ಅಥಣಿ: ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಮತ್ತು ಮಳೆಯಿಂದ ಉಂಟಾಗಿರುವ ಬೆಳೆಹಾನಿಗೆ ಪರಿಹಾರ ನೀಡಲು ವಿಫಲವಾಗಿರುವ ಸರ್ಕಾರದ ಕ್ರಮ ಖಂಡಿಸಿ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಗುರುವಾರ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಗ್ರೇಡ್-2 ತಹಸೀಲ್ದಾರ್ ಅಮಿತ್ ಢವಳೇಶ್ವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗಜಾನನ ಮಂಗಸೂಳಿ ಮಾತನಾಡಿ, ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿದೆ. ಅನೇಕರು ಚಿಕಿತ್ಸೆ ಸಿಗದೇ ಪರದಾಡಿದರೆ, ಕೆಲವರು ಚಿಕಿತ್ಸೆಗೆ ಹಣವಿಲ್ಲದ ಗೋಗರೆ
ಯುತ್ತಿದ್ದಾರೆ. ರಾಜ್ಯ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗದಿರುವುದು ಬೇಸರದ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ರೀತಿಯಲ್ಲಿ ತನಿಖೆಯಾಗಲಿ: ಕೋವಿಡ್-19 ನಿಯಂತ್ರಿಸಲು ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ತಕ್ಷಣ ಸೂಕ್ತ ತನಿಖೆಯಾಗಬೇಕು ಎಂದು ಮಂಗಸೂಳಿ ಆಗ್ರಹಿಸಿದರು.
ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿ ಅವರ ಬದುಕಿಗೆ ಆಸರೆಯಾಗಬೇಕಾದ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಖಂಡನೀಯ. ಕರೊನಾ ಸಂಕಷ್ಟದಲ್ಲಿ ಕಾರ್ಮಿಕರ ಗತಿಯೇನು ಎಂಬುದನ್ನು ಸರ್ಕಾರ ಮೊದಲು ಅರಿಯಬೇಕು. ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಿದ್ಧಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಬಸವರಾಜ ಬುಟಾಳೆ, ಸತ್ಯಪ್ಪ ಬಾಗೆಣ್ಣವರ, ಬಸವರಾಜ ಗುಮಟಿ, ಧರೆಪ್ಪ ಠಕ್ಕಣವರ, ರಮೇಶ ಸಿಂಧಗಿ, ಮಂಜು ಹೊಳಿಕಟ್ಟಿ, ರೇಖಾ ಪಾಟೀಲ, ಸುನಿತಾ ಐಹೊಳೆ, ಶೇಖರ ಕೋಲಾರ, ರಾಜು ಮದಬಾವಿ, ರಾಹುಲ ಮಾಚಕನೂರ ಮತ್ತಿತರರು ಉಪಸ್ಥಿತರಿದ್ದರು. ಇದ್ದರು.
ಉಳ್ಳಾಗಡ್ಡಿ- ಖಾನಾಪುರ ವರದಿ: ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪತಹಸೀಲ್ದಾರ್ ಎಸ್.ಜಿ.ಸಾಳುಂಕೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಬಿಸಿರೊಟ್ಟಿ ಹಾಗೂ ರವಿ ಜಿಂಡ್ರಾಳಿ ಮಾತನಾಡಿ, ಅತಿವೃಷ್ಟಿಯಿಂದ ರೈತರು ಬೆಳೆ ಹಾಗೂ ಮನೆ ಹಾನಿಯಗಿದ್ದು, ಪರಿಹಾರ ಒದಗಿಸಬೇಕು. ಕೋವಿಡ್-19ರ ವೈದ್ಯಕೀಯ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ಉಂಟಾಗಿದೆ. ಅದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಜಿಪಂ ಸದಸ್ಯ ಮಹಾಂತೇಶ ಮಗದುಮ್ಮ, ರಣಸಿಂಗ ರಜಫೂತ, ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪುರಿ, ಆನಂದ ಚನ್ನಪ್ಪಗೋಳ, ಶಿವಶಂಕರ ಝುಟ್ಟಿ, ದೇವಪ್ಪ ಹುನ್ನೂರಿ ಇತರರು ಉಪಸ್ಥಿತರಿದ್ದರು.