ಕೊಡವರ ಹೊಸವರ್ಷ ಆಚರಣೆ

ಮಡಿಕೇರಿ: ಕೊಡವರ ಹೊಸವರ್ಷ ‘ಎಡಮ್ಯಾರ್ ಒಂದ್’ ಆಚರಣೆಯನ್ನು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯ ಮಚ್ಚಮಾಡ ರಮೇಶ್ ರವರ ಗದ್ದೆಯಲ್ಲಿ ಜೋಡೆತ್ತುಗಳಿಂದ ಭೂಮಿ ಉಳುಮೆ ಮಾಡುವ ಮೂಲಕ ಆಚರಿಸಿ, ಕೊಡವ ಜನಾಂಗದ ಮೂಲಕ ಭತ್ತದ ಬೇಸಾಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಕೊಡವ ಮಕ್ಕಡ ಕೂಟ ಹಾಗೂ ಸ್ಥಳೀಯ ಊರಿನವರು ಬೆಳಿಗ್ಗೆ ಮಚ್ಚಮಾಡ ರಮೇಶ್‌ರವರ ಮನೆಯಲ್ಲಿ ಸೇರಿ ನೆಲ್ಲಕ್ಕಿಗೆ ಅಕ್ಕಿ ಹಾಕಿ ಗದ್ದೆಗೆ ತೆರಳಿದರು. ಜೋಡೆತ್ತಿಗೆ ನೇಗಿಲು ನೊಗವನ್ನು ಕಟ್ಟಿ ಭೂಮಿತಾಯಿಗೆ ಪೂಜೆಸಲ್ಲಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಭೂಮಿ ಆರಾಧಕರಾದ ಕೊಡವರು, ತಮ್ಮ ಭೂಮಿಯನ್ನು ಪ್ರಾರಂಭಿಸುವ ದಿನವೇ ‘ಎಡಮ್ಯಾರ್ ಒಂದ್’. ಈ ದಿನ ಭೂಮಿ ಪುತ್ರರಾದ ಕೊಡವರು ಉಳುಮೆಮಾಡಿ ಭತ್ತ ಬೆಳೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಊಳಲು ಎತ್ತುಗಳಿಲ್ಲ. ಮತ್ತೊಂದೆಡೆ ರೈತನಿಗೆ ಸರ್ಕಾರದ ಸಹಾಯ ಸಿಗುತ್ತಿಲ್ಲ. ಗದ್ದೆಗಳನ್ನ ಪಾಳು ಬೀಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಸೇವಕ ಮಚ್ಚಮಾಡ ಸೋಮಯ್ಯ ‘ಕೊಡಗ್ರ ಸಿಪಾಯಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಇಂತಹ ಆಚರಣೆಗಳನ್ನು ಮಾಡುತ್ತಿರುವ ಕೊಡವ ಮಕ್ಕಡ ಕೂಟದ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಭತ್ತದ ಗದ್ದೆಯನ್ನು ಪಾಳುಬಿಡದೆ ಉಳುಮೆ ಮಾಡುವಂತಾಗಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ಕೊಡಗಿನಲ್ಲಿ ಗದ್ದೆಗಳೆಲ್ಲ ಪಾಳು ಬೀಳಲು ಸರ್ಕಾರವೇ ನೇರಹೊಣೆ. ರೈತನಿಗೆ ಸಹಾಯಹಸ್ತ ಹಾಗೂ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಚೇರಿಯಲ್ಲಿ ದಲ್ಲಾಳಿಗಳು ರೈತನ ಹಣವನ್ನು ಸುಲಿಗೆ ಮಾಡುತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದು ಅಸಮಧಾನವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಡಮ್ಯಾರ್ ಒಂದ್ ಆಚರಣೆಯ ಬಗ್ಗೆ ಬರಹಾಗಾರ್ತಿ ಉಳುವಂಗಡ ಕಾವೇರಿ ಉದಯ್ ವಿಚಾರ ಮಂಡನೆ ಮಾಡಿದರು.

ಈ ಸಂದರ್ಭ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡಗು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯಕ್ರಮದ ಸಂಚಾಲಕ ಹಾಗೂ ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಬೊಳ್ಳಜಿರ ಸುಶಿಲ ಅಶೋಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಮಾರಿ ಬೊಳ್ಳಜಿರ ದೇಚಮ್ಮ ಅಯ್ಯಪ್ಪ ಪಾರ್ಥಿಸಿ ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *