Thursday, 13th December 2018  

Vijayavani

Breaking News

ಗಂಡ-ಹೆಂಡಿರ ಮುನಿಸು ಶುರುವಾಗೋದೇ ಇಲ್ಲಿಂದ

Tuesday, 17.07.2018, 3:05 AM       No Comments

ಗಂಡ-ಹೆಂಡಿರ ಜಗಳ ಉಂಡು ಮಲಗುವತನಕ ಎನ್ನುವುದು ಭಾರಿ ಹಳೇ ಮಾತು. ಈಗೇನಿದ್ದರೂ ಗಂಡ-ಹೆಂಡಿರ ಜಗಳ ಫೇಸ್​ಬುಕ್​ನಲ್ಲಿ ಅಪ್​ಡೇಟ್ ಮಾಡುವವರೆಗೆ, ಮಿತಿಮೀರಿದರೆ ಕೋರ್ಟ್ ಮೆಟ್ಟಿಲೇರುವವರೆಗೆ, ಇನ್ನೂ ಅತಿಯಾದರೆ ಕೊಲೆ-ಆತ್ಮಹತ್ಯೆಯವರೆಗೆ ಎನ್ನುವಂತಾಗಿದೆ. ಸಂವಹನಕ್ಕೆಂದೇ ಇರುವ ಈ ಮಾಧ್ಯಮ ದಂಪತಿ ನಡುವೆ ಸಂವಹನವನ್ನೇ ನಿಲ್ಲಿಸುತ್ತಿರುವುದೇಕೆ?

| ಸುಚೇತನಾ ನಾಯ್ಕ

ತನಗೆ ಸ್ನೇಹಿತರಿಗಿಂತಲೂ ಸ್ಮಾರ್ಟ್ ಆಗಿರೋ ಹೆಂಡತಿ ಸಿಕ್ಕಿದ್ದಾಳೆ

ಎನ್ನುವ ಅಹಂ ಈತನಿಗೆ. ಹಾಗೆಂದು ಸ್ನೇಹಿತರೆಲ್ಲರ ಬಳಿ ಹೋಗಿ ಆಕೆಯನ್ನು ತೋರಿಸಲಾದೀತೇ? ಹೇಗೆ ಹೇಳಿಕೊಳ್ಳುವುದು ಎಂಬ ಚಿಂತೆ.

***

ತನ್ನ ಮಕ್ಕಳು ಮಾಡಿರುವ ಸಾಧನೆಗಳನ್ನು ಎಲ್ಲರ ಬಳಿ ತಲುಪಿಸುವ ಹಂಬಲ

ಆ ಅಮ್ಮನಿಗೆ. ಹಾಗೆಂದು ಎಲ್ಲರ ಎದುರು ಹೇಳಿಕೊಳ್ಳಲು ಮುಜುಗರ…

***

ದಪ್ಪ ಎಂದು ತಮಾಷೆ ಮಾಡುತ್ತಿದ್ದವರಿಗೆ ತಾನು ಬಳುಕುವ ಬಳ್ಳಿಯಾಗಿದ್ದೇ ನೆಂದು ಜಗಜ್ಜಾಹೀರು ಮಾಡುವ ಆಸೆ ಈಕೆಗೆ. ಆದರೆ ಹೇಗೆ…?

***

ಹೀಗೆ ಏನೇನೋ ಹೇಳಿಕೊಳ್ಳುವ ಆಸೆಯಾಗಿ, ಏನೂ ಹೇಳಲಾಗದೆ ಒಳಗೊಳಗೇ ಯಾತನೆ ಅನುಭವಿಸುತ್ತಿರುವವರಿಗೆ, ತಮ್ಮ ಪ್ರತಿಭೆಗೆ ಎಲ್ಲಿಯೂ ವೇದಿಕೆಯೇ ಸಿಗುತ್ತಿಲ್ಲವಲ್ಲ ಎಂದು ಕೊರಗುವವರಿಗೆ, ಅಷ್ಟೇ ಏಕೆ ಯಾರನ್ನೋ ಬೈಯುವ ಮನಸ್ಸಾಗಿ ನೇರವಾಗಿ ಬೈಯಲಾಗದೇ ಒಳಗೊಳಗೆ ಕುದಿಯುವವರಿಗೆ, ಸಮಾನ ಮನಸ್ಕರಿಗಾಗಿ ತಡಕಾಡುವವರಿಗೆ… ಹೀಗೆ ಆಬಾಲವೃದ್ಧರಾಗಿ ಎಲ್ಲರನ್ನೂ ಸಂತುಷ್ಟಗೊಳಿಸುತ್ತಿರುವ ‘ದೈವ‘ವೇ ಈ ಸಾಮಾಜಿಕ ಜಾಲತಾಣವೆಂಬ ಮಾಯಾಲೋಕ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ, ಈಗ ಇವು ಸಂಸಾರದ ಒಳಗೂ ಪ್ರವೇಶಿಸಿಬಿಟ್ಟಿವೆ. ಅದೆಷ್ಟೋ ದಂಪತಿಯ ನಡುವೆ ಒಡಕು ಮೂಡಿಸುತ್ತಿವೆ. ಗಂಡು-ಹೆಣ್ಣನ್ನು ಒಟ್ಟುಗೂಡಿಸಲು ನೆರವಾಗಿದ್ದ ಈ ಜಾಲತಾಣವೇ ಹಲವಾರು ಕುಟುಂಬಗಳಿಗೆ ಕಂಟಕವಾಗಿವೆ. 2016ರ ಜುಲೈ ತಿಂಗಳ ಮಾತು. ಚೆನ್ನೈನ ಕೌಟುಂಬಿಕ ಕೋರ್ಟ್ ಒಂದರಲ್ಲಿ ವಿಚ್ಛೇದನ ಪ್ರಕರಣದ ಅರ್ಜಿ ನೋಡಿ ನ್ಯಾಯಾಧೀಶರು ತಲೆ ಮೇಲೆ ಕೈಹೊತ್ತು ಕುಳಿತರು. ಮದುವೆಯಾಗಿ ವರ್ಷ ತುಂಬುವುದರೊಳಗೆ ಕ್ರೌರ್ಯದ ಆಧಾರದ ಮೇಲೆ ಗಂಡನಿಂದ ವಿಚ್ಛೇದನ ದೊರಕಿಸುವಂತೆ ಆಕೆ ನೀಡಿದ್ದ ಕಾರಣ ಓದಿದ ಅವರು ದಂಗಾಗಿ ಹೋದರು.

ಕಾರಣ ಇಷ್ಟೇ. ಅದರಲ್ಲಿ ವಿಚ್ಛೇದನಕ್ಕೆ ಹೆಂಡತಿ ನೀಡಿದ್ದ ಕಾರಣ, ‘ಮದುವೆಯಾಗಿ ವರ್ಷವಾದರೂ ಗಂಡ ಇನ್ನೂ ತನ್ನ ಫೇಸ್​ಬುಕ್ ಸ್ಟೇಟಸ್​ನಲ್ಲಿ ‘ಮ್ಯಾರೀಡ್’ (ವಿವಾಹಿತ) ಎಂದು ಹಾಕಿಕೊಂಡಿಲ್ಲ, ಇನ್ನೂ ಅಲ್ಲಿ ‘ಸಿಂಗಲ್’ (ಅವಿವಾಹಿತ) ಎಂದೇ ಇದೆ. ನಾನು ಹೇಳಿದರೂ ಅವರು ಅದನ್ನು ಬದಲು ಮಾಡಿಲ್ಲ. ಆದ್ದರಿಂದ ಕ್ರೌರ್ಯದ ಆಧಾರದ ಮೇಲೆ ನನಗೆ ವಿಚ್ಛೇದನ ಕೊಡಿಸಿ’ ಎಂದಿದ್ದಳು.

ಆಗ ಬುದ್ಧಿಮಾತು ಹೇಳಿದ ನ್ಯಾಯಾಧೀಶರು, ‘ನೋಡಿಯಮ್ಮ… ಫೇಸ್​ಬುಕ್ ಕಂಡುಹಿಡಿದಿರುವ ಪುಣ್ಯಾತ್ಮ ಮಾರ್ಕ್ ಜುಕರ್​ಬರ್ಗ್ ಕೂಡ ಮದುವೆಯಾಗಿ ಮಗುವಾದರೂ ಇನ್ನೂ ತನ್ನ ಸ್ಟೇಟಸ್​ನಲ್ಲಿ ‘ಮ್ಯಾರೀಡ್’ ಅಂತ ಹಾಕಿಕೊಂಡಿಲ್ಲ. ಆತನ ಹೆಂಡತಿಯ ಫೇಸ್​ಬುಕ್​ನಲ್ಲಿ ಮಾತ್ರ ಅದು ಇದೆ’ ಎಂದೆಲ್ಲ ತಿಳಿಹೇಳಿ ಕೊನೆಗೆ ದಂಪತಿಯನ್ನು ನೇರವಾಗಿ ಕೌನ್ಸೆಲಿಂಗ್​ಗೆ ಕಳುಹಿಸಿದರು. ಕೊನೆಗೂ ಅವರು ಅಲ್ಲಿ ರಾಜಿಯಾದರು ಎನ್ನಿ! ಕೊನೆಗಾದರೂ ಗಂಡ ತಾನು ‘ಮ್ಯಾರೀಡ್’ ಎಂದು ಬಹಿರಂಗವಾಗಿ ಘೊಷಿಸಿಕೊಂಡನೋ ಇಲ್ಲವೋ ಗೊತ್ತಿಲ್ಲ. ಈ ಪ್ರಕರಣದಲ್ಲೇನೋ ಗಂಡ-ಹೆಂಡತಿ ಪ್ರತ್ಯೇಕವಾಗಲಿಲ್ಲ. ಆದರೆ, ಸಾಮಾಜಿಕ ಜಾಲತಾಣ ದಾಂಪತ್ಯವನ್ನು ಹೇಗೆ ಕೊನೆಗಾಣಿಸುತ್ತದೆ ಎಂಬ ಭೀಕರತೆಯನ್ನು ಕಳೆದ ಜನವರಿಯಲ್ಲಿ ಪುಣೆಯಲ್ಲಿ ನಡೆದ ರಾಕೇಶ್ ಮತ್ತು ಸೋನಾಲಿ ದಂಪತಿಯ ದುರಂತಮಯ ಬದುಕು ತೋರಿಸುತ್ತದೆ.

ಮದುವೆಯಾದಾಗಿನಿಂದ ತಮ್ಮ ವೈವಾಹಿಕ ಜೀವನದ ಪ್ರತಿಯೊಂದು ಘಟನೆಗಳನ್ನು ಸೋನಾಲಿ ಫೇಸ್​ಬುಕ್​ನಲ್ಲಿ ಅಪ್​ಡೇಟ್ ಮಾಡುತ್ತಿದ್ದಳು. ಇದು ರಾಕೇಶ್​ಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ನಾಲ್ಕು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದರ ಬಗ್ಗೆಯೂ ಆಕೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಳು. ಈ ರೀತಿ ಸಂಸಾರದ ಗುಟ್ಟನ್ನೆಲ್ಲ ಸಾರ್ವಜನಿಕಗೊಳಿಸಬೇಡ ಎಂದು ಗಂಡ ಪದೇ ಪದೆ ಹೇಳಿದರೂ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯ ಎನ್ನುತ್ತ ಆಕೆ ಅಪ್​ಡೇಟ್ ಮಾಡುತ್ತಲೇ ಬಂದಳು. ಅದಕ್ಕೆ ಆಕೆಯ ಸ್ನೇಹಿತರು-ಸ್ನೇಹಿತೆಯರು ನೀಡುವ ಸಲಹೆ, ಅದಕ್ಕೆ ಈಕೆ ಉತ್ತರಿಸುವ ಪರಿ ಎಲ್ಲವೂ ಒಂದು ಹಂತ ದಾಟಿದಾಗ ರಾಕೇಶ್​ಗೆ ಸಹಿಸದಾಯಿತು. ಅದೊಂದು ದಿನ ಆತ ಕಟು ನಿರ್ಧಾರ ತೆಗೆದುಕೊಂಡ. ಹೆಂಡತಿಯನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾದ. ಆತ್ಮಹತ್ಯೆಗೂ ಮುನ್ನ ತನ್ನ ಮನಸ್ಸಿನ ನೋವನ್ನೆಲ್ಲ ಒಂದು ಚೀಟಿಯಲ್ಲಿ ಬರೆದಿಟ್ಟ!

ಇಂಥದ್ದೇ ಘಟನೆ ಬೆಂಗಳೂರಿನಲ್ಲಿ ಈಚೆಗೆ ನಡೆದಿದೆ. ಇಡೀ ದಿನ ಫೇಸ್​ಬುಕ್​ನಲ್ಲಿಯೇ ಕಾಲ ಕಳೆಯುತ್ತಿದ್ದ ಹೆಂಡತಿಗೆ ಬುದ್ಧಿ ಮಾತು ಹೇಳಿ ಸೋತ ಗಂಡ, ನಂತರ ಜಗಳ ಶುರುವಿಟ್ಟುಕೊಂಡ. ಜಗಳ ತಾರಕಕ್ಕೇರಿದಾಗ ಇಬ್ಬರೂ ಒಂದೊಂದು ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡರು.

ಟೀಂ ಇಂಡಿಯಾದ ಆಟಗಾರ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಬೀಸಿದ್ದೂ ಇದೇ ಫೇಸ್​ಬುಕ್. ಅಸಂಖ್ಯ ಹುಡುಗಿಯರ ಫೋಟೊ ಅಪ್​ಲೋಡ್ ಮಾಡಿದ್ದ ಗಂಡನ ವಿರುದ್ಧ ಅವರ ಪತ್ನಿ ಹಸೀನ್ ದೂರು ದಾಖಲು ಮಾಡಿದ್ದರು. ಆ ಹುಡುಗಿಯರ ಪಟ್ಟಿಯಲ್ಲಿ ತಮಗೆ ತಿಳಿಯದಂತೆ ಇನ್ನೊಂದು ಮದುವೆಯಾಗಲು ಬಯಸಿರುವ ಹುಡುಗಿಯ ಫೋಟೊ ಕೂಡ ಇದೆ ಎನ್ನುವ ಗುಮಾನಿ ಇದಕ್ಕೆಲ್ಲ ಕಾರಣ.

ಬೆಳಗ್ಗೆ ಎದ್ದ ತಕ್ಷಣ ದೇವರ ಮುಖ ನೋಡುವವರು ಕೂಡ ಈಗ ಸಾಮಾಜಿಕ ತಾಣಗಳ ಮುಖ ನೋಡತೊಡಗಿದ್ದಾರೆ. ರಾತ್ರಿ ನಿದ್ದೆ ಬರುವವರೆಗೂ ಇದನ್ನು ನೋಡಿ ಮಲಗಿದರೂ ರಾತ್ರಿ ಬೆಳಗಾಗುವುದರೊಳಗೆ ಏನಾದರೂ ಮೆಸೇಜ್ ಬಂದಿವೆಯಾ ಎಂದು ನೋಡುವ ಖಯಾಲಿ. ಅದನ್ನು ನೋಡಿದರೆ ಒಂಥರ ಸಮಾಧಾನ.

ಮನೆಯ ಚಿತ್ರಣವೇ ಬದಲು

ಗಂಡ-ಹೆಂಡತಿ ಇಬ್ಬರ ಕೈಯಲ್ಲೂ ಒಂದೊಂದು ಸ್ಮಾರ್ಟ್ ಫೋನ್. ತಮಗೆ ಬಂದಿರುವ ಮೆಸೇಜ್​ಗಳನ್ನು ನೋಡುವುದರಲ್ಲಿ ಇಬ್ಬರೂ ತಲ್ಲೀನ. ಫೇಸ್ಬುಕ್​ನಲ್ಲಿ ಏನಾದರೂ ಅಪ್​ಡೇಟ್ ಮಾಡಿದ್ದರೆ ಮುಗಿದೇ ಹೋಯಿತು. ಅದಕ್ಕೆ ಬಂದಿರುವ ಲೈಕುಗಳನ್ನು ನೋಡಿ ಕಣ್ಣರಳಿಸಿ, ಕಮೆಂಟ್​ಗಳಿಗೆ ರಿಪ್ಲೈ ಮಾಡುವುದೇ ಸಂಭ್ರಮ. ಆಕೆಯ ಮುಖದಲ್ಲಿ ನಗು ಬಂದಾಗ ಗಂಡ ಇಣುಕುವುದು, ಗಂಡ ಸ್ವಲ್ಪ ಹೆಚ್ಚೇ ಲವಲವಿಕೆ ತೋರಿದರೆ ಆತನ ಮೇಲೆ ಈಕೆ ಸಂದೇಹ ಪಡುವುದು, ಅವಳ ಫೋಟೊಗೆ ಸ್ವಲ್ಪ ಅತಿ ಎನಿಸುವಷ್ಟು ಕಮೆಂಟ್ ಬಂದಾಗ ಕಮೆಂಟ್ ಹಾಕಿದ ಪುರುಷರ ಜಾತಕಗಳನ್ನು ಈತ ಫೇಸ್​ಬುಕ್​ನಲ್ಲಿ ಜಾಲಾಡಿದರೆ, ಗಂಡನ ಫೇಸ್​ಬುಕ್ ಗೆಳತಿಯ ಜಾತಕವನ್ನು ಹೆಂಡತಿ ಜಾಲಾಡುವುದು! ಗಂಡನಿಗೆ ಏನಾಗಿದೆ ಎಂದು ಹೆಂಡತಿ ಆದವಳಿಗೆ ಅಥವಾ ಇವಳಿಗೆ ಏನಾಗಿದೆ ಎಂದು ಅವನಿಗೆ ತಿಳಿಯಬೇಕಿದ್ದರೆ ಫೇಸ್​ಬುಕ್ ಅಪ್​ಡೇಟ್ಸ್ ನೋಡಬೇಕಾದ ಪರಿಸ್ಥಿತಿ! ಇದು ಇಂದಿನ ಬಹುತೇಕ ಮನೆಗಳ ನೋಟ ಎಂದರೆ ತಪ್ಪಿಲ್ಲ.

ಅಲ್ಲಿಂದ ಶುರುವಾಗುವ ಸಂಶಯದ ಪಿಶಾಚಿ ಅರಿವಿಗೇ ಬಾರದೆ ನಿಧಾನವಾಗಿ ಮೈಮನಸ್ಸುಗಳನ್ನೆಲ್ಲ ಆವರಿಸಿಕೊಳ್ಳುತ್ತದೆ. ಮನಸ್ಸು ಬಿಚ್ಚಿ ಮಾತನಾಡಿದರೆ ಸಮಸ್ಯೆಗೆ ಸಮಾಧಾನ ಸಿಗಲು ಸಾಧ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹಾಗಾಗುವುದೇ ಇಲ್ಲ. ಮನಸ್ಸಿನಲ್ಲಿಯೇ ಒಬ್ಬರ ಮೇಲೆ ಒಬ್ಬರು ಕಿಡಿ ಕಾರುತ್ತಾರೆ. ಅವರು ಇವರನ್ನು, ಇವರು ಅವರನ್ನು ಕೆಣಕುವಂಥ ಮಾತುಗಳನ್ನೇ ಆಡಲು ಶುರು ಮಾಡುತ್ತಾರೆ. ನಿಧಾನವಾಗಿ ಇದು ದಾಂಪತ್ಯ ಜೀವನಕ್ಕೇ ಮುಳುವಾಗುತ್ತದೆ. ಅದರಲ್ಲೂ ಇಬ್ಬರಲ್ಲಿ ಒಬ್ಬರಿಗೆ ಸ್ಮಾರ್ಟ್​ಫೋನ್ ಹುಚ್ಚು ಅತಿಯಾಗಿದ್ದರೂ ಸಾಕು, ಸಂಸಾರದಲ್ಲಿ ಬಿರುಕು ಮೂಡಿಸಲು.

ಅದಕ್ಕೇ ಈಗ ಕೆಲವು ದಂಪತಿ ಈ ಸಂಶಯದ ಮಾತೇ ಬೇಡವೆಂದು ಫೋನ್​ಗಳಿಗೆ ಪಾಸ್​ವರ್ಡ್ ಹಾಕುವುದೇ ಇಲ್ಲ, ಒಂದು ವೇಳೆ ಹಾಕಿದರೂ ಅದು ಪರಸ್ಪರ ತಿಳಿದಿರುತ್ತದೆ. ಇದೆಷ್ಟು ಸುಲಭದ ಪರಿಹಾರವಲ್ಲವೇ? ಏನೂ ತಪ್ಪು ಮಾಡುತ್ತಿಲ್ಲ ಎಂದ ಮೇಲೆ ಇಬ್ಬರ ನಡುವೆ ಗುಟ್ಯಾಕೆ? ಗುಟ್ಟು ಮಾಡಿದಾಗಲೇ ತಾನೇ ಸಂಶಯ ಹುಟ್ಟಿಕೊಳ್ಳುವುದು? ಆದರೆ ಇದು ಎಷ್ಟು ಕುಟುಂಬಗಳಲ್ಲಿ ಇವೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಸ್ಮಾರ್ಟ್​ಫೋನ್​ಗಳ ಪಾಸ್​ವರ್ಡ್​ಗಳಷ್ಟೇ ಕಷ್ಟ!

ಜಾತಕವಾಗುತ್ತದೆ ಹುಷಾರ್!

ವಧು-ವರಾನ್ವೇಷಣೆ ಗಳಂಥ ವಿಚಾರಗಳಲ್ಲಿ, ಸ್ನೇಹಿತರ ಆಯ್ಕೆಯ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಬಳಕೆ ಮಾಡಬೇಕಾಗುತ್ತದೆ ‘ಇಂಥ ಕಡೆ, ಇಂಥ ಹುಡುಗಿ ಇದ್ದಾಳಂತೆ… ಜಾತಕ ತರಿಸಲಾ?’ ಎಂದು ಹುಡುಗನನ್ನು ಹಿರಿಯರು ಕೇಳಿದರೆ, ‘ಹುಡುಗ ಇಂಥಲ್ಲಿ ಕೆಲಸ ಮಾಡುತ್ತಿದ್ದಾನಂತೆ, ನಿನ್ನನ್ನು ನೋಡಲು ಬರುತ್ತಾನಂತೆ’ ಎಂದು ಹುಡುಗಿಯನ್ನು ಕೇಳಿದರೆ ಇಬ್ಬರೂ ತಕ್ಷಣ ಫೇಸ್​ಬುಕ್ ಓಪನ್ ಮಾಡುತ್ತಾರೆ! ಏಕೆಂದರೆ ಹುಡುಗ, ಹುಡುಗಿಯ ಆಸಕ್ತಿ, ನಿರಾಸಕ್ತಿ, ಅವರು ಎಂಥವರು, ಅವರ ಸ್ನೇಹಿತರು ಎಂಥವರು ಹೀಗೆ ಎಲ್ಲವನ್ನೂ ಬಿಚ್ಚಿಡುವ ಓಪನ್ ಬುಕ್ ಈ ಫೇಸ್​ಬುಕ್. ಅಪ್​ಡೇಟ್ಸ್, ಕಮೆಂಟ್ಸ್, ಅವುಗಳಿಗೆ ರಿಪ್ಲೈ ಎಲ್ಲವೂ 100% ಅಲ್ಲದಿದ್ದರೂ ಹುಡುಗ-ಹುಡುಗಿಯ ಬಗ್ಗೆ ಹಲವು ಮಾಹಿತಿಗಳನ್ನು ಬಿಚ್ಚಿಡಬಲ್ಲವು. ಹೀಗಾಗಿ ಮೊದಲ ಸ್ಕ್ರೀನಿಂಗ್ ಫೇಸ್​ಬುಕ್​ನಲ್ಲೇ. ಅಲ್ಲಿ ಓಕೆಯಾದರಷ್ಟೇ ಎರಡನೇ ಹಂತ! ಫೇಸ್​ಬುಕ್ ಬಳಕೆದಾರರು ಎಷ್ಟೇ ಜೋಪಾನವಾಗಿ ತಾವು ಒಳ್ಳೆಯವರು ಎಂದು ಪೋಸ್ ಕೊಡಲು ಹೋದರೂ, ಬುದ್ಧಿವಂತರಿಗೆ ಸ್ವಭಾವ ತಿಳಿದುಕೊಳ್ಳಲು ಇದೊಂದು ದೊಡ್ಡ ಅಸ್ತ್ರ. ಹುಡುಗಾಟದ ದಿನಗಳಲ್ಲಿ ಅವರು ಹಾಕಿರುವ ಪೋಸ್ಟ್, ಕಮೆಂಟ್​ಗಳು ಮದುವೆಯನ್ನು ತಡೆದಿರುವ ಉದಾಹರಣೆಗಳೂ ಉಂಟು. ಇದನ್ನೇ ಬಳಸಿ ಕೊಂಡು ಮೂರನೆಯ ವ್ಯಕ್ತಿಗಳು ಮದುವೆ ಮುರಿದು ಹಾಕಿರುವುದೂ ಉಂಟು.

ಎಚ್ಚೆತ್ತುಕೊಳ್ಳುವುದು ಜಾಣತನ

ಸಾಮಾಜಿಕ ತಾಣಗಳಿಂದ ಮನುಷ್ಯನ ಅಹಂಗೆ ಇಷ್ಟವಾಗುವಂತೆ ಕ್ಷಣಕಾಲದ ಸುಖವೇನೋ ಸಿಗಬಹುದು. ಆದರೆ, ಅಂತಿಮ ನೆಮ್ಮದಿ ನಮ್ಮ ಬದುಕಿನಲ್ಲಿಯೇ ಇದೆ ಎಂಬುದನ್ನು ಅರಿತರೆ ಯಾವ ಸಮಸ್ಯೆಯೂ ಬರುವುದಿಲ್ಲ. ಸ್ನೇಹಿತರ ಗುಂಪಿನಲ್ಲಿ ಯಾರೋ ಟ್ರಿಪ್ ಹೋದರು ಎಂದು ನಾವೂ ಹೋಗಲು ಪ್ರಯತ್ನಿಸುವುದು ಅಥವಾ ನಮಗೆ ಹೋಗಲು ಆಗುವುದಿಲ್ಲವಲ್ಲ ಎಂದು ಕೊರಗುವುದು, ಪದೇ ಪದೆ ಸಭೆ ಸಮಾರಂಭಗಳಲ್ಲಿ ಮಿಂಚುವವರನ್ನು ಕಂಡು ನಮ್ಮ ಬಗ್ಗೆ ಕೀಳರಿಮೆ ಹೊಂದುವುದು ಇಂಥ ಮನಸ್ಥಿತಿಗಳನ್ನು ಜಾಲತಾಣಗಳಿಂದ ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳುವುದು ಜಾಣತನ. ಇಬ್ಬರೂ ಜಾಲತಾಣಗಳಲ್ಲಿ ಮುಳುಗುವ ಬದಲು ಪರಸ್ಪರ ಮನಬಿಚ್ಚಿ ಮಾತನಾಡಿಕೊಳ್ಳುವುದರಿಂದ ಆಪ್ತತೆ ಹೆಚ್ಚುತ್ತದೆ.

Leave a Reply

Your email address will not be published. Required fields are marked *

Back To Top