2012 ಡಿಸೆಂಬರ್ 27. ಹೊಸ ಧಾರಾವಾಹಿಯ ಮೊದಲ ದಿನದ ಚಿತ್ರೀಕರಣಕ್ಕೆ ಹೊರಟೆ. ಧಾರಾವಾಹಿಯ ಕಥೆ, ಅದರ ಓಘ, ಪಾತ್ರಗಳ ವ್ಯಕ್ತಿತ್ವ, ಒಟ್ಟಿನಲ್ಲಿ ಇಡೀ ಧಾರಾವಾಹಿಯ ಜವಾಬ್ದಾರಿ ನಿರ್ಮಾಣ ಸಂಸ್ಥೆಗಳ ಕೈಯಿಂದ ವಾಹಿನಿಗಳ ಕೈಗೆ ಜಾರುತ್ತಿದ್ದ ಸಂಕ್ರಮಣ ಕಾಲದ ಮೊದಲ ಧಾರಾವಾಹಿ ಅದು. ಹೆಸರು ‘ಲಕ್ಷ್ಮೀ ಬಾರಮ್ಮ’.
ಆ ದಿನ ಚಿತ್ರೀಕರಣ ಮುಗಿಸಿ ಬಂದ ಮೇಲೆ ಚಿತ್ರೀಕರಣ ಯಾವುದೋ ಕಾರಣಕ್ಕಾಗಿ ನಿಲ್ಲಿಸಲಾಯಿತು. ಎಲ್ಲರಿಗೂ ಆತಂಕ. ಮತ್ತೆ ಹತ್ತು ಹದಿನೈದು ದಿನಗಳ ನಂತರ ಬೇರೆ ಲೊಕೇಷನ್ನಿನಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭವಾಯಿತು. ಮತ್ತೆರಡು ದಿನ ಚಿತ್ರೀಕರಣ. ಮತ್ತೆ ಸ್ಥಗಿತ. ನಟ ನಟಿಯರೆಲ್ಲಾ ನಿರಾಶರಾದರು. ‘ಆರಂಭವಾಗಿ ಮೇಲೇಳದೆ ಮಲಗಿಬಿಡುವ ಎಷ್ಟೋ ಧಾರಾವಾಹಿಗಳಲ್ಲಿ ಇದೂ ಒಂದು’ ಎಂದು ಯೋಚಿಸುವ ಹೊತ್ತಿಗೆ ಮತ್ತೆ ಕರೆ ಬಂತು! ಈ ಬಾರಿ ಕಥೆಯ ಮೂಲ ಪಾತ್ರಗಳ ಪಟ್ಟಿಯಲ್ಲಿ ಇನ್ನೆರಡು ಹೊಸ ಪಾತ್ರಗಳು ಸೇರಿದ್ದವು. ರಂಜಿತ್ ಮತ್ತು ಶ್ವೇತಾ ಎಂಬ ಪಾತ್ರಗಳು. ಮತ್ತೆ ಚಿತ್ರೀಕರಣ ಆರಂಭವಾಯಿತು. ಇಷ್ಟರ ಮಧ್ಯೆ ಮುಖ್ಯ ಪಾತ್ರ ಲಚ್ಚಿಗೆ ಯಾರೂ ಪಾತ್ರಧಾರಿ ಸಿಕ್ಕಿರಲಿಲ್ಲ. ನಮ್ಮ ಚಿತ್ರೀಕರಣದ ನಡುವೆಯೇ ಮುಖ್ಯ ಪಾತ್ರಧಾರಿಯ ಸ್ಕ್ರೀನ್ ಟೆಸ್ಟ್ಗಳೂ ನಡೆಯುತ್ತಿದ್ದವು!
ಅಂತೂ ಪ್ರತೀ ಧಾರಾವಾಹಿಯೂ ಅನುಭವಿಸುವ ಆರಂಭದ ಒತ್ತಡ, ಆತಂಕಗಳ ನಡುವೆಯೇ ಮಾರ್ಚ್ 4, 2013ರಂದು ‘ಲಕ್ಷ್ಮೀ ಬಾರಮ್ಮ’ ತನ್ನ ಮೊದಲ ಕಂತನ್ನು ಪ್ರಸಾರ ಮಾಡಿತು. ಸತತವಾಗಿ ಏಳು ವರ್ಷಗಳು ಜನಮನದಲ್ಲಿ ಮತ್ತು ಟಿಆರ್ಪಿ ಮಾಪನದಲ್ಲಿ ಸಾಕಷ್ಟು ಮೇಲ್ದರ್ಜೆಯನ್ನೇ ಕಾಯ್ದುಕೊಂಡು ನಿನ್ನೆಗೆ, ಅಂದರೆ 25 ಜನವರಿ 2020ಕ್ಕೆ ತನ್ನ ಕೊನೆಯ ಸಂಚಿಕೆಯನ್ನು ಪ್ರಸಾರ ಮಾಡಿತು.
ಈ ಹೊತ್ತು ಇನ್ನೂ ಹಲವು ಸುದೀರ್ಘ ಕಾಲ ಪ್ರಸಾರವಾದ ಧಾರಾವಾಹಿಗಳು ಮುಗಿದವು. ಈ ಧಾರಾವಾಹಿಯ ಬಗೆಗೇ ಏಕೆ ಈ ಬರಹ? ಕಾರಣವಿದೆ. ಇದರ ಹುಟ್ಟು, ಬೆಳವಣಿಗೆ ಮತ್ತು ಅಂತ್ಯವನ್ನು ಹತ್ತಿರದಿಂದ ಕಂಡ ನನಗೆ ಈ ಧಾರಾವಾಹಿಯ ವೈಶಿಷ್ಟ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಧಾರಾವಾಹಿ ಎಷ್ಟೆಷ್ಟೋ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೆರೆದುಕೊಂಡಿತು. ಸ್ಟೀರಿಯೋಟೈಪ್ ಅನ್ನು ಒಡೆದು ಹೊಸ ಬಗೆಯ ಪಾತ್ರಗಳನ್ನು ಸೃಷ್ಟಿಸಿತು. ಉದಾಹರಣೆಗೆ, ನನ್ನ ಪಾತ್ರ ‘ಪಾರ್ವತಿ’. ಗಂಡನನ್ನು ಕಳೆದುಕೊಂಡ ನಿರ್ಭಾಗ್ಯೆ. ಆದರೆ ಪಾರ್ವತಿ ಸದಾ ಮಾಂಗಲ್ಯ, ಕುಂಕುಮ, ಕಾಲುಂಗುರಗಳೊಡನೆ ಇರುತ್ತಾಳೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮುಂದಾಗಿ ನಿಲ್ಲುತ್ತಾಳೆ. ಭೌತಿಕವಾಗಿ ತಾನು ಕಳೆದುಕೊಂಡ ಸಂಬಂಧ ಭಾವನಾತ್ಮಕವಾಗಿ ಸದಾ ತನ್ನೊಡನಿರುತ್ತದೆ. ಆದ್ದರಿಂದ ಈ ಎಲ್ಲಾ ಲಕ್ಷಣಗಳೂ ತನ್ನ ಮೈಮೇಲಿರುತ್ತದೆಂಬ ನಿಲುವನ್ನು ಈ ಪಾತ್ರ ಹೇಳಿತ್ತು. ಇದು ಈ ಧಾರಾವಾಹಿ ತನ್ನ ವೀಕ್ಷಕರಿಗೆ ತನ್ನ ಪಾತ್ರದ ಮೂಲಕ ಕೊಟ್ಟ ಬಲು ದಿಟ್ಟ ಸಂದೇಶ. ಮತ್ತೊಂದು ಪಾತ್ರ ‘ಗೊಂಬೆ’. ಒಳ್ಳೆಯವರು ಎಂದರೆ ತಲೆ ತಗ್ಗಿಸಿ ದನಿ ಕುಗ್ಗಿಸಿ ದೈನ್ಯ ಪ್ರದರ್ಶಿಸಬೇಕೆಂಬುದು ಕಿರುತೆರೆಯ ಅಲಿಖಿತ ನಿಯಮ. ಆ ಏಕತಾನವನ್ನು ಮುರಿದ ಪಾತ್ರ ಗೊಂಬೆ. ಕೊನೆಯವರೆಗೂ ಸದಾ ಸತ್ಯದ ಪರ ನಿಂತು, ಸತ್ಯವನ್ನೇ ನುಡಿದು, ಸತ್ಯವನ್ನೇ ಬಯಸಿದ ಪಾತ್ರ. ಅದಕ್ಕಾಗಿ ಯಾರ ಎದುರು ಬೇಕಾದರೂ ನಿಲ್ಲಬಲ್ಲ ಪಾತ್ರ. ಈ ಪಾತ್ರ ಇಂದಿನ ಯುವಕ ಯುವತಿಯರಿಗೆ ಕೊಟ್ಟ ಧನಾತ್ಮಕ ಮಾದರಿ ಮೆಚ್ಚುವಂಥದ್ದು.
ಈ ಧಾರಾವಾಹಿ ತನ್ನನ್ನು ತಾನು ಒಡ್ಡಿಕೊಂಡಷ್ಟು ಪ್ರಯೋಗಗಳಿಗೆ ಬೇರೆ ಯಾವ ಧಾರಾವಾಹಿಯೂ ಒಡ್ಡಿಕೊಂಡಿಲ್ಲವೇನೋ. ಈ ಧಾರಾವಾಹಿಯಲ್ಲಿ ಒಂದು ಪಾತ್ರವಾಗಿ ಬಂದ ಸಿದ್ಧಾರ್ಥ ಹೊಸದೊಂದು ಧಾರಾವಾಹಿಯ ಮುಖ್ಯ ಪಾತ್ರವಾಗಿ ‘ಅಗ್ನಿ ಸಾಕ್ಷಿ’ ಧಾರಾವಾಹಿಯ ಹುಟ್ಟಿಗೆ ಕಾರಣವಾಗಿದ್ದು ಒಂದು ಹೊಚ್ಚ ಹೊಸ ಪ್ರಯೋಗ. ಅಂದಿನ ಫಿಕ್ಷನ್ ಹೆಡ್ ಚಿತ್ರಶ್ರೀಯವರ ಕಲ್ಪನೆ.
ಧಾರಾವಾಹಿಯಲ್ಲಿ ಶ್ರೀನಿವಾಸ ಕಲ್ಯಾಣ ನಾಟಕ ಮಾಡಿದ್ದು. ಶೇಕ್ಸ್ಪಿಯರ್ನ ಹ್ಯಾಮ್ ಲೆಟ್ ಮಾದರಿಯಲ್ಲಿ ಅದೇ ರೀತಿಯ ಉದ್ದೇಶದಲ್ಲಿ ಈ ನಾಟಕ ತರಲಾಯಿತು. ತನ್ನ ತಂದೆಯ ಕೊಲೆಗಡುಕರನ್ನು ಪತ್ತೆ ಹಚ್ಚಲು ಹ್ಯಾಮ್ೆಟ್ ಆ ಕೊಲೆಯ ಕಥೆಯನ್ನು ನಾಟಕದ ಮೂಲಕ ಆಡಿಸುತ್ತಾನೆ. ಇದೇ ಜಾಡಿನಲ್ಲಿ ‘ಶ್ರೀನಿವಾಸ ಕಲ್ಯಾಣ’ ನಾಟಕವನ್ನು ಧಾರಾವಾಹಿ ಕಥೆಯ ನಡುವೆ ಇದೇ ರೀತಿಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಯಿತು. ಇದೂ ಕೂಡ ಧಾರಾವಾಹಿ ಜಗತ್ತಿಗೆ ಹೊಸದಾದ ಕಲ್ಪನೆ.
ಎರಡು ಮೂರು ಟ್ರ್ಯಾಕ್ಗಳು ಸಮಾನಾಂತರವಾಗಿ ಓಡುವ ವಿನ್ಯಾಸದಿಂದ ಒಬ್ಬ ಹೀರೋ, ಒಬ್ಬ ಹೀರೋಯಿನ್ ಪರಿಕಲ್ಪನೆಯ ನವಯುಗದ ಧಾರಾವಾಹಿಗಳ ಮೊದಲ ಪ್ರಯೋಗ ‘ಲಕ್ಷ್ಮೀ ಬಾರಮ್ಮ’. ಹೀರೋ ಹೀರೋಯಿನ್ ಪರಿಕಲ್ಪನೆ ಸಿನೆಮಾದಂತೆ ಧಾರಾವಾಹಿಗಳಲ್ಲಿ ನಡೆಯುವುದಿಲ್ಲ. ಇಲ್ಲಿ ಪ್ರತೀ ಪಾತ್ರಕ್ಕೂ ವೀಕ್ಷಕರಿರುತ್ತಾರೆ. ಆ ಅಂಶವನ್ನು ಮರೆತರೆ ಧಾರಾವಾಹಿ ಸೋತಂತೆಯೇ.
ಹೀರೋ, ಹೀರೋಯಿನ್ ಅಲ್ಲದೇ ತನ್ನ ಕಥೆಯಲ್ಲಿ ಬರುವ ಪ್ರತೀ ಪಾತ್ರದ ವ್ಯಕ್ತಿತ್ವ, ನಡವಳಿಕೆ, ರೀತಿ ನೀತಿಗಳನ್ನು ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಕೆಲವೇ ಧಾರಾವಾಹಿಗಳಲ್ಲಿ ಇದೂ ಒಂದು. ಬಹುಶಃ ಡೀಟೈಲ್ಸ್ಗೆ ಕೊಟ್ಟ ಗಮನ ಈ ಧಾರಾವಾಹಿಯ ಅಭೂತಪೂರ್ವ ಯಶಸ್ಸಿಗೆ ಕಾರಣಗಳಲ್ಲೊಂದು ಎನಿಸುತ್ತದೆ. ಕುಟುಂಬವೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಸದಭಿರುಚಿಯ ಕೌಟುಂಬಿಕ ಚಿತ್ರಗಳಿಗೆ ಹೆಸರಾದ ನಿರ್ವಪಕ, ನಿರ್ದೇಶಕ ಮಿಲನ ಪ್ರಕಾಶ್ ಅವರ ಜೈ ಮಾತಾ ಕಂಬೈನ್ಸ್ ಪ್ರಸ್ತುತಿಯಾದ ‘ಲಕ್ಷ್ಮೀ ಬಾರಮ್ಮ’ ತನ್ನ ಸರಿಗಳ ಮೂಲಕ, ತಪ್ಪುಗಳ ಮೂಲಕ, ಪ್ರಯೋಗಗಳ ಮೂಲಕ, ಕಲಿಯಿತು. ಇತರ ಧಾರಾವಾಹಿಗಳಿಗೆ ‘ಬೆಂಚ್ವಾರ್ಕ್’ ಸೃಷ್ಟಿಸಿತು. ಏಳು ವರ್ಷಗಳ ಸುದೀರ್ಘ ಯಶಸ್ಸಿನ ದಾಖಲೆ ನಿರ್ವಿುಸಿತು. ಒಂದು ಉತ್ತಮ ಟೀಮ್ರ್ಕ್ಗೆ ಉದಾಹರಣೆಯಾಗಿ ನಿಂತಿತು.
ಇನ್ನೂ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬಹುದಿತ್ತು, ಕಥೆ ಹೀಗಲ್ಲದೇ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಅಂತ್ಯ ಹೀಗಿಲ್ಲದೆ ಹಾಗಿರಬೇಕಿತ್ತು… ಇವೆಲ್ಲವೂ ಸತ್ಯ. ಆದರೂ ಇಷ್ಟನ್ನಾದರೂ ಒಂದು ಧಾರಾವಾಹಿ ಮಾಡಿತು ಎಂಬ ಧನಾತ್ಮಕ ಯೋಚನೆಯೊಡನೆ ಎರಡು ಸಾವಿರಕ್ಕೂ ಮಿಕ್ಕಿ ಸಂಚಿಕೆಗಳನ್ನು ಪೂರೈಸಿ ಹೊರಟ ‘ಲಕ್ಷ್ಮೀ ಬಾರಮ್ಮ’ವನ್ನು ಬೀಳ್ಕೊಡೋಣ.