blank

ಭಗವಂತನ ಹಾಡು ಸಾರ್ಥಕ ಜೀವನದ ಜಾಡು

blank
ಭಗವಂತನ ಹಾಡು ಸಾರ್ಥಕ ಜೀವನದ ಜಾಡುಸನಾತನ ಧರ್ಮದ ಎಲ್ಲಾ ಗ್ರಂಥಗಳೂ ಆತ್ಮಸಾಕ್ಷಾತ್ಕಾರವು ಮಾನವಜೀವನದ ಪರಮೋದ್ದೇಶವೆಂಬುದನ್ನು ಸಾರಿ, ಆತ್ಮವು ಎಲ್ಲಾ ಲೌಕಿಕ ವಿಷಯಗಳಿಗಿಂತ ಉನ್ನತವಾದುದೆಂದು ಬೋಧಿಸುತ್ತವೆ. ಭಗವದ್ಗೀತೆಯು ಆತ್ಮಸಾಕ್ಷಾತ್ಕಾರದ ಜತೆಗೆ, ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಗಳ ಸಮನ್ವಯವನ್ನು ದರ್ಶಿಸುತ್ತದೆ.

ಸನಾತನ ಧರ್ಮದ ಸರ್ವಗ್ರಂಥಗಳ ಸಾರವನ್ನು ನಾವು ಉಪನಿಷತ್ತುಗಳಲ್ಲಿ ಕಾಣಬಹುದು. ಭಗವದ್ಗೀತೆಯು ಉಪನಿಷತ್ತುಗಳ ಸಾರಸರ್ವಸ್ವವೆಂದು ಹೇಳಬಹುದು. ಇದರೊಂದಿಗೆ ಪ್ರಾರಂಭವಾಗುತ್ತಿರುವ ಲೇಖನಮಾಲೆಯಲ್ಲಿ ನಾವು ಭಗವದ್ಗೀತೆಯ ಸಾರವನ್ನು ತಿಳಿದುಕೊಳ್ಳೋಣ. ಭಗವದ್ಗೀತೆಯೆಂದರೆ ಸರ್ವರಿಗೂ ಮಂಗಳವನ್ನುಂಟುಮಾಡುವ ಭಗವಂತನು ಹಾಡಿರುವ ಗೀತೆ. ಈ ಮಾಲೆಯ ಮೊದಲ ಲೇಖನದಲ್ಲಿ ಭಗವದ್ಗೀತೆಯು ಏಕೆ ಅತ್ಯಂತ ಮಹತ್ವದ ಗ್ರಂಥವೆಂದು ಹೇಳಲು ಕಾರಣಗಳನ್ನು ತಿಳಿದುಕೊಳ್ಳೋಣ. ಇಡೀ ಮಾನವ ಜನಾಂಗಕ್ಕೆ ಈ ಗ್ರಂಥದ ಸಾರ್ವಕಾಲಿಕ ಔಚಿತ್ಯ ಹಾಗೂ ಇದು ಹೇಗೆ ನಮ್ಮ ಸಮಕಾಲೀನ ಪ್ರಪಂಚಕ್ಕೆ ಸಮಂಜಸವಾಗಿದೆಯೆಂಬುದನ್ನೂ ಅರಿಯೋಣ.

ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ›ಸಂಗ್ರಹೈಃ |

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾಃ ||

ಅಂದರೆ, ‘ಭಗವಂತನ ಸುಮಂಜುಳ ಧ್ವನಿಯಲ್ಲಿಯೇ ಹಾಡಲ್ಪಟ್ಟ ಗೀತೆಯನ್ನು ಅಧ್ಯಯನ ಮಾಡಿ, ಅದರ ತತ್ವಗಳನ್ನು ಜೀವನದಲ್ಲಿ ಆಚರಿಸುತ್ತಿರುವ ಮಾನವನಿಗೆ ಇತರ ಶಾಸ್ತ್ರ›ಗಳ ಅಧ್ಯಯನದ ಅಗತ್ಯವೇನು?’. ಭಗವದ್ಗೀತೆ, ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳನ್ನು ಸನಾತನ ಧರ್ಮದ ‘ಪ್ರಸ್ಥಾನತ್ರಯ’ಗಳೆಂದು ಹೇಳಲಾಗಿದೆ. ಈ ಪೈಕಿ ಭಗವದ್ಗೀತೆಯು ಅತ್ಯಂತ ಸಮಗ್ರ ಹಾಗೂ ಸಂಕ್ಷಿಪ್ತ ಹಾಗೂ ವ್ಯಾಪಕ ಗ್ರಂಥವಾಗಿದ್ದು, ಇದು ಸಾಮಾನ್ಯ ಜನರಿಗೂ ಹಾಗೂ ಆಧ್ಯಾತ್ಮಿಕ ಸಾಧಕರಿಗೂ ಪ್ರಸ್ತುತವಾಗಿದೆ. ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳ ಕರ್ತೃಗಳು ಮಾನವತ್ವದಿಂದ ದಿವ್ಯತ್ವಕ್ಕೇರಿದ ಋಷಿ-ಮುನಿಗಳು. ಆದರೆ ಭಗವದ್ಗೀತೆಯನ್ನು ಉದ್ಘೋಷಿಸಿದ ವ್ಯಕ್ತಿಯು ಭಗವಂತನೇ ಮಾನವರೂಪದಲ್ಲಿ ಮೈದಾಳಿದ ಭಗವಾನ್ ಶ್ರೀ ಕೃಷ್ಣ. ಇಂತಹ ಭಗವಂತನ ಅಧಿಕಾರವಾಣಿಯನ್ನು ಬೇರೆ ಯಾವುದೇ ಗ್ರಂಥದಲ್ಲಿ ಕಾಣಲು ಸಾಧ್ಯವಿಲ್ಲ.

ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧಕ್ಕೆ ಪ್ರತ್ಯಕ್ಷಸಾಕ್ಷಿಯಾಗಿದ್ದ ಮಹರ್ಷಿ ವೇದವ್ಯಾಸರು ಈ ಗ್ರಂಥವನ್ನು ಕಾವ್ಯರೂಪದಲ್ಲಿ ರಚಿಸಿದ್ದಾರೆ. ಇದರಲ್ಲಿ ಹದಿನೆಂಟು ಅಧ್ಯಾಯಗಳಿದ್ದು, ಒಟ್ಟು ಏಳುನೂರು ಶ್ಲೋಕಗಳಿವೆ. ಭಗವದ್ಗೀತೆಯನ್ನು ಒಂದು ಲಕ್ಷ ಶ್ಲೋಕಗಳನ್ನೊಳಗೊಂಡ ಜಗತ್ತಿನ ಬೃಹತ್ ಗ್ರಂಥವಾದ ಮಹಾಭಾರತದ ಆರನೆಯ ಅಧ್ಯಾಯ, ಭೀಷ್ಮಪರ್ವದಲ್ಲಿ ಕಾಣಬಹುದು. ಸನಾತನ ಧರ್ಮದ ಎಲ್ಲಾ ಗ್ರಂಥಗಳೂ ಆತ್ಮಸಾಕ್ಷಾತ್ಕಾರವು ಮಾನವಜೀವನದ ಪರಮೋದ್ದೇಶವೆಂಬುದನ್ನು ಸಾರಿ, ಆತ್ಮವು ಎಲ್ಲಾ ಲೌಕಿಕ ವಿಷಯಗಳಿಗಿಂತ ಉನ್ನತವಾದುದೆಂದು ಬೋಧಿಸುತ್ತವೆ. ಆದರೆ ಭಗವದ್ಗೀತೆಯು ಆತ್ಮಸಾಕ್ಷಾತ್ಕಾರದ ಕುರಿತಾಗಿ ಉಪದೇಶಿಸುವುದಲ್ಲದೇ, ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಗಳ ಸಮನ್ವಯ ಹಾಗೂ ಸಮತೋಲನಗಳನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಆತ್ಮಸಾಕ್ಷಾತ್ಕಾರದ ಹಲವು ಪಥಗಳಾದ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ರಾಜಯೋಗಗಳ ಆಚರಣೆಯ ರಹಸ್ಯವನ್ನು ಬಿತ್ತರಿಸುತ್ತದೆ. ಭಗವದ್ಗೀತೆಯನ್ನು ಸರ್ವಮಾನವ ಜೀವನ ಧರ್ಮದ ಕೈಪಿಡಿಯೆಂದು ಕರೆಯಬಹುದು. ಏಕೆಂದರೆ ಅದರ ಬೋಧನೆಗಳು ಸಾಮಾನ್ಯ ಜನರಿಂದ ಹಿಡಿದು ಆಧ್ಯಾತ್ಮಿಕ ಶೃಂಗಕ್ಕೇರಿದ ಋಷಿ-ಮುನಿಗಳಿಗೂ ಅನ್ವಯವಾಗುತ್ತವೆ; ಹಾಗೂ ಯಾವುದೇ ಒಂದು ದೇಶದ ಅಥವಾ ತತ್ವದ ಅನುಯಾಯಿಗಳಿಗೆ ಅದರ ಬೋಧನೆಗಳು ಸೀಮಿತವಾಗಿಲ್ಲ. ಇದರಿಂದಾಗಿ ಭಗವದ್ಗೀತೆಯು ಜಗತ್ತಿನ ಅತ್ಯಂತ ವ್ಯಾವಹಾರಿಕ ಆಧ್ಯಾತ್ಮಿಕ ಗ್ರಂಥ (The most practical spiritual text) ಎನಿಸಿಕೊಳ್ಳುತ್ತದೆ. ಆದ್ದರಿಂದಲೇ ನಾನಾ ದೇಶದ ಆಧ್ಯಾತ್ಮಿಕ ಪಿಪಾಸುಗಳು ಈ ಗ್ರಂಥವನ್ನು ಅಧ್ಯಯನ ಮಾಡಿ ಇದರ ಮಹತ್ವವನ್ನು ಹಾಡಿ ಹೊಗಳಿದ್ದಾರೆ. ಮಹಾನ್ ಅಧ್ಯಾತ್ಮವಾದಿಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಹೆನ್ರಿ ಡೇವಿಡ್ ಥೋರೊರಿಂದ ಹಿಡಿದು ಮಹಾನ್ ವಿಜ್ಞಾನಿಗಳಾದ ಆಲ್ಬರ್ಟ್ ಐನಸ್ಟೈನ್ ಮತ್ತು ರಾಬರ್ಟ್ ಓಪನ್​ಹೈಮರ್​ವರೆಗೆ ಭಗವದ್ಗೀತೆಯ ಪರಮ ಉಪಾಸಕರಾಗಿದ್ದಾರೆ. ಇಂದಿನ ಕೋವಿಡ್ ಸಾಂಕ್ರಾಮಿಕದಿಂದ ಉದ್ಭವವಾದ ಅನಿಶ್ಚಿತತೆ ಮತ್ತು ಭಯಗಳ ವಾತಾವರಣದಲ್ಲಿ ಜಗತ್ತಿನಾದ್ಯಂತ ಸಾವಿರಾರು ಜನರು ಭಗವದ್ಗೀತೆಯ ಬೋಧನೆಗಳಿಂದ ಜೀವನದಲ್ಲಿ ಭರವಸೆಯನ್ನು ಕಂಡುಕೊಂಡಿದ್ದಾರೆ. ಗೀತೆಯು ಮಾನವನ ಜೀವನವನ್ನು ಹೇಗೆ ನಡೆಸಬೇಕೆಂಬುದರ ಜೊತೆಗೆ ಮರಣವನ್ನೂ ಹೇಗೆ ಎದುರಿಸಬೇಕೆಂಬುದನ್ನು ತೋರಿಸಿಕೊಡುತ್ತದೆ. ಆದಿಶಂಕರರು ಉಪದೇಶಿಸಿರುವಂತೆ

ಭಗವದ್ಗೀತಾ ಕಿಂಚಿದಧೀತಾ ಗಂಗಾಜಲಲವ ಕಣಿಕಾಪೀತಾ |/ ಸಕೃದಪಿ ಯೇನ ಮುರಾರೀ ಸಮರ್ಚಾ ಕ್ರಿಯತೇ ತಸ್ಯ ಯಮೇನ ನ ಚರ್ಚಾ ||

‘ಯಾವ ಮಾನವನು ಭಗವದ್ಗೀತೆಯ ಕಿಂಚಿತ್ತನ್ನಾದರೂ ಅಧ್ಯಯನ ಮಾಡಿದ್ದಾನೆಯೋ, ಪವಿತ್ರ ಗಂಗಾಜಲದ ಒಂದು ಬಿಂದುವನ್ನಾದರೂ ಸವಿದಿದ್ದಾನೆಯೋ ಹಾಗೂ ಭಗವಂತನನ್ನು ಒಮ್ಮೆಯಾದರೂ ಸ್ಮರಿಸಿದ್ದಾನೆಯೋ, ಅವನು ಮೃತ್ಯುದೇವತೆಯಾದ ಯಮನೊಂದಿಗೆ ಯಾವ ಚರ್ಚೆಯನ್ನೂ ಮಾಡಬೇಕಾಗಿಲ್ಲ.’ ಆ ಮಾನವನು ಮೃತ್ಯುಭಯವನ್ನು ಸುಲಭವಾಗಿ ಜಯಿಸುತ್ತಾನೆಂಬುದು ಇದರ ಅರ್ಥ. ಮರಣವು ಯಾರಿಗೂ ತಪ್ಪಿದ್ದಲ್ಲ; ಎಲ್ಲರೂ ಒಂದಲ್ಲ ಒಂದು ದಿನ ದೇಹತ್ಯಾಗ ಮಾಡಲೇಬೇಕಾಗುತ್ತದೆ, ಭಗವಾನ್ ಶ್ರೀ ಕೃಷ್ಣನೂ ಇದಕ್ಕೆ ಹೊರತಲ್ಲ, ಆದರೆ ಭಗವದ್ಗೀತೆಯ ಬೋಧಕನಾದ ಕೃಷ್ಣನು ಮರಣವನ್ನು ಹೇಗೆ ಎದುರಿಸಿದನೆಂಬುದು ಸರ್ವರಿಗೂ ಆದರ್ಶಪ್ರಾಯ. ಮರಣಸಮಯದಲ್ಲಿಯೂ ಧೈರ್ಯ ಹಾಗೂ ಸಮತ್ವದಿಂದಿರಲು ಸಾಧ್ಯವಿದೆಯೆಂಬುದನ್ನು ಗೀತೆಯು ಉಪದೇಶಿಸುತ್ತದೆ; ಮಾನವನ ಮಹಾಭಯವಾದ ಮೃತ್ಯುಭಯವನ್ನು ಗೆಲ್ಲುವ ಮಾರ್ಗವನ್ನು ತೋರಿಸುತ್ತದೆ. ಮೃತ್ಯುಭಯ ಗೆದ್ದ ಮಾನವನು ಮಾತ್ರ ಜೀವನವನ್ನು ಪರಿಪೂರ್ಣವಾಗಿ ನಡೆಸಬಹುದು. ಮಾನವನು ಅವಿನಾಶಿಯಾಗಿರುವ ಆತ್ಮಸ್ವರೂಪನಾಗಿದ್ದು, ದೇಹವು ಕೇವಲ ಒಂದು ಉಪಕರಣವೆಂಬ ಅರಿವಿನೊಂದಿಗೆ ಜೀವನ ನಡೆಸಬೇಕೆಂದು ಗೀತೆಯು ಉಪದೇಶಿಸುತ್ತದೆ.

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಖಪರಾಣಿ | / ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||

‘ಮಾನವನು ಹೇಗೆ ಹರಿದು ಹೋದ ವಸ್ತ್ರವನ್ನು ತ್ಯಜಿಸಿ ಇನ್ನೊಂದು ನವವಸ್ತ್ರ›ವನ್ನು ಧರಿಸುತ್ತಾನೆಯೋ, ಹಾಗೆಯೇ ದೇಹಿಯಾದ ಆತ್ಮನು ಜೀರ್ಣವಾದ ದೇಹವನ್ನು ತ್ಯಜಿಸಿ ಹೊಸದೇಹವನ್ನು ಧರಿಸುತ್ತಾನೆ.’ ಕೇವಲ ಮೃತ್ಯುಭಯವಲ್ಲದೆ ಮಾನವ ಜೀವನದ ಸರ್ವಭಯಗಳನ್ನೂ ಭಗವದ್ಗೀತೆಯು ನಿವಾರಿಸುತ್ತದೆ. ‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ ಎಂಬುದು ಗೀತೆಯಲ್ಲಿ ಭಗವಂತನು ಸರ್ವಮಾನವಜನಾಂಗಕ್ಕೆ ನೀಡಿರುವ ಅಭಯವಚನ. ಧರ್ಮದ ಸ್ವಲ್ಪವನ್ನಾದರೂ ತಿಳಿದ ಮಾನವನು ಮಹತ್ತರ ಭಯಗಳನ್ನು ಜಯಿಸುತ್ತಾನೆ. ಜಗತ್ತಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸಬೇಕೆಂಬುದು ಭಗವದ್ಗೀತೆಯ ಮುಖ್ಯ ಬೋಧನೆ. ಭಗವದ್ವಿಶ್ವಾಸ-ಶರಣಾಗತಿಗಳು ಮಾನವನಿಗೆ ನಿರ್ಭಯತ್ವವನ್ನು ಪ್ರಸಾದಿಸುತ್ತವೆ.

ಭಗವದ್ಗೀತೆಯು ಪ್ರಶ್ನೋತ್ತರ ರೂಪದಲ್ಲಿರುವಂತೆ, ಉಪನಿಷತ್ತುಗಳೂ ಶಿಷ್ಯನು ಕೇಳಿದ ಪ್ರಶ್ನೆಗಳಿಗೆ ಗುರುವು ನೀಡಿದ ಉತ್ತರಗಳನ್ನು ಒಳಗೊಂಡಿರುತ್ತವೆ. ಆದರೆ, ಈ ಎರಡು ಗ್ರಂಥಗಳ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ಉಪನಿಷತ್ತುಗಳ ಉಪದೇಶದ ಸನ್ನಿವೇಶ-ವಾತಾವರಣವು ಸಮಾಜದ ಜನಜಂಗುಳಿ-ಜಂಜಾಟಗಳಿಂದ ದೂರವಾದ ಪ್ರಶಾಂತ ಗುರುಕುಲವಾಗಿದ್ದರೆ, ಭಗವದ್ಗೀತೆಯ ಸನ್ನಿವೇಶವು ಭಯಂಕರ ಯುದ್ಧಭೂಮಿ! ಎಂದರೆ ಲೌಕಿಕ ಜೀವನದ ಸಂಘರ್ಷದ ಮಧ್ಯದಲ್ಲಿದ್ದುಕೊಂಡು, ನಾವು ಹೇಗೆ ಆಧ್ಯಾತ್ಮಿಕ ತತ್ವಗಳನ್ನು ಆಚರಿಸಬಹುದೆಂಬುದನ್ನು ಗೀತೆಯು ತೋರಿಸಿಕೊಡುತ್ತದೆ. ಇದು ಹೇಗೆಂದರೆ, ಜಗತ್ತಿನ ಸುಪ್ರಸಿದ್ಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅನುಸರಿಸಲ್ಪಡುವ ‘ಪ್ರತ್ಯಕ್ಷ ಸನ್ನಿವೇಶಾಧಾರಿತ ಕಲಿಕೆ’ ಅಥವಾ ‘ವಿನ್ಯಾಸ ಆಧಾರಿತ ಕಲಿಕೆ (Design Based Learning) ಇದ್ದಂತೆ. ಭಗವಾನ್ ಕೃಷ್ಣನು ಐದು ಸಾವಿರ ವರ್ಷಗಳ ಹಿಂದೆಯೇ ಶಿಷ್ಯನಾದ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಇಂತಹ ಕಲಿಕೆಯ ಮೂಲಕ ಬೋಧಿಸುತ್ತಾನೆ! ಇದಕ್ಕೆ ಅನುಕೂಲವಾಗುವ ಸನ್ನಿವೇಶವನ್ನು ಸೃಷ್ಟಿಸಿದವನೂ ಶ್ರೀ ಕೃಷ್ಣನೇ. ಅರ್ಜುನನು ತನ್ನ ರಥವನ್ನು ಯುದ್ಧಭೂಮಿಯ ಎರಡು ಪಕ್ಷಗಳ ಮಧ್ಯೆ ನಿಲ್ಲಿಸಬೇಕೆಂದು ಸಾರಥಿಯಾದ ಕೃಷ್ಣನಿಗೆ ಹೇಳಿದಾಗ ಉದ್ದೇಶಪೂರ್ವಕವಾಗಿಯೇ ಅವನು ರಥವನ್ನು ಅರ್ಜುನನ ಗುರು ದ್ರೋಣಾಚಾರ್ಯ ಹಾಗೂ ಪಿತಾಮಹ ಭೀಷ್ಮನ ಮುಂದೆ ನಿಲ್ಲಿಸಿ, ಅವನ ಮನಸ್ಸಿನಲ್ಲಿ ಗೊಂದಲವುಂಟಾಗುವಂತೆ ಮಾಡುತ್ತಾನೆ. ಒಂದುವೇಳೆ ಕೃಷ್ಣನು ರಥವನ್ನು ದುರ್ಯೋಧನಾದಿ ಸೋದರಸಂಬಂಧಿಗಳ ಅಥವಾ ಕರ್ಣ-ಶಕುನಾದಿಗಳ ಮುಂದೆ ನಿಲ್ಲಿಸಿದ್ದರೆ ಅರ್ಜುನನ ಮನಸ್ಸಿನಲ್ಲಿ ಇಂತಹ ಗೊಂದಲವುಂಟಾಗುತ್ತಿರಲಿಲ್ಲ. ಆದ್ದರಿಂದ ಕೃಷ್ಣನು ಉದ್ದೇಶಪೂರ್ವಕವಾಗಿಯೇ ಭಗವದ್ಗೀತೆಯ ಆತ್ಮಜ್ಞಾನಬೋಧನೆಗೆ ಅಗತ್ಯವಾದ ಸನ್ನಿವೇಶವನ್ನು ಸೃಷ್ಟಿಸುತ್ತಾನೆ. ಇದರಿಂದ, ಪ್ರತ್ಯಕ್ಷ ಜೀವನ ಸಂಘರ್ಷದ ರಂಗದಲ್ಲಿಯೇ ನಾವು ಕಲಿಯಬೇಕಾದ ಪಾಠಗಳನ್ನು ಕೃಷ್ಣನು ಭಗವದ್ಗೀತೆಯ ರೂಪದಲ್ಲಿ ನಮಗೆ ಪ್ರಸಾದಿಸಿದ್ದಾನೆ. ಭಗವದ್ಗೀತೆಯ ಇನ್ನೊಂದು ಮುಖ್ಯ ವೈಶಿಷ್ಟ್ಯವೆಂದರೆ, ಅದರಲ್ಲಿರುವ ಗುರು-ಶಿಷ್ಯರ ನಡುವಿನ ವಿಶೇಷ ಸಂಬಂಧ. ಅರ್ಜುನನು ಕೃಷ್ಣನ ಬಾಲ್ಯಸ್ನೇಹಿತ ಹಾಗೂ ಸಂಬಂಧಿ. ಅವರದು ಭಾವ-ಮೈದುನರ ಸಂಬಂಧ. ಅರ್ಜುನನಾದರೋ ಕೃಷ್ಣನನ್ನು ತನ್ನ ತಂದೆ, ಸಖ, ಪ್ರಿಯ, ಗುರು ಹಾಗೂ ದೇವರೆಂದು ಭಾವಿಸಿ ಸಂಬೋಧಿಸುತ್ತಾನೆ.

ತಸ್ಮಾತ್ಪ›ಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ |

ಪಿತೇವ ಪುತ್ರಸ್ಯ ಸಖೇವ ಸಖ್ಯು: ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ||

‘ಹೇ ದೇವನೇ, ನಾನು ನಿನಗೆ ಉದ್ದಂಡ ಪ್ರಣಾಮವನ್ನು ಮಾಡುತ್ತಾ ಭಗವಂತನಾದ ನೀನು ನನ್ನಲ್ಲಿ ಪ್ರಸನ್ನನಾಗಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ತಂದೆಯು ಮಗನ ಅಪರಾಧವನ್ನು, ಸಖನು ಸಖನ ಅಪರಾಧವನ್ನು, ಪ್ರಿಯನು ಪ್ರಿಯೆಯ ಅಪರಾಧವನ್ನು ಕ್ಷಮಿಸುವಂತೆ ನೀನು ನನ್ನನ್ನು ಕ್ಷಮಿಸಬೇಕು.’

ಶ್ರೀ ಕೃಷ್ಣನು ಅತ್ಯುತ್ತಮ ಗುರುವೆಂಬುದರಲ್ಲಿ ಸಂದೇಹವಿಲ್ಲ. ಅಂತೆಯೇ ಅರ್ಜುನ ಅತ್ಯುತ್ತಮ ಶಿಷ್ಯನಾಗಿದ್ದನು. ಭಗವದ್ಗೀತೆಯ ಕೊನೆಯಲ್ಲಿ ಕೃಷ್ಣನು ಅರ್ಜುನನಿಗೆ, ‘ಯಥೇಚ್ಛಸಿ ತಥಾ ಕುರು’ (‘ನಿನ್ನ ಇಚ್ಛೆಯಿದ್ದಂತೆ ಮಾಡು’) ಎಂದು ಹೇಳಿದಾಗ, ವಿಧೇಯ ಶಿಷ್ಯನಾದ ಅರ್ಜುನನು, ‘ಕರಿಷ್ಯೇ ವಚನಂ ತವ’ (‘ನೀನು ಹೇಳಿದಂತೆಯೇ ಮಾಡುತ್ತೇನೆ’) ಎಂದು ಉತ್ತರಿಸುತ್ತಾನೆ. ಸಂಪೂರ್ಣ ಶರಣಾಗತಿಯು ಗುರು-ಶಿಷ್ಯ ಸಂಬಂಧದ ಸಾರವೆಂಬುದನ್ನು ಗೀತೆಯು ಬೋಧಿಸುತ್ತದೆ. ಪ್ರತಿಯೊಬ್ಬರಲ್ಲಿಯೂ ಕರ್ತವ್ಯನಿರತನಾದ ಅರ್ಜುನನಿರುವಂತೆಯೇ, ಅಂತರಂಗದಲ್ಲಿ ಕೃಷ್ಣನ ಸ್ವರೂಪವಾದ ದೈವಪ್ರಜ್ಞೆಯೂ ಇದೆ. ಆದ್ದರಿಂದ ಭಗವದ್ಗೀತೆಯ ಅಮೃತಮಯ ಬೋಧನೆಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ.

ಸವೋಪನಿಷದೋ ಗಾವೋ, ದೋಗ್ಧಾ ಗೋಪಾಲನಂದನಃ |

ಪಾಥೋ ವತ್ಸ: ಸುಧೀಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||

‘ಉಪನಿಷತ್ತುಗಳೇ ಹಸುಗಳು; ಹಸುಗಳಿಂದ ಹಾಲನ್ನು ಕರೆಯುವವನೇ ಗೋಪಾಲನಾದ ಕೃಷ್ಣ. ಅರ್ಜುನನೇ ಕರು. ಮಹತ್ತರ ಗೀತಾಮೃತವೇ ಹಾಲು. ಇದನ್ನು ಪಾನಮಾಡುವವರೇ ಪರಿಶುದ್ಧ ಬುದ್ಧಿಯುಳ್ಳ ಸಜ್ಜನರು.’

ಮಾನವ ಜೀವನವು ಮನುಷ್ಯ ಹಾಗೂ ಭಗವಂತನ ನಡುವಿನ ಸಹಭಾಗಿತ್ವದಲ್ಲಿ ನಡೆಯುವ ಪಾಲುದಾರಿಕೆ ಇದ್ದಂತೆ. ಮನುಷ್ಯನಿಗೆ ಭಗವಂತನ ಸಹಾಯವು ಅಗತ್ಯ ವಿರುವಂತೆಯೇ ಭಗವಂತನಿಗೂ ಜಗತ್ತಿನಲ್ಲಿ ಧರ್ಮಸ್ಥಾಪನೆ ಮಾಡಲು ಮಾನವನ ಸಹಾಯವು ಅಗತ್ಯವಿದೆ. ಮಾನವ ಜೀವನವು ಯಶಸ್ಸನ್ನು ಪಡೆಯಬೇಕಾದರೆ ಅಂತರ್ಯಾಮಿಯಾದ ಭಗವಂತನು ನಿರ್ದೇಶಿಸಿದಂತೆ ನಡೆದುಕೊಳ್ಳಬೇಕು.

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾಥೋ ಧನುರ್ಧರಃ |

ತತ್ರ ಶ್ರೀರ್ವಿಜಯೋ ಭೂತಿರ್ಧ್ರುವ ನೀತಿರ್ಮತಿರ್ಮಮ ||

‘ಎಲ್ಲಿ ಯೋಗೇಶ್ವರನಾದ ಶ್ರೀ ಕೃಷ್ಣನಿರುವನೋ, ಎಲ್ಲಿ ಧನುರ್ಧಾರಿಯಾದ ಅರ್ಜುನನಿರುವನೋ ಅಲ್ಲಿ ಶ್ರೇಯಸ್ಸು, ವಿಜಯ, ಐಶ್ವರ್ಯ ಹಾಗೂ ಶಾಶ್ವತ ಧರ್ಮಗಳು ನೆಲೆಸಿರುತ್ತವೆಂಬುದೇ ನನ್ನ ಅಭಿಮತ.

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

Share This Article

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…

ಪುರುಷರಲ್ಲಿ ಥೈರಾಯ್ಡ್​ ಮಟ್ಟ ಎಷ್ಟಿರಬೇಕು? ಹೆಚ್ಚು ಕಮ್ಮಿಯಾದ್ರೆ ಏನಾಗುತ್ತೆ? ಇಲ್ಲಿದೆ ಉಪಯುಕ್ತ ಮಾಹಿತಿ…Thyroid

Thyroid : ಮಾನವನ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಬಹಳ ಚಿಕ್ಕದಾಗಿದೆ. ಆದರೆ, ಅದರ ಕೆಲಸ ಮಾತ್ರ…