ಅಥಣಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆಯನ್ನು ಕೈ ಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ರೈತ ಸಂಘ ಮುಂದಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಕೆಲಕಾಲ ಪ್ರತಿಭಟಿಸಿ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಮುಖಂಡ ಘೂಳಪ್ಪ ಬಾವಿಕಟ್ಟಿ ಮಾತನಾಡಿ, ರಾಜ್ಯ ಸರ್ಕಾರ 1961ರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು
ಸರಿಯಾದ ಕ್ರಮವಲ್ಲ. ಭೂ ಸುಧಾರಣೆ ಕಾಯ್ದೆಯ 79 ಎ.ಬಿ.ಸಿ. ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ ಹಾಗೂ 63ನೇ ಕಲಂಗೆ ತಿದ್ದುಪಡಿ ತಂದಿದೆ. ಇದರಿಂದ ಬಲಾಢ್ಯರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಸುಲಭವಾಗಿ ಕೃಷಿ ಭೂಮಿ ಕಬಳಿಸಲು ಅವಕಾಶವಾಗಲಿದೆ. ಸಣ್ಣ
ರೈತರು ಕೃಷಿಯಿಂದ ಹಿಂದೆ ಸರಿಯಲು ಮುಂದಾಗುತ್ತಾರೆ. ಕೃಷಿ ಕ್ಷೇತ್ರದಲ್ಲಿ ಬಹು ರಾಷ್ಟ್ರೀಯ ಕಂಪನಿಗಳ ಹಿಡಿತ ಹೆಚ್ಚಾಗಿ ಭಾರತದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಕ್ರಮೇಣವಾಗಿ ಇಲ್ಲವಾಗುತ್ತಾ ಹೋಗುತ್ತದೆ ಎಂದು ಆರೋಪಿಸಿದರು.
ರಾಜ್ಯ ಸಂಚಾಲಕರಾದ ಚೂನಪ್ಪ ಪೂಜಾರಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಗುರಣ್ಣವರ ಮಾತನಾಡಿ, ಕಾರ್ಪೋರೇಟ್ ಬಂಡವಾಳ ಸಂಸ್ಥೆಗಳಿಗೆ ಕೃಷಿಭೂಮಿಯನ್ನು ಪರಭಾರೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ರೈತರಿಗೆ ಸಿಗುವ ಎಲ್ಲ ರಿಯಾಯಿತಿಗಳನ್ನು ರದ್ದುಪಡಿಸುವ ಪರೋಕ್ಷ ಆಲೋಚನೆಗಳು ನಡೆದಿವೆ ಎಂದು ಸರ್ಕಾರದ ಮೇಲೆ ಹರಿಹಾಯ್ದರು. ಮುಖಂಡರಾದ ಎಂ.ಸಿ. ತಾಂಬೋಲಿ, ಪ್ರಕಾಶ ಪೂಜಾರಿ, ಡಿ.ಎಂ. ನಾಯಿಕ, ಕಲನಗೌಡ ಪಾಟೀಲ, ಈರಪ್ಪ ತಂಗಡಿ, ಬಾಬು ಜತ್ತಿ, ರಾಜು ಪೂಜಾರಿ ಇತರರು ಇದ್ದರು.