ಕೊಳ್ಳೇಗಾಲ: ತಾಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿರುವ ಚಿಕ್ಕಕೆರೆ ಹೂಳೆತ್ತುವ ಕಾಮಗಾರಿಗೆ ಸೋಮವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ದಿನರಾಜ್ ಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೆರೆಗಳು ನೀರಿಲ್ಲದೆ ನೆಲಸಮಗೊಳ್ಳುತ್ತಿವೆ. ಇದನ್ನು ಮನಗಂಡ ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ನಮ್ಮೂರು ನಮ್ಮ ಕರೆ ಕಾರ್ಯಕ್ರಮದಡಿಯಲ್ಲಿ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ 700ಕ್ಕೂ ಅಧಿಕ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಅದರಂತೆ ಹೊಸ ಮಾಲಂಗಿ ಗ್ರಾಮದಲ್ಲಿ ಚಿಕ್ಕಕೆರೆ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಕೆರೆ ಸಮಿತಿ ಅಧ್ಯಕ್ಷ ಬಸವರಾಜ್, ಟಗರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಕೃಷಿ ಮೇಲ್ವಿಚಾರಕ ಚಂದನ್, ಕೆರೆ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.