ಬೆಂಗಳೂರು: ಎಳೆಯ ತೆಂಗಿನ ಗರಿ ಹಾಗೂ ಬಾಳೆ ಎಲೆಗಳಿಂದ ಮೂಡಿದ ಸಂಸತ್ ಭವನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಕೃತಿ, ತುಳಸಿ ಕಟ್ಟೆ, ಶಿವಲಿಂಗ, ಹೂದಾನಿ, ಹೂವುಗಳು, ಪ್ರಾಣಿಪಕ್ಷಿಗಳ ವಿವಿಧ ಆಕೃತಿಗಳ ಜಾನೂರು ಕಲೆ ಹಾಗೂ ಥಾಯ್ ಆರ್ಟ್ ಲಾಲ್‌ಬಾಗ್‌ನ ಮಾಹಿತಿ ಕೇಂದ್ರದಲ್ಲಿ ಅನಾವರಣಗೊಂಡಿವೆ.
216ನೇ ಲಪುಷ್ಪ ಪ್ರದರ್ಶನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಪೂರಕ ಕಲೆಗಳ ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಮಕ್ಕಳಿಂದ ಈ ಅದ್ಭುತ ಕಲೆ ರೂಪುಗೊಂಡಿದ್ದು, ನೋಡುಗರ ಗಮನ ಸೆಳೆಯುತ್ತಿವೆ.
ಒಂದೆಡೆ ಗಾಜಿನಮನೆಯ ಒಳಗೆ ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ – ಸಾಧನೆ – ಹೋರಾಟಗಳ ದರ್ಶನವಾಗುತ್ತಿದ್ದರೆ, ಮತ್ತೊಂದೆಡೆ ಪೂರಕ ಕಲೆಗಳಾದ ಡಚ್ ಹೂವು ಹಾಗೂ ಒಣ ಹೂವುಗಳ ಅಕರ್ಷಕ ಜೋಡಣೆ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಪ್ರದರ್ಶನ ಗಮನ ಸೆಳೆಯುತ್ತಿವೆ. ಈ ಪೂರಕ ಕಲೆಗಳ ಪ್ರದರ್ಶನಕ್ಕೆ ನಟಿ ಸುಧಾರಾಣಿ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪ್ರಾಕೃತಿಕ ವಸ್ತುಗಳನ್ನು ಬಳಸಿ ಮಾಡಿರುವ ಈ ವೈವಧ್ಯಮಯ ಪ್ರತಿಕೃತಿಗಳು ಅದ್ಭುತವಾದ ಕಲೆಯಾಗಿ ಮೂಡಿಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಗಾಜಿಮನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಾದ ಲಪುಷ್ಪ ಪ್ರದರ್ಶನ ವೀಕ್ಷಿಸಿ, ಇದು ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರ ಜೀವನ ಸಾಧನೆಗಳನ್ನು ತಿಳಿಯಲು ಉತ್ತಮ ವೇದಿಕೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಾಹಿತಿ ಡಾ. ದು. ಸರಸ್ವತಿ ಮಾತನಾಡಿ, ಭಾರತ ಸೇರಿ ವಿಶ್ವದ ನಾನಾ ಭಾಗಗಳಲ್ಲಿನ ಹೂಗಿಡಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಪ್ರತಿ ವರ್ಷ ನಡೆಸುವ ಈ ಲಪುಷ್ಪ ಪ್ರದರ್ಶನ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾರಾಂತ್ಯಕ್ಕೆ ಜನಸಾಗರ: ಪ್ರದರ್ಶನದ ಮೂರನೇ ದಿನವಾದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಕರು ಲಾಲ್‌ಬಾಗ್‌ಗೆ ಭೇಟಿ ನೀಡಿದರು. ವಾರಾಂತ್ಯವಾದ್ದರಿಂದ ಐಟಿ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಲಾಲ್ ಬಾಗ್ ಕಿಕ್ಕಿರಿದಿತ್ತು. ಗಾಜಿನ ಮನೆ ಒಳಗೆ ಹಾಗೂ ಹೊರಗೆ ನಿರ್ಮಿಸಿರುವ ಆಕರ್ಷಕ ಹೂಗಳ ಪ್ರತಿಕೃತಿ ವೀಕ್ಷಿಸಿದರು. ವಿವಿಧ ಹೂಗಳ ಕಲಾಕೃತಿಗಳನ್ನು ಹಾಗೂ ಪೂರಕ ಕಲೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡರು. ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಭಾನುವಾರವೂ ರಜಾ ದಿನ ಆಗಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಕರು ಆಗಮಿಸುವ ನಿರೀಕ್ಷೆಯಿದ್ದು, ಭದ್ರತೆ ಸೇರಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಕುಸುಮಾ ತಿಳಿಸಿದ್ದಾರೆ.
21.50 ಲಕ್ಷ ಸಂಗ್ರಹ: ಪುಷ್ಫ ಪ್ರದರ್ಶನದ ಮೂರನೇ ದಿನವಾದ ಶನಿವಾರ ವಾರಾಂತ್ಯವಾಗಿದ್ದರಿಂದ 50 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು, 21.50 ಲಕ್ಷ ಹಣ ಸಂಗ್ರಹವಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ತಿಳಿಸಿದರು..