More

    ಕೈಗಾರಿಕೆ ಸ್ಥಾಪನೆಗೆ ಲ್ಯಾಂಡ್ ಬ್ಯಾಂಕ್

    ಪಿ.ಬಿ.ಹರೀಶ್ ರೈ ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಿಸಲು ನಿರ್ಧರಿಸಿರುವ ಸರ್ಕಾರ, ಖಾಸಗಿ ಜಾಗ ಖರೀದಿಸಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ಮಂಗಳೂರು ನಗರದ ಹೊರವಲಯದಲ್ಲಿ ಸುಮಾರು 1,500 ಎಕರೆ ಭೂಮಿಯನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ.

    ಮಂಗಳೂರು ನಗರ ಬಂದರು, ರೈಲ್ವೆ, ವಿಮಾನ ಯಾನ ಮತ್ತು ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ಹೊಂದಿರುವ ಕಾರಣ ಇಲ್ಲಿ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ವಿಶೇಷ ಆಸಕ್ತಿ ವಹಿಸಿದ್ದರು. ಆದರೆ, ಮೂಲಸೌಕರ್ಯದ ಕೊರತೆ ಹಾಗೂ ಸೂಕ್ತ ಜಾಗ ಲಭ್ಯವಿಲ್ಲದ ಕಾರಣ ಹಿನ್ನಡೆಯಾಗಿತ್ತು. ಈ ಬಗ್ಗೆ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಕರಾವಳಿಯಲ್ಲಿ ಕನಿಷ್ಠ 1 ಸಾವಿರ ಎಕರೆ ಜಾಗ ಒದಗಿಸುವಂತೆ ವಿನಂತಿಸಿತ್ತು.

    545 ಎಕರೆ ಭೂಸ್ವಾಧೀನ: ಸಣ್ಣ ಕೈಗಾರಿಕೆಗಳಿಗೆ ಸ್ಥಳಾವಕಾಶ ಒದಗಿಸಿಕೊಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(ಕೆಎಸ್‌ಎಸ್‌ಐಡಿಸಿ) ಮತ್ತು ಬೃಹತ್ ಕೈಗಾರಿಕೆಗಳಿಗೆ ಸ್ಥಳ ಒದಗಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಪ್ರಯತ್ನ ನಡೆಸಿದ್ದವು. ಕೆಎಸ್‌ಎಸ್‌ಐಡಿಸಿ ಹಳೆಯಂಗಡಿ ಬಳಿಯ ಕೊಕುಡೆಯಲ್ಲಿ 143.81 ಎಕರೆ, ಬಂಟ್ವಾಳದ ಸಜಿಪಮೂಡದಲ್ಲಿ 97.14 ಎಕರೆ ಹಾಗೂ ಕೆಐಎಡಿಬಿ ಮೂಲ್ಕಿ ಸಮೀಪದ ಕರ್ನಿರೆ ಹಾಗೂ ಅತಿಕಾರಿಬೆಟ್ಟು ಪ್ರದೇಶದಲ್ಲಿ ಸುಮಾರು 300 ಎಕರೆ ಖಾಸಗಿ ಜಾಗ ಗುರುತಿಸಿ, ಸರ್ವೇ ಕಾರ್ಯ ಪೂರೈಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಈಗ ಸರ್ಕಾರ ಪ್ರಸ್ತಾವನೆ ಪುರಸ್ಕರಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸೂಚಿಸಿದೆ.

    ಹೆಚ್ಚುವರಿ 1 ಸಾವಿರ ಎಕರೆ
    ಮೂಲ್ಕಿ ಸಮೀಪದ ಬಳ್ಕುಂಜೆ ಆಸುಪಾಸಿನಲ್ಲಿ ಸುಮಾರು 1 ಸಾವಿರ ಎಕರೆ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಕೈಗಾರಿಕೆ ಸ್ಥಾಪನೆಗಾಗಿ ಗುರುತಿಸಲಾಗಿದೆ. ಅಧಿಕಾರಿಗಳು ಭೂಮಾಲೀಕರ ಜತೆ ಚರ್ಚಿಸಿ ಅವರ ಒಪ್ಪಿಗೆ ದೊರೆತ ಬಳಿಕ ಜಾಗ ಕಾಯ್ದಿರಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರದ ಒಪ್ಪಿಗೆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.

    ಭೂಮಿ ಬಳಕೆ
    ದ.ಕ ಜಿಲ್ಲೆಯ ಬೈಕಂಪಾಡಿಯಲ್ಲಿ 541.49 ಎಕರೆ ಭೂಮಿಯನ್ನು ವಿವಿಧ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ. ಕಾರ್ನಾಡು ಎಂಬಲ್ಲಿ 65.85, ಪುತ್ತೂರಿನಲ್ಲಿ 21.40, ತಣ್ಣೀರುಬಾವಿಯಲ್ಲಿ 124.50, ಗಂಜಿಮಠದಲ್ಲಿ 205 ಎಕರೆ ಹಾಗೂ ಪ್ಲಾಸ್ಟಿಕ್ ಪಾರ್ಕ್‌ಗೆ 96 ಎಕರೆ ಜಾಗ ಹಂಚಿಕೆಯಾಗಿದೆ. ಬೈಕಂಪಾಡಿಯಲ್ಲಿ ಜೆಸ್ಕೋ ಸಂಸ್ಥೆಗೆ 809 ಎಕರೆ ಭೂಮಿ ಹಂಚಿಕೆ ಆಗಿದ್ದರೂ ಬಳಕೆಯಾಗಿಲ್ಲ.

    ಕರಾವಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅಪಾರ ಬೇಡಿಕೆ ಇರುವ ಕಾರಣ ಲ್ಯಾಂಡ್‌ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಈ ಹಿಂದೆ ಸುಮಾರು 545 ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಈಗ ಹೆಚ್ಚುವರಿಯಾಗಿ 1 ಸಾವಿರ ಎಕರೆ ಜಾಗ ಗುರುತಿಸಲಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    – ಗೋಕುಲ್‌ದಾಸ್ ನಾಯಕ್
    ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು

    ಕರಾವಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಬೃಹತ್ ಸಂಸ್ಥೆಗಳು ಮುಂದಾಗಿದ್ದರೂ, ಇಲ್ಲಿ ಜಾಗದ ಕೊರತೆ ಇದೆ. ಜಾಗ ಗುರುತಿಸುವಿಕೆ, ಸರ್ಕಾರದ ಅನುಮೋದನೆ, ಭೂ ಸ್ವಾಧೀನ ಪ್ರಕ್ರಿಯೆ ಎಂದು ವರ್ಷಗಳಿಂದ ಪ್ರಸ್ತಾವಿತ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೈಗಾರಿಕೆಗಳಿಗೆ ಜಾಗ ಕಾಯ್ದಿರಿಸಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲು ಇಲ್ಲಿನ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು.
    ಗೌರವ್ ಹೆಗ್ಡೆ
    ಮಾಜಿ ಅಧ್ಯಕ್ಷ, ಕೆನರಾ ಸಣ್ಣ ಕೈಗಾರಿಕಾ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts