ವಿಜೃಂಭಣೆಯ ಲಕ್ಷ್ಮೀದೇವಿ ಬ್ರಹ್ಮರಥೋತ್ಸವ

ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಲಕ್ಷ್ಮೀದೇವಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಹಿನ್ನೆಲೆ ಲಕ್ಷ್ಮೀದೇವಿಗೆ ಮುಂಜಾನೆಯಿಂದಲೇ ವಿಷೇಷ ಪೂಜೆ, ಪುನಸ್ಕಾರಗಳು, ಹಲವು ರೀತಿಯ ಹೋಮ, ಹವನಗಳು ನಡೆದವು. ರಥೋತ್ಸವ ಹಿನ್ನೆಲೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥವನ್ನು ದೇವಸ್ಥಾನದ ಸುತ್ತ ಮಂಗಳವಾದ್ಯದೊಂದಿಗೆ ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಲಾಯಿತು. ಗ್ರಾಮದ ಹಿರಿಯರು ಸಾಂಪ್ರದಾಯಿಕ ಪೂಜೆ ನೆರವೇರಿಸಿ ರಥಕ್ಕೆ ಚಾಲನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಉಘೆ… ಉಘೆ… ಲಕ್ಷ್ಮೀದೇವಮ್ಮ ಎಂದು ಹೇಳಿ ರಥವನ್ನು ಭಕ್ತಿ ಭಾವದಿಂದ ಎಳೆದರು. ಜತೆಗೆ ಹಣ್ಣು ಧವನವನ್ನು ರಥೆಕ್ಕೆ ಎಸೆದರು. ಗ್ರಾಮದ ರಥ ಬೀದಿಯಲ್ಲಿ ರಥೋತ್ಸವ ಸಾಗಿತು. ಬಳಿಕ ಯಾವುದೇ ವಿಘ್ನವಿಲ್ಲದೆ ಮರಳಿ ಸ್ವಸ್ಥಾನಕ್ಕೆ ತಲುಪಿತು. ರಥೋತ್ಸವಕ್ಕೂ ಪೂರ್ವ ಲಕ್ಷ್ಮಿದೇವಿ, ಚನ್ನಕೇಶವಸ್ವಾಮಿ ಉತ್ಸವಮೂರ್ತಿಯನ್ನು ನೆರಳು ಚಪ್ಪರದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ರಥೋತ್ಸವದ ಹಿನ್ನೆಲೆ ರಂಗಕುಣಿತ, ಸಿಡಿ, ಬಾಯಿಬೀಗ, ಕೋಲಾಟ, ಕೊಂಡೋತ್ಸವ, ಸಿಡಿಮದ್ದು ಸುಡುವುದು, ಸೋಮನ ಕುಣಿತ ಸೇರಿ ಹಲವು ಪ್ರಕಾರದ ಜನಪದ ಕುಣಿತ ನೋಡುಗರ ಗಮನ ಸೆಳೆಯಿತು. ರಥೋತ್ಸವ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇಗೌಡ, ತಾಲೂಕು ಪಂಚಾಯಿತಿ ಸದಸ್ಯೆ ದೀಪಶ್ರೀ ಮಂಜುನಾಥ್, ಮುಖಂಡರಾದ ಚಂದ್ರೇಗೌಡ, ಪ. ಚಿಕ್ಕೇಗೌಡ, ಕೆಎಸ್‌ಆರ್‌ಟಿಸಿ ನಿವೃತ್ತ ಬೋರೇಗೌಡ, ನಿವೃತ್ತ ಬಿಇಒ ಎ.ಬಿ.ಪುಟ್ಟಸ್ವಾಮಿಗೌಡ, ಆರ್.ಶ್ರೀನಿವಾಸ್, ಅಣ್ಣೇಗೌಡ, ಬೋರಲಿಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌ಗೌಡ, ಪ.ಸುಬ್ಬೇಗೌಡ ಮತ್ತಿತರರಿದ್ದರು.

Leave a Reply

Your email address will not be published. Required fields are marked *