‘ವಧು’ವಾಗದ ಯುವತಿಯರು; ಮೂವತ್ತಾದರೂ ಮದುವೆ ಬೇಡ!

ಮೂವತ್ತು ವರ್ಷ ಮೀರಿದರೂ ವಿವಾಹವಾಗಲು ಒಲ್ಲೆ ಎನ್ನುವ ಯುವತಿಯರು ಇಂದಿನ ಬಹಳಷ್ಟು ಮಧ್ಯಮ ವರ್ಗದ ಕುಟುಂಬಗಳಲ್ಲಿ ತಲೆನೋವು ತಂದಿಡುತ್ತಿದ್ದಾರೆ ಎನ್ನುವುದು ಅಚ್ಚರಿಯಾದರೂ ಸತ್ಯ. ಮನೆಯವರು ಅಥವಾ ಸಮಾಜ ಭಾವಿಸುವಂತೆ ಕೇವಲ ಆರ್ಥಿಕ ಸ್ವಾತಂತ್ರ್ಯೊಂದೇ ಇದಕ್ಕೆ ಕಾರಣವಾಗಿಲ್ಲ ದಿರಬಹುದು. ಯುವತಿಯರ ಈ ಮನಸ್ಥಿತಿಯನ್ನು ಹಲವಾರು ಆಯಾಮಗಳಲ್ಲಿ ನೋಡಬೇಕಾದ ಅಗತ್ಯವಿದೆ.

| ಡಾ. ಪಲ್ಲವಿ ಹೆಗಡೆ

‘ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ, ನೋಡಲು ಬಂದ ತಾವರೆಗೆರೆಯ ಜೋಯಿಸರ ಮೊಮ್ಮಗನನ್ನು ನಿರಾಕರಿಸಿದ್ದು ಕಾವ್ಯಪ್ರಿಯರಿಗೆಲ್ಲ ತಿಳಿದಿದೆ. ಅವಳು ಹುಡುಗನನ್ನು ಒಲ್ಲೆ ಎಂದದ್ದನ್ನು, ಆ ಸಂದರ್ಭ ನಿಭಾಯಿಸಿದ ರೀತಿಯನ್ನು ಓದಿ, ಹಾಡಿ ಮುದಗೊಂಡಿದ್ದೇವೆ. ವಯಸ್ಸು ಹನ್ನೆರಡಾದರೇನಂತೆ? ರತ್ನದಂತಹ ಅವಳಿಗೆ ಗಂಡೊಂದು ಸಿಕ್ಕುವುದು ಕಷ್ಟವಲ್ಲ’ ಎಂದು ಕೆ. ಎಸ್. ನರಸಿಂಹಸ್ವಾಮಿಯವರ ಭಾವಗೀತೆ ಸುಖಾಂತವಾಗುವುದು. ಇವೆಲ್ಲ ಐವತ್ತು-ಅರವತ್ತು ವರ್ಷಗಳ ಹಿಂದಿನ ಚಿತ್ರಣ. ಇಲ್ಲಿ ಹೆಣ್ಣು ಹೆತ್ತವರಿಗೆ ಯಾವುದೇ ಗಂಭೀರ ಪರಿಣಾಮದ ಅಥವಾ ಸಮಾಜದ ಗತಿಯತ್ತ ಕಳವಳಗೊಳ್ಳುವ ವಿಷಯವಿಲ್ಲ. ಸದ್ಯದ ಸ್ಥಿತಿ ಹೀಗಿಲ್ಲ. ಹೆಣ್ಣುಮಕ್ಕಳು ಮದುವೆ ಮುಂದೂಡುವುದು ಸಾಮಾನ್ಯವಾಗಿದೆ. ಸಂಸಾರದ ನಂಟನ್ನು ಸಡಿಲಗೊಳಿಸಿ ತಾನೂ ಮುಕ್ತಳಾಗುತ್ತಿರುವುದು ಸದ್ಯದ ಕಳಕಳಿಯಾಗಿದೆ. ಗಂಡಿನೊಂದಿಗೆ ಬದ್ಧಳಾಗಲು ತಮ್ಮ ಸ್ವಾತಂತ್ರ್ಯ ಅಸ್ತಿತ್ವದ ಪ್ರಶ್ನೆಯೆಂದು ಹೆಣ್ಣುಮಕ್ಕಳೂ ಸವಾಲೆಸೆಯುತ್ತಿರುವ ಕಾಲ ಇದು. ಹಿಂದಿನ ಸಮಾಜ, ಹೆಣ್ಣು-ಗಂಡು, ಮದುವೆಯ ಚಿತ್ರಣಗಳೆಲ್ಲ ಬದಲಾಗಿವೆ. ಈಗ ಮದುವೆಗೆ, ಗಂಡನ್ನು ನಿರಾಕರಿಸಲು ಬೇರೆ ಬೇರೆ ಆಯಾಮಗಳಿವೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ. 48 ಸ್ತ್ರೀಯರು, ಶೇ.52 ಪುರುಷರು. ಈ ಲಿಂಗಾನುಪಾತ ಹೆಚ್ಚುತ್ತಲೇ ಇದೆ. ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವ ಕಾಲದಲ್ಲಿ ಮದುವೆಯನ್ನು ಮುಂದೂಡುವ, ಗಂಡನ್ನು ಹಲವಾರು ಕಾರಣಕ್ಕೆ ನಿರಾಕರಿಸುತ್ತಿರುವ ಯುವತಿಯರು ಸಮಸ್ಯೆಯೆನಿಸುತ್ತಿದ್ದಾರೆ. ಕೌಟುಂಬಿಕ, ಸಾಮಾಜಿಕ ಆತಂಕಕ್ಕೆ ಗ್ರಾಸವಾಗಿದ್ದಾರೆ.

ಕಾಲಕ್ಕೆ ತಕ್ಕಂತೆ: ಸಂತಾನೋತ್ಪತ್ತಿಯ ಹೊಣೆ, ಸಹಜವಾದ ಲೈಗಿಂಕಾಸಕ್ತಿಗೆ ನಿಯಮಗಳು, ಸಂಗಾತಿಯೊಂದಿಗಿನ ಭದ್ರತೆ, ಬದ್ಧತೆ, ಮಾನಸಿಕ, ದೈಹಿಕ ಸ್ಥಿತ್ಯಂತರಗಳು ಗಂಡಿಗಿಂತ ಹೆಣ್ಣಿಗೆ ಜಾಸ್ತಿ. ಹೆಣ್ಣು ಒಂಟಿಯಾಗಿ ಬದುಕಲು ಮಾನಸಿಕ, ದೈಹಿಕ, ನೈತಿಕ, ಕೌಟುಂಬಿಕ, ಸಾಮಾಜಿಕ ದೃಷ್ಟಿಯಿಂದ ಹಲವು ಸವಾಲುಗಳನ್ನು ಮೂವತ್ತು ವರ್ಷಗಳ ಹಿಂದೆ ಎದುರಿಸಬೇಕಾಗಿತ್ತು. ಈಗ ಎಲ್ಲ ರೀತಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಸಮಕಾಲೀನ ಶಿಕ್ಷಣ ವ್ಯವಸ್ಥೆ ಸಾಮಾನ್ಯವಾಗಿ ಉದ್ಯೋಗ ಲಾಭಕ್ಕಾಗಿ ರೂಪುಗೊಂಡವು. ಉನ್ನತ ಶಿಕ್ಷಣವು ಸಿಗುತ್ತಿದೆ. ಗಂಡಿನಂತೆ ಹೆಣ್ಣೂ ಶೈಕ್ಷಣಿಕ, ಆರ್ಥಿಕ, ಕೌಟುಂಬಿಕ ನೆಲೆಯಲ್ಲಿ ಸಮರ್ಥಳಾಗಿದ್ದಾಳೆ. ಈಗ ಆಕೆ ಎಲ್ಲವನ್ನೂ ಓರ್ವ ಪುರುಷನಂತೆ ನಿಭಾಯಿಸಬಲ್ಲಳು. ಮೊದಲೆಲ್ಲ ಗಂಡನ್ನು ನಿರಾಕರಿಸಲು ಹುಡುಗಿಯರಿಗೆ ಏನು ತಡೆಗಳಿದ್ದವೋ ಈಗ ಅವೆಲ್ಲ ಇಲ್ಲವೇ ಇಲ್ಲ. ಒಂದು ಅಥವಾ ಎರಡು ಮಕ್ಕಳ ಸಂಸಾರದಲ್ಲಿ ಪಾಲಕರು ಈಗ ಮೊದಲಿನಂತೆ ತಮ್ಮ ಮಕ್ಕಳ ಮದುವೆ ಅಥವಾ ಜೀವನದ ಮೇಲೆ ಒತ್ತಾಯಪೂರ್ವಕವಾಗಿ ಏನನ್ನೂ ನಿರ್ಧರಿಸುವುದಿಲ್ಲ. ಮಕ್ಕಳು ಮದುವೆಯ ವಯಸ್ಸಿಗೆ ಬರುವಾಗ ಆರ್ಥಿಕವಾಗಿ ಸ್ವಾವಲಂಬಿಗಳಾಗಿರಲಿ ಎಂದು ಬಯಸುತ್ತಾರೆ. ಯೌವನದಲ್ಲಿ ಸ್ವತಂತ್ರ ಹಕ್ಕಿಗಳಂತೆ ಬದುಕುವ ನಿಟ್ಟಿನಲ್ಲಿ ಮಕ್ಕಳೇ ಪಾಲಕರ ಕೈಗೆ ಎಟಕುವಂತೆ ಇರುವುದೇ ಇಲ್ಲ. ಹಾಗಾಗಿ ಮದುವೆಯೆಂಬುದು ಈಗ ಹೆಚ್ಚೆಚ್ಚು ವೈಯಕ್ತಿಕ ನಿರ್ಧಾರವಾಗುತ್ತಿದೆ.

ಮದುವೆ ಒಲ್ಲೆ!: ಇಷ್ಟೆಲ್ಲ ಬದಲಾದ ಪರಿಸರದಲ್ಲಿಯೂ, ಯುವತಿಯರು ಮದುವೆ ಬೇಡ, ಈ ಗಂಡು ಬೇಡ ಅನ್ನಲು ವೈವಿಧ್ಯಮಯ ಕಾರಣಗಳೀಗ ಕಾಣಿಸುತ್ತಿವೆ. ಮೊದಲು ಓದು ಮುಗಿಯಲಿ. ಶಿಕ್ಷಣ ಮುಗಿದ ನಂತರ ಉದ್ಯೋಗವೊಂದು ಸಿಗಲಿ. ನಂತರ ಅತ್ಯುತ್ತಮ ಅವಕಾಶಕ್ಕೆ ಕಾಯುವುದು. ಹಗಲು-ರಾತ್ರಿಯೆನ್ನದೆ ಪೈಪೋಟಿಯ ರಭಸದಲ್ಲಿ ದುಡಿಯುವುದು. ಈ ಸಮಯದಲ್ಲಿ ಮದುವೆಯಾಗುವುದೆಂದರೆ ಒಂದು ಹೊರೆ ಹೊತ್ತ ಭಾವ. ಅದರಲ್ಲೂ ಸಂಸಾರದ ಮತ್ತು ವೃತ್ತಿಯ ಜವಾಬ್ದಾರಿ ನಿರ್ವಹಿಸಿ ಏಕಕಾಲದಲ್ಲಿ ಹೆಣಗುವುದು ಮಹಿಳೆಗೆ ಹೆಚ್ಚು ಒತ್ತಡ. ಇನ್ನು ಮಕ್ಕಳು, ಅವರ ಪಾಲನೆ, ಶಿಕ್ಷಣ, ಮನೆ, ಕಾರು, ಕೊಂಚ ಐಷಾರಾಮಿಗೆ ತೆತ್ತ ಸಾಲ, ಬಡ್ಡಿಯ ಕಂತುಗಳ ಶೂಲ. ಹೀಗೆ, ಎಷ್ಟೆಲ್ಲ ಕಷ್ಟಗಳ ಸರಣಿಗಳು. ಎಲ್ಲವೂ ಮದುವೆಯೆಂಬ ವ್ಯವಸ್ಥೆಯಲ್ಲಿ ಕೇಂದ್ರಿತ.

ಮದುವೆಯಾಗದೇ ಇದ್ದರೆ, ಎಲ್ಲವೂ ಸುಲಲಿತ. ತನ್ನೊಬ್ಬಳ ಬದುಕು ನೋಡಿಕೊಂಡರಾಯಿತು. ಹೊಣೆಯಿಲ್ಲದ ಸ್ವತಂತ್ರ ಬದುಕು. ತನಗಾಗಿ ದುಡಿದ ಹಣವೆಲ್ಲ ಯಾರೂ ಪ್ರಶ್ನಿಸದಂತೆ ಖರ್ಚು ಮಾಡಬಹುದು. ಜೊತೆಗೆ ಏಕವ್ಯಕ್ತಿಗೆ ಜೀವನವಿಡೀ ಬದ್ಧಳಾಗುವುದು ತಪ್ಪುತ್ತದೆ! ಮದುವೆಯ ಬದಲು ಲೈಂಗಿಕ ಕಾಮನೆಗೆ ಲಿವಿಂಗ್ ಟುಗೆದರ್, ಓನ್ಲಿ ಡೇಟಿಂಗ್ ಕೂಡ ಸಾಧ್ಯ. ನಾನೂ ನಿನ್ನನ್ನು ಬಂಧಿಸುವುದಿಲ್ಲ, ನೀನೂ ನನ್ನನ್ನು ಬಂಧಿಸದಿರು. ಲೀಗಲ್ ರಗಳೆಗಳೇ ಬೇಡ. ಬೋರಾದರೆ ಯಾವಾಗಲಾದರೂ ಬಿಟ್ಟು ಇನ್ನೊಬ್ಬರ ಜೊತೆಗೆ ಸೆಕ್ಸುಯಲಿ ಆಕ್ಟಿವ್ ಆದರಾಯಿತು… ಸಮಾಜ ಬದಲಾಗುತ್ತಿದೆ!

ಆದರೆ, ಗಂಡನ್ನೇ ನಿರಾಕರಿಸಿ ಒಂಟಿಯಾಗಿ ಬಾಳುತ್ತೇನೆ ಎನ್ನುವ ದೃಢತೆಯಿರುವ ಯುವತಿಯರು ವಿರಳ. ಮಾನಸಿಕವಾಗಿ ಜೀವನದ ಆಧ್ಯಾತ್ಮಿಕ ಸಾಧನೆಯ ನೋಟವಿದ್ದರೆ ಸಂಸಾರದ ವ್ಯವಸ್ಥೆಯಿಂದ ದೂರವುಳಿದು ಸಾಧಿಸುವವರೂ ಇದ್ದಾರೆ. ಇದು ವೈಯಕ್ತಿಕ ನೆಲೆಯಲ್ಲಿ ಯಾರೂ ಸಮಸ್ಯೆಯೆಂದು ಕಾಣದೆ ಅವಳನ್ನು ಸಾಧನೆಯ ಮಾರ್ಗದಲ್ಲಿ ಸಾಗಲು ಬಿಡಬಹುದು. ಆದರೆ, ಈಗ ವಯಸ್ಸು ದಾಟುತ್ತಿರುವ ಯುವತಿಯರ ನಡೆಗಳಿಗೆ ಇಂತಹ ಉನ್ನತ, ವಿರಳ ಉದ್ದೇಶಗಳು ಕಾಣುತ್ತಿಲ್ಲ.

ಮೂವತ್ತರ ಬಳಿಕ..: ವಯಸ್ಸು ಹದಿನಾರು ದಾಟಿದ ನಂತರ ಲೈಂಗಿಕಾಸಕ್ತಿಗೆ ಬೇಕಾಗುವ ದೈಹಿಕ ಆರೋಗ್ಯ, ಧೈರ್ಯ, ಸಾಮರ್ಥ್ಯಗಳೆಲ್ಲವನ್ನೂ ಸಹಜವಾಗಿಯೇ ಹೆಣ್ಣು ಪಡೆಯುತ್ತಾಳೆ. 18 ವರ್ಷಗಳ ಹುಡುಗಿ, 25 ವರ್ಷಗಳ ಹುಡುಗ ಮದುವೆಗೆ ಅರ್ಹರು. ಅಥವಾ ಸಂತಾನೋತ್ಪತ್ತಿಗೆ ಸಿದ್ಧವಾಗುವ ವಯಸ್ಸಿದು. ಈ ವಯಸ್ಸಿನಲ್ಲಿ ವೀರ್ಯ ಮತ್ತು ಗರ್ಭಾಶಯದ ಆರೋಗ್ಯದಿಂದಾಗಿ ಗರ್ಭಧಾರಣೆ, ಪ್ರಸವ, ಶಿಶುವಿನ ಆರೋಗ್ಯವೂ ಸುಗಮವಾಗಿರುತ್ತದೆ. ವಯಸ್ಸು ಮೂವತ್ತು ದಾಟಿದ ಯುವತಿಯರಿಗೆ ಗರ್ಭ ನಿಲ್ಲುವುದು, ಹಡೆಯುವುದು, ಮಕ್ಕಳ ಪಾಲನೆಗೆ ಬೇಕಾದ ತಾಳ್ಮೆ, ದೈಹಿಕ ಸಾಮರ್ಥ್ಯ, ಮಾನಸಿಕ ಸಂತುಲನ ಎಲ್ಲವೂ ಕಷ್ಟವಾಗುತ್ತದೆ. ಇದು ಸಹಜ ದೈಹಿಕ ಸ್ಥಿತಿ. ಪುರುಷರಿಗೆ ಇಂತಹ ಸವಾಲುಗಳಿಲ್ಲ. ಈ ಸಮಯದಲ್ಲಿಯೇ ಒಂದೇ ಸಂಗಾತಿಯೊಂದಿಗೆ ದೀರ್ಘಕಾಲ ಲೈಂಗಿಕಕ್ರಿಯೆ, ಸಂತಾನೋತ್ಪತ್ತಿ, ಕುಟುಂಬ ವ್ಯವಸ್ಥೆ, ಎಲ್ಲವೂ ಸಮತೋಲನದಲ್ಲಿದ್ದರೆ ಇವುಗಳಿಂದ ಸಿಗುವ ದೈಹಿಕ, ಮಾನಸಿಕ ಸ್ವಾಸ್ಥ್ಯ ನಿಜಕ್ಕೂ ಔಷಧಗಳಿಗೂ ಮೀರಿದ ಆರೋಗ್ಯ ಲಾಭ. ಸಂಪದ್ಭರಿತ ಜೀವನವಿದು. ಆದರೆ, ಗ್ಯಾಮೋಫೋಬಿಯಾ ಅಥವಾ ಖಿನ್ನತೆಯ ಪ್ರಭಾವದಲ್ಲಿರುವ ಯುವತಿಯರಿಗೆ ಇದೊಂದು ಪರಿಹರಿಸಿಕೊಳ್ಳಲೇಬೇಕಾದ ಆರೋಗ್ಯ ಸಮಸ್ಯೆ.

ಒಲ್ಲೆ ಎಂದವರೂ ನಲ್ಲೆಯರಾಗಲಿ!: ಸಾಂಗತ್ಯದ ಸಿಹಿಯಾದ ಅನುಭವ ಕಂಡು, ಕೇಳಿದ ಯಾರೂ ಮದುವೆಗೆ ಇಲ್ಲ ಎನ್ನುವುದಿಲ್ಲ. ಕುಟುಂಬದ ಹಿರಿಯರು, ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರು ಈ ಚಿತ್ರಣವನ್ನು ಸಮರ್ಪಕವಾಗಿ ಮೂಡಿಸಬಹುದು. ಪುರುಷನೂ ತನ್ನ ವ್ಯಕ್ತಿತ್ವ ಮಾತ್ರದಿಂದ ಸ್ತ್ರೀಯೊಬ್ಬಳ ಅಂತರಂಗದಲ್ಲಿ ಸಪ್ತಪದಿಯ ಆಸೆ ಮೊಳೆಯಿಸಬಹುದು. ಯಾವ ಆಂತರಿಕ, ಬಾಹ್ಯಕಾರಣಗಳಿಂದಾಗಿ ಆಕೆ ನಿರಾಕರಿಸುತ್ತಿದ್ದಾಳೆ ಎಂಬ ಸ್ಪಷ್ಟ ಅರಿವಿದ್ದರೆ ನಿವಾರಣೆಯೂ ಸುಲಭ. ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ತೆರೆದಿಡಲು ಆಪ್ತರು ಅನುವು ಮಾಡಿಕೊಟ್ಟರೆ ಸುಲಭವಾಗಬಹುದು.

ವೈದ್ಯರೊಂದಿಗೆ, ಆಪ್ತಸಮಾಲೋಚನೆಯ ಮೂಲಕ ಸಮಸ್ಯೆಯ ಆಳ ಅರಿತು ಮದುವೆಯ ಬಗ್ಗೆ, ಗಂಡಿನ ಜೊತೆಗಿನ ದೀರ್ಘಕಾಲದ ಬದ್ಧತೆಯ ಕುರಿತಾದ ಹಲವು ತಪ್ಪು ವಿಚಾರಗಳನ್ನು ತೆಗೆದುಹಾಕಬಹುದು.

ಕೌಟುಂಬಿಕ ಶಿಕ್ಷಣ, ನೈತಿಕ ಶಿಕ್ಷಣ, ಮಾಧ್ಯಮಗಳು, ಉತ್ತಮ ಒಡನಾಡಿಗಳು, ಹಿರಿಯರ ಆದರ್ಶ ವೈವಾಹಿಕ ಜೀವನ, ಒಳ್ಳೆಯ ಪುಸ್ತಕಗಳ ಓದು, ಚಲನಚಿತ್ರಗಳು, ಚರ್ಚೆ, ಸಮಾಲೋಚನೆಗಳು ಮನಸ್ಸನ್ನು ಬದಲಾಯಿಸಲು ಸಹಾಯಕ. ಸಕಾಲದಲ್ಲಿ ವಿವಾಹ, ಶುಭವಿವಾಹಗಳಂತಹ ಮಂಗಳಕರ ವಿಚಾರಗಳು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ವ್ಯವಸ್ಥೆ, ಭದ್ರತೆ, ಸ್ವಾಸ್ಥ್ಯ್ಕೆ ರಹದಾರಿ.

ಯಾರಲ್ಲಿ ಸಾಮಾನ್ಯ?

ಇಂತಹ ಖಿನ್ನ ಭಾವನೆಗಳಿಗೆ ಒಳಗಾಗುವವರು ತಂದೆ-ತಾಯಿಯರ ಅತೃಪ್ತ, ಮುರಿದು ಹೋದ ದಾಂಪತ್ಯವನ್ನು ಬಾಲ್ಯದಿಂದಲೇ ಕಂಡಿರುತ್ತಾರೆ. ಅಂಥವರು ತಮ್ಮ ಮದುವೆಗೂ ಹೆದರಬಹುದು. ಸಹೋದರ, ಸಹೋದರಿ, ಸ್ನೇಹಿತ, ಸಂಬಂಧಿಗಳ ಮುರಿದ ಸಂಬಂಧಗಳು ಇವರನ್ನು ಕಾಡುತ್ತಿರಬಹುದು. ಸ್ವತಃ ತಾವೂ ಯೌವನದ ಪ್ರೇಮದಲ್ಲಿ ತಿರಸ್ಕರಿಸಲ್ಪಟ್ಟಿರಬಹುದು. ‘ಮೆನ್ ಆರ್ ಮೆನ್’ ಎಂಬ ಟ್ಯಾಗ್​ಲೈನ್ ಹಾಕಿಕೊಂಡ ಹಲವು ಚಲನಚಿತ್ರ, ಕಿರುಚಿತ್ರ, ಸಾಹಿತ್ಯ, ಮಾಧ್ಯಮಗಳಲ್ಲಿ ಕಂಡುಬರುವ ಘಟನೆಗಳ ವೈಭವೋಪೇತ ವರದಿಗಳೂ ಸಹ ಮಾನಸಿಕವಾಗಿ ತಲ್ಲಣವೆಬ್ಬಿಸಿರಬಹುದು. ಗಂಡಿನ ಚಟ, ಜೀವನಶೈಲಿ, ನಿರ್ಲಕ್ಷ್ಯ, ಬದ್ಧತೆಗೆ ಮನಸ್ಸಿಲ್ಲದ ಸ್ವಭಾವವನ್ನು ಕಂಡು ರೇಜಿಗೆ ಹುಟ್ಟಿರಬಹುದು. ಅಥವಾ ತಾವು ಕಷ್ಟಪಟ್ಟು ಓದಿ, ಉದ್ಯೋಗ ಗಳಿಸಿ, ಆರ್ಥಿಕವಾಗಿ ಭದ್ರವಾಗಿರುವಾಗ ಅನ್ಯವ್ಯಕ್ತಿಯೊಂದಿಗೆ ತನ್ನ ಅಸ್ಮಿತೆ, ಆದಾಯ, ಜೀವನವನ್ನು ಹಂಚಿಕೊಳ್ಳುವುದು ಆಯಾಸದಾಯಕವಾಗಿ ಕಂಡಿರಬಹುದು. ತನಗಿಂತಲೂ ಉನ್ನತ ಶಿಕ್ಷಣ, ಹುದ್ದೆ, ಆರ್ಥಿಕಬಲ ಇವುಗಳನ್ನೆಲ್ಲ ತುಲನೆ ಮಾಡಿಕೊಂಡು ತೀವ್ರ ನಿರೀಕ್ಷೆಯಿಂದಾಗಿ ನಿರಾಶೆಗೊಳ್ಳುತ್ತಿರಬಹುದು.

ಮಾನಸಿಕ ಅಸಮತೋಲನ

ಓರ್ವ ಯುವತಿಯು ವಯಸ್ಸು ಮೂವತ್ತಕ್ಕೆ ಸಮೀಪಿಸುತ್ತಿದ್ದರೂ ಮದುವೆಗೆ, ತನ್ನನ್ನು ಒಪ್ಪಿದ ಸಮಾನ ಯುವಕನನ್ನು ವರಿಸಲು ಒಪ್ಪುತ್ತಲೇ ಇಲ್ಲ ಎಂದರೆ ನಿಜಕ್ಕೂ ಇದರ ಹಿಂದಿನ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಲೇಬೇಕಿರುತ್ತದೆ. ಈ ಬಗೆಯ ನಡತೆ ಖಿನ್ನತೆಯ ತೀವ್ರ ಪರಿಣಾಮವಾಗಿರಬಹುದು. ಕುಟುಂಬ, ಸಹೋದ್ಯೋಗಿ, ನೆರೆಹೊರೆ, ಸ್ನೇಹಿತರು ಅಥವಾ ಅಪರಿಚಿತರ ಮೇಲೂ ಸಿಡಿಮಿಡಿಗೊಳ್ಳುವುದು, ಕಿರಿಕಿರಿಯಾಗುವಂತೆ ನಡೆದುಕೊಳ್ಳುವುದು ಅಥವಾ ಅಂತಮುಖಿಯಾಗಿ ಒಳಗೊಳಗೇ ಕೊರಗುವುದು, ನೊಂದುಕೊಳ್ಳುವುದು. ಇವೆಲ್ಲವನ್ನು ಮುಚ್ಚಿಡಲು ಹಲವು ಬಹಿಮುಖ ಪ್ರದರ್ಶನಕ್ಕೆ ತೊಡಗುವುದು. ಸಾಮಾಜಿಕ ಜಾಲತಾಣ, ಫೇಸ್​ಬುಕ್, ವಾಟ್ಸ್​ಆಪ್​ನಂತಹ ಮಾಧ್ಯಮಗಳ ಮೂಲಕ ಮಾನಸಿಕ ತುಡಿತಗಳನ್ನು ಹರಿಯಲು ಬಿಡುವುದು, ದೀರ್ಘಕಾಲೀನ ಮಾನಸಿಕ ಅಸಮತೋಲನ, ಒಂಟಿತನ, ಅತೃಪ್ತಿ, ಅಭದ್ರ ಲೈಂಗಿಕಜೀವನ, ಆತ್ಮಹತ್ಯೆಯಂತಹ ತೀವ್ರತರವಾದ ಯೋಚನೆ, ಆತ್ಮಹತ್ಯೆಗೂ ಪ್ರಯತ್ನಿಸುವುದು ಇವೆಲ್ಲ ಮತ್ತೊಂದು ಬಗೆಯ ಪರಿಣಾಮಗಳು. ಒಟ್ಟಾರೆ ಇದು ಪರಿಹರಿಸಿಕೊಳ್ಳಬೇಕಾದ ಅವಸ್ಥೆ.

ಗ್ಯಾಮೋಫೋಬಿಯಾ

ಸಮಸ್ಯೆ ತಾತ್ಕಾಲಿಕವಾಗಿದ್ದು ನಂತರ ಗಂಡನ್ನು ಸ್ವೀಕರಿಸಿ ಮದುವೆಯಾದರೆ ಯೋಚಿಸಬೇಕಾ ದ್ದಿಲ್ಲ. ಆದರೆ, ಸಾಂಗತ್ಯ ಆಂತರಿಕವಾಗಿ ಬೇಕು. ಬಹಿರಂಗ ವಾಗಿ ಒಪ್ಪಿಕೊಳ್ಳಲು ಭಯ, ಹಿಂಜರಿಕೆ, ಸಂಶಯ, ಅಸಡ್ಡೆ, ಅಭಿಮಾನ, ದುರಹಂಕಾರ, ನಿರೀಕ್ಷೆ ಇಂತಹ ಮಾನಸಿಕ ಕಾರಣಗಳಿದ್ದಾಗ ಅದು ಅಸ್ವಸ್ಥತೆ. ಅದರಿಂದ ದೈಹಿಕವಾಗಿಯೂ, ಕುಟುಂಬದಲ್ಲಿ ಸಂಬಂಧಗಳ ಸಮತೋಲನವೂ ತಪ್ಪುತ್ತಿದ್ದರೆ ಅದೊಂದು ಮಾನಸಿಕವಾಗಿ ಖಿನ್ನತೆ. ಗ್ಯಾಮಾಫೋಬಿಯಾ ಎಂಬುದು ಸಾಂಗತ್ಯ, ಬದ್ಧತೆ, ಮದುವೆ ಹಾಗೂ ಸಂಬಂಧದ ಬಗ್ಗೆ ಆಳವಾಗಿ ಭಯಬೀಳುವ ಒಂದು ಖಿನ್ನತೆಯ ಸ್ಥಿತಿ. ಇದು ನಿಜಕ್ಕೂ ಎಷ್ಟು ತೀವ್ರವೆಂದರೆ ಮದುವೆಯಾಗಲು ಅಪೇಕ್ಷಿಸಿ ಬಂದ ಗಂಡು ಯಾರೇ ಇರಲಿ, ಹೇಗೇ ಇರಲಿ, ಎಂತಹ ಸುಗುಣಗಳೇ ತುಂಬಿರಲಿ. ಯುವತಿಯು ನಿರಾಕರಿಸಲು ಹಲವು ಕಾರಣಗಳನ್ನು ಹುಡುಕುತ್ತಾಳೆ.

3 Replies to “‘ವಧು’ವಾಗದ ಯುವತಿಯರು; ಮೂವತ್ತಾದರೂ ಮದುವೆ ಬೇಡ!”

  1. ಕಾರಣಗಳೇನೇ ಇರಲಿ, ಇವರೆಲ್ಲರೂ ಪ್ರಾಕೃತಿಕ ನಿಯಮಕ್ಕೆ ವಿರೋಧವಾಗಿ ಜೀವನ ನಡೆಸುತ್ತಿದ್ದಾರೆ.

  2. ಸ್ವಾತಂತ್ರ ಅವಶ್ಯಕತೆಗಿಂತ ಹೆಚ್ಚಾಗಿ ಸಿಕ್ಕಿರೋದೆ ಇದಕ್ಕೆಲ್ಲ ಕಾರಣ

  3. Hudgi nodoke kappu chennagilla antha bit hogo jana ne jadti. Midal class family li hudgaru kelovastu hana anukula ella andre 30 alla 35 adru yardu madve agolla. Modle heli keli midal class family adarallu 3 jana henmakalu edrantu mugitu gandinkadeyavaru nodake bartivi andoru baralla

Leave a Reply

Your email address will not be published. Required fields are marked *