ಭೂಸ್ವಾಧೀನಕ್ಕೆ ಆಯುಕ್ತರ ಆದೇಶ

ಬಾಗಲಕೋಟೆ: ಬಾಗಲಕೋಟೆ- ಕುಡಚಿ ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಆದೇಶಿಸಿದ್ದಾರೆ ಎಂದು ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಹೇಳಿದರು.

ಖಜ್ಜಿಡೋಣಿಯಿಂದ ಲೋಕಾಪುರ ಮಾರ್ಗವಾಗಿ ಕುಡಚಿವರೆಗೆ ರೈಲು ಕಾಮಗಾರಿಗೆ ಅಗತ್ಯ ಜಮೀನನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡು, ಹೊಸ ಭೂಸ್ವಾಧೀನ ಕಾಯ್ದೆ ಅನುಸಾರ ಸೂಕ್ತ ಪರಿಹಾರವನ್ನು ನೇರವಾಗಿ ಮಾಲೀಕರ ಖಾತೆಗೆ ಸಂದಾಯ ಮಾಡಿ ಎಂದು ಪತ್ರದ ಮೂಲಕ ಡಿಸಿ ಹಾಗೂ ಜಮಖಂಡಿ ಎಸಿಗೆ ಆದೇಶಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ರೈಲ್ವೆ ಹೋರಾಟ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಮಾತನಾಡಿ, ಲೋಕಾಪುರದಲ್ಲಿ 7 ದಿವಸಗಳವರೆಗೆ ಧರಣಿ ನಡೆದರೂ ಸೌಜನ್ಯಕ್ಕಾಗಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ. ವಿಜಯಪುರ ಜಿಲ್ಲೆಯ ಯೋಜನೆಯಾಗಿದ್ದರೆ ಸಚಿವರು ಹೋರಾಟಕ್ಕೆ ಸ್ಪಂದಿಸುತ್ತಿದ್ದರು. ಸಚಿವರ ತಾರತಮ್ಯ ನಡೆಯಿಂದ ಸತ್ಯಾಗ್ರಹಿಗಳಿಗೆ ನೋವು ತರಿಸಿದೆ. ಇಂತಹ ಸಚಿವರನ್ನು ತೆಗೆದು ಹಾಕಿ ನಮ್ಮ ಜಿಲ್ಲೆಯ ಶಾಸಕರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಮುಧೋಳ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸತೀಶ ಬಂಡಿವಡ್ಡರ ಮಾತ ನಾಡಿದರು. ಮುಖಂಡರಾದ ಗುಲಾಬಸಾಬ ಅತ್ತಾರ, ಬಿ.ಎ. ಹುಣಶಿಕಟ್ಟಿ, ಹನುಮಂತ ಅಡವಿ, ರಾಚಪ್ಪ ನಾವಲಗಿ, ಮೈನುದ್ದೀನ್ ಖಾಜಿ, ಅಶೋಕ ದೊಡಮನಿ, ಶಿವಾನಂದ ಪಾಟೀಲ, ಇಸ್ಮಾಯಿಲ್ ಅತ್ತಾರ ಇತರರಿದ್ದರು.