ಉಳಿತಾಯ ಸಣ್ಣದು ಸಾಧನೆ ದೊಡ್ಡದು!

ದಿನಕ್ಕೆರಡು ರೂಪಾಯಿಯ ಉಳಿತಾಯವೆಂದರೆ, ದೊಡ್ಡ ದೊಡ್ಡ ಬ್ಯಾಂಕರ್​ಗಳಿಗೆ ಹಾಸ್ಯಾಸ್ಪದ ಎನಿಸಬಹುದು. ಆದರೆ, ದಿನದ ಅಂತ್ಯದಲ್ಲಿ ಅಲ್ಪ ಆದಾಯ ಉಳಿಸುವವರಿಗೆ ಅದು ಗಮನಾರ್ಹ ಮೊತ್ತವೇ. ಅಷ್ಟನ್ನಾದರೂ ಉಳಿತಾಯ ಮಾಡಬೇಕೆಂದರೆ ಅಂಥ ವ್ಯವಸ್ಥೆಯೇ ಇರುವುದಿಲ್ಲ. ಇಂಥ ಮಹಿಳೆಯರ ಬೆಂಬಲಕ್ಕೆಂದೇ ಹುಟ್ಟಿಕೊಂಡ ಬ್ಯಾಂಕ್ ಮನ್ ದೇಶಿ ಮಹಿಳಾ ಸಹಕಾರ ಬ್ಯಾಂಕ್. ಮಹಿಳೆಯರ ಜೀವನೋತ್ಸಾಹದ ಪ್ರತೀಕವಾಗಿದೆ ಈ ಸಹಕಾರಿ ಬ್ಯಾಂಕ್.

|  ಸುಮನಾ ಲಕ್ಷ್ಮೀಶ

ಮಹಾರಾಷ್ಟ್ರದ ಸಣ್ಣ ಹಳ್ಳಿಯಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದಾಕೆ ಕಾಂತಾಬಾಯಿ. ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಬೇಕೆಂಬುದು ಆಕೆಯ ಕನಸು. ಆದರೆ, ಯಾವುದೇ ಬ್ಯಾಂಕ್​ಗಳು ಅವಕಾಶ ನೀಡಿರಲಿಲ್ಲ. ಏಕೆಂದರೆ, ಆಕೆ ಉಳಿಸಲು ಬಯಸಿದ್ದು ದಿನಕ್ಕೆ 5 ರೂ.ಗಿಂತ ಕಡಿಮೆ ಹಣ! ದಿನದ ದುಡಿಮೆಯ ಅತಿ ಚಿಕ್ಕ ಭಾಗವನ್ನು ಉಳಿತಾಯ ಮಾಡುವ ಮೂಲಕ ಭವಿಷ್ಯವನ್ನು ಸ್ವಲ್ಪವಾದರೂ ಭದ್ರ ಮಾಡಿಕೊಳ್ಳುವ ಅವಳ ಪ್ರಯತ್ನ ಬ್ಯಾಂಕಿನ ನಿಯಮಗಳಿಂದ ಸಫಲವಾಗಿರಲಿಲ್ಲ. ಅದು ಕಾಂತಾಬಾಯಿಯೊಬ್ಬಳದ್ದೇ ಸಮಸ್ಯೆ ಆಗಿರಲಿಲ್ಲ. ಅವಳಂಥ ಸಾವಿರಾರು ಮಹಿಳೆಯರು ಪ್ರತಿದಿನ ಅತ್ಯಲ್ಪ ಹಣ ಗಳಿಸುತ್ತಿದ್ದರು. ಹೇಗಾದರೂ ಉಳಿತಾಯ ಮಾಡಬೇಕೆಂದರೆ ಅವರಿಗೆ ಸಾಧ್ಯವಾಗುತ್ತಿದ್ದದ್ದು 2, 3, 4, 5..10 ರೂ. ಅಷ್ಟೆ. ಅವರ ಸಮಸ್ಯೆ ತಿಳಿದಾಗ ಚೇತನಾ ಗಾಲಾ ಸಿನ್ಹಾ ಅವರಿಗೆ ಸುಮ್ಮನೆ ಕೂರಬೇಕೆಂದು ಅನ್ನಿಸಲಿಲ್ಲ. ಆಗ ತಾನೇ ಬೇರೆ ಊರಿಗೆ ಹೋಗಿ ನೆಲೆಸಿದ್ದ ಅವರಿಗೆ ಮಹಿಳೆಯರಿಗಾಗಿ ಏನಾದರೂ ಫಲಪ್ರದ ಕೆಲಸ ಮಾಡಬೇಕೆಂದು ತೀವ್ರವಾಗಿ ಅನಿಸುತ್ತಿತ್ತು. ಹೀಗಾಗಿ, ಅಂಥ ಮಹಿಳೆಯರಿಗಾಗಿಯೇ ಬ್ಯಾಂಕ್ ತೆರೆಯಬೇಕೆಂದು ಬಯಸಿದರು.

ಸಾಮಾನ್ಯ ಮಹಿಳೆಯೊಬ್ಬಳು ಬ್ಯಾಂಕ್ ತೆರೆಯುವುದೆಂದರೆ ತಮಾಷೆಯೇ? ಮುಂಬೈನ ಆರ್​ಬಿಐ ಕಚೇರಿಯನ್ನು ಸಂರ್ಪಸಿದರು. ಆದರೆ, ಈ ಮಹಿಳೆಯರಿಗೆ ‘ಓದಲು, ಬರೆಯಲು ಬರುವುದಿಲ್ಲ. ಅಕ್ಷರವೂ ತಿಳಿದಿಲ್ಲ. ಸಹಿ ಹಾಕಲು ಸಹ ಗೊತ್ತಿಲ್ಲ, ಅವರಿಗಾಗಿ ಬ್ಯಾಂಕ್​ಗೆ ಲೈಸೆನ್ಸ್ ನೀಡಲು ಸಾಧ್ಯವಿಲ್ಲ’ ಎಂದು ತಿರಸ್ಕರಿಸಲಾಯಿತು. ವಿಷಾದದಿಂದ ಈ ಮಹಿಳೆಯರ ಬಳಿ ಇರುವ ಸಮಸ್ಯೆ ಹೇಳಿದಾಗ ಅವರು ಬೇಸರವನ್ನೇ ಮಾಡಿಕೊಳ್ಳಲಿಲ್ಲ. ‘ಸರಿ, ಇವತ್ತಿನಿಂದಲೇ ನಾವು ಶಿಕ್ಷಣ ಕಲಿಯುತ್ತೇವೆ, ಅಕ್ಷರ ಕಲಿಯೋಣ’ ಎಂದವರು ಹುಮ್ಮಸ್ಸಿನಿಂದ ಹೇಳಿದಾಗ ಚೇತನಾ ಅವರಲ್ಲಿ ಮತ್ತೆ ಉತ್ಸಾಹ ಮರುಕಳಿಸಿತ್ತು. ಆರು ತಿಂಗಳು…ಬಳಿಕ ಮತ್ತೆ ಆರ್​ಬಿಐಗೆ ಅರ್ಜಿ ಸಲ್ಲಿಸಿದರು. ಹೇಗೂ ಆರ್​ಬಿಐ ಅನುಮತಿ ನೀಡುವುದಿಲ್ಲ ಎಂದೇ ಬಗೆದಿದ್ದಾಗ, ಅನೇಕ ಮಹಿಳೆಯರು ಅಲ್ಲಿನ ಅಧಿಕಾರಿಗಳ ಬಳಿ ಮಂಡಿಸಿದ್ದ ವಾದಕ್ಕೆ ಜಯ ಸಿಕ್ಕಿತ್ತು. ‘ಹೌದು, ನಾವು ಶಾಲೆ ಕಲಿತಿಲ್ಲ. ನಾವು ಹುಟ್ಟಿದ ಊರಿನಲ್ಲಿ ಶಾಲೆ ಇರಲಿಲ್ಲ. ಅದು ನಮ್ಮ ತಪ್ಪಲ್ಲ. ಈಗ ಕಲಿತುಕೊಳ್ಳಲು ಮುಂದಾಗಿದ್ದೇವೆ. ನಮಗೆ ಅಕ್ಷರ ಗೊತ್ತಿರಲಿಕ್ಕಿಲ್ಲ. ಆದರೆ, ಲೆಕ್ಕ ಮಾಡುವುದು ಗೊತ್ತಿದೆ’ ಎಂದಾಗ ಅಧಿಕಾರಿಗಳು ಇವರ ಛಲಕ್ಕೆ ತಲೆದೂಗಿ ಲೈಸೆನ್ಸ್ ನೀಡಿದ್ದರು….

ಇದು, ಪ್ರಸ್ತುತ 3 ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಒಳಗೊಂಡ ಮನ್ ದೇಶಿ ಮಹಿಳಾ ಸಹಕಾರಿ ಬ್ಯಾಂಕ್ ಆರಂಭವಾದ ಕತೆ. ಚೇತನಾ ಗಾಲಾ ಸಿನ್ಹಾ ಈ ಕಥನವನ್ನು ಎಷ್ಟು ಅತ್ಯುತ್ಸಾಹದಿಂದ ಬಿಚ್ಚಿಡುತ್ತಾರೆ ಎಂದರೆ, ಅವರ ಪ್ರತಿಯೊಂದು ಮಾತಿಗೂ ಚಪ್ಪಾಳೆಗಳ ಸುರಿಮಳೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅವರು, ಮನ್ ದೇಶಿ ಬ್ಯಾಂಕ್​ನ ಸಾಫಲ್ಯವನ್ನು, ಗ್ರಾಮೀಣ ಮಹಿಳೆಯರು ಈ ಬ್ಯಾಂಕ್ ಮೂಲಕ ಅಭಿವೃದ್ಧಿ ಪಥದತ್ತ ಸಾಗಿದ್ದುದನ್ನು ಎಳೆಎಳೆಯಾಗಿ ವಿವರಿಸಿದರು.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪುಟ್ಟ ಗ್ರಾಮವಾಗಿರುವ ಮ್ಹಸ್ವಾಡ್​ನಲ್ಲಿದೆ ಮನ್ ದೇಶಿ ಮಹಿಳಾ ಸಹಕಾರಿ ಬ್ಯಾಂಕ್. ಇದರ ರೂವಾರಿ ಚೇತನಾ ಗಾಲಾ ಸಿನ್ಹಾ. ಈ ಪುಟ್ಟ ಊರಿನ ಮನೆಮನೆಯಲ್ಲೂ ಸಣ್ಣ ಉದ್ಯಮಿಗಳಿದ್ದಾರೆ. ಊರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಳೆಯುವಂತೆ ಮಾಡಿರುವ ಚೇತನಾ ಸಿನ್ಹಾರಿಗೆ 2017ನೇ ಸಾಲಿನ ಫೋರ್ಬ್ಸ್ ಇಂಡಿಯಾ ಲೀಡರ್​ಷಿಪ್ ಪ್ರಶಸ್ತಿ ಸಹ ದೊರೆತಿದೆ. 1991ರಲ್ಲಿ ಮ್ಹಸ್ವಾಡ್ ಗ್ರಾಮದ ಸೊಸೆಯಾಗಿ ಬಂದಾಗ ಚೇತನಾರಿಗೆ ಕೇವಲ 18 ವರ್ಷ. ಬ್ಯಾಂಕ್ ಅಕೌಂಟ್ ತೆರೆಯಲಾಗದ ಕಾಂತಾಬಾಯಿಯ ಅಸಹಾಯಕತೆ 1997ರಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪನೆಯ ಹೋರಾಟಕ್ಕೆ ಮುನ್ನುಡಿ ಬರೆಯಿತು.

ನಂತರದ ದಿನಗಳಲ್ಲಿ ಮಹಿಳೆಯರಿಗೆ ಸಾಲವನ್ನೂ ನೀಡಲು ಆರಂಭಿಸಿದಾಗ ಸಾವಿರಾರು ಮಹಿಳೆಯರು ಅದರ ಪ್ರಯೋಜನ ಪಡೆದು ಉದ್ಯಮಿಗಳಾಗಿದ್ದಾರೆ. 1335 ಸದಸ್ಯರಿಂದ ಸಂಗ್ರಹಿಸಿದ 7 ಲಕ್ಷದ 8 ಸಾವಿರ ರೂ.ಗಳಿಂದ ಆರಂಭವಾದ ಸಹಕಾರಿ ಬ್ಯಾಂಕ್​ನಲ್ಲಿಂದು ಬರೋಬ್ಬರಿ 3 ಲಕ್ಷ 10 ಸಾವಿರ ಮಹಿಳೆಯರು ಖಾತೆ ಹೊಂದಿದ್ದಾರೆ. ಇದರಲ್ಲಿ 84 ಸಾವಿರ ಮಹಿಳೆಯರು ಸಾಲ ಪಡೆದಿದ್ದಾರೆ. ಮೊದಲ ಏಕೈಕ ಶಾಖೆ ಹೊಂದಿದ್ದ ಬ್ಯಾಂಕ್ ಇಂದು ಮಹಾರಾಷ್ಟ್ರ ರಾಜ್ಯಾದ್ಯಂತ 7 ಶಾಖೆಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಮೂಲ ಬಂಡವಾಳವಾಗಿ 150 ಕೋಟಿ ರೂ.ಗಳನ್ನು ಹೊಂದಿದೆ.

ವಿಶಿಷ್ಟ ಸೇವೆಗಳ ಬ್ಯಾಂಕ್: ದಿನಗೂಲಿ ಮಾಡುವ ಸಾವಿರಾರು ಮಹಿಳೆಯರು ಇಂದು ಮನ್ ದೇಶಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಮನ್ ದೇಶಿ ಫೌಂಡೇಷನ್ ಸ್ಥಾಪನೆ ಮಾಡಿಕೊಂಡು, ಆ ಮೂಲಕ ಮಹಿಳೆಯ ಅಗತ್ಯಗಳನ್ನು ಪೂರೈಸಲಾಗುತ್ತಿದೆ. ಎಷ್ಟು ವಿಭಿನ್ನವಾದ ಉಳಿತಾಯ ಖಾತೆ ಇಲ್ಲಿ ಲಭ್ಯವಿದೆ ಎಂದರೆ ಅಚ್ಚರಿಯಾಗುತ್ತದೆ. ವಾರದ ಅಥವಾ ತಿಂಗಳಿನ ಉಳಿತಾಯ ಖಾತೆಯನ್ನೂ ಇಲ್ಲಿ ತೆರೆಯಬಹುದು. ಮಹಿಳೆಯರು ವಾರಕ್ಕೆ ಎರಡು ಸಲ ಅಥವಾ ಕೆಲವು ತಿಂಗಳಿಗೆ, ವರ್ಷಕ್ಕೆ ಹಣವನ್ನು ವಾಪಸ್ ಪಡೆಯಬಹುದು. ಇಲ್ಲಿನ ಬಹುತೇಕ ಗ್ರಾಹಕರು ಬೀದಿಬದಿ ವ್ಯಾಪಾರಿಗಳು. ಇವರು ವಾರಕ್ಕೊಮ್ಮೆ ನಡೆಯುವ ಸಂತೆಯ ಮೂಲಕ ಹೆಚ್ಚಿನ ವ್ಯಾಪಾರ ಮಾಡುತ್ತಾರೆ, ಅದಕ್ಕೆ ತಕ್ಕಂತೆ ಹಣ ಪಾವತಿ ಮಾಡುವ ಸೌಲಭ್ಯ ಒದಗಿಸಲಾಗಿದೆ. ಅಷ್ಟೇ ಅಲ್ಲ, ಇಲ್ಲಿ ನಿವೃತ್ತಿ ಜೀವನಕ್ಕಾಗಿಯೂ ಉಳಿತಾಯ ಮಾಡಬಹುದು.

ಬೆಂಬಲ ವ್ಯವಸ್ಥೆ

ಹಣಕಾಸು ಸೌಲಭ್ಯ ಒದಗಿಸುವುದೊಂದೇ ಯಶಸ್ಸಿಗೆ ಕಾರಣವಾಗುವುದು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಕೌಶಲ, ಮಾರುಕಟ್ಟೆ ಲಭ್ಯತೆ ಮುಂತಾದ ಸೌಕರ್ಯಗಳಿದ್ದಾಗಲೇ ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರಿಗೆ ಸಹಾಯವಾಗುತ್ತದೆ. ಅಂಥ ಬೆಂಬಲ ವ್ಯವಸ್ಥೆಯನ್ನೂ ಮನ್ ದೇಶಿ ಫೌಂಡೇಷನ್ ರೂಪಿಸಿದೆ. ಕೌಶಲ ನಿರ್ವಣ, ಸಮುದಾಯ ನೆಟ್​ವರ್ಕ್, ಮಾರುಕಟ್ಟೆ ಮಾಹಿತಿಗಳ ಬಗೆಗೆ ಸಾಕಷ್ಟು ತರಬೇತಿ ನೀಡಲಾಗುತ್ತಿದೆ.

ಏನೆಲ್ಲ ಕಾರ್ಯಗಳು?

ಜಲ ಸಂರಕ್ಷಣೆ: ಮನ್ ದೇಶಿ ಬ್ಯಾಂಕ್ ಮೂಲಕ, 2012ರಲ್ಲಿ ‘ವಾಟರ್ ಬ್ಯಾಂಕ್’ ಅನ್ನೂ ಆರಂಭಿಸಲಾಗಿದೆ. ಅಂದರೆ, ಜಲಮೂಲಗಳನ್ನು ರಕ್ಷಿಸುವುದು, ಕೆರೆಗಳನ್ನು ಮರುಅಭಿವೃದ್ಧಿ ಮಾಡುವ ಮೂಲಕ ರೈತರಿಗೆ ಶುದ್ಧ ನೀರು ದೊರೆಯುವಂತೆ ಮಾಡುವುದು.

ಸಣ್ಣ ಮಹಿಳಾ ಉದ್ಯಮಿಗಳಿಗೆ ಬೆಂಬಲ : ಸಣ್ಣ ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ, ಅವರ ಅಗತ್ಯಗಳಿಗೆ ತಕ್ಕಂತೆ ಪ್ರೋತ್ಸಾಹ ನೀಡುವ ವ್ಯವಸ್ಥೆ ಇಲ್ಲಿದೆ. ಇಲ್ಲಿನ ಪ್ರತಿಯೊಂದು ಸೇವೆ, ಸೌಲಭ್ಯವೂ ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಪೂರಕವಾಗಿದೆ ಎನ್ನುವುದು ವಿಶೇಷ.

ಬಿಸಿನೆಸ್ ಸ್ಕೂಲ್ ಆರಂಭ : ಬಿಸಿನೆಸ್ ಸ್ಕೂಲ್ ಆರಂಭಿಸಿರುವುದು ಸಹ ಮನ್ ದೇಶಿ ಫೌಂಡೇಷನ್ ಹೆಗ್ಗಳಿಕೆ. ಕನಿಷ್ಠ ಸಾರಿಗೆ ಸೌಕರ್ಯವೂ ಇಲ್ಲದ ಹಳ್ಳಿಗಳಿಗೆ ತೆರಳಿ ಉದ್ಯಮಿಗಳಾಗುವ ಉತ್ಸಾಹಿಗಳಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ.

ಶುಲ್ಕರಹಿತ ಹೆಲ್ಪ್​ಲೈನ್ : ಶುಲ್ಕರಹಿತ ಹೆಲ್ಪ್​ಲೈನ್ ಸಂಖ್ಯೆ ಕಲ್ಪಿಸಲಾಗಿದ್ದು, ಇದರ ಮೂಲಕವೂ ಸಲಹೆ, ಮಾರುಕಟ್ಟೆ ಸೌಲಭ್ಯದ ಬಗ್ಗೆ ಮಾಹಿತಿ ಪಡೆಯಬಹುದು.

ರೇಡಿಯೋ ಪ್ರಸಾರ : ರೇಡಿಯೋ ಪ್ರಸಾರ ಸಹ ಇಲ್ಲಿದ್ದು, ಮಹಿಳಾ ಉದ್ಯಮಿಗಳಿಗೆ ಸಂಬಂಧಿಸಿದ ಘಟನೆಗಳನ್ನು ಹಂಚಿಕೊಳ್ಳಲಾಗುತ್ತದೆ. ಸರ್ಕಾರಿ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಶಾಲೆಗೆ ತೆರಳಲು ಬೈಸಿಕಲ್ ಪ್ರೋಗ್ರಾಂ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *