ಹೈಸ್ಕೂಲ್ ಕಲಿಯುತ್ತಿದ್ದ 15 ವರ್ಷದ ಬಾಲಕಿ ರೇಖಾಳ (ಹೆಸರು ಬದಲಾಯಿಸಲಾಗಿದೆ) ಮನೆಯಲ್ಲಿ ಕಡುಬಡತನ. ತಂದೆಯಿಲ್ಲದ ಆಕೆ ಅದೊಂದು ಮನೆಯಲ್ಲಿ ಕೆಲಸ ಮಾಡುತ್ತ ನಂತರ ಶಾಲೆಗೆ ಹೋಗುತ್ತಿದ್ದಳು. ಅದರ ಮಾಲೀಕ ಮೂರು ಮಕ್ಕಳ ತಂದೆ ಇಸ್ಮಾಯಿಲ್. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ರೇಖಾಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಲು ಬರುತ್ತಿದ್ದ. ಇದರಿಂದ ಬೇಸತ್ತ ರೇಖಾ ಅಲ್ಲಿ ಕೆಲಸ ಬಿಟ್ಟಳು. ಅದಾದ ಕೆಲವೇ ದಿನಗಳಲ್ಲಿ ಆಕೆಯ ಮೇಲೆ ಭೀಕರ ಆ್ಯಸಿಡ್ ದಾಳಿ. ರೇಖಾಳ ಸುಂದರ ಮುಖ ಸುಟ್ಟು ಹೋಯಿತು. ಆ್ಯಸಿಡ್ ದಾಳಿ ನಡೆಸಿದ್ದು ಯಾರು ಎಂದು ಕೊನೆಗೂ ಪತ್ತೆಯಾಗಲೇ ಇಲ್ಲ. ಮಗಳ ಚಿಕಿತ್ಸೆಗೆಂದು ಹಣ ಕೇಳಲು ಇಸ್ಮಾಯಿಲ್ ಮನೆಗೆ ಹೋದಾಗ ರೇಖಾಳ ಅಮ್ಮನ ಕಣ್ಣು ಅವನ ಕಾಲಿನತ್ತ ಹೋಯಿತು. ಆ್ಯಸಿಡ್ ಚೆಲ್ಲಿದ್ದರಿಂದ ಕಾಲು ಅಲ್ಲಲ್ಲಿ ಸುಟ್ಟಿತ್ತು. ತನ್ನ ಮಗಳ ಮೇಲೆ ದಾಳಿ ನಡೆಸಿದ್ದು ಈತನೇ ಎಂದು ಗೊತ್ತಾಗುತ್ತಲೇ ಅವರು ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಸಾಕ್ಷ್ಯ ಇರಲಿಲ್ಲ. ಇಸ್ಮಾಯಿಲ್ ಖುಲಾಸೆಗೊಂಡ. ಒಂದೆಡೆ ಸಿಗದ ನ್ಯಾಯ, ಇನ್ನೊಂದೆಡೆ ಕುರೂಪಗೊಂಡ ಮಗಳ ಮುಖ… ದಾರಿ ತೋಚದ ರೇಖಾಳ ಅಮ್ಮ ಆತ್ಮಹತ್ಯೆ ಮಾಡಿಕೊಂಡರು…!
ಕಾಲೇಜು ವಿದ್ಯಾರ್ಥಿನಿ ಸೌಮ್ಯಾ ತನ್ನ ಕಾಲೇಜು ಹುಡುಗನನ್ನು ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಆ್ಯಸಿಡ್ ದಾಳಿಗೆ ತುತ್ತಾಗಿ ಒಂದು ಕಣ್ಣು ಕಳೆದುಕೊಂಡಳು. ವರದಕ್ಷಿಣೆಯ ಬಾಕಿ ಹಣ ಕೊಟ್ಟಿಲ್ಲ ಎಂದು ಗಂಡನಿಂದಲೇ ಆ್ಯಸಿಡ್ ದಾಳಿಗೆ ಒಳಗಾದರು ಲಕ್ಷ್ಮಿ, ಸೆಕ್ಸ್ ನಿರಾಕರಿಸಿದ ಕಾರಣಕ್ಕೆ ತನ್ನ ಬಾಸ್ನಿಂದ ಆ್ಯಸಿಡ್ ದಾಳಿಗೆ ಒಳಗಾದಳು ಲತಾ…
ಹೀಗೆ ಆ್ಯಸಿಡ್ ದಾಳಿಯ ಹೃದಯವಿದ್ರಾವಕ ಘಟನೆಗಳು ಒಂದಲ್ಲ… ಎರಡಲ್ಲ… ದೈಹಿಕ ಸೌಂದರ್ಯದಿಂದಲೇ ಮನುಷ್ಯರನ್ನು ಅಳೆಯುವ ಈ ಜಗದಲ್ಲಿ ವಿರೂಪ ಮುಖ ಹೊತ್ತು ಬದುಕುವುದೇ ಅಸಾಧ್ಯವೆಂದು ಆತ್ಮಹತ್ಯೆಯ ಮಾರ್ಗ ಹಿಡಿಯುವ ಮಹಿಳೆಯರು ಒಂದೆಡೆಯಾದರೆ, ಬದುಕಬೇಕೆಂದುಕೊಂಡರೂ ಎಲ್ಲಿಯೂ ಕೆಲಸ ಸಿಗದೇ ಹತಾಶರಾಗುವ ಸ್ತ್ರೀಯರು ಮತ್ತೊಂದೆಡೆ. ಈ ಎರಡೂ ವರ್ಗಗಳನ್ನು ಗಮನದಲ್ಲಿಟ್ಟುಕೊಂಡೇ ಅವರಿಗೆ ಹೊಸ ಜನ್ಮ ನೀಡಲು ದೆಹಲಿಯ ಆಗ್ರಾದಲ್ಲಿ ಸ್ಥಾಪನೆಗೊಂಡಿದೆ ‘ಶೀರೋಸ್ ಹ್ಯಾಂಗ್ಔಟ್ ಕೆಫೆ’. ಇದು ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರ ಸಾಂತ್ವನ ಕೇಂದ್ರ ಮಾತ್ರವಲ್ಲದೇ, ಅವರು ತಮ್ಮ ಕಾಲಿನ ಮೇಲೆ ನಿಂತುಕೊಂಡು ಸುಂದರ ಭವಿಷ್ಯ ರೂಪಿಸಿಕೊಳ್ಳುವ ಕೇಂದ್ರವೂ ಹೌದು. ‘ಸೌಂದರ್ಯ ಎನ್ನುವುದು ಕೇವಲ ದೇಹದ ಭಾಷೆಯಲ್ಲ, ಅದು ಆಂತರಿಕ ಭಾಷೆಯೂ ಹೌದು’, ‘ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು’ ಎನ್ನುವ ಧ್ಯೇಯವಾಕ್ಯಗಳೊಂದಿಗೆ ರೂಪುಗೊಂಡಿರುವ ‘ಶೀರೋಸ್’ ಇಂದು ನೂರಾರು ಆಸಿಡ್ ಸಂತ್ರಸ್ತರ ಮೊಗದಲ್ಲಿ ಸಂತಸವನ್ನು ಮೂಡಿಸಿದೆ.
ಇದು ನಲಿವಿನ ತಾಣ: ಈ ಸಂಸ್ಥೆಯ ರೂವಾರಿ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಲೋಕ್ ದೀಕ್ಷಿತ್, ಆಶಿಷ್ ಕುಮಾರ್. ಆ್ಯಸಿಡ್ ದಾಳಿಗೆ ಒಳಗಾದವರ ಪುನರ್ವಸತಿ ಕೇಂದ್ರ ಚಾನ್ ಫೌಂಡೇಷನ್ ಅನ್ನು 2014ರ ಹೊತ್ತಿಗೆ ಶುರು ಮಾಡಿದ ಇವರು, ಈಗ ಕೆಫೆಯನ್ನು ಸ್ಥಾಪನೆ ಮಾಡಿದ್ದಾರೆ. ಸದ್ಯದಲ್ಲಿಯೇ ಪುಣೆಯಲ್ಲಿಯೂ ಇಂಥದ್ದೊಂದು ಕೇಂದ್ರ ತೆರೆಯುವ ಯೋಚನೆ ಅವರಲ್ಲಿದೆ. ‘ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ತೀವ್ರಸ್ವರೂಪ ಪಡೆದುಕೊಳ್ಳುತ್ತಿದ್ದನ್ನು ಗಮನಿಸಿದ ನಾವು ಅವರಿಗಾಗಿ ಏನಾದರೊಂದು ಸಹಾಯ ಮಾಡಲೇಬೇಕು ಎಂದು ಯೋಚನೆ ಮಾಡಲು ಶುರು ಮಾಡಿದೆವು. ದಾಳಿಗೆ ತುತ್ತಾದ ಮೇಲೆ ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗದೇ ಇರುವುದು ಒಂದೆಡೆಯಾದರೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸು ದಾಖಲಾಗದೇ ಇರುವುದು ಇನ್ನೊಂದೆಡೆ. ಕೇಸು ದಾಖಲಾದರೂ ವರ್ಷಾನುಗಟ್ಟಲೆ ಇತ್ಯರ್ಥವಾಗದ ಕೇಸು, ಕೋರ್ಟ್ ಸುತ್ತಾಡಿ ದಣಿಯುವ ಕುಟುಂಬ ವರ್ಗ. ಇದು ಒಂದಾದರೆ, ಕುರೂಪ ಮುಖವನ್ನು ಸರಿ ಮಾಡಲು ಲಕ್ಷಾಂತರ ರೂಪಾಯಿ ಹೊಂದಿಸಿಕೊಳ್ಳಲಾಗದೇ ಪರದಾಡುವ ಪಾಲಕರು, ಅತ್ತ, ಸಮಾಜಕ್ಕೆ ಮುಖ ತೋರಿಸಲಾರದೇ ಆತ್ಮಹತ್ಯೆಯ ಹಾದಿ ಹಿಡಿಯುವ ಸಂತ್ರಸ್ತರು. ಇದರಿಂದಾಗಿ, ಅವರಿಗಾಗಿ ಏನಾದರೊಂದು ಮಾಡಬೇಕೆಂಬ ಉದ್ದೇಶದಿಂದ ಶುರು ಮಾಡಿದ್ದೇ ಈ ಕೆಫೆ’ ಎನ್ನುತ್ತಾರೆ ಅಲೋಕ್.
ಮಹಿಳೆಯರ ಧ್ವನಿಯೂ ಹೌದು: ಶೀರೋಸ್ ಸಂಸ್ಥೆ ಆಸಿಡ್ ಸಂತ್ರಸ್ತೆಯರ ತಾಣವಾಗಿ ಮಾತ್ರ ಇರದೇ, ಆ್ಯಸಿಡ್ ಕುರಿತಂತೆ ಹೋರಾಟದ ಸಂಸ್ಥೆಯಾಗಿಯೂ ಪರಿಣಮಿಸಿದೆ. ಈ ಸಂಸ್ಥೆಯ ಮೂಲಕ ನಡೆಸಿರುವ ಹೋರಾಟದ ಫಲವಾಗಿ ಇಂದು ಸುಲಭದಲ್ಲಿ ಸಿಗುವ ಆ್ಯಸಿಡ್ಗೆ ಕಡಿವಾಣ ಬಿದ್ದಿದೆ, ಅಷ್ಟೇ ಅಲ್ಲದೇ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವಲ್ಲಿಯೂ ಸಂಸ್ಥೆ ಸಾಕಷ್ಟು ಶ್ರಮ ವಹಿಸಿದೆ.
ಹಲವು ಪ್ರಕರಣಗಳಲ್ಲಿ ತಮ್ಮ ಮೇಲೆ ಆಸಿಡ್ ದಾಳಿ ಮಾಡಿದ್ದು ಯಾರು ಎಂದು ಸಂತ್ರಸ್ತರು ಹಾಗೂ ಅವರ ಮನೆಯವರಿಗೆ ತಿಳಿದಿದ್ದರೂ ಬಾಹ್ಯ ಒತ್ತಡಗಳಿಂದ, ಜೀವ ಬೆದರಿಕೆಯಿಂದ ಬಾಯಿ ಬಿಡಲು ಹೆದರುತ್ತಿರುವುದನ್ನು ಗಮನಿಸಿದ ಈ ಸಂಸ್ಥೆಯು, ಮಹಿಳೆಯರ ಧ್ವನಿಯಾಗಿಯೂ ಕೆಲಸ ಮಾಡುತ್ತಿದೆ. ಅವರ ಜೀವನದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುತ್ತಿದೆ. ಸಂತ್ರಸ್ತೆಯರಿಗೆ ಅಡುಗೆ ಮಾತ್ರವಲ್ಲದೇ ಕರಕುಶಲ ತರಬೇತಿಯನ್ನೂ ನೀಡಲಾಗುತ್ತಿದ್ದು, ಅವರು ತಮ್ಮ ನೋವನ್ನು ಮರೆತು ಅದರಲ್ಲಿಯೇ ಬಿಜಿ ಇರುವಂತೆ ಮಾಡಲಾಗುತ್ತಿದೆ. ಇಲ್ಲಿ ಗ್ರಂಥಾಲಯಗಳೂ ಇದ್ದು, ಸಂತ್ರಸ್ತೆಯರು ಸುಂದರ ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ಅಗತ್ಯ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಕೆಫೆಗೆ ಬರುವ ಹಲವಾರು ವಿದೇಶಿಗರು ಸಂತ್ರಸ್ತೆಯರ ದಿಟ್ಟತನಕ್ಕೆ ಮನಸೋತು ಅಲ್ಲಿಯೇ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಇದೆ. ಇದಕ್ಕೆ ಹಣದ ಸಂಗ್ರಹಣೆಯಲ್ಲಿ ಅವರು ತೊಡಗಿದ್ದಾರೆ.
ಉಚಿತ ಕೆಫೆ!
ಹೆಸರೇ ಸೂಚಿಸುವಂತೆ ಇದೊಂದು ಕೆಫೆ. ವಿವಿಧ ಬಗೆಯ ಆಹಾರಗಳು ಇಲ್ಲಿ ದೊರಕುತ್ತವೆ. ಇವೆಲ್ಲವನ್ನೂ ತಯಾರಿಸುವುದು ಆ್ಯಸಿಡ್ ಸಂತ್ರಸ್ತರೇ. ಇಲ್ಲಿ ಬರುವ ಗ್ರಾಹಕರಿಗೆ ಆಹಾರವನ್ನು ಉಚಿತವಾಗಿ ನೀಡಲಾಗುತ್ತದೆ. ಮೆನುವಿನಲ್ಲಿ ಯಾವುದೇ ಪದಾರ್ಥದ ಬೆಲೆ ನಮೂದು ಮಾಡಿರುವುದಿಲ್ಲ. ಆದರೆ ಗ್ರಾಹಕರು ತಮಗೆ ತೋಚಿದಷ್ಟು ಹಣ ಪಾವತಿಸಹುದು. ಹೌದು, ‘ಶೀರೋಸ್’ ವಿಶೇಷತೆಯೇ ಅದು. ಆಗ್ರಾದ ಸೌಂದರ್ಯವನ್ನು ಸವಿಯಲು ದಿನಂಪ್ರತಿ ಕನಿಷ್ಠ 70 ಸಾವಿರ ಪ್ರವಾಸಿಗರು ಬರುತ್ತಾರೆ. ಅವರಲ್ಲಿ ಬಹುತೇಕರು ವಿದೇಶಿಗರು. ಈ ಪ್ರವಾಸಿ ತಾಣದ ಸಮೀಪವೇ ಇರುವ ‘ಶೀರೋಸ್’ ಅಲ್ಪ ಸಮಯದಲ್ಲಿಯೇ ಅದೆಷ್ಟು ಪ್ರಸಿದ್ಧಿಯಾಗಿದೆ ಎಂದರೆ, ಹೆಚ್ಚಿನ ಪ್ರವಾಸಿಗರು ಇಲ್ಲಿ ರುಚಿ ರುಚಿ ಆಹಾರ ಸವಿಯಲು ಬರುತ್ತಾರೆ. ಇಲ್ಲಿ ಬರುವ ಗ್ರಾಹಕರಿಗೆ ನಗುಮುಖದಿಂದ ತಿನಿಸುಗಳನ್ನು ಸರಬರಾಜು ಮಾಡುವುದು ‘ನನ್ನ ನಗುವೇ ನನ್ನ ಸೌಂದರ್ಯ’ ಎಂದು ಟೀ-ಷರ್ಟ್ ಮೇಲೆ ಬರೆದುಕೊಂಡಿರುವ ಆ್ಯಸಿಡ್ ಸಂತ್ರಸ್ತರು. ಈ ಕೆಫೆ ಸ್ಥಾಪನೆಗೊಂಡಿರುವ ಉದ್ದೇಶವನ್ನು ತಿಳಿದುಕೊಳ್ಳುವ ಈ ಪ್ರವಾಸಿಗರು ತಾವು ತಿಂದದ್ದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿಗೆ ಹಣವನ್ನು ನೀಡಿ ಹೋಗುವುದಿದೆ. ಇದೇ ಈ ಸಂಸ್ಥೆಗೆ ಆಧಾರವಾಗಿದೆ.
| ಸುಚೇತನಾ