More

  ಗ್ರಾಮೀಣ ಭಾಗದಲ್ಲಿ ಭೂ ಒತ್ತುವರಿ

  ಬೈಂದೂರು: ನೂತನ ತಾಲೂಕಾಗಿ ಬೆಳೆಯುತ್ತಿರುವ ಬೈಂದೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭೂ ಒತ್ತುವರಿಗಳು ಗ್ರಾಮೀಣ ಪ್ರದೇಶದ ಜನರನ್ನು ಆತಂಕಕ್ಕಿಡುಮಾಡಿದೆ.
  ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ 90ರ ದಶಕದಲ್ಲಿ ಗೇಣಿ ಅರ್ಜಿ ಮೂಲಕ ತಲೆತಲಾಂತರದಿಂದ ಕೃಷಿ ಮಾಡಿಕೊಂಡಿರುವ ಕೆಲವು ಕೃಷಿಕರಿಗೆ ಭೂ ದಾಖಲೆ ದೊರೆತರೆ ಬಹುತೇಕ ಜನರ ಅರ್ಜಿಗಳು ವಿಚಾರಣೆಯಲ್ಲಿವೆ. ಅದರ ಬಳಿಕ ಅಕ್ರಮ-ಸಕ್ರಮ ಸಾಗುವಾಳಿ 97.5 ಅರ್ಜಿ ಮೂಲಕ ಸರಕಾರಿ ಭೂಮಿಯಲ್ಲಿರುವ ರೈತರಿಗೆ ಸರ್ಕಾರ ಹಕ್ಕುಪತ್ರ ನೀಡಿದೆ. ಕಾಲ ಪ್ರಗತಿಯಾದಂತೆ ಹಳ್ಳಿಗಳಲ್ಲಿ ತಲೆತಲಾಂತರದಿಂದ ಉಳಿದಿರುವ ಕೆಲವು ಜಾಗಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಸರ್ವೆ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಾಯದೊಂದಿಗೆ ನಕಲಿ ದಾಖಲೆ ಸ್ಪಷ್ಟಿಸಿ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿರುವುದಕ್ಕೆ ಗ್ರಾಮೀಣ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

  ಬೈಂದೂರಿನ ಹಿರಿಯ ತಲೆಮಾರಿನ ಯಡ್ತರೆಮನೆ, ಹೊಳ್ಳರಮನೆ ಮುಂತಾದ ವಂಶಸ್ಥರು ಬ್ರಿಟಿಷ್ ಕಾಲದ ಹಿನ್ನೆಲೆ ಹೊಂದಿದ್ದರು. ಗೋಳಿಹೊಳೆ, ತೂದಳ್ಳಿ, ಯಡ್ತರೆ, ಶಿರೂರು ಸೇರಿದಂತೆ ಬಹುತೇಕ ಕಡೆ ಈ ಮನೆತನದ ಜಮೀನು ಇದೆ. ಈಗ ಅನೇಕ ತಲೆಮಾರುಗಳು ಮರೆಯಾಗಿದೆ. ಆದರೆ ಕೆಲವು ಕಡೆ ಭೂಮಿ ವಶದಲ್ಲಿದ್ದರೂ ಕೂಡ ದಾಖಲೆಗಳಾಗಿಲ್ಲ. ಇಂತಹ ಜಾಗಗಳನ್ನು ಹುಡುಕಿ ಕಾಗಕ್ಕ ಗುಬ್ಬಕ್ಕನ ಕಥೆ ಕಟ್ಟಿ ನಕಲಿ ಪ್ರಮಾಣಪತ್ರ, ನಕಲಿ ಪೋಟೊ ಬಳಸಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಬಳಿಕ ಆ ಜಾಗದವರನ್ನು ಹೆದರಿಸಿ ವ್ಯವಹಾರ ನಡೆಸುವ ಮೂರ‌್ನಾಲ್ಕು ತಂಡ ಬೈಂದೂರು ವ್ಯಾಪ್ತಿಯಲ್ಲಿದೆ. ಇದರಲ್ಲಿ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿರುವ ಅನುಮಾನ ಇದೆ.
  ಶಿರೂರು ಗ್ರಾಮದ ಮೇಲ್ಪಂಕ್ತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಾಸ್ತ್ರಿ ಕುಟುಂಬದ ಜಾಗ ಕೂಡ ನಕಲಿ ದಾಖಲೆಗಳ ಮೂಲಕ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬೈಂದೂರು ಆರಕ್ಷಕ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಗೋಳಿಹೊಳೆ, ಗಂಗನಾಡು ಮುಂತಾದ ಕಡೆ ಕೂಡ ಇಂತಹ ಹತ್ತಾರು ಪ್ರಕರಣಗಳಿವೆ. ಆದರೆ ಸೂಕ್ತ ಮಾರ್ಗದರ್ಶನ ಮತ್ತು ಇಲಾಖೆಯು ಸ್ಪಂದನೆ ಕೊರತೆಯಿಂದ ಬೆಳಕಿಗೆ ಬಂದಿಲ್ಲ.
  *ನಿಯೋಗ ಸಿದ್ಧ
  ಇಂತಹ ಅನೇಕ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಮತ್ತು ಬಡ ಜನರಿಗೆ ಆಗುತ್ತಿರುವ ಅನ್ಯಾಯದ ಕುರಿತು ಜಿಲ್ಲಾಡಳಿತ ಮತ್ತು ಇಲಾಖೆಗಳ ಗಮನ ಸೆಳೆಯಲು ಬೈಂದೂರಿನಲ್ಲಿ ನಿಯೋಗ ಸಿದ್ಧಗೊಂಡಿದೆ. ನಿಯೋಗದ ಮೂಲಕ ಸಮಗ್ರ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರದ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ. ತಾಲೂಕು ಕಚೇರಿಯಲ್ಲೂ ಕೂಡ ಜನಸಾಮಾನ್ಯರ ಕೆಲಸಗಳಿಗೆ ತಿಂಗಳುಗಟ್ಟಲೆ ಕಾಯಿಸುವುದು ಮತ್ತು ಇದೇ ಕೆಲಸವನ್ನು ಏಜೆಂಟರುಗಳು ಒಂದೆರಡು ದಿನದಲ್ಲಿ ಮಾಡುತ್ತಿದ್ದಾರೆ. ಸರ್ವೇ ಇಲಾಖೆ ತಿದ್ದುಪಡಿಗೆ ಸಹಕರಿಸಿ ಗಡಿ ಕುರಿತು ಮಾಡುವಾಗ ಸ್ಥಳ ಪರಿಶೀಲನೆ ಮಾಡದಿರುವುದು ಕೂಡ ಇಂತಹ ಸಮಸ್ಯೆಗೆ ಕಾರಣವಾಗಿದೆ.

  ಈಗಾಗಲೇ ಬೈಂದೂರು ತಾಲೂಕು ಕಚೇರಿಯಲ್ಲಿ ಕಟ್ಟುನಿಟ್ಟಿನ ಕ್ರಮ ಮತ್ತು ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಕಲಿ ದಾಖಲೆ ಸೇರಿದಂತೆ ಜನಸಾಮಾನ್ಯರಿಗೆ ತೊಂದರೆ ನೀಡುವ ವಿಚಾರದಲ್ಲಿ ಕಂದಾಯ ಇಲಾಖೆ ಸಹಕಾರವಿಲ್ಲ. ಅಂತಹ ಪ್ರಕರಣ ಕಂಡು ಬಂದರೆ ಕಡತಗಳನ್ನು ತಕ್ಷಣ ತಡೆ ಹಿಡಿಯಲಾಗುತ್ತದೆ.
  – ಕಿರಣ್ ಗೌರಯ್ಯ, ಪ್ರಭಾರ ತಹಶೀಲ್ದಾರರು ಬೈಂದೂರು.

  ನಮ್ಮ ಕುಟುಂಬ ಅನಾದಿಕಾಲದಿಂದಲೂ ಶಿರೂರಿನಲ್ಲಿ ಭೂಮಿ ಹೊಂದಿದೆ. ಅದರ ದಾಖಲೆಗಳಿಲ್ಲ. ಆದರೆ ನಮ್ಮ ಕುಟುಂಬದ ಹೆಸರು ಬದಲಿಸಿ ನಕಲಿ ನೋಟರಿ ಮತ್ತು ನಕಲಿ ದಾಖಲೆ ಮೂಲಕ ಜಾಗ ಒತ್ತುವರಿಗೆ ಪ್ರಯತ್ನಿಸಲಾಗಿದೆ. ಕಾನೂನು ಹೋರಾಟ ನಡೆಸಿದ್ದು, ವಂಚನೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ. ಬೈಂದೂರು ಭಾಗದಲ್ಲಿ ಇಂತಹ ಅನೇಕ ಪ್ರಕರಣಗಳಿವೆ. ಅಂತವುಗಳಿಗೆ ನ್ಯಾಯ ದೊರೆಯಬೇಕಿದೆ.
  – ಹೆಸರು ಹೇಳಲು ಇಚ್ಚಿಸದ ಸಂತ್ರಸ್ತ, ಶಿರೂರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts