ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಆರು ತಾಸು ಸರದಿಯಲ್ಲಿ ಕಾದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನವದೆಹಲಿ ಕ್ಷೇತ್ರದಿಂದ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಸೋಮವಾರ ರೋಡ್ ಷೋ ವಿಳಂಬವಾಗಿದ್ದರಿಂದ ಅವರಿಗೆ ನಾಮಪತ್ರ ಸಲ್ಲಿಸಲು ಆಗಲಿಲ್ಲ.
45ನೇ ಟೋಕನ್: ಸಿಎಂ ಕೇಜ್ರಿವಾಲ್ ಪಾಲಕರೊಂದಿಗೆ ದೆಹಲಿಯ ಜಾಮ್ಗರ ಹೌಸ್ಗೆ ಕೇಜ್ರಿವಾಲ್ ಬಂದಿದ್ದಾಗ 40ಕ್ಕೂ ಹೆಚ್ಚು ಆಕಾಂಕ್ಷಿಗಳು ಆಗಲೇ ಸರದಿ ಸಾಲಿನಲ್ಲಿ ಇದ್ದರು. ಅವರಲ್ಲಿ ಬಹುತೇಕರು ಪಕ್ಷೇತರ ಅಭ್ಯರ್ಥಿಗಳಾಗಿದ್ದರು. ಕೇಜ್ರಿವಾಲ್ಗೆ 45ನೇ ಟೋಕನ್ ನೀಡಲಾಯಿತು. ಸುಮಾರು ಆರು ಗಂಟೆ ಕಾದು ನಾಮಪತ್ರ ಸಲ್ಲಿಸಿದರು.
ನಿಯಮ ಪ್ರಕಾರ, ಅಭ್ಯರ್ಥಿ ಮಧ್ಯಾಹ್ನ ಮೂರು ಗಂಟೆ ಒಳಗೆ ಸರದಿಯಲ್ಲಿ ಇದ್ದರೆ, ಎಷ್ಟೇ ವೇಳೆಯಾದರೂ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಟೋಕನ್ ನೀಡಲಾಗುತ್ತದೆ. ‘ದೇಶ ಬದಲಾಯಿಸಿದ್ದೇವೆ, ದೆಹಲಿ ಬದಲಿಸುತ್ತೇವೆ’
‘ದೇಶವನ್ನು ಬದಲಾಯಿಸಿದ್ದೇವೆ, ದೆಹಲಿಯನ್ನೂ ಬದಲಿಸುತ್ತೇವೆ’ ಎಂಬುದು ಬಿಜೆಪಿಯ ಚುನಾವಣಾ ಘೋಷವಾಕ್ಯವಾಗಿದೆ. ಬುಧವಾರದಿಂದ 5 ಸಾವಿರ ಚುನಾವಣೆ ಪ್ರಚಾರ ಆರಂಭಿಸಲಿದೆ.
ಕೇಜ್ರಿವಾಲ್ ಪ್ರತಿಸ್ಪರ್ಧಿ ಸುನಿಲ್ ಯಾದವ್
ಬಿಜೆಪಿ ಸೋಮವಾರ ರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ಯುವ ಮೋರ್ಚಾ ರಾಜ್ಯಾಧ್ಯಕ್ಷ ಸುನಿಲ್ ಯಾದವ್ರನ್ನು ಸಿಎಂ ಕೇಜ್ರಿವಾಲ್ರ ವಿರುದ್ಧ ಕಣಕ್ಕಿಳಿಸಿದೆ. ಪಕ್ಷದ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾರನ್ನು ಹರಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಹೆಸರಿಸಿದೆ. 2011 ಅಕ್ಟೋಬರ್ನಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದಾಗ ಬಗ್ಗಾ ಪ್ರಚಾರದ ಮುನ್ನೆಲೆಗೆ ಬಂದಿದ್ದರು. ಕಾಶ್ಮೀರ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ ಭೂಷಣ್ ಮೇಲೆ ಬಗ್ಗಾ ದಾಳಿ ನಡೆಸಿದ್ದರು. ಹರಿಯಾಣದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ದುಷ್ಯಂತ್ ಚೌತಾಲಾ ನೇತೃತ್ವದ ಜನನಾಯಕ ಜನತಾ ಪಕ್ಷ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬಿಜೆಪಿಯ ಇನ್ನೊಂದು ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ಕೂಡ ಸ್ಪರ್ಧಿಸದಿರಲು ನಿರ್ಧರಿಸಿದೆ. ಪೌರತ್ವ ತಿದ್ದುಪಡಿ ಕಾನೂನಿಗೆ ವಿರೋಧ ವ್ಯಕ್ತಪಡಿಸುವುದನ್ನು ಕೈಬಿಡುವಂತೆ ಬಿಜೆಪಿ ಆಗ್ರಹಿಸಿದ್ದರಿಂದ ಅಕಾಲಿ ದಳ ಈ ತೀರ್ವನಕ್ಕೆ ಬಂದಿದೆ.
ಬಿಜೆಪಿ ಮೇಲೆ ಪಿತೂರಿಯ ಆರೋಪ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ಉಮೇದುವಾರಿಕೆ ಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಯಲ್ಲಿ ನೂರಾರು ಆಕಾಂಕ್ಷಿಗಳು ಸೇರಿದ್ದರು. ಇದರ ಹಿಂದೆೆ ಬಿಜೆಪಿಯ ಪಿತೂರಿಯಿದೆ. ಕೇಜ್ರಿವಾಲ್ ಕಣಕ್ಕೆ ಇಳಿಯುವುದನ್ನು ತಡೆಯುವ ಉದ್ದೇಶದಿಂದ ಬಿಜೆಪಿ 40ಕ್ಕೂ ಹೆಚ್ಚು ಜನರನ್ನು ಕಳಿಸಿತ್ತು ಎಂದು ಆಪ್ ಆರೋಪಿಸಿದೆ. ‘ಬಿಜೆಪಿಗರೇ ಏನು ಬೇಕಾದರೂ ಮಾಡಿ. ಕೇಜ್ರಿವಾಲ್ ಈ ಬಾರಿಯೂ ಮುಖ್ಯಮಂತ್ರಿ ಆಗುವುದನ್ನು ತಡೆಯಲಾಗದು. ನಿಮ್ಮ ಹುನ್ನಾರ ಫಲಿಸುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ನಾಮಪತ್ರ ಸಲ್ಲಿಸಲು ಬಹಳಷ್ಟು ಜನರು ಬಂದಿದ್ದಾರೆ. ಇಷ್ಟೊಂದು ಜನರು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಂದಾಗಿರುವುದರಿಂದ ಖುಷಿಯಾಗಿದೆ.
| ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ (ಟ್ವೀಟ್)