ರಾಮನಗರ: ಪೂಜೆ ಮಾಡಿಸುವ ನೆಪದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ದೇವಸ್ಥಾನದಲ್ಲಿಯೇ ದೋಚಿರುವ ಘಟನೆ ಐಜೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದಿದೆ.
ನಗರದ ವಿವೇಕಾ ನಂದ ನಗರದ ನಿವಾಸಿ ವಾಣಿಶ್ರೀ ಮಾಂಗಲ್ಯ ಸರ ಕಳೆದುಕೊಂಡವರು. ಎಂದಿನಂತೆ ತಮ್ಮ ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ತೆರಳುತ್ತಿದ್ದ ವಾಣಿಶ್ರೀ ನಗರದ ರಾಯರದೊಡ್ಡಿ ವೃತ್ತದ ಬಳಿ ಇರುವ ಭುವನೇಶ್ವರಿ ದೇವಾಲಯಕ್ಕೆ ತೆರಳಿದ್ದಾರೆ.
ಈ ವೇಳೆ ದೇವಸ್ಥಾನದಲ್ಲಿ ಯಾರೂ ಇಲ್ಲದ ಕಾರಣ ದೇವರಿಗೆ ಕೈ ಮುಗಿದು ಹೊರ ಬರುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ 100 ರೂ.ಗಳ 5 ನೋಟು ಕೊಟ್ಟು ಮಂಗಳಾರತಿ ತಟ್ಟಗೆ ಹಾಕಲು ಕೇಳಿಕೊಂಡಿದ್ದಾನೆ.
ಮಂಗಳಾರತಿ ತಟ್ಟಗೆ ಹಣ ಹಾಕಲು ಹೋದಾಗ, ನನಗೆ ಹರಕೆ ಇದೆ, ಹಣವನ್ನು ತಾಳಿಗೆ ಮುಟ್ಟಿಸಿ ಹಾಕಿ ಎಂದು ಕೋರಿದ್ದಾನೆ. ಇಷ್ಟೇ ಅಲ್ಲದೆ, ಮಾಂಗಲ್ಯ ಸರವನ್ನು ಕತ್ತಿನಿಂದ ತೆಗೆಸಿ ಹಣ್ಣು ಕಾಯಿಗಳಿದ್ದ ಕವರಿನಲ್ಲಿ ದುಡ್ಡಿನ ಸಮೇತ ಇಟ್ಟಿದ್ದಾನೆ. ಇದೆಲ್ಲವೂ ಪೂಜೆಗಾಗಿ ಮಾಡುತ್ತಿದ್ದಾನೆ ಎಂದು ನಂಬಿದ ವಾಣಿಶ್ರೀ ಅವರ ಹೇಳಿದಂತೆ ಮಾಡಿದ್ದಾರೆ.
ಈ ಕವರ್ ಪಡೆದ ವ್ಯಕ್ತಿ ಗರ್ಭಗುಡಿಯಲ್ಲಿ ಪ್ರದಕ್ಷಿಣೆ ಬಂದು, ನಂತರ ಕಟ್ಟಿದ ಕವರ್ ಅನ್ನು ವಾಣಿಶ್ರೀ ಅವರ ಕೈಯಲ್ಲಿ ಕೊಟ್ಟು ತೆರಳಿದ್ದಾನೆ. ನಂತರ ಕವರ್ ಬಿಚ್ಚಿ ನೋಡಿದಾಗ ಮಾಂಗಲ್ಯ ಸರ ಇಲ್ಲದಿರುವುದು ಗೊತ್ತಾಗಿದೆ. ಈ ವೇಳೆ ಮತ್ತೊಬ್ಬ ವ್ಯಕ್ತಿ ವಂಚಕನಿಗೆ ಸಾಥ್ ನೀಡಿದ್ದು, ಮಾಂಗಲ್ಯ ಸರ ಕೈ ಸೇರುತ್ತಿದ್ದಂತೆ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ಮಹಿಳೆ ಐಜೂರು ಪೊಲೀಸರಿಗೆ ದೂರು ನೀಡಿದ್ದಾರೆ.