ಬಬಲೇಶ್ವರ: 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರು ನಡೆಸುತ್ತಿದ್ದ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್ ನಡೆಸಿದ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಪಟ್ಟಣದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಗುರುಪಾದೇಶ್ವರ ಮಠದಿಂದ ಶಾಂತವೀರ ವೃತ್ತಕ್ಕೆ ಆಗಮಿಸಿದ ಸಮಾಜದ ಮುಖಂಡರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆ ಸ್ಥಳದಲ್ಲಿ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಬಲೇಶ್ವರದ ಬೃಹನ್ಮಠದ ಪೀಠಾಧಿಪತಿ- ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರು ಮಾತನಾಡಿ, ಹೋರಾಟದ ಸಮಯದಲ್ಲಿ ಪ್ರತಿಭಟನೆಕಾರರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ಲಾಠಿಚಾರ್ಜ್ ಮಾಡಲು ಕಾರಣರಾದ ಎಡಿಜಿಪಿ, ಎಸ್‌ಪಿ, ಡಿಸಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಶಾಂತಿಯುತವಾಗಿ ನಡೆಯುತ್ತಿದ್ದ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ಸಿಎಂ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಮುಂಚೆಯೂ ಸಿಎಂ ಆಗಿದ್ದಾಗ ಲಿಂಗಾಯತ ಸಮಾಜದ ವಿರುದ್ಧ ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸಿದ್ದರು. ಮೀಸಲಾತಿ ಹೋರಾಟ ನಡೆದಾಗ ಸೌಜನ್ಯ ಇದ್ದಿದ್ದರೆ ಸಿಎಂ ಅವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಬೇಕಿತ್ತು. ಅಧಿಕಾರ ಎಂಬುದು ಶಾಶ್ವತ ಅಲ್ಲ ಎಂದರು.
ಪಂಚಮಸಾಲಿ ಸಮಾಜದ ಮುಖಂಡ ವಿ.ಎಸ್.ಪಾಟೀಲ ಮಾತನಾಡಿ, ಪಂಚಮಸಾಲಿ ಸಮುದಾಯದಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರ ಅಭಿವೃದ್ಧಿಗಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ ಬಿರಾದಾರ ಮಾತನಾಡಿದರು. ಸಮಾಜದ ಮುಖಂಡರಾದ ಚೆನ್ನಪ್ಪ ಕೊಪ್ಪದ, ಈರಣ್ಣ ಮಹೇಶ, ಕೋಳಕೂರು ಶಿರಮಗೊಂಡ, ಅರ್ಜುನ ಬೇಲೂರು, ಕುರುವಿನಶೆಟ್ಟಿ ಸಮಾಜದ ಮುಖಂಡ ಬಸವರಾಜ ಕುರವಿನಶೆಟ್ಟಿ, ಮಾಳಿ ಸಮಾಜದ ಮುಖಂಡ ಮಲ್ಲು ಕಣ್ಣೂರ, ಸಂಗಪ್ಪ ತಮಗೊಂಡ, ಬಾಪುರಾಜ ಯಾದವಾಡ, ಈರಗೌಡ ಬಿರಾದಾರ, ಶಿವಪುತ್ರ ಪೂಜಾರಿ, ಬಿ.ಜಿ.ಬಿರಾದಾರ ಇತರರಿದ್ದರು.