ಶ್ರೀಲಂಕಾ ಆತ್ಮಾಹುತಿ ದಾಳಿಕೋರರು ಬೆಂಗಳೂರು ಅಲ್ಲದೆ ಕೇರಳ, ಕಾಶ್ಮೀರಕ್ಕೂ ಭೇಟಿ ನೀಡಿದ್ದರು ಎಂದ ಲಂಕಾ ಸೇನಾ ಮುಖ್ಯಸ್ಥ

ಕೊಲಂಬೋ: ಈಸ್ಟರ್​ ಭಾನುವಾರದಂದು ಶ್ರೀಲಂಕಾದ ಚರ್ಚ್​ಗಳು ಮತ್ತು ಐಷಾರಾಮಿ ಹೋಟೆಲ್​ಗಳ ಮೇಲೆ ಆತ್ಮಾಹುತಿ ದಾಳಿ ಮಾಡುವ ಮೊದಲು ಆತ್ಮಾಹುತಿ ದಾಳಿಕೋರರು ಬೆಂಗಳೂರು ಅಲ್ಲದೆ, ಕೇರಳ ಮತ್ತು ಕಾಶ್ಮೀರಕ್ಕೂ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನಾಪಡೆ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಮಹೇಶ್​ ಸೇನಾನಾಯಕೆ ಹೇಳಿದ್ದಾರೆ.

ಆತ್ಮಾಹುತಿ ಬಾಂಬ್​ ದಾಳಿ ಸಂಘಟಿಸುವ ಕುರಿತು ಒಂದಷ್ಟು ತರಬೇತಿ ಪಡೆಯಲು ಅಥವಾ ಬಾಹ್ಯಸಂಪರ್ಕವನ್ನು ಬಲಪಡಿಸಿಕೊಳ್ಳುವುದು ದಾಳಿಕೋರರ ಈ ಭೇಟಿಯ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.

ದ್ವೀಪ ರಾಷ್ಟ್ರದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆ ಕುರಿತು ಭಾರತ ಮೊದಲೇ ಬೇಹುಗಾರಿಕಾ ಮಾಹಿತಿ ನೀಡಿದ್ದರ ಬಗ್ಗೆ ಶ್ರೀಲಂಕಾದ ಭದ್ರತಾ ಪಡೆಯ ಮುಖ್ಯಸ್ಥರೊಬ್ಬರು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಖಾಸಗಿ ಇಂಗ್ಲಿಷ್​ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಒಪ್ಪಿಕೊಂಡಿರುವ ಲೆ.ಜ. ಮಹೇಶ್​ ಸೇನಾನಾಯಕೆ, ಶಂಕಿತರು ದಾಳಿ ಮಾಡುವ ಮುನ್ನ ಬೆಂಗಳೂರಿಗೆ ಹೋಗಿದ್ದರು. ಅಲ್ಲಿಂದ ಕಾಶ್ಮೀರ ಮತ್ತು ಕೇರಳಕ್ಕೂ ತೆರಳಿದ್ದರು. ಈ ಮಾಹಿತಿಯು ನಮಗೆ ಲಭ್ಯವಾಗಿದೆ. ಕೆಲವು ತರಬೇತಿ ಪಡೆಯಲು ಇಲ್ಲವೇ ಬಾಹ್ಯ ಸಂಘಟನೆಗಳೊಂದಿಗಿನ ಸಂಪರ್ಕವನ್ನು ಬಲಪಡಿಸಿಕೊಳ್ಳುವ ಉದ್ದೇಶ ಈ ಭೇಟಿಯ ಹಿಂದಿರಬಹುದು ಎಂದು ಹೇಳಿದ್ದಾರೆ.

ಏ.21ರ ಈಸ್ಟರ್​ ಭಾನುವಾರದಂದು ಶ್ರೀಲಂಕಾದ ಮೂರು ಚರ್ಚ್​ಗಳು ಮತ್ತು ಮೂರು ಐಷಾರಾಮಿ ಹೋಟೆಲ್​ಗಳ ಮೇಲೆ ಒಬ್ಬ ಮಹಿಳೆ ಸೇರಿ 9 ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದರು. ಈ ದಾಳಿಗಳಲ್ಲಿ ಒಟ್ಟು 253 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚಉ ಜನರು ಗಾಯಗೊಂಡಿದ್ದರು. ಐಸಿಸ್​ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಶ್ರೀಲಂಕಾ ಮೂಲದ ನ್ಯಾಷನಲ್​ ತೌಹೀದ್​ ಜಮಾತ್​ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು. ಅಲ್ಲದೆ, ಈ ಸಂಘಟನೆಗೆ ಸೇರಿದ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡಿತ್ತು. (ಏಜೆನ್ಸೀಸ್​)