ಶಿಕಾರಿಪುರ: ಶಾಶ್ವತ ನೀರಾವರಿ ಯೋಜನೆ ರೈತರ ಹಿತ ಕಾಯಲು ಮತ್ತು ಕುಡಿಯುವ ನೀರಿಗೆ, ಜಾನುವಾರುಗಳಿಗೆ ಮಾಡಿದ ಮಹತ್ವದ ಯೋಜನೆ. ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಂತೆ ಅವೈಜ್ಞಾನಿಕ ಯೋಜನೆಯಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಪ್ರಮುಖರ ಚುನಾವಣಾ ಪೂರ್ವ ಬೈಠಕ್ನಲ್ಲಿ ಮಾತನಾಡಿ, ಇದರಿಂದ ಕೆಲವು ರೈತರ ಸ್ವಲ್ಪ ಜಮೀನು ಹೋಗಿದೆ. ಅವರಿಗೆ ಸರ್ಕಾರ ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ಪರಿಹಾರ ನೀಡುತ್ತಿದೆ. ನೀರಾವರಿ ಯೋಜನೆ ಕೃಷಿಗೆ ಪೂರಕವಾಗಿದೆ. ಇದರಲ್ಲಿ ರಾಜಕಾರಣ ಸರಿಯಲ್ಲ ಎಂದರು.
ಗ್ರಾಪಂ ಚುನಾವಣೆ ಎಲ್ಲ ಚುನಾವಣೆಗಳಿಗೂ ಅಡಿಪಾಯ. ಆಯಾ ಭಾಗದ ಪ್ರಮುಖರ ಜವಾಬ್ದಾರಿ ಬಹಳ ಮುಖ್ಯ. ಯಾವುದೇ ರೀತಿಯ ಘರ್ಷಣೆಗಳಿಗೆ ಮನಸ್ತಾಪಕ್ಕೆ ಚುನಾವಣೆ ನಾಂದಿ ಆಗಬಾರದು. ನಮ್ಮ ಕಾರ್ಯಕರ್ತರ ಒಗ್ಗಟ್ಟು ಬಹಳ ಮುಖ್ಯ. ಅಭ್ಯರ್ಥಿ ಯಾರೇ ಆಗಿರಲಿ ಎಲ್ಲರೂ ಒಂದಾಗಿ ಅವನನ್ನು ಗೆಲ್ಲಿಸಬೇಕು. ಬಿಜೆಪಿಯು ಸಂಘಟನೆಯ ಅಡಿಪಾಯದ ಮೇಲೆ ನಿಂತಿದೆ. ನಾವು ಈ ಬಾರಿ ಎಲ್ಲ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ಹಾಕಬೇಕು ಎಂದು ಮನವಿ ಮಾಡಿದರು.
ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಮುಖ್ಯಮಂತ್ರಿಗಳ ಮತ್ತು ಸಂಸದರು ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಅವುಗಳನ್ನು ಸಮರ್ಥವಾಗಿ ನಾವು ತಲುಪಿಸುವ ಕಾರ್ಯ ಮಾಡಬೇಕು. ಸಿಎಂ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದಲಿಂಗಪ್ಪ, ಪರಶುರಾಮ್ ಮತ್ತು ಕೆಪಿಟಿಸಿಎಲ್ ನಿರ್ದೇಶಕ ರಾಮಾನಾಯ್್ಕ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ನಿಗಮದ ನಿರ್ದೇಶಕ ಸುಕೇಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಮಿಲ್ಟ್ರಿ ಬಸವರಾಜ್ ಇತರರಿದ್ದರು.