ಉಡುಪಿಯಲ್ಲಿ ಭೂಪರಿವರ್ತನೆ ಸ್ಥಗಿತ

ಗೋಪಾಲಕೃಷ್ಣ ಪಾದೂರು ಉಡುಪಿ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಪ್ರಿಲ್‌ನಿಂದ ಯಾವುದೇ ಭೂಪರಿರ್ತನೆಗಳಾಗದೆ ಮನೆ, ಕಟ್ಟಡ ನಿರ್ಮಾಣಕ್ಕೆ ತೊಡಕುಂಟಾಗಿದೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಡುಪಿ ಹೋಬಳಿಯ 17 ಗ್ರಾಮಗಳು ಹಾಗೂ ಬ್ರಹ್ಮಾವರ ಹೋಬಳಿಯ 2 ಗ್ರಾಮಗಳು ಸೇರಿದಂತೆ 19 ಗ್ರಾಮಗಳಲ್ಲಿ ಸಮಸ್ಯೆಯಾಗಿದ್ದು, ಭೂ ಪರಿವರ್ತನೆಯ ನಿರಾಕ್ಷೇಪಣಾ ಪತ್ರಕ್ಕಾಗಿ ಸಲ್ಲಿಸಿದ 137 ಅರ್ಜಿಗಳು ವಿಲೇವಾರಿಯಾಗದೆ ಜನರು ಪರದಾಡುವಂತಾಗಿದೆ.
ಈ ಹಿಂದೆ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಟ್ರಿಬ್ಯುನಲ್ ಹಾಗೂ ಪಿಟಿಸಿಎಲ್ (ಎಸ್, ಎಸ್‌ಟಿ) ಜಾಗವಾಗಿದ್ದರೆ ಜಿಲ್ಲಾಧಿಕಾರಿ ಮತ್ತು ಪಟ್ಟಾ ಭೂಮಿಯಾಗಿದ್ದರೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದರೆ ಜಿಲ್ಲಾಮಟ್ಟದಲ್ಲೇ ಭೂ ಪರಿವರ್ತನೆ ಮಾಡಿಕೊಡಲಾಗುತ್ತಿತ್ತು. ಆದರೆ ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿದ್ದ ನಗರಾಭಿವೃದ್ಧಿ ಇಲಾಖೆ ಈ ಪ್ರಕ್ರಿಯೆಗೆ ತಡೆ ನೀಡಿತ್ತು. ನಂತರ ಭೂ ಪರಿವರ್ತನೆಗಾಗಿ ಇಲಾಖೆಗೆ ವರದಿ ಸಲ್ಲಿಸಬೇಕಾಗಿದ್ದು, ಅಲ್ಲಿಂದ ಅನುಮತಿ ದೊರೆತ ಬಳಿಕವಷ್ಟೇ ಕನ್ವರ್ಷನ್ ಮಾಡಬೇಕಾಗಿದೆ. ಇದು ಸಮಸ್ಯೆಗೆ ಮೂಲ ಕಾರಣ.

ಭೂ ವ್ಯವಹಾರಕ್ಕೆ ಹೊಡೆತ:  ಉಡುಪಿ ನಗರಸಭೆ ಹಾಗೂ ಸುತ್ತಮುತ್ತಲಿನ 19 ಗ್ರಾಮಗಳು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು, ಕನ್ವರ್ಷನ್ ಆಗದ ಜಾಗದಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ದಿನೇದಿನೆ ಉಡುಪಿ ನಗರ ಬೆಳೆಯುತ್ತಿದ್ದು, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸುತ್ತಿದೆ. ಈ ಭಾಗದಲ್ಲಿ ಕೃಷಿ ಭೂಮಿಗಳು ಲೇ ಔಟ್‌ಗಳಾಗಿ ಬದಲಾಗುತ್ತಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಸರ್ಕಾರದ ಸುತ್ತೋಲೆಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಡೆತ ಬಿದ್ದಿದೆ.

ಎಲ್ಲೆಲ್ಲಿ ತೊಂದರೆ?: ಉಡುಪಿ ಹೋಬಳಿ ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು, ಕೊಡವೂರು, ಪುತ್ತೂರು, ಅಂಬಲಪಾಡಿ, ಕಿದಿಯೂರು, ಮೂಡನಿಡಂಬೂರು, ಕಡೆಕಾರು, ಕುತ್ಪಾಡಿ, 80 ಬಡಗಬೆಟ್ಟು, ಅಲೆವೂರು, ಕೊರಂಗ್ರಪಾಡಿ, ತೆಂಕನಿಡಿಯೂರು, ಕೆಳಾರ್ಕಳಬೆಟ್ಟು, ಬಡಾನಿಡಿಯೂರು, ಉದ್ಯಾವರ, ಬ್ರಹ್ಮಾವರ ಹೋಬಳಿಯ ಮೂಡುತೋನ್ಸೆ, ಪಡುತೋನ್ಸೆ.

ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವಿದ್ದರೆ ಜಿಲ್ಲಾ ಮಟ್ಟದಲ್ಲೇ ಭೂ ಪರಿವರ್ತನೆ ಮಾಡಲಾಗುತ್ತಿತ್ತು. ಆದರೆ ಮಾರ್ಚ್‌ನಲ್ಲಿ ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿ ಚೇಂಜ್ ಆಫ್ ಲ್ಯಾಂಡ್‌ಗೆ ಇಲಾಖೆ ಅನುಮತಿ ಪಡೆಯುವುದು ಅಗತ್ಯ ಎಂದು ತಿಳಿಸಿದೆ. ಇದರಿಂದ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಚುನಾವಣೆ ಮುಗಿದು ನೀತಿ ಸಂಹಿತೆ ತೆರವಾದ ಬಳಿಕ ಮತ್ತೊಮ್ಮೆ ಸಮಸ್ಯೆ ಬಗ್ಗೆ ಇಲಾಖೆಯ ಗಮನ ಸೆಳೆಯಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ, ಉಡುಪಿ