ಪ್ಯಾರಿಸ್: ಪದಾರ್ಪಣೆಯ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕಕ್ಕೆ ಕೊರಳೊಡ್ಡುವ ಭಾರತದ ಯುವ ತಾರೆ ಲಕ್ಷ್ಯಸೇನ್ ಕನಸು ಭಗ್ನಗೊಂಡಿದೆ. ಇದರೊಂದಿಗೆ 2012ರಿಂದ ಸತತ ಮೂರು ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಜಯಿಸಿದ್ದ ಭಾರತ, 12 ವರ್ಷದ ಬಳಿಕ ಪ್ಯಾರಿಸ್‌ನಿಂದ ಬರಿಗೈನಲ್ಲಿ ಮರಳಲಿದೆ. ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎಂಬ ಐತಿಹಾಸಿಕ ಸಾಧನೆಯ ಅವಕಾಶದಿಂದಲೂ ಲಕ್ಷ್ಯ ವಂಚಿತರಾದರು.
ಸೆಮಿಫೈನಲ್‌ನಲ್ಲಿ ನಿರಾಸೆ ಕಂಡ ಬಳಿಕ ಸೋಮವಾರ ನಡೆದ ಕಂಚಿನ ಪದಕದ ಪ್ಲೇಆ್ನಲ್ಲಿ 22 ವರ್ಷದ ಲಕ್ಷ್ಯಸೇನ್ 21-13, 16-21, 11-21ರಿಂ 3 ಗೇಮ್‌ಗಳ ಹೋರಾಟದಲಿ ಮಲೇಷ್ಯಾ ಲೀ ಝೀ ಜಿಯಾ ಎದುರು ಮುಗ್ಗರಿಸಿದರು. ಇದರೊಂದಿಗೆ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಅಭಿಯಾನವೂ ಅಂತ್ಯ ಕಂಡಿದೆ. 1 ಗಂಟೆ 11 ನಿಮಿಷ ನಡೆದ ಕಾದಾಟದ ಮೊದಲ ಗೇಮ್‌ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿದ ಲಕ್ಷ್ಯಸೇನ್ ಆರಂಭಿಕ ಮುನ್ನಡೆ ಸಾಧಿಸಿದರು. ನಂತರ ಎರಡನೇ ಗೇಮ್‌ನಲ್ಲಿಯೂ 8-3 ರಿಂದ ಮುನ್ನಡೆಯಲ್ಲಿದ್ದ ಲಕ್ಷ್ಯಸೇನ್ 8-12 ಹಿನ್ನಡೆ ಕಂಡರು. ವಿಶ್ವ ನಂ.7 ಲೀ ಝೀ ಜಿಯಾಗೆ ಪ್ರಬಲ ಪೈಪೋಟಿ ನೀಡಿದ ಲಕ್ಷ್ಯಸೇನ್ ಮತ್ತೆ ಪುಟಿದೆದ್ದು 12-12ರಿಂದ ಸಮಬಲ ಸಾಧಿಸಿದರು. ಆದರೆ ಲೀ ಝೀ ಜಿಯಾ ಅನುಭವಯುತ ಆಟದ ಎದುರು ಲಕ್ಷ್ಯಸೇನ್ ಮಂಕಾದರು. ಜತೆಗೆ ಮೊಣಕೈ ಗಾಯದ ಸಮಸ್ಯೆ ಅವರಿಗೆ ಹಿನ್ನಡೆ ಎನಿಸಿತು.
ಎರಡನೇ ಗೇಮ್‌ನಲ್ಲಿ ಕಂಬ್ಯಾಕ್ ಮಾಡಿದ ಲೀ ಝೀ ಜಿಯಾ ಪಂದ್ಯವನ್ನು ನಿರ್ಣಾಯಕ ಮೂರನೇ ಗೇಮ್‌ಗೆ ವಿಸ್ತರಿಸಿದರು. ಮೂರನೇ ಗೇಮ್‌ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಲೀ ಝೀ ಜಿಯಾ ನಿಖರವಾದ ಸ್ಯ್ಮಾಷ್‌ಗಳಿಂದ ಲಕ್ಷ್ಯಸೇನ್ ಅವರನ್ನು ಕಂಗೆಡಿಸಿದರು. 2021ರ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಲಕ್ಷ್ಯಸೇನ್, ಶ್ರೇಯಾಂಕ ರಹಿತ ಆಟಗಾರನಾಗಿ ಕಣಕ್ಕಿಳಿದು ಲೀಗ್‌ನಲ್ಲಿ ಉನ್ನತ ಶ್ರೇಯಾಂಕಿತರಿಗೆ ಆಘಾತ ನೀಡಿ ಗಮನಸೆಳೆದಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು (2016 ಬೆಳ್ಳಿ, 2020 ಕಂಚು), ಸೈನಾ ನೆಹ್ವಾಲ್ (2012 ಕಂಚು) ಕಳೆದ 3 ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು.
ಎರಡನೇ ಗೇಮ್‌ನಲ್ಲಿ ಪಂದ್ಯ ಜಯಿಸುವ ಉತ್ತಮ ಅವಕಾಶವಿತ್ತು. ನಾನು ಇನ್ನೂ ಉತ್ತಮ ಆಟವಾಡಬಹುದಿತ್ತು. ಆದರೆ ಲೀ ಝೀ ಜಿಯಾ ನಿಜವಾಗಿಯೂ ಉತ್ತಮ ಆಟವಾಡಿದರು. ಈ ಪಂದ್ಯಕ್ಕೂ ಉತ್ತಮ ತಯಾರಿ ನಡೆಸಿದ್ದೆ. ಒಟ್ಟಾರೆ ಇದು ಕಠಿಣ ವಾರ. ಈ ಪಂದ್ಯದಲ್ಲಿ ನಾನು ಶೇ.100ರಷ್ಟು ನೀಡಲು ಸಿದ್ಧನಾಗಿದ್ದೆ.
| ಲಕ್ಷ್ಯ ಸೇನ್