ಮೀನುಗಾರರ ಸಂಘದಿಂದ ಕೆರೆ ಸ್ವಚ್ಛತಾಕಾರ್ಯ

ಬೊಮ್ಮನಹಳ್ಳಿ: ಬನ್ನೇರುಘಟ್ಟ ರಸ್ತೆಯ ಹುಳಿಮಾವು ಕೆರೆಯಲ್ಲಿ ಜೊಂಡು ಬೆಳೆದು ಉದ್ಯೋಗವಿಲ್ಲದೆ ತೊಂದರೆ ಅನುಭವಿಸಿದ್ದ ಮೀನುಗಾರರು ಕೆರೆ ಸ್ವಚ್ಛತಾಕಾರ್ಯ ನಡೆಸಿದರು.

ಬಿಬಿಎಂಪಿ ಹಾಗು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿನಂತಿಸಿದರೂ ಅಧಿಕಾರಿಗಳು ಸ್ಪಂದಿಸದಿದ್ದರಿಂದ ಹುಳಿಮಾವು ಶ್ರೀ ಗಂಗಾ ಮೀನುಗಾರರ ಸಹಕಾರ ಸಂಘದ ಸದಸ್ಯರೇ ಜೊಂಡು ತೆಗೆಯಲು ತೀರ್ಮಾನಿಸಿದ್ದರು.

ಕೆರೆ ಪೂರ್ತಿ ತುಂಬಿದ ಜೊಂಡಿನಿಂದ ಮೀನು ಗಾರಿಕೆಗೆ ಅಡ್ಡಿಯಾಗುವುದರ ಜತೆಗೆ ಸೊಳ್ಳೆಗಳ ಹಾವಳಿ ಹಾಗೂ ದುರ್ನಾತ ಬೀರುತ್ತಿತ್ತು.

ಮೀನುಗಾರಿಕೆ ಇಲಾಖೆ ನೆರವು: ಕೆರೆ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದ ಮೀನುಗಾರಿಕೆ ಇಲಾಖೆ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕ ಕುಮಾರಸ್ವಾಮಿ, ಕೆರೆಗಳಿಗೆ ಕೊಳಚೆ ನೀರು ಸೇರುವುದರಿಂದ ಜೊಂಡು ಬೆಳೆಯುತ್ತದೆ. ಕೆರೆಯಲ್ಲಿ ಮೀನು ಇದ್ದಲ್ಲಿ ನೀರು ಸ್ವಚ್ಛವಾಗಿರುತ್ತದೆ. ಮೀನುಗಾರರ ಸಂಘವೇ ಸ್ವಚ್ಛತೆಗೆ ಮುಂದಾಗಿರುವುದು ಖುಷಿ ತಂದಿದೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.

ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್.ಅನಂತ್, ಸಂಘದ ಉಪಾಧ್ಯಕ್ಷ ಕನಕರಾಜು, ಬಿಎಸ್ಪಿ ರಮೇಶ್ ಮತ್ತಿತರರಿದ್ದರು.

ಇಪ್ಪತ್ತು ವರ್ಷಗಳಿಂದಲೂ ಈ ಕೆರೆಯಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಕ್ಕಿದೆ, ಕಡಿಮೆ ದರದಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಆದರೆ ಕೆರೆಯಲ್ಲಿ ಜೊಂಡು ಬೆಳೆದಿದ್ದರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ವೆಚ್ಚ ಹೆಚ್ಚಾದರೂ ಸ್ವಚ್ಛ ಮಾಡಿಯೇ ತೋರಿಸುತ್ತೇವೆ

ತಿಂಗಳಲ್ಲಿ ಕೆರೆ ಜೊಂಡು ತೆಗೆಯುವ ಕೆಲಸ ಮುಗಿಸುವ ಯೋಜನೆ ಇದೆ. 5 ಲಕ್ಷ ರೂ.ಗಳ ಖರ್ಚಿನ ಅಂದಾಜಿದೆ. ವೆಚ್ಚ ಹೆಚ್ಚಾದರೂ ಸರಿಯೇ ಕೆರೆ ಸ್ವಚ್ಛ ಮಾಡುತ್ತೇವೆ. ಇದಕ್ಕಾಗಿ ಸರ್ಕಾರವನ್ನು ಬೇಡುವುದಿಲ್ಲ. ಕೆರೆ ಅಭಿವೃದ್ಧಿಗೆ ಮುಂದೆಯೂ ಸಂಘ ಕೆಲಸ ಮಾಡುತ್ತದೆ ಎಂದು ಶ್ರೀ ಗಂಗಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಬಿಳೇಕಹಳ್ಳಿ ನಾರಾಯಣ ಹೇಳಿದರು.

Leave a Reply

Your email address will not be published. Required fields are marked *