ಹೈದರಾಬಾದ್: ಬಲಿಷ್ಠ ಬ್ಯಾಟಿಂಗ್ ಹಾಗೂ ಅನುಭವಿ ಬೌಲಿಂಗ್ ವಿಭಾಗ ಹೊಂದಿರುವ ಹಾಲಿ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಹಾಗೂ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆರ್‌ಜಿಐ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ರನ್‌ಮಳೆ ಹರಿಯುವ ನಿರೀಕ್ಷೆ ಇದೆ.
ಕಳೆದ ಆವೃತ್ತಿಯಲ್ಲಿ ಮೂರು ಬಾರಿ 250 ಪ್ಲಸ್ ರನ್ ಗಳಿಸಿರುವ ಸನ್‌ರೈಸರ್ಸ್ ತಂಡ ಸ್ಫೋಟಕ ಬ್ಯಾಟರ್‌ಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಜತೆಗೆ ವಿಕೆಟ್ ಕೀಪರ್ -ಬ್ಯಾಟರ್ ಇಶಾನ್ ಕಿಶನ್ ಸೇರ್ಪಡೆ ಮತ್ತಷ್ಟು ಬಲ ತಂದಿದೆ. ಈ ಬಾರಿ 300ಕ್ಕೂ ಅಧಿಕ ರನ್ ಬಾರಿಸಿದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗಿದೆ. ಇನ್ನು ಕಳೆದ ಆವೃತ್ತಿಯ ಮೂರನೇ ಸ್ಥಾನಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಇದೆ. ಹರಾಜಿಗೂ ಮುನ್ನ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ಕೈಬಿಟ್ಟಿದ್ದು ಇದಕ್ಕೆ ಪ್ರಮುಖ ಕಾರಣ.
ಸ್ಯಾಮ್ಸನ್ ಸಂಪೂರ್ಣವಾಗಿ ಫಿಟ್ ಆಗದಿರುವುದರಿಂದ ರಿಯಾನ್ ಪರಾಗ್ ಹಂಗಾಮಿ ನಾಯಕನಾಗಿ ಮೊದಲ ಮೂರು ಪಂದ್ಯಗಳಲ್ಲಿ ತಂಡ ಮುನ್ನಡೆಸಲ್ಲಿದ್ದಾರೆ. ಟೀಮ್ ಇಂಡಿಯಾ ಮಾಜಿ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪ್ರಶಸ್ತಿ ಜಯಿಸುವ ನಿರೀಕ್ಷೆ ಹೊಂದಿದೆ. ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ಧ್ರುವ ಜುರೆಲ್‌ರಂಥ ಯುವ ತಾರೆಗಳಿಗೆ ಪ್ಯಾಟ್ ಕಮ್ಮಿನ್ಸ್ ಹಾಗೂ ಮೊಹಮದ್ ಶಮಿ ಎದುರು ನೈಜ ಪರೀಕ್ಷೆ ಎದುರಾಗಲಿದೆ. ಜತೆಗೆ ಹಿಂದಿನ ಸೀಸನ್‌ನ ಎರಡೂ ಮುಖಾಮುಖಿಗಳಲ್ಲಿ ರಾಜಸ್ಥಾನ ಸೋಲಿನ ಹಿನ್ನಡೆ ಕಂಡಿದೆ.
ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಆರಂಭಿಕ ಸ್ಥಾನ ಪಡೆಯಲು ಯಶಸ್ವಿ ಜೈಸ್ವಾಲ್‌ಗೆ ಈ ಆವೃತ್ತಿ ಮಹತ್ವದ್ದಾಗಿದೆ. ಸಂಜು ಸ್ಯಾಮ್ಸನ್ ಆರಂಭಿಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡಲಿದ್ದಾರೆ. ಬಿಹಾರದ 13 ವರ್ಷದ ವೈಭವ್ ಸೂರ್ಯವಂಶಿ ಹಾಗೂ ದಕ್ಷಿಣ ಆಫ್ರಿಕಾದ 18 ವರ್ಷದ ವೇಗಿ ಕ್ವೆನಾ ಮಾಕ ರಾಜಸ್ಥಾನ ತಂಡದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ಆರ್‌ಆರ್ ಬೌಲರ್‌ಗಳ ಪರೀಕ್ಷೆ
ಇಂಗ್ಲೆಂಡ್ ವೇಗಿ ಜ್ರೋಾ ಆರ್ಚರ್ ಹೊರತುಪಡಿಸಿ ಬೌಲಿಂಗ್‌ನಲ್ಲಿಯೂ ದೇಶೀಯ ಬೌಲರ್‌ಗಳನ್ನೇ ನೆಚ್ಚಿಕೊಂಡಿರುವ ರಾಜಸ್ಥಾನ ತಂಡಕ್ಕೆ ನೈಜ ಸವಾಲು ಎದುರಾಗಲಿದೆ. ಸನ್‌ರೈಸರ್ಸ್ ತಂಡ ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್ ಆರಂಭಿಕ ಜೋಡಿ ಜತೆಗೆ ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಕನ್ನಡಿಗ ಅಭಿನವ್ ಮನೋಹರ್ ಅವರಂಥ ಸ್ಫೋಟಕ ಬ್ಯಾಟರ್‌ಗಳನ್ನು ಹೊಂದಿದೆ. ಅಭಿಷೇಕ್ ಶರ್ಮ ಹಾಗೂ ಟ್ರಾವಿಸ್ ಹೆಡ್ ಇತ್ತೀಚಿಗೆ ಭರ್ಜರಿ ಾರ್ಮ್‌ನಲ್ಲಿದ್ದು, ಅಭಿಷೇಕ್ ಆಡಿದ ಕೊನೇ ಟಿ20 ಪಂದ್ಯದಲ್ಲಿ 250 ಸ್ಟ್ರೈಕ್‌ರೇಟ್‌ನಲ್ಲಿ 135 ರನ್ ಕಲೆಹಾಕಿದ್ದಾರೆ. ಸನ್‌ರೈಸರ್ಸ್ ತಂಡ ಹಿಂದಿನ ಆವೃತ್ತಿಯಲ್ಲಿ ಟೂರ್ನಿಯ ಗರಿಷ್ಠ 287 ರನ್ ಸೇರಿ 277, 266 ರನ್ ಗಳಿಸಿದ ದಾಖಲೆ ಹೊಂದಿದೆ. ಆಕಾಶ್ ಮಧ್ವಲ್, ತುಷಾರ್ ದೇಶಪಾಂಡೆ ಜತೆಗೆ ವಾನಿಂದು ಹಸರಂಗ, ಮಹೀಶ್ ತೀಕ್ಷಣ ರಾಜಸ್ಥಾನ ಬೌಲಿಂಗ್‌ಗೆ ಶಕ್ತಿ ತುಂಬಲಿದ್ದಾರೆ.
ಮುಖಾಮುಖಿ: 20
ಸನ್‌ರೈಸರ್ಸ್: 11
ರಾಜಸ್ಥಾನ: 9
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್