭೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೊರಗುಳಿಯಲು ನಿರ್ಧರಿಸಿದ ಸಹ ಆಯುಕ್ತ ಅಶೋಕ್​ ಲವಸಾ

ನವದೆಹಲಿ: ಚುನಾವಣಾ ಆಯೋಗದಲ್ಲಿ ಈಗ ಸಣ್ಣ ಮಟ್ಟದ ಬಿರುಕು ಉಂಟಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತಹ ಚರ್ಚೆಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಓರ್ವ ಆಯುಕ್ತರು ಹಿಂದೆ ಸರಿದಿದ್ದು, ಮುಖ್ಯ ಆಯುಕ್ತ ಸುನೀಲ್​ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲಿಗೆ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದ್ದೇನೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ವಿರುದ್ಧ ದಾಖಲಾಗಿದ್ದ ಹಲವು ನೀತಿ ಸಂಹಿತೆ ಉಲ್ಲಂಘನೆ ದೂರಿಗೆ ಆಯೋಗ ಕ್ಲೀನ್​ಚಿಟ್​ ನೀಡಿದ್ದರ ಬಗ್ಗೆ ಸಹಮತಿಯಿಲ್ಲ ಎಂದು ವಿವಾದ ಸೃಷ್ಟಿಸಿದ್ದ ಆಯೋಗದ ಓರ್ವ ಆಯುಕ್ತ ಅಶೋಕ್​ ಲವಸಾ, ಇದೀಗ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಯೋಗ ನಡೆಸುವ ಯಾವುದೇ ವಿಚಾರಣಾ, ಚರ್ಚಾ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

ಇಲ್ಲಿ ಅಲ್ಪಮತ ಹೊಂದಿದ ನಿರ್ಧಾರಗಳು ಪರಿಗಣನೆಯಾಗುತ್ತಿಲ್ಲ. ವರದಿ ರೂಪ ತಳೆಯುತ್ತಿಲ್ಲ ಎಂದು ಅಶೋಕ್​ ಲವಸಾ ಹೇಳಿದ್ದಾರೆ. ಯಾವುದೇ ಪ್ರಕರಣದ ಚರ್ಚೆ ವೇಳೆ ಹೊರಹೊಮ್ಮುವ ಭಿನ್ನಾಭಿಪ್ರಾಯಗಳ ಟಿಪ್ಪಣಿಯನ್ನೂ ಆಯೋಗ ತನ್ನ ತೀರ್ಪಿನಲ್ಲಿ ಸೇರಿಸಿ ಓದುವಂತಾಗಬೇಕು ಅದೂ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ. ಹಾಗಾದಾಗ ಮಾತ್ರ ನಾನು ಮತ್ತೆ ಚರ್ಚಾ ಸಭೆಗಳಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.

ಹಲವು ಪ್ರಕರಣಗಳಲ್ಲಿ ನಾನು ಭಿನ್ನ ಅಭಿಪ್ರಾಯಗಳನ್ನು ನೀಡಿದ್ದೇನೆ. ಆದರೆ, ಅವೆಲ್ಲವನ್ನೂ ಹತ್ತಿಕ್ಕಲಾಗಿದೆ. ಆಯೋಗದ ವರದಿಯಲ್ಲಿ ಭಿನ್ನ ಅಭಿಪ್ರಾಯವನ್ನೂ ಉಲ್ಲೇಖಿಸುವ ಮೂಲಕ ದಾಖಲೆಗಳನ್ನೂ ಇನ್ನೂ ಪಾರದರ್ಶಕವಾಗಿಸಬೇಕು ಎಂದು ನಾನು ಹಲವು ಬಾರಿ ಟಿಪ್ಪಣಿಗಳನ್ನು ನೀಡಿದ್ದರೂ ಅದನ್ನೂ ಲಕ್ಷ್ಯಕ್ಕೆ ತೆಗೆದುಕೊಂಡಿಲ್ಲ. ಇದರಿಂದಾಗಿ ನಾನು ಯಾವುದೇ ದೂರಿನ ವಿಚಾರಣಾ ಸಭೆಗಳಲ್ಲಿ ಭಾಗವಹಿಸದೆ ಇರಲು ನಿರ್ಧರಿಸಬೇಕಾಯಿತು ಎಂದು ಮೇ 16ರಂದು ಮುಖ್ಯ ಆಯುಕ್ತ ಸುನಿಲ್​ ಅರೋರಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ಈ ಪತ್ರವನ್ನು ಪಡೆದ ಸುನೀಲ್​ ಅರೋರಾ ಅವರು ಅಶೋಕ್​ ಲವಸಾ ಅವರೊಂದಿಗೆ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಮೇ 4ರಿಂದಲೂ ಅಶೋಕ್​ ಲವಸಾ ಅವರ ವಿಚಾರ ಚುನಾವಣಾ ಆಯೋಗದ ವಿಚಾರಣೆಗಳಿಗೆ ತೊಡಕಾಗಿಯೇ ಪರಿಣಮಿಸುತ್ತಿದೆ ಎನ್ನಲಾಗಿದೆ. ಮೂವರು ಆಯುಕ್ತರನ್ನೊಳಗೊಂಡ ಚುನಾವಣಾ ಆಯೋಗ ಹೆಚ್ಚಾಗಿ ಅವಿರೋಧ ಅಭಿಪ್ರಾಯಗಳಿಗೆ ಆದ್ಯತೆ ನೀಡುತ್ತದೆ. ಒಮ್ಮೆ ಹಾಗಾಗದಿದ್ದರೆ ಬಹುಮತ ಇರುವ ನಿರ್ಧಾರವನ್ನು ತನ್ನ ತೀರ್ಪಿನಲ್ಲಿ ತಿಳಿಸುತ್ತದೆ.