ಐಆರ್​ಸಿಟಿಸಿ ಹಗರಣದಲ್ಲಿ ಲಾಲು ಮಧ್ಯಂತರ ಜಾಮೀನು ವಿಸ್ತರಣೆ

ನವದೆಹಲಿ: ಐಆರ್​ಸಿಟಿ ಹಗರಣದ ಎರಡು ಪ್ರಕರಣಗಳಲ್ಲಿ ಸಿಲುಕಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಮತ್ತು ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್​ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನಿನ ಅವಧಿಯನ್ನು ದೆಹಲಿಯ ಸಿಬಿಐ ನ್ಯಾಯಾಲಯ ಜನವರಿ 28ರ ವರೆಗೆ ವಿಸ್ತರಿಸಿದೆ.

ರೈಲ್ವೆ ಕ್ಯಾಟರಿಂಗ್​ ಮತ್ತು ಪ್ರವಾಸೋದ್ಯಮ ನಿಗಮದಲ್ಲಿನ (ಐಆರ್​ಸಿಟಿಸಿ) ಹೋಟೆಲ್​ ಒಪ್ಪಂದವನ್ನು ಖಾಸಗಿ ಸಂಸ್ಥೆಗೆ ಅಕ್ರಮವಾಗಿ ನೀಡಿದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್, ಈ ಮೂವರಿಗೆ ನೀಡಲಾಗಿದ್ದ ಜಾಮೀನು ಅವಧಿಯನ್ನು ವಿಸ್ತರಿಸಿದ್ದಾರೆ.

2004 ಮತ್ತು 2014ರ ಅವಧಿಯಲ್ಲಿ ಪುರಿ ಮತ್ತು ರಾಂಚಿಯ ಬಿಎನ್​ಆರ್​ ಹೋಟೆಲ್​ಗಳನ್ನು ಐಆರ್​ಸಿಟಿಸಿಗೆ ನೀಡಲಾಗಿತ್ತು. ನಂತರ, ಅದರ ನಿರ್ವಹಣೆಯನ್ನು ಪಟಣಾದ ಖಾಸಗಿ ಸಂಸ್ಥೆ ಸುಜಾತಾ ಹೋಟೆಲ್ಸ್​ ಪ್ರೈ.ಲಿಗೆ ನೀಡಲಾಗಿತ್ತು. ಈ ಒಪ್ಪಂದವನ್ನು ಸ್ವಹಿತಾಸಕ್ತಿಯಿಂದ ನಿಯಮಗಳನ್ನು ಮೀರಿ ವರ್ಗಾಯಿಸಲಾಗಿತ್ತು ಎಂಬುದು ಆರೋಪ. ಈ ಹಗರಣ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಚಾರ್ಜ್​ಶೀಟ್​ ಅನ್ನೂ ಸಲ್ಲಿಕೆ ಮಾಡಿತ್ತು.

ಹೀಗಿರುವಾಗಲೇ ಇದೇ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಲಾಲು ಪ್ರಸಾದ್​ ಯಾದವ್​, ರಾಬ್ಡಿ ದೇವಿ, ತೇಜಸ್ವಿ ಯಾದವ್​ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಕೇಸು ದಾಖಲಿಸಿಕೊಂಡಿತ್ತು. ಇದೇ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪ್ರೇಮ್​ ಚಂದ್​ ಗುಪ್ತಾ, ಐಆರ್​ಇಸಿಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗೋಯಲ್ ಅವರ ಹೆಸರೂ ಉಲ್ಲೇಖವಾಗಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿದ್ದ ಈ ಪ್ರಕರಣದಲ್ಲಿ ಲಾಲು ಅವರಿಗೆ ಜನವರಿ 19 ರವರೆಗೆ ಮಧ್ಯಂತರ ಜಾಮೀನು ಪ್ರಾಪ್ತವಾಗಿತ್ತು.