ಸವದತ್ತಿ: ಸರ್ಕಾರವು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿ, ಕಾರ್ಪೊರೇಟ್ ಕಂಪನಿಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚುನ್ನಪ್ಪ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ರೈತ ಸಂಘದಿಂದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರೈತರು ತಮಗಿರುವ ಅತ್ಯಲ್ಪ ಭೂಮಿಯಲ್ಲೇ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದರು. ಆದರೆ, ಈಗ ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ಉದ್ದಿಮೆದಾರರ ಮುಂದೆ ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಲಿದೆ. ಇದರ ವಿರುದ್ಧ ಹೋರಾಟ ಮಾಡಲು ಆಗದಂತೆ ಕೋವಿಡ್-19 ಹೆಸರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡಿಯಬೇಕು. ಕಳೆದ ಬಾರಿಯ ಪ್ರವಾಹದಿಂದ ಮನೆ, ಜಾನುವಾರುಗಳನ್ನು ಕಳೆದುಕೊಂಡ ಅನೇಕ ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಬ್ಬು ಬೆಳೆದ ರೈತರ ಬಾಕಿ ಹಣ ಪಾವತಿಯಾಗಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ದೊರಕುತ್ತಿಲ್ಲ. ಸಾಲದ ಬಲೆಗೆ ಸಿಲುಕಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭೂ ಸುಧಾರಣೆ ಕಾಯ್ದೆಯನ್ನು ವಾಪಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ಆ. 12 ರಿಂದ ಆ. 14 ರ ವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಕಾಯ್ದೆಯನ್ನು ವಾಪಸ್ ಪಡೆಯದಿದ್ದರೆ ಆ. 15ರಂದು ಸ್ವಾತಂತ್ರ್ಯ ದಿನದಂದು ಜಿಲ್ಲಾಧಿಕಾರಿ ಕಚೇರಿ ಎದುರು ಕರಾಳ ದಿನ ಆಚರಿಸಲಾಗುವುದು ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ಗುಳ್ಳಪ್ಪ ಬಾವಿಕಟ್ಟಿ, ರಮೇಶ ಪಾಳಬಾವಿ, ಸೋಮು ರೈನಾಪುರ, ಲಕ್ಷ್ಮಣ ಕರೀಕಟ್ಟಿ, ರಾಜೇಶ್ವರಿ ರೇಣಕೆಗೌಡ್ರ, ಸಚಿನ್ ಪಮ್ಮಾರ ಇತರರು ಇದ್ದರು.