ನೀರಾವರಿ ಯೋಜನೆ ಜಾರಿಗೆ ಹೊಸ ಕಾನೂನು ಅಗತ್ಯ

ಕಡೂರು: ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಹೊಸ ಕಾನೂನುಗಳ ಅಗತ್ಯವಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು. ಬುಧವಾರ ಕಡೂರು ಪುರಸಭೆ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರ ನೀರಾವರಿ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ರೈತರು ಸಹಕರಿಸದಿದ್ದರೆ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟ ಎಂದರು.

ಅಲ್ಪಾವಧಿಯಲ್ಲಿ ಕ್ಷೇತ್ರದ ಚಿತ್ರಣ ಬದಲಾಯಿಸುವುದು ಅಸಾಧ್ಯ. ಅಭಿವೃದ್ಧಿಗೆ ಕ್ಷೇತ್ರದ ಇತರ ಜನಪ್ರತಿನಿಧಿಗಳು ಕೈಜೋಡಿಸಬೇಕು.ಸರ್ಕಾರ ರೈತರ ಸಾಲಮನ್ನಾ ಮಾಡಿರುವುದರಿಂದ ಶಾಸಕರ ಅನುದಾನದಲ್ಲಿ ಕಡಿತವಾಗುವ ಸಂಭವವಿದೆ. ಅನುದಾನ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವರ್ಷದ ಆಯವ್ಯಯ ಮಂಡಿಸುವ ಮತ್ತು ಜನರಿಂದ ತೆರಿಗೆ ವಸೂಲಿ ಮಾಡುವ ಸಂಪೂರ್ಣ ಅಧಿಕಾರ ಪುರಸಭೆಗೆ ಇದೆ. ನ್ಯಾಯಾಲಯದ ಎದುರಿಗೆ ಪುಡ್​ಕೋರ್ಟ್ ಸ್ಥಾಪನೆ, ಸರ್ಕಾರಿ ಕಾರ್ಯಾಲಯಗಳ ಮುಂದೆ ಸ್ವಚ್ಛತೆ ಕಾಪಾಡಬೇಕು. ಪುರಸಭೆಗೆ ಸಂಬಂಧಿಸಿದ ಕಾನೂನುಗಳನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರಲು ಮುಖ್ಯಾಧಿಕಾರಿಗಳು ಮುಂದಾಗಬೇಕು ಎಂದರು.

ಪುರಸಭೆ ಅಧ್ಯಕ್ಷ ಎಂ. ಮಾದಪ್ಪ ಮಾತನಾಡಿ, ಪುರಸಭೆಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಾಸಕರು ಮುಂದಾಗಬೇಕು. ಪಟ್ಟಣದ ಪ್ರಮುಖ ರಸ್ತೆಗಳು ಹಾಳಾಗಿವೆ. ವಿದ್ಯುತ್ ಬಾಕಿ 1.36 ಕೋಟಿ ರೂ. ಇದೆ. ಭದ್ರಾ ಕುಡಿಯುವ ನೀರಿನ ಯೋಜನೆ ಪೈಪುಗಳು ಒಡೆದು ಹೋಗುತ್ತಿರುವುದರಿಂದ ಪಟ್ಟಣಕ್ಕೆ ಸಮರ್ಪಕ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.