ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ ಭೂ ನ್ಯಾಯಮಂಡಳಿ ಮಂಜೂರು ಮಾಡಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆಯಡಿ (ಪಿಟಿಸಿಎಲ್) ಮರು ಸ್ಥಾಪಿಸಲು ಉಪವಿಭಾಗಾಧಿಕಾರಿ(ಎಸಿ)ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರದಿಂದ ಮಂಜೂರಾದ ಜಮೀನುಗಳನ್ನು ಮಾತ್ರ ಪಿಟಿಸಿಎಲ್ ಕಾಯ್ದೆಯಡಿ ಮರು ಸ್ಥಾಪಿಸಲು ಎಸಿಗಳಿಗೆ ಅಧಿಕಾರವಿದೆ ಎಂದು ನಾಗಪ್ಪ ಎಂಬುವರಿದ್ದ ಜಮೀನು ಖರೀದಿಸಿದ್ದ ಶಂಕರೆಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಕಲಬುರಗಿ ನ್ಯಾಯಪೀಠ ವಿಚಾರಣೆ ನಡೆಸಿತು.
ಶಂಕರೆಪ್ಪ ಪರ ವಕೀಲರು, ಪಿಟಿಸಿಎಲ್ ಕಾಯ್ದೆ ಈ ಜಮೀನಿಗೆ ಅನ್ವಯವಾಗುವುದಿಲ್ಲ. ಆದರೆ, ಈ ಅಂಶವನ್ನು ಎಸಿ, ಡಿಸಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ಮುಖೇನ ನ್ಯಾಯ ಪ್ರಕ್ರಿಯೆಯ ದುರ್ಬಳಕೆಯಾದಂತಾಗಿದೆ ಎಂದು ವಾದ ಮಂಡಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಜಮೀನು ಮಂಜೂರಾಗಿರುವುದು 1976ರಲ್ಲಿ. ಆರು ವರ್ಷ ಮಾರಾಟ ಮಾಡಬಾರದೆಂಬ ಷರತ್ತು 1982ರಲ್ಲಿ ಮುಕ್ತಾಯವಾಗಿದೆ. 28 ವರ್ಷಗಳ ಬಳಿಕ ಮಾರಾಟ ಮಾಡಲಾಗಿದೆ. ಜಮೀನು ಮಂಜೂರಾದ ಸಂದರ್ಭದಲ್ಲಿನ ಷರತ್ತು ಅವಧಿ ಪೂರ್ಣಗೊಂಡ ಬಳಿಕ ಮಾಲೀತ್ವದ ಹಕ್ಕನ್ನು ಚಲಾಯಿಸುವ ನಿರ್ಬಂಧ ಜಾರಿಯಲ್ಲಿರುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಭೂ ಮಂಜೂರು ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳು ಪೂರ್ಣಗೊಳಿಸಿದ ಬಳಿಕ ನಾಗಪ್ಪ ಅವರು ಆ ಜಮೀನಿನ ಮಾಲೀಕರಾಗುತ್ತಾರೆ. ಆ ಜಮೀನಿನಲ್ಲಿ ದುಡಿಯುವುದು ಮಾರಾಟ ಮಾಡುವುದು ಸೇರಿ ಎಲ್ಲ ರೀತಿಯಲ್ಲಿಯೂ ಅನುಭವಿಸಲು ಹಕ್ಕುದಾರರಾಗಿರುತ್ತಾರೆ. ಹಾಗಾಗಿ ನಾಗಪ್ಪ ಅವರ ಮಕ್ಕಳು ಪಿಟಿಸಿಎಲ್ ಕಾಯ್ದೆಯ ಮೂಲಕ ಮರು ಸ್ಥಾಪನೆಗೆ ಕೋರಿ ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಜತೆಗೆ, ಎಸಿಗಳಿಗೆ ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4(2) ಅಡಿ ಜಮೀನು ಮರುಸ್ಥಾಪನೆ ಮಾಡಿ ಆದೇಶ ನೀಡುವುದಕ್ಕೆ ಅಧಿಕಾರವಿಲ್ಲ. ಅಲ್ಲದೆ, ಮೇಲ್ಮನವಿ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿಗಳು ಈ ಕುರಿತಂತೆ ಗಮನ ಹರಿಸದೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದ ಪೀಠ, ಅರ್ಜಿ ಪುರಸ್ಕರಿಸಿದ್ದು, ಡಿಸಿಗಳ ಆದೇಶ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ
ವಿಜಯಪುರ ಜಿಲ್ಲೆಯ ಇಂಡಿ ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾಗಪ್ಪ ಎಂಬುವರಿಗೆ 1976ರಲ್ಲಿ ಭೂ ನ್ಯಾಯಾಧಿಕರಣ 5 ಎಕರೆ ಜಮೀನು ಮಂಜೂರು ಮಾಡಿ 6 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿಧಿಸಿತ್ತು. ಈ ಪೈಕಿ 3 ಎಕರೆಯನ್ನು 2004ರಲ್ಲಿ ನಾಗಪ್ಪ ಅವರು ಶಂಕರೆಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು.
ನಾಗಪ್ಪ ನಿಧನ ಹೊಂದಿದ್ದ ಬಳಿಕ ಅವರ ಮಕ್ಕಳು 2014ರಲ್ಲಿ ಮಾರಾಟ ಮಾಡಿದ್ದ ಜಮೀನನ್ನು ತಮಗೆ ಹೆಸರಿಗೆ ಮರುಸ್ಥಾಪಿಸಬೇಕು ಎಂದು ಕೋರಿ ಎಸಿಗೆ ಮನವಿ ಮಾಡಿದ್ದರು. ಇದನ್ನು ಎಸಿಗಳು ಪುರಸ್ಕರಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಶಂಕರೆಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.