ಭೂ ಸ್ವಾಧೀನ ಕೈಬಿಡಲು ರೈತರ ಆಗ್ರಹ

ಬೆಳಗಾವಿ: ಬೆಳಗಾವಿ ಹೊರವಲಯದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಗುರುವಾರ ಬೆಳಗಾವಿ ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಾಲೂಕಿನ ವಿವಿಧ ಗ್ರಾಮದ ರೈತರು ಎತ್ತಿನ ಗಾಡಿಗಳ ಮೂಲಕ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.

ರೈತರು ಹಾಗೂ ಸಾರ್ವಜನಿಕರು ವಿರೋಧದ ನಡುವೆಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರವು 68.3 ಕಿ.ಮೀ. ರಿಂಗ್ ರೋಡ್ ನಿರ್ಮಾಣಕ್ಕಾಗಿ ಫಲವತ್ತಾದ 427 ಹೆಕ್ಟೇರ್ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. 2018 ಡಿಸೆಂಬರ್‌ನಿಂದಲೇ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ನೋಟಿಸ್ ಜಾರಿ ಮಾಡಿದೆ.

ಮತ್ತೊಂದೆಡೆ ಭೂಮಿ ಸ್ವಾಧೀನಕ್ಕೆ ಜ.3ರಂದು ಅಧಿನಸೂಚನೆ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿಲ್ಲ.

ಈಗಾಗಲೆ ಸುವರ್ಣ ಸೌಧ, ರಾಷ್ಟ್ರೀಯ ಹೆದ್ದಾರಿ, ಸಾಂಬ್ರಾ ವಿಮಾನ ನಿಲ್ದಾಣ, ಹಲವು ಕೈಗಾರಿಕೆಗಳಿಗೆ, ತ್ಯಾಜ್ಯ ವಿಲೇವಾರಿ ಘಟಕಗಳು ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇದೀಗ ಮತ್ತೆ ರಿಂಗ್ ರೋಡ್ ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಈ ನಿರ್ಧಾರ ವಾಪಸ್ ಪಡೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ರಿಂಗ್ ರೋರ್ಡ್‌ಗಾಗಿ ಬೆಳಗಾವಿ ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರು ಶೇ.60ರಷ್ಟು ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ಇದೇ ಜಮೀನನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ರೈತ ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿ ಪಾಲಾಗಲಿವೆ. ಮತ್ತೊಂದೆಡೆ ಕೃಷಿ ಪದ್ಧತಿಯೇ ಸಂಪೂರ್ಣ ನಾಶವಾಗಲಿದೆ. ಹಾಗಾಗಿ ಸರ್ಕಾರ ತಕ್ಷಣ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ಪರ್ಯಾಯ ಮಾರ್ಗ ರೂಪಿಸಿಕೊಳ್ಳಬೇಕು.

ಇಲ್ಲದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು. ಬಳಿಕ ಬೆಳಗಾವಿ ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದರು. ಮಾಜಿ ಶಾಸಕರಾದ ಅರವಿಂದ ಪಾಟೀಲ, ಮನೋಹರ ಕಿಣೇಕರ್, ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ರೈತ ಮುಖಂಡ ಅಪ್ಪಾಸಾಬ ದೇಸಾಯಿ ಹಾಗೂ ತಾಪಂ, ಗ್ರಾಪಂ ಸದಸ್ಯರು, ವಿವಿಧ ಗ್ರಾಮಸ್ಥರು, ರೈತರು ಇದ್ದರು.