ಹಿರಿಯೂರು: ತಾಲೂಕಿನ ವಿವಿ ಪುರ ಗ್ರಾಪಂ ವ್ಯಾಪ್ತಿಯ 11 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ಆಗಸ್ಟ್ 21 ರಂದು ವಿವಿ ಪುರ ಬಂದ್‌ಗೆ ರೈತರು ತೀರ್ಮಾನಿಸಿದ್ದಾರೆ.
ಭರಮಗಿರಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸುತ್ತಮುತ್ತಲಿನ 11 ಹಳ್ಳಿಗಳ ರೈತರು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸರ್ಕಾರದ ಮೇಲೆ ಒತ್ತಡ ಹೇರಲು, ಹೋರಾಟ ತೀವ್ರಗೊಳಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದು, ವಿವಿ ಸಾಗರ ಜಲಾಶಯದ ಬುಡದಲ್ಲಿರುವ 11 ಗ್ರಾಮಗಳ ಪರಿಸ್ಥಿತಿ ದೀಪದ ಕೆಳಗಿನ ಕತ್ತಲು ಎನ್ನುವಂತಾಗಿದೆ ಎಂದು ತಿಳಿಸಿದರು.
ಜಲಾಶಯ ನಿರ್ಮಿಸಿ ಶತಮಾನ ಕಳೆದರೂ ಜನತೆಗೆ ಶುದ್ಧ ಕುಡಿವ ನೀರು ಸಿಗುತ್ತಿಲ್ಲ. ಅಂತರ್ಜಲ ಅಪಾಯದ ಮಟ್ಟ ತಲುಪಿದೆ, ಕೊಳವೆ ಬಾವಿಗಳ ಸಂಖ್ಯೆ ಮಿತಿ ಮೀರಿದೆ, ಅತಿಯಾಗಿ ಅಂತರ್ಜಲ ಬಳಕೆಯಿಂದ ಹನಿ ನೀರಿಗೂ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
89 ವರ್ಷದ ನಂತರ ವರುಣ ಕೃಪೆಯಿಂದ ಜಲಾಶಯ ಭರ್ತಿಯಾಗಿದೆ. ಭದ್ರೆ ವಿವಿ ಸಾಗರದ ಒಡಲು ಸೇರಿದ್ದು, ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದ್ದರೂ ಕೆರೆಗಳಿಗೆ ನೀರು ತುಂಬಿಸುವಲ್ಲಿ ಜನಪ್ರತಿನಿದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣಗೊಳಿಸಿ ಕನಿಷ್ಠ 10 ಟಿಎಂಸಿ ಅಡಿ ನೀರು ತುಂಬಿಸಿದರೆ ಮಾತ್ರ ಜಲ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎಂದು ಆಗ್ರಹಿಸಿದರು.
ವಾಣಿ ವಿಲಾಸ ಸಾಗರ ಜಲಾಶಯದಿಂದ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಸೇರಿ ವಿವಿಧ ನಗರ, ಪಟ್ಟಣ, ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಇದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಜಲಾಶಯದ ಬುಡದಲ್ಲಿರುವ ಹಳ್ಳಿಗಳಿಗೆ ಮೊದಲು ಕುಡಿಯುವ ನೀರು ಪೂರೈಕೆ ಮಾಡಬೇಕು. ಆದರೆ, ಈ ವಿಷಯದಲ್ಲಿ ನಿರ್ಲಕ್ಷೃ ವಹಿಸಲಾಗಿದೆ. ಹಲವು ಬಾರಿ ಸಲ್ಲಿಸಿದ ಮನವಿ, ಮುಷ್ಕರಗಳಿಗೆ ಮನ್ನಣೆ ದೊರೆತಿಲ್ಲ ಎಂದು ದೂರಿದರು.
ಆದ್ದರಿಂದ ಮೊದಲ ಹಂತವಾಗಿ ವಿವಿ ಪುರ ಬಂದ್‌ಗೆ ಕರೆ ನೀಡುವುದು ಅನಿವಾರ್ಯ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ರೈತರು, ಮುಖಂಡರು ಅಭಿಪ್ರಾಯಪಟ್ಟರು. ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ಅಂದು ಬೆಳಗ್ಗೆ 6 ಗಂಟೆಗೆ ಮುಷ್ಕರ ಆರಂಭವಾಗಲಿದ್ದು, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಾಗಿಲು ಹಾಕಬೇಕು, ವಾಹನಗಳ ಸಂಚಾರ ಆಗದಂತೆ ಮಾಲೀಕರ ಮನವೊಲಿಸಬೇಕು. ಪ್ರತಿಭಟನೆ ಶಾಂತಿಯುತವಾಗಿರಬೇಕು. ಮುಷ್ಕರ, ಮೆರವಣಿಗೆ ಬಳಿಕ ಸಂಬಂಧಿಸಿದ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲು ತೀರ್ಮಾನಿಸಲಾಯಿತು.
ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ವೆಂಕಟೇಶ್, ತಿಮ್ಮಯ್ಯ, ಭೂತಯ್ಯ, ಪೇರಿಸ್ವಾಮಿ, ವೀರಭದ್ರಪ್ಪ, ಶಿವಣ್ಣ, ಕೆಂಚಪ್ಪ, ಹನುಮಂತಪ್ಪ, ಭೀಮಯ್ಯ, ಶಶಿಧರ್, ದೇವರಾಜ್, ಶಿವಣ್ಣ ಇತರರಿದ್ದರು.