ಶಿಗ್ಗಾಂವಿ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಿರೇಹಳ್ಳ ತುಂಬಿ ಹರಿದಿದ್ದರಿಂದ ಬೆಂಡಿಗೇರಿ, ಕಬನೂರ, ಬನ್ನೂರು, ಬನ್ನಿಕೊಪ್ಪ, ಹಿರೇಮಲ್ಲೂರ, ಚಿಕ್ಕಮಲ್ಲೂರ ಗ್ರಾಮಗಳ ವ್ಯಾಪ್ತಿಯಲ್ಲಿನ ನೂರಾರು ಎಕರೆ ಜಮೀನು ಜಲಾವೃತವಾಗಿದೆ.
ಸಂಜೆಯಿಂದ ರಾತ್ರಿವರೆಗೆ ಸುರಿದ ಮಳೆಗೆ ಮುಂಗಾರಿನ ಬಿತ್ತನೆ ಮಾಡಿದ ನೂರಾರು ಎಕರೆ ಜಮೀನಿನಲ್ಲಿ ನೀರು ನಿಲ್ಲುವಂತಾಗಿದೆ. ಹೊಲದ ಮಧ್ಯೆಯ ಬದುವಿನ ಕಟ್ಟೆಗಳು ಒಡೆದು ಮಣ್ಣು ಕೊಚ್ಚಿ ಹೋಗಿದೆ.
ತಾಲೂಕಿನ ಬೆಂಡಿಗೇರಿಯಿಂದ ಉಗಮಿಸುವ ಹಳ್ಳವು ಮಾರ್ಗದಲ್ಲಿರುವ ಹತ್ತಾರು ಹಳ್ಳಿಗಳನ್ನು ದಾಟಿ ಸವಣೂರ ತಾಲೂಕಿನ ಗುಂಡೂರಿನ ದೊಡ್ಡ ಹಳ್ಳದ ಮೂಲಕ ವರದಾ ನದಿಗೆ ಸೇರುತ್ತದೆ. ಹೆಚ್ಚು ಮಳೆಯಾದಾಗಲೆಲ್ಲ ಹಳ್ಳ ತುಂಬಿ ಹರಿಯುತ್ತ ಅಕ್ಕಪಕ್ಕದ ಸಾವಿರಾರು ಎಕರೆ ಕೃಷಿ ಭೂಮಿಗೆ ನುಗ್ಗುತ್ತದೆ. ಇದರಿಂದ ಬೆಳೆ ಜಲಾವೃತಗೊಂಡು ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ. ಹಳ್ಳದಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿದೆ. ಹೀಗಾಗಿ, ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತದೆ.
ಅಧಿಕಾರಿಗಳಿಂದ ಕಣ್ಣೊರೆಸುವ ತಂತ್ರ: ಹಾನಿಯಾದಾಗ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ವಿುಕರಿಂದ ಕೇವಲ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ಹಳ್ಳದ ಹೂಳೆತ್ತುವ ಕೆಲಸ ಆಗದಿರುವುದು ಅನಾಹುತಕ್ಕೆ ಕಾರಣ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.
ಬಾರದ ಪರಿಹಾರ: ಕಳೆದ ವರ್ಷ ಅತಿಯಾದ ಮುಂಗಾರಿನ ವರ್ಷಧಾರೆಯಿಂದ ಹಳ್ಳದ ಬದಿಯಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿತ್ತು. ತಾಲೂಕು ಆಡಳಿತದಿಂದ ಭರವಸೆ ನಂಬಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೂ ರೈತರಿಗೆ ಇದುವರೆಗೂ ಪರಿಹಾರ ಬಂದಿಲ್ಲ.
ಹಳ್ಳದಲ್ಲಿ ಪೂರ್ತಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯದೇ ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಬೇಸಿಗೆಯಲ್ಲಿ ಯಂತ್ರಗಳ ಮೂಲಕ ಆಳವಾಗಿ ಹಳ್ಳವನ್ನು ಹೂಳೆತ್ತಿದರೆ ಮಾತ್ರ ನೀರು ಸರಾಗವಾಗಿ ಹರಿಯುತ್ತಿದೆ. ಆಗ ಮಾತ್ರ ಸ್ವಲ್ಪ ಮಟ್ಟಿನ ಸಮಸ್ಯೆ ಪರಿಹರಿಸಬಹುದು.
| ಚನ್ನಬಸನಗೌಡ ಹುತ್ತನಗೌಡ್ರ, ಹಿರೇಮಲ್ಲೂರ ಗ್ರಾಮದ ರೈತ