ಕೆರೆ ಅಭಿವೃದ್ಧಿ ಹಸಿರು ಕ್ರಾಂತಿ

<ಧರ್ಮಸ್ಥಳ ಚತುಷ್ಪಥ ರಸ್ತೆಗೆ ಚಾಲನೆ ನೀಡಿ ಸಿಎಂ ಕುಮಾರಸ್ವಾಮಿ ಆಶಯ>

ಬೆಳ್ತಂಗಡಿ: ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕೆರೆ ಕಟ್ಟೆಗಳ ಅಭಿವೃದ್ಧಿಗೆ ಹೆಗ್ಗಡೆಯವರ ಚಿಂತನೆಗೆ ಸರ್ಕಾರ ಪೂರ್ಣ ಬೆಂಬಲ ನೀಡಲಿದೆ. ಈ ಯೋಜನೆ ರಾಜ್ಯದಲ್ಲಿ ಹಸಿರು ಕ್ರಾಂತಿಯಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಶಿಸಿದರು.

ಧರ್ಮಸ್ಥಳದ ಮಹಾಮಸ್ತಕಾಭಿಷೇಕದ ಪ್ರಯುಕ್ತ 23 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಧರ್ಮಸ್ಥಳ ನೇತ್ರಾವತಿ ಸಂಪರ್ಕ ರಸ್ತೆಯ ಚತುಷ್ಪಥ ಕಾಮಗಾರಿ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

ಕೃಷಿಕರು ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕು ಎಂಬುದೇ ಸರ್ಕಾರದ ಗುರಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸರ್ಕಾರ 28.50 ಕೋಟಿ ರೂ.ಗಳ ನೆರವಿನೊಂದಿಗೆ ಕೆರೆಗಳ ಅಭಿವೃದ್ಧಿಗೆ ಚಿಂತಿಸಿದೆ. ಇದರ ಪ್ರಥಮ ಅನುದಾನ ಹಂತವಾಗಿ 87.5ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಜೈನರು ಅನೇಕ ಮಠ ಮಂದಿರಗಳ ಉನ್ನತಿಗೆ ಕಾರಣರಾಗಿದ್ದಾರೆ. ಸಮಾಜಕ್ಕೆ ಶಾಂತಿ ಸಾಮರಸ್ಯದ ಔಷಧ ನೀಡುವವರು ಈ ಸಮುದಾಯದವರು. ಧರ್ಮಸ್ಥಳ ಧರ್ಮಪೀಠವಾಗಿ ನ್ಯಾಯಮಾರ್ಗ ನೀಡುವ ಕ್ಷೇತ್ರ. 1982ರ ಪ್ರಥಮ ಮಹಾಮಸ್ತಕಾಭಿಷೇಕದ ಪ್ರಯುಕ್ತ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿ ಜನರ, ಸಮಾಜದ, ಮಹಿಳೆಯರ ಅಭಿವೃದ್ಧಿ, ಕೃಷಿ ತರಬೇತಿ ಕಾರ್ಯಕ್ರಮ, ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡಿದರು. ಜನರ ಬದುಕನ್ನು ಬದಲಾಯಿಸಿದ ಹೆಗ್ಗಳಿಕೆ ಅವರದು. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಷ್ಟೇ ಅಲ್ಲದೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಗ್ಗಡೆ ಆದ್ಯತೆ ನೀಡಿದ್ದಾರೆ ಎಂದರು.

ಸ್ಮರಣಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಧರ್ಮದ ಅಭಿಯಾನವನ್ನು ಜೋಡಿಸುವ ಕಾರ್ಯ ಆಗಬೇಕಿದೆ. ಇದಕ್ಕೆ ಧರ್ಮಸ್ಥಳವೇ ಪ್ರಮುಖ ನೆಲೆ ಎಂದರು. ಕೆರೆ ಸಂಜೀವಿನಿ ಕಾರ್ಯಕ್ರಮದ ಒಡಂಬಡಿಕೆ ಮತ್ತು ಕೆರೆ ಅಭಿವೃದ್ಧಿಗೆ ಚೆಕ್ ವಿತರಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜ್, 28.50ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಇದರ ನೇತೃತ್ವವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಹಿಸಲಿದೆ ಎಂದರು.

ಲೋಕೋಪಯೋಗಿ ಇಲಾಖಾ ಅಧಿಕಾರಿಗಳಾದ ಕಾಂತರಾಜು, ಯಶವಂತ್, ಶಿವಪ್ರಸಾದ್ ಅಜಿಲ ಅವರನ್ನು ಸಿಎಂ ಸನ್ಮಾನಿಸಿದರು. ಪೇಜಾವರ ಶ್ರೀಗಳು ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರನ್ನು ಗೌರವಿಸಿದರು. ಕ್ಷೇತ್ರದ ವತಿಯಿಂದ ಎಲ್ಲ ಮಂತ್ರಿಗಳು ಮತ್ತು ಸಚಿವರನ್ನು, ಅಧಿಕಾರಿ ವರ್ಗದವರನ್ನು ಡಾ. ಹೆಗ್ಗಡೆ ಅಭಿನಂದಿಸಿದರು.

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ, ವಿಧಾನಪರಿಷತ್ ಸದಸ್ಯರಾದ ಭೋಜೆ ಗೌಡ, ಫಾರೂಕ್, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೃತ್ಯುಂಜಯ, ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಕೆರೆ ಸಂಜೀವಿನಿ ಕಾರ್ಯಕ್ರಮದ ಮಾಹಿತಿ ನೀಡಿದರು. ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ: ಧರ್ಮಸ್ಥಳದಲ್ಲಿ ಧರ್ಮ, ಭಕ್ತಿಯ ಜಾಗೃತಿ ಆಗುತ್ತಿದೆ. ದೇವರಿಗೆ ಹಾಲು ಮತ್ತು ಮೊಸರಿನ ಅಭಿಷೇಕವಾದರೆ ಇಲ್ಲಿ ಬಾಹುಬಲಿಯು ಜನರಿಗೆ ಜ್ಞಾನದ ಅಭಿಷೇಕ ಮಾಡುತ್ತಾನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಸ್ಥಳದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸುಯೋಗ ನನ್ನದು. ಎರಡು ನಡಾವಳಿ, ನಾಲ್ಕು ಮಹಾಮಸ್ತಕಾಭಿಷೇಕ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದೇನೆ. ಮಂಜಯ್ಯ ಹೆಗ್ಗಡೆಯವರ ಕಾಲದಿಂದಲೂ ಕ್ಷೇತ್ರದೊಂದಿಗೆ ನಿಕಟ ಸಂಪರ್ಕವಿದೆ. ಇಂದು ಮಹಾಮಸ್ತಕಾಭಿಷೇಕ ಎಲ್ಲರ ಮಸ್ತಕಕೆ ಅಭಿಷೇಕವಾಗಲಿ. ಬಾಹುಬಲಿಯ ತ್ಯಾಗಮಯ ಜೀವನದ ಸಂದೇಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪೂರ್ಣ ಸೇವೆಯೇ ನನ್ನ ಕಾರ್ಯ:  2019ನೇ ನಾಲ್ಕನೇ ಮಹಾಮಸ್ತಕಾಭಿಷೇಜಕಕ್ಕೆ ಸರ್ಕಾರ ಮಾತ್ರವಲ್ಲ, ನಾಡಿನ ಜನರು, ಸಂಘ ಸಂಸ್ಥೆಗಳು ಕೈಜೋಡಿಸಿ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಕ್ಷೇತ್ರದಲ್ಲಿ ಹಲವು ಜನಪರ ಕಾರ್ಯಕ್ರಮಗಳು ನಡೆಯುತ್ತಿದ್ದು, ಪೂರ್ಣಸೇವೆ ಮಾಡುವುದೇ ನನ್ನ ಕಾರ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಸಿಎಂ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ ಹೊಂದಿದ್ದಾರೆ. ಎರಡು ತಿಂಗಳ ಹಿಂದೆ ಧರ್ಮಸ್ಥಳದ ರಸ್ತೆಯನ್ನು ವೀಕ್ಷಿಸಿದ ರೇವಣ್ಣ, ಮಹಾಮಸ್ತಕಾಭಿಷೇಕಕ್ಕೆ ಮೊದಲು ರಸ್ತೆ ಅಭಿವೃದ್ಧಿ ಮಾಡಿಸುತ್ತೇನೆ ಎಂದು, ಸ್ಥಳದಲ್ಲೇ 23 ಕೋಟಿ ರೂ. ಮಂಜೂರು ಮಾಡಿದ್ದರು. ಈಗ ಶಾಶ್ವತ ಯೋಜನೆಯನ್ನು ತ್ವರಿತವಾಗಿ ನಿರ್ಮಿಸಲು ಸಹಕರಿಸಿದ್ದಾರೆ. ಇದು ದೊಡ್ಡ ಕೊಡುಗೆ ಎಂದರು. ಸಚಿವ ಯು.ಟಿ ಖಾದರ್ ಕೂಡ ಸಹಕಾರ ನೀಡಿದ್ದಾರೆ ಎಂದರು.

ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ನಮ್ಮ ಪ್ರಥಮ ಭೇಟಿ ಧರ್ಮಸ್ಥಳದಲ್ಲಿ ಆಗಿದೆ. ಮುಖ್ಯಮಂತ್ರಿ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಎಲ್ಲ ವರ್ಗದವರಿಗೆ, ಎಲ್ಲ ಸಮಾಜಕ್ಕೆ, ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಇದು ಶೀಘ್ರ ಅನುಷ್ಠಾನಗೊಂಡು ರಾಜ್ಯ ಅಭಿವೃದ್ಧಿಯಾಗಲಿ.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ