ಕಾಯಕಯೋಗಿ ಕೈಲಾಸವಾಸಿ

<< ಐಕ್ಯ ಗದ್ದುಗೆಯಲ್ಲಿ ಚಿರಸ್ಥಾಯಿಯಾದ ಸಿದ್ಧಗಂಗಾ ಶ್ರೀ >>

ನಡೆದಾಡುವ ದೇವರಾಗಿ ಜನಮಾನಸದ ಭಕ್ತಿಭಾವದೊಂದಿಗೆ ಬೆಸೆದುಕೊಂಡಿರುವ ತ್ರಿವಿಧ ದಾಸೋಹಿ, ಸಿದ್ಧಗಂಗೆಯ ಮಹಾಯೋಗಿ ಡಾ. ಶಿವಕುಮಾರ ಸ್ವಾಮೀಜಿ ಮಂಗಳವಾರ ಐಕ್ಯಗದ್ದುಗೆಯಲ್ಲಿ ಚಿರಸ್ಥಾಯಿಯಾದರು. ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುತ್ತಿದ್ದ ಜನಸಾಗರದ ನಡುವೆಯೇ 10 ಲಕ್ಷಕ್ಕೂ ಅಧಿಕ ಭಕ್ತರು ಚಳಿ, ಬಿಸಿಲು ಲೆಕ್ಕಿಸದೆ ಗಂಟೆಗಟ್ಟಲೆ ನಿಂತು ‘ದೇವರ’ ದರ್ಶನ ಪಡೆದರು. ಸಂಜೆ ವೇಳೆಗೆ ಪುಷ್ಪಾಲಂಕೃತ ರುದ್ರಾಕ್ಷಿ ರಥದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಕ್ರಿಯಾಸಮಾಧಿ ಸ್ಥಳಕ್ಕೆ ತರಲಾಯಿತು. ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ಶ್ರೀಗಳನ್ನು ಪದ್ಮಾಸನದಲ್ಲಿ ಕೂರಿಸಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಈ ಪ್ರಕ್ರಿಯೆಗಳ ಬಳಿಕ ನಡೆದಾಡುವ ದೇವರು ಗುಡಿ ಸೇರಿದರು.

ಶಿವಸಾಯುಜ್ಯದ ವಿಧಿವಿಧಾನ

ಸಾರ್ವಜನಿಕ ದರ್ಶನ, ಸರ್ಕಾರಿ ಗೌರವ ಸಲ್ಲಿಕೆ ಬಳಿಕ ಶಿವಕುಮಾರ ಶ್ರೀಗಳ ಅಂತ್ಯಕ್ರಿಯೆಯ ಧಾರ್ವಿುಕ ವಿಧಿ ವಿಧಾನಗಳು ವೀರಶೈವ ಲಿಂಗಾಯತ ಪರಂಪರೆಯಂತೆ ಮುಂದುವರಿಯಿತು. ಶ್ರೀಮಠದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಿರ್ವಿುಸಿರುವ ಗದ್ದುಗೆಯಲ್ಲಿ ಶ್ರೀಗಳ ಕ್ರಿಯಾಸಮಾಧಿ ವಿಧಿವಿಧಾನಗಳು ಮಂಗಳವಾರ ಸಂಜೆ ಧಾರ್ವಿುಕ ವಿಧಿಗೆ ಅನುಗುಣವಾಗಿ ನಡೆದವು.

  • ಲಿಂಗ ಶರೀರಕ್ಕೆ ಅಭಿಷೇಕಾದಿ ಪೂಜೆ
  • ಧ್ಯಾನಸ್ಥ ಸ್ಥಿತಿಯಲ್ಲಿ ಗೂಡಿನೊಳಗೆ ಕೂರಿಸಿ ವಿಧಿವಿಧಾನ
  • ಇಷ್ಟಲಿಂಗವನ್ನು ಶ್ರೀಗಳ ಕೈಗಿಟ್ಟು ಮತ್ತೆ ಪೂಜೆ, ಭಸ್ಮಾದಿ ವಿಭೂತಿಗಟ್ಟಿ, ಉಪ್ಪಿನಿಂದ ಮುಚ್ಚಿ, ಬಿಲ್ವಪತ್ರೆಯಿಂದ ಶಿರೋ ಭಾಗ ಹೊದಿಸಲಾಯಿತು.
  • ಮರಳನ್ನು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಪಂಚಾಕ್ಷರಿ ಮಂತ್ರ ಬರೆದ ವಿಭೂತಿಗಟ್ಟಿಯನ್ನು ಶ್ರೀಗಳ ಲಿಂಗ ಶರೀರ ಮುಚ್ಚಲು ಬಳಸಲಾಯಿತು.
  • ಸಂಜೆ 6.25ಕ್ಕೆ ಕ್ರಿಯಾ ಸಮಾಧಿ ಮಂಟಪಕ್ಕೆ ಶ್ರೀಗಳ ಪ್ರವೇಶ, ಕ್ರಿಯಾ ಸಮಾಧಿ ಧಾರ್ವಿುಕ ವಿಧಾನ ಆರಂಭ
  • ರಾತ್ರಿ 10.50 ಗಂಟೆಗೆ ಪ್ರಕ್ರಿಯೆ ಪೂರ್ಣ

ಸಿದ್ಧಗಂಗಾ ಮಠಕ್ಕೆ ಪ್ರತಿಬಾರಿ ತೆರಳಿದಾಗಲೂ ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು. ಇಂತಹ ಮಹಾನ್ ಸಂತರ ಅಗಲಿಕೆ ನಮಗೆ ತುಂಬಲಾರದ ನಷ್ಟ ಉಂಟುಮಾಡಿದೆ.

| ನರೇಂದ್ರ ಮೋದಿ, ಪ್ರಧಾನಿ

ನಾಲ್ಕು ಬಾರಿ ಸಮಯ ವಿಸ್ತರಣೆ

ಮೊದಲಿಗೆ ಸಾರ್ವಜನಿಕ ದರ್ಶನಕ್ಕೆ 3 ಗಂಟೆವರೆಗೆ ಅವಕಾಶ ಎಂದು ತಿಳಿಸಲಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಾದಂತೆ 4 ಗಂಟೆವರೆಗೆ ವಿಸ್ತರಿಸಲಾಯಿತು. ನಂತರ 4.30, 5 ಗಂಟೆ ಹೀಗೆ ನಾಲ್ಕು ಬಾರಿ ಸಮಯ ವಿಸ್ತರಿಸಲಾಯಿತು. 3.30ರಿಂದ ಮಠದೊಳಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಯಿತು.

ಯಾರ್ಯಾರು ಭಾಗಿ

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಮುಮ್ಮಡಿ ನಿರ್ವಾಣ ಸ್ವಾಮಿಗಳ ಸಮ್ಮುಖದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪೂಜೆ ವಿಧಿವಿಧಾನ ನಡೆಸಿದರು.

10 ಕಿ.ಮೀ ಜನ

ಶ್ರೀಗಳ ಅಂತಿಮ ದರ್ಶನಕ್ಕಾಗಿ 10ಲಕ್ಷಕ್ಕೂ ಅಧಿಕ ಭಕ್ತರು ಸಿದ್ಧಗಂಗೆಗೆ ಬಂದಿದ್ದರು. ಸುಮಾರು 15 ಕಿ.ಮೀ. ದೂರದವರೆಗೆ ಜನರು ಸಾಲುಗಟ್ಟಿ ನಿಂತಿದ್ದರಿಂದ ಅವರೆಲ್ಲರಿಗೂ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಾಲಿನಲ್ಲಿದ್ದ ಕೆಲವರಿಗೆ ಶ್ರೀಗಳ ದರ್ಶನ ಸಾಧ್ಯವಾಗಲಿಲ್ಲ.

ಉಚಿತ ಸೇವೆ

ಭಕ್ತರಿಗೆ ನೀರು, ಪ್ರಸಾದದ ಜತೆಗೆ ಆಟೋ, ಬಸ್​ಗಳು ಉಚಿತ ಸೇವೆ ನೀಡಿದವು. ಕೆಲವರು ದಾರಿಯುದ್ದಕ್ಕೂ ಹಣ್ಣು, ಹಂಪಲು ನೀಡಿ ಶ್ರೀಗಳ ಮೇಲಿನ ಭಕ್ತಿ ಗೌರವ ಮೆರೆದರು.

ಸರ್ಕಾರಿ ಗೌರವ

ಅಂತಿಮ ಕ್ರಿಯಾವಿಧಿಗೆ ಮುನ್ನ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಕುಶಾಲತೋಪುಗಳನ್ನು ಹಾರಿಸಿ ಗೌರವ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ನಮಿಸಿದರು. ಬಳಿಕ ಉಪ ಮುಖ್ಯಮಂತ್ರಿ ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಪ್ರಮುಖ ಗಣ್ಯರು ಪುಷ್ಪನಮನ ಸಲ್ಲಿಸಿದರು. ಇದಾದ ಬಳಿಕ ಶ್ರೀಗಳಿಗೆ ರಾಷ್ಟ್ರಧ್ವಜ ಹೊದಿಸಿ ಗೌರವಿಸಲಾಯಿತು.

ಅಂತಿಮ ದರ್ಶನದಲ್ಲಿ ಶಿಸ್ತು ಮೆರೆದ ಭಕ್ತರು

ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನರು ಸೇರಿದ್ದರಾದರೂ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಶಿಸ್ತು ಪಾಲಿಸಿದರು. ಪೊಲೀಸರು ಕೂಡ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಸಾರ್ವಜನಿಕರ ಸಂಚಾರಕ್ಕಾಗಿ ಮಾರ್ಗ ಬದಲಿಸಿದ್ದರಿಂದ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಹಾಗೂ ಬರುವ ವಾಹನಗಳ ಪ್ರಯಾಣಿಕರಿಗೆ ತೊಂದರೆ ಆಗಲಿಲ್ಲ.

ಪಾಲ್ಗೊಂಡ ಗಣ್ಯರು

ಅಂತಿಮ ದರ್ಶನಕ್ಕೆ ಬಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯೋಗಗುರು ಬಾಬಾ ರಾಮದೇವ್, ಮಾಜಿ ಸಿಎಂ ಸಿದ್ದರಾಮಯ್ಯ ಅಂತ್ಯಕ್ರಿಯೆ ಆಗುವವರೆಗೂ ಇದ್ದರು. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ವಿ. ಸೋಮಣ್ಣ ಉಸ್ತುವಾರಿ ನೋಡಿಕೊಂಡರು.