ಹಳಿಯಾಳ: ತಾಲೂಕಿನ ಮಂಗಳವಾಡದ ಗ್ರಾಮದೇವಿ ಲಕ್ಷ್ಮೀ (ದ್ಯಾಮವ್ವ ) ದೇವಿ ಮಹಾರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. 8 ಟನ್ಗಿಂತ ಅಧಿಕ ಭಾರವುಳ್ಳ, 70 ಅಡಿ ಎತ್ತರದ ಹಾಗೂ 7 ಅಂಕಣವಿರುವ ನಾಲ್ಕೂ ದಿಕ್ಕಿಗೂ ಹಲವು ದೇವರ, ಇತಿಹಾಸ ಪ್ರಸಿದ್ಧ ಪವಾಡ ಪುರುಷರು, ರಾಜ ಮಹಾರಾಜರ ಬೃಹತ್ ಫ್ಲೆಕ್ಸ್ಗಳು ನೋಡುಗರ ಗಮನ ಸೆಳೆಯುತ್ತಿದ್ದವು.
ಭವ್ಯವಾದ ರಥದಲ್ಲಿ ಗ್ರಾಮದೇವಿಯರ ನೂತನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಬೆಂಗಳೂರಿನ ಗೋಸಾಯಿ ಮಠದ ಭವಾನಿ ದತ್ತಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥಭಾರತೀ ಮಹಾಸ್ವಾಮೀಜಿಗಳು ಚಾಲನೆ ನೀಡಿದರು. ಸಿದ್ಧಹಂಡಿ ಬಡಗನಾಥದ ಮೋಹನ ದಾಸಜಿ ಮಹಾರಾಜರು ಇದ್ದರು.
ಜಗ್ಗಲಿಗೆ, ಧಾರ್ವಿುಕ ವೇಷಭೂಷಣ, ಚಂಡೆ ವಾದ್ಯ, ಡೊಳ್ಳು ಕುಣಿತ ರಥೋತ್ಸವಕ್ಕೆ ಮೆರುಗು ತಂದವು. ವಾದ್ಯಗಳ ಲಯಕ್ಕೆ ತಕ್ಕಂತೆ ಸಾವಿರಾರು ಯುವಕ-ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.