Uddhav Thackeray : ಸುಮಾರು 20 ವರ್ಷಗಳ ಬಳಿಕ ಠಾಕ್ರೆ ಸಹೋದರು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸಾಕಷ್ಟು ವಿರೋಧದ ಬಳಿಕ ತ್ರಿಭಾಷಾ ನೀತಿಗೆ ಸಂಬಂಧಿಸಿದ ನಿರ್ಣಯಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ನೇತೃತ್ವದ ಸರ್ಕಾರ ಹಿಂತೆಗೆದುಕೊಂಡಿದ್ದಕ್ಕೆ ತಮ್ಮ ಪಕ್ಷಗಳು ಮುಂಬೈನಲ್ಲಿ ಆಯೋಜಿಸಿದ್ದ ಮೆಗಾ ವಿಕ್ಟರಿ ರ್ಯಾಲಿಯಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಸೋದರಸಂಬಂಧಿ ರಾಜ್ ಠಾಕ್ರೆ ವೇದಿಕೆ ಹಂಚಿಕೊಂಡರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ಯ ಸಂಸ್ಥಾಪಕ ರಾಜ್ ಠಾಕ್ರೆ ಅವರು ಬಿಜೆಪಿ ನೇತೃತ್ವದ ಮಹಾಯುತಿಯ ವಿರುದ್ಧ ತಮ್ಮ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದರು. ಯಾವುದೇ ಚರ್ಚೆಯಿಲ್ಲದೆ ಇದ್ದಕ್ಕಿದ್ದಂತೆ ಹಿಂದಿ ಹೇರಿಕೆಯನ್ನು ಹೇಗೆ ತಂದರು? ಯಾವ ಉದ್ದೇಶಕ್ಕಾಗಿ ಮತ್ತು ಯಾರಿಗಾಗಿ? ಇದು ಪುಟ್ಟ ಮಕ್ಕಳಿಗೆ ಮಾಡಿದ ಅನ್ಯಾಯ. ಯಾವುದೇ ಸಮಾಲೋಚನೆಯಿಲ್ಲದೆ, ನೀವು ತ್ರಿಭಾಷಾ ನೀತಿಯನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದೀರಿ. ನೀವು ವಿಧಾನಸಭೆಯನ್ನು ಆಳಬಹುದು. ಆದರೆ, ನಾವು ಬೀದಿಗಳನ್ನು ಆಳುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಬಾಳಾಸಾಹೇಬ್ ಠಾಕ್ರೆಗೆ ಸಾಧ್ಯವಾಗದ್ದನ್ನು ಮುಖ್ಯಮಂತ್ರಿ ಫಡ್ನವೀಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮಿಬ್ಬರನ್ನು ಒಟ್ಟಿಗೆ ಸೇರಿಸಿದ್ದಾರೆ. ಮರಾಠಿ ಜನರು ತೋರಿಸಿದ ಬಲವಾದ ಒಗ್ಗಟ್ಟಿನಿಂದಾಗಿ ಮಹಾರಾಷ್ಟ್ರ ಸರ್ಕಾರವು ಇಂದು ತ್ರಿಭಾಷಾ ಸೂತ್ರದ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದೆ. ನಾವು ಇನ್ನು ಮುಂದೆ ಒಟ್ಟಿಗೆ ಇರುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ನಿಮ್ಮನ್ನು ಹೊರಗೆ ಹಾಕುತ್ತೇವೆ ಎಂದು ರಾಜ್ ಠಾಕ್ರೆ ಹೇಳಿದರು.
ನನಗೆ ಹಿಂದಿ ಬಗ್ಗೆ ಯಾವುದೇ ವಿರೋಧವಿಲ್ಲ. ಯಾವುದೇ ಭಾಷೆ ಕೆಟ್ಟದ್ದಲ್ಲ. ಒಂದು ಭಾಷೆಯನ್ನು ನಿರ್ಮಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮರಾಠಾ ಸಾಮ್ರಾಜ್ಯದ ಅವಧಿಯಲ್ಲಿ ನಾವು ಮರಾಠಿ ಜನರು ಬಹಳಷ್ಟು ರಾಜ್ಯಗಳನ್ನು ಆಳಿದ್ದೇವೆ. ಆದರೆ, ಆ ಭಾಗಗಳಲ್ಲಿ ನಾವು ಎಂದಿಗೂ ಮರಾಠಿಯನ್ನು ಹೇರಲಿಲ್ಲ. ಅವರೇ ನಮ್ಮ ಮೇಲೆ ಹಿಂದಿ ಹೇರುವ ಪ್ರಯೋಗವನ್ನು ಪ್ರಾರಂಭಿಸಿದರು ಮತ್ತು ನಾವು ಅದನ್ನು ವಿರೋಧಿಸದಿದ್ದರೆ ಅವರೆಲ್ಲ ಸೇರಿ ಮುಂಬೈಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವವರೆಗೆ ಹೋಗುತ್ತಿದ್ದರು ಎಂದು ರಾಜ್ ಠಾಕ್ರೆ ಹೇಳಿದರು.
ಇದನ್ನೂ ಓದಿ: ಈ 3 ರಾಶಿಯವರು ಕಠಿಣ ಹೃದಯಿಗಳಂತೆ: ಸೆಂಟಿಮೆಂಟ್ ಅನ್ನೋ ಪದಕ್ಕೆ ಇವರ ಬಳಿ ಜಾಗವಿಲ್ಲ! Zodiac Signs
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಧ್ಯ ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಈ ರ್ಯಾಲಿ ನಡೆಯಿತು.
ಅಂದಹಾಗೆ, ತೀವ್ರ ವಿರೋಧದ ನಂತರ, ಸರ್ಕಾರ ಜೂನ್ 17 ರಂದು ಹಿಂದಿಯನ್ನು ಐಚ್ಛಿಕವಾಗಿಸಲು ಸರ್ಕಾರಿ ನಿರ್ಣಯವನ್ನು ತಿದ್ದುಪಡಿ ಮಾಡಿತು. ಜೂನ್ 29 ರಂದು, ಮೂಲ ಮತ್ತು ತಿದ್ದುಪಡಿ ಮಾಡಿದ ನಿರ್ಣಯಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಚಿವ ಸಂಪುಟ ನಿರ್ಧರಿಸಿತು. ಇದರ ನಡುವೆ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ ಎರಡೂ ನಾಯಕರು ಸರ್ಕಾರಿ ನಿರ್ಣಯದ ಪ್ರತಿಗಳನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದರು. ಜುಲೈ 5 ರಂದು ಪ್ರತಿಭಟನಾ ಮೆರವಣಿಗೆಯನ್ನು ಯೋಜಿಸಿದ್ದರು. ಆದಾಗ್ಯೂ, ತ್ರಿಭಾಷ ನೀತಿ ರದ್ದತಿಯ ನಂತರ, ಪಕ್ಷಗಳು ಪ್ರತಿಭಟನೆಯನ್ನು ಕೈಬಿಟ್ಟು ಜಂಟಿ “ವಿಜಯ” ರ್ಯಾಲಿಯನ್ನು ಘೋಷಿಸಿದವು. ವಿಜಯ ಕಾರ್ಯಕ್ರಮಕ್ಕಾಗಿ, ಎರಡೂ ಪಕ್ಷಗಳು ರ್ಯಾಲಿಯ ಸಮಯದಲ್ಲಿ ತಮ್ಮ ತಮ್ಮ ಧ್ವಜಗಳು, ಚಿಹ್ನೆಗಳನ್ನು ಅಥವಾ ಪಕ್ಷದ ಬಣ್ಣಗಳನ್ನು ಪ್ರದರ್ಶಿಸುವುದನ್ನು ತಪ್ಪಿಸಲು ನಿರ್ಧರಿಸಿದವು. ಈ ಕ್ರಮ ಪಕ್ಷಪಾತದ ರಾಜಕೀಯಕ್ಕಿಂತ ಸಾಂಸ್ಕೃತಿಕ ಏಕತೆಯ ಸಂದೇಶವೆಂದು ಸಾರಲಾಗಿದೆ.
2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಶಿವಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆದ್ದುಕೊಂಡಿತು, ಆದರೆ ಎಂಎನ್ಎಸ್ ತನ್ನ ಖಾತೆಯನ್ನು ತೆರೆಯಲು ವಿಫಲವಾಯಿತು. ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವಿಭಜಿತ ಶಿವಸೇನೆಯನ್ನು ತೊರೆದ ಸ್ವಲ್ಪ ಸಮಯದ ನಂತರ, 2005ರ ಮಾಲ್ವನ್ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ಇಬ್ಬರು ಠಾಕ್ರೆಗಳು ಕೊನೆಯ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಬಂದರು. ಆ ವರ್ಷದ ಕೊನೆಯಲ್ಲಿ ರಾಜ್ ಪಕ್ಷವನ್ನು ತೊರೆದು 2006ರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅನ್ನು ಪ್ರಾರಂಭಿಸಿದರು. ಸುಮಾರು 20 ವರ್ಷಗಳ ಬಳಿಕ ಇಬ್ಬರು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)
ನನ್ನ ಸ್ನೇಹಿತರಿಂದಲೇ ನನಗೆ… ನೋವು ಸಹಿಸಲಾರದೇ ಬಿ.ಟೆಕ್ ವಿದ್ಯಾರ್ಥಿನಿ ಸಾವಿಗೆ ಶರಣು! Engineering student
ದ್ವಿಶತಕ ಬಾರಿಸಿದ ಬೆನ್ನಲ್ಲೇ ತಂದೆ ಹೇಳಿದ ಮಾತು ಕೇಳಿ ಭಾವುಕರಾದ ಶುಭಮಾನ್ ಗಿಲ್! ವಿಡಿಯೋ ವೈರಲ್…Shubman Gill