ತುರುವೇಕೆರೆ: ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಗುರುವಾರ ಕರೆದಿದ್ದ ರೈತರ ಅಕ್ಷೇಪಣೆ ಅರ್ಜಿ ಸಲ್ಲಿಕೆ ಸಭೆಯಲ್ಲಿ ಅಧಿಕಾರಿಗಳು ಹಾಗೂ ರೈತರ ಮಧ್ಯೆ ಮಾತಿನ ಚಕಾಮಕಿ ನಡೆಯಿತು.
ತಾಲೂಕಿನಲ್ಲಿ ಹಾದು ಹೋಗಿರುವ ಜೀವರ್ಗಿಯಿಂದ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಕೆ.ಬಿ.ಕ್ರಾಸ್- ಚುಂಚನಹಳ್ಳಿವರೆಗೂ ರಸ್ತೆ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಭೂ ಸ್ವಾಧಿನಕ್ಕೆ ಒಳಪಡುವ ರೈತರಿಗೆ ನೋಟಿಸ್ ನೀಡಿ ಸಭೆ ಆಯೋಜಿಸಲಾಗಿತ್ತು. ಸಂಬಂಧಪಟ್ಟ ಕೃಷಿಕರು, ಭೂ ಮಾಲೀಕರು ಖಾತೆ, ಪಹಣಿ, ಜಮೀನು ಪತ್ರ ಸೇರಿ ಸೂಕ್ತ ದಾಖಲೆಗಳನ್ನು ನೀಡಿದ್ದರೂ ಹೆದ್ದಾರಿ ಅಧಿಕಾರಿಗಳು ಸಮರ್ಪಕವಾಗಿ ಜಾಗದ ಸರ್ವೇ ಮಾಡಿಲ್ಲ. ಕೆಲವರಿಗೆ ನೋಟಿಸ್ ನೀಡಿಲ್ಲ. ಅಲ್ಲದೇ ರೈತರ ಜಮೀನಿನಲ್ಲಿರುವ ತೆಂಗು, ಅಡಕೆ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳ ಬಗ್ಗೆ ನಮೂದು ಮಾಡಿಲ್ಲ. ರಸ್ತೆ ವಿಸ್ತರಣೆಗೆ ಎಷ್ಟು ಅಡಿ ಜಾಗ ಹೆದ್ದಾರಿಗೆ ಭೂ ಸ್ವಾಧಿನವಾಗುತ್ತದೆ ಎಂದು ಮಾಹಿತಿ ನೀಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ತಾವರೆಕೆರೆ ರೈತ ಕೆಂಪೇಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರಿಯಾದ ಕ್ರಮಕೈಗೊಳ್ಳದೆ ತರಾತುರಿಯಲ್ಲಿ ರೈತರ ಸಭೆ ಕರೆದು, ನಮ್ಮಿಂದ ಸಹಿ ಪಡೆಯುವ ಹುನ್ನಾರ ಮಾಡಿದ್ದಾರೆ. ಹಲವು ರೈತರಿಗೆ ನೋಟಿಸ್ ನೀಡದೆ ಜಮೀನಿನಲ್ಲಿ ಸರ್ವೇ ಕಲ್ಲು ನೆಟ್ಟಿದ್ದಾರೆ. ಇರುವ ಬೆಳೆಗಳನ್ನು ಸರ್ವೇ ದಾಖಲೆಗಳಲ್ಲಿ ನಮೂದು ಮಾಡಿಲ್ಲ. ಇದರಿಂದ ಅಪಾರ ನಷ್ಟ ಉಂಟಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿ ಎರಡು ಪಥವಾಗಿದೆ. ಈಗಿರುವ ರಸ್ತೆಯು 30 ಮೀ.ಗೆ ಏರಿಕೆಯಾಗಲಿದೆ. ಹೊಸ ರಸ್ತೆ 45 ಮೀಟರ್ ಎತ್ತರದಲ್ಲಿ ನಿಮಾರ್ಣವಾಗಲಿದೆ. ತಾಲೂಕಿನ ಬಾಣಸಂದ್ರ, ಟಿ.ಬಿ.ಕ್ರಾಸ್ ಬಳಿ ಬೈಪಾಸ್ ಮಾಡಲಾಗುವುದು. ದೊಡ್ಡಶಟ್ಟಿಕರೆ, ಬದ್ರಿಕಾಶ್ರಮ ಬಳಿ ನೇರ ರಸ್ತೆ ನಿರ್ಮಾಣವಾಗಲಿದೆ. ಪಟ್ಟಣದ ಬೈಪಾಸ್ ಬಗ್ಗೆ ಯಾವುದೇ ಸರ್ವೇ ಕಾರ್ಯ ಆಗಿಲ್ಲ. ಸರ್ವೇ ನಂತರ ರೈತರಿಗೆ ನೋಟಿಸ್ ನೀಡಿ ತಿಳಿಸಲಾಗುವುದು.
ಮೃತ್ಯಂಜಯ್ಯ ಎಇಇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ