ಅತ್ತೆ – ಸೊಸೆ ಎಂಬುದು ಬಹು ಹಿಂದಿನ ಕಾಲದಿಂದ ವಿರುದ್ಧ ದಿಕ್ಕಿನಲ್ಲಿ ಸಾಗುವ ಪಾತ್ರಗಳಾಗಿಯೇ ಬಿಂಬಿತವಾಗಿವೆ. ಗರ್ಭದಲ್ಲಿ ಚಿಗುರೊಡೆದು ಹೆತ್ತು, ಬೆಳೆಸಿದ ಮಗನನ್ನು, ಇನ್ನೊಂದು ಮನೆಯಲ್ಲಿ ಹುಟ್ಟಿ ಬೆಳೆದು ಆಗ ತಾನೇ ಮನೆಗೆ ಬಂದವಳು ತನ್ನನ್ನು ತನ್ನ ಮಗನಿಂದ ದೂರ ಮಾಡುವಳೆಂದು ಯೋಚಿಸುವ ಅತ್ತೆ ಒಂದೆಡೆಯಾದರೆ. ಎಲ್ಲೋ ಹುಟ್ಟಿ ಬೆಳೆದು ಇನ್ಯಾವುದೋ ಮನೆ ಸೇರಿದ ತನ್ನನ್ನು ಮನೆಯವಳನ್ನಾಗಿ ಪರಿಗಣಿಸದೆ, ಅತ್ತೆಯೆಂದರೆ ಪತಿಯಿಂದ ತನ್ನನ್ನು ಪ್ರತ್ಯೇಕಿಸುವವರೆಂದೇ ಅಂದುಕೊಳ್ಳುತ್ತಾಳೆ ಸೊಸೆ. ಇದ್ಯಾಕೆ ಹೀಗೆ? ಅತ್ತೆ ಮಾಡುವುದೆಲ್ಲಾ ಸರಿಯಾ ಅಥವಾ ಸೊಸೆ ಮಾಡುವುದೆಲ್ಲಾ ತಪ್ಪಾ?
| ಸುಪ್ರೀತಾ ವೆಂಕಟ್ ಬೆಂಗಳೂರು
ಮದುವೆ ಗಂಡು ಹೆಣ್ಣು ಇಬ್ಬರ ದೃಷ್ಟಿಯಲ್ಲಿ ವಿಭಿನ್ನವಾಗಿರಬಹುದು. ಗಂಡಿನ ದೃಷ್ಟಿಯಲ್ಲಿ ಬಹುಶಃ ಮೊದಲು ಕಣ್ಣ ಮುಂದೆ ಬರುವುದು ಹೆಣ್ಣು ಮತ್ತೆಲ್ಲೋ ಕಡಿಮೆ ಅಂಶದಲ್ಲಿ ಅವಳ ಹೆತ್ತವರ ಪರಿಗಣನೆ ಇರಬಹುದೇನೋ. ಆದರೆ ಹೆಣ್ಣಿಗೆ ಮದುವೆ ಅಂದಾಕ್ಷಣ ವರನ ನೆನಪಾದರೂ ಮತ್ತೊಂದು ಜೀವಿ ಕಾಡುವುದು ಅತ್ತೆ ಎಂಬ ಪಾತ್ರಧಾರಿ. ಗಂಡನಷ್ಟೇ ಅತ್ತೆಯ ಬಗೆಗೂ ಯೋಚಿಸುವಳು ಎಂದರೆ ತಪ್ಪಾಗಲಾರದು. ಮದುವೆಯಾಗುವ ಮೊದಲು ವರನನ್ನು ಅಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳಲು ಹವಣಿಸುವ ಅವಳಿಗೆ, ಅತ್ತೆಯೊಂದಿಗೆ ಹೇಗೆ ಅರ್ಥಮಾಡಿಕೊಂಡು, ಹೊಂದಿಕೊಂಡು ಹೋಗುವುದೆಂದು ಆಲೋಚನೆಯೇ ತಲೆ ಕೆಡಿಸುತ್ತದೆ. ಆ ಕಡೆ ಅತ್ತೆಯ ಪರಿಸ್ಥಿತಿಯೂ ಬೇರೆಯೇನಿರುವುದಿಲ್ಲ. ಅವರೂ ತಮ್ಮ ಭಾವೀ ಸೊಸೆಯ ಬಗೆಗೆ ಯೋಚಿಸುತ್ತಿರುತ್ತಾರೆ.
ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳನ್ನು ಹೆಣೆದು ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ..ಸುಮನಾ – ಸುರಕ್ಷಾ ಆತ್ಮೀಯ ಗೆಳತಿಯರು. ಬಾಲ್ಯದಿಂದ ಒಡನೆಯೇ ಆಡಿ ಬೆಳೆದವರು. ಅಂದು ಒಟ್ಟಿಗೇ ಹತ್ತಿರವಿದ್ದವರು ಇಂದು ಇಬ್ಬರೂ ಮದುವೆಯಾಗಿ ಒಂದೊಂದು ದಿಕ್ಕು. ಒಂದು ದಿನ ಈ ಗೆಳತಿಯರು ಭೇಟಿಯಾಗಲು ಬಯಸಿದರು. ಬಹುದಿನಗಳ ಕಾಲದ ಭೇಟಿ ನೀಡಿತ್ತು ಸಂತಸ. ಗತಕಾಲದ ನೆನಪು ಮೆಲುಕು ಹಾಕುತ್ತಾ, ವರ್ತಮಾನದವರೆಗೆ ಬಂದು ನಿಂತಿತ್ತು. ಇಬ್ಬರಿಗೂ ಅವರವರ ವೈವಾಹಿಕ ಜೀವನದ ಏಳು ಬೀಳು ಹೇಳುವಾಸೆ. ಸರದಿಯಂತೆ ಹೇಳಿದ ಕಷ್ಟ ಸುಖಗಳ ಸರಮಾಲೆ ಇಂತಿವೆ..
ಸುಮನಾ ಪದವಿ ನಂತರ ಕೆಲಸಕ್ಕೆ ಸೇರಬಯಸಿದ್ದಳು, ಅವಳ ಹೆತ್ತವರ ಬೆಂಬಲವೂ ಇತ್ತು. ಅಲ್ಪಕಾಲದ ನಂತರ ಮನೆಯಲ್ಲಿ ಅವಳಿಗೆ ಮದುವೆ ಮಾಡಲು ಹುಡುಗನನ್ನು ಹುಡುಕತೊಡಗಿದರು. ಅನುರೂಪದ ವರ ದೊರೆತು ವೈವಾಹಿಕ ಜೀವನಕ್ಕೆ ಕಾಲಿಟ್ಟಳು. ಮದುವೆ ನಂತರವೂ ಕೆಲಸಕ್ಕೆ ಹೋಗುತ್ತಿದ್ದಳು. ಒಂದು ದಿನ ಅವಳು ಕೆಲಸ ಮುಗಿಸಿ ಮನೆಗೆ ಬಂದಾಗ ಅವಳಿಗಾಗಿ ಕಾದು ಕುಳಿತಿದ್ದ ಅವಳತ್ತೆ, ಅವಳಿಗೆ ಕೆಲಸ ಬಿಡುವಂತೆ ಹೇಳಿದರು. ಇದನ್ನು ಊಹಿಸಿರದ ಸುಮನಾಗೆ ದೊಡ್ಡ ಆಘಾತವಾಯಿತು. ಮನೆ ಕೆಲಸ ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತಿದ್ದ ಅವಳಿಗೆ ಕೆಲಸ ಯಾಕೆ ಬಿಡಬೇಕೆಂದು ಕೇಳಿದಾಗ, ಅವರಿಂದ ಸರಿಯಾದ ಉತ್ತರ ಬರಲಿಲ್ಲ. ಮುಂದಿನ ದಿನಗಳಲ್ಲಿ ಅವಳ ಗಂಡ ಕೂಡ ಅವಳಿಗೆ ಕೆಲಸ ಬಿಟ್ಟು ಮನೆಯಲ್ಲಿರುವಂತೆ ಸೂಚಿಸಿದ. ತನ್ನ ಗಂಡನ ಕಿವಿಚುಚ್ಚಿದ ಅವಳತ್ತೆಯ ಬಗೆಗೆ ಆಕ್ರೋಶ, ಕಾರಣವಿಲ್ಲದೆ ಕೆಲಸ ಬಿಡುವಂತೆ ಹೇಳಿದ ಪತಿಯ ಮೇಲೆ ಸಿಟ್ಟು, ಇರಬೇಕಾದ ಮನೆಯಲ್ಲಿ ತಾನು ಕೆಲಸಕ್ಕೆ ಹೋಗಲು ಯಾರಿಂದಲೂ ಬೆಂಬಲವಿಲ್ಲದೆ ತನ್ನ ಬಗೆಗೇ ಅನುಕಂಪದ ಸ್ಥಿತಿ. ಹೆತ್ತವರ ಸಹಾಯವಿದ್ದರೂ, ಪತಿ ಹಾಗೂ ಅತ್ತೆಯಿಂದಾಗಿ ಕೆಲಸ ಬಿಟ್ಟಳು ಸುಮನಾ. ಆಧಾರವಾಗಬೇಕಾಗಿದ್ದ ಪತಿ ಮೇಲೆ ಬೇಸರವಾಗಿ, ವೈವಾಹಿಕ ಜೀವನವೆಂದರೆ ಇಷ್ಟೇನಾ ಅನಿಸತೊಡಗಿತು.
ಸುರಕ್ಷಾ ತನ್ನಿಚ್ಛೆಯಂತೆ ಪ್ರೀತಿಸಿದ್ದ ಹುಡುಗನನ್ನು ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದಳು. ಮದುವೆಯಾದ ಕೆಲ ತಿಂಗಳು ಎಲ್ಲವೂ ಸುಸೂತ್ರವಾಗಿತ್ತು. ಅತ್ತೆ-ಸೊಸೆ ಚೆನ್ನಾಗಿಯೇ ಹೊಂದಿಕೊಂಡಿದ್ದರು. ನಂತರ ಅತ್ತೆ ಸುಮ್ಮಸುಮ್ಮನೆ ಅವಳ ಮೇಲೆ ಕೋಪಿಸತೊಡಗಿದರು. ಅವಳು ತನ್ನ ಮಗನ ತಲೆಕೆಡಿಸಿ ಮದುವೆಯಾಗಿದ್ದಾಗಿಯೂ, ಇಲ್ಲವಾದಲ್ಲಿ ಅವರು ಅಂತಸ್ತಿಗೆ ತಕ್ಕ ಸೊಸೆ ತರುತ್ತಿದ್ದರಾಗಿಯೂ, ಎಂಬೆಲ್ಲ ಆರೋಪ ಮಾಡತೊಡಗಿದರು. ಮಗ ಮನೆಯಲ್ಲಿದ್ದಾಗ ಸೊಸೆಯನ್ನು ಪ್ರೀತಿಯಿಂದ ಮಾತನಾಡಿಸುವ ಅತ್ತೆ, ಮಗ ಇಲ್ಲದಾಗ ಸೊಸೆ ಮೇಲೆ ತಮ್ಮ ದುರಾಸೆಯನ್ನು ಹತ್ತಿಕ್ಕಲಾರದೆ ಅವಳನ್ನು ದೂಷಿಸತೊಡಗಿದರು. ಸುರಕ್ಷಾಳಿಗೆ ಮನೆಯೂ ಮನವೂ ಅಶಾಂತಿಯ ಗೂಡಾಯಿತು.
ಇಲ್ಲಿ ಎರಡು ವಿಭಿನ್ನ ಚಿತ್ರಣಗಳನ್ನು ಕಂಡಿರಿ. ಒಬ್ಬಳಿಗೆ ಪತಿ ಮತ್ತು ಅತ್ತೆಯ ಸಹಕಾರವಿಲ್ಲ, ಇನ್ನೊಬ್ಬಳಿಗೆ ಅತ್ತೆಯ ಅಸಹಕಾರ. ಇವೆಲ್ಲವೂ ಸತ್ಯ, ನಮ್ಮ ಸುತ್ತಮುತ್ತ ಇಂತಹ ಹಲವಾರು ನಿದರ್ಶನ ಕಾಣಸಿಗುತ್ತವೆ. ಯಾವುದೇ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಿಲ್ಲ, ಇಂತಹವುಗಳು ಸರ್ವೆಸಾಮಾನ್ಯದಂತೆ ನಡೆಯುತ್ತವೆ. ಅತ್ತೆ ಸೊಸೆ ಅಮ್ಮ ಮಗಳಾಗಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ. ಇದಕ್ಕೆ ಬೇಕಿರುವುದು ಮನಸ್ಸು ಮತ್ತು ಸಮಯ. ಇಬ್ಬರಿಗೂ ಮನಸ್ಸಿರಬೇಕು ಮತ್ತು ಸಮಯ ನೀಡಬೇಕು.
ಅತ್ತೆ ಅಮ್ಮನಾಗಲು ಏನು ಮಾಡಬಹುದು?
- ಸೊಸೆ ತಮ್ಮನ್ನು ಮಗನಿಂದ ದೂರ ಮಾಡುವವಳೆಂಬ ಯೋಚನೆ ದೂರವಿರಿಸಿದರೆ ಒಳ್ಳೆಯದು.
- ಸೊಸೆಗೆ ಸಮಯ ನೀಡಿ.
- ಸೊಸೆ ಮಾಡಿದ್ದೆಲ್ಲವೂ ತಪ್ಪೆನ್ನುವ ಮನೋಭಾವ ಇರಬಾರದು.
- ಮಗ ಸೊಸೆ ಜೊತೆಯಾಗಿ ಕಾಲ ಕಳೆಯಲು ಪ್ರೖೆವಸಿ ನೀಡಿ.
- ಸೊಸೆ ಕೆಲಸದಲ್ಲಿರಲಿ ಅಥವಾ ಇಲ್ಲದೇ ಇರಲಿ, ಅವಳಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡಿ.
- ಅಂದಿನ ಕಾಲ ಅಂದಿಗೆ, ಇಂದು ಕಾಲ ಬದಲಾಗಿದೆ. ಅತ್ತೆಯಾಗಿ ವಿಶಾಲವಾಗಿ ಆಲೋಚಿಸಿದರೆ ಮನೆಯೆಲ್ಲಾ ಸ್ವಸ್ಥವಾಗಿರುವುದು.
ಸೊಸೆ ಮಗಳಂತಿರಲು ಹೇಗಿದ್ದರೆ ಚೆನ್ನ?
- ಅತ್ತೆಯನ್ನು ಅರ್ಥ ಮಾಡಿಕೊಳ್ಳಿ, ಅವರದ್ದು ತಪ್ಪಿದ್ದರೆ ತಿಳಿಸಿ. ಅವರೂ ತಿದ್ದಿಕೊಳ್ಳಲು ಅವಕಾಶ ನೀಡಿ.
- ಮನೆ ಕೆಲಸಗಳಲ್ಲಿ ಸಹಾಯ ಹಸ್ತ ಚಾಚಿ.
- ಹಿರಿಯರು ಬುದ್ಧಿವಾದ ಹೇಳುವುದು ಸಾಮಾನ್ಯ, ಎಲ್ಲವೂ ತಪ್ಪಲ್ಲ. ಬೇಕಾಗಿರುವ ಅಂಶಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಿ.
- ಹೊಸ ಮನೆ ಸೇರಿದ ಹೊಸತರಲ್ಲಿ, ಆ ಮನೆಯವರಲ್ಲಿ ಆತ್ಮೀಯತೆ ಇರುವುದು ಸಾಮಾನ್ಯ. ಅವರೆಲ್ಲ ತನ್ನನ್ನು ಮಾತನಾಡಿಸುತ್ತಿಲ್ಲವೆಂಬ ಕೊರಗು ಬೇಡ. ನೀವೇ ಮುಂದೆ ಹೋಗಿ ಮಾತುಕತೆಗಳಲ್ಲಿ ಭಾಗವಹಿಸಿ.
- ಅತ್ತೆಗೂ ಸಮಯ ನೀಡಿ.
ಪತಿಯಾಗಿ – ಮಗನಾಗಿ ಕರ್ತವ್ಯವೇನು?
- ತುತ್ತಾ ಮುತ್ತಾ ಸಂದರ್ಭ ಎದುರಾದಾಗ, ಅಧಿಕವಾಗಿ ಹೈರಾಣಾಗುವುದು ಬೇಡ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಅತ್ಯಗತ್ಯ.
- ಮದುವೆ ನಂತರ ಹೆತ್ತವಳ ನಿರ್ಲಕ್ಷ್ಯ ಬೇಡ. ಹಾಗೆಯೇ ಬಹುಮುಖ್ಯವಾಗಿ ಜೊತೆಯಾದವಳನ್ನೂ ನಿರ್ಲಕ್ಷಿಸಬಾರದು.
- ಪತ್ನಿ ಹೊರಗಿನ ಕೆಲಸದಲ್ಲಿರಲಿ ಅಥವಾ ಗೃಹಿಣಿಯಾಗಿರಲಿ, ಪತಿಯಾಗಿ ಅವಳಿಗೆ ಕೆಲಸಗಳಲ್ಲಿ ಸಹಕಾರ ನೀಡಿ.
- ಮನೆಯವರ ಎದುರಿಗೆ ಪತ್ನಿಯನ್ನು ಹೀಯಾಳಿಸದಿರಿ.
- ಪತ್ನಿಯೂ ಮುಂದೆ ನಿಮ್ಮ ಮಗುವಿಗೆ ಅಮ್ಮನಾಗುವವಳು. ಹೀಗಾಗಿ ಅಮ್ಮನನ್ನು ಹೇಗೆ ಕಾಣುವಿರೋ ಅದೇ ರೀತಿ ಪತ್ನಿಯನ್ನೂ ಗೌರವಿಸಿ.
- ಎಲ್ಲವನ್ನು ಎಲ್ಲರೂ ಪಾಲಿಸಲು ಸಾಧ್ಯವಿಲ್ಲ. ಆದರೆ ಇವುಗಳಲ್ಲಿ ಬಹುಪಾಲು ಅಳವಡಿಸಿಕೊಂಡರೆ, ಅತ್ತೆ ಸೊಸೆ ಸಂಬಂಧದಲ್ಲಿ ಗೆದ್ದಂತೆಯೆ ಲೆಕ್ಕ
- ಶಾಂತಿಯುತವಾದ ಮನೆಗೆ ಮಾನಸಿಕ ನೆಮ್ಮದಿ ಅಗತ್ಯ. ಅತ್ತೆ-ಸೊಸೆ ಕೂಡಿ ಬಾಳಿದರೆ ಮನೆ ಮನವು ಆರೋಗ್ಯಪೂರ್ಣವಾಗಿರುವುದು