More

    ಕೊಡಗಿನಲ್ಲಿ ವೆಜ್ ಹೋಮ್‌ಸ್ಟೇಗಳ ಕೊರತೆ

    ಮಡಿಕೇರಿ:

    ಕೊಡಗಿನ ಪ್ರಾಕೃತಿಕ ಸೌಂದರ್ಯ ಆಸ್ವಾದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ತಿನಿಸುಗಳ ರುಚಿ ನೋಡುವುದಕ್ಕೋಸ್ಕರ ಬರುವವರೂ ಇದ್ದಾರೆ. ಅದರಲ್ಲೂ ಇಲ್ಲಿಯ ’ಪಂದಿಕರಿ’ ವಿಶ್ವಪ್ರಸಿದ್ಧ. ಹಾಗಾಗಿ ಎಲ್ಲಾ ಸ್ಥಳೀಯ ಹೊಟೇಲ್, ಹೋಮ್‌ಸ್ಟೇ, ರೆಸಾರ್ಟ್‌ಗಳಲ್ಲಿ ಮಾಂಸಾಹಾರ ಸಾಮಾನ್ಯ. ಕೇವಲ ಶಾಖಾಹಾರವನ್ನಷ್ಟೇ ತಯಾರಿಸಿ ಬಡಿಸುವ ಹೋಮ್‌ಸ್ಟೇಗಳು ಇಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದ್ದು, ಪ್ರವಾಸಿಗಳ ದಟ್ಟಣೆಯ ಅವಧಿಯಲ್ಲಿ ಕೊಡಗಿನಲ್ಲಿ ಕಾಣಿಸಿಕೊಳ್ಳುವ ’ವೆಜ್ ಹೋಮ್‌ಸ್ಟೇ’ಗಳ ಅಭಾವ ಶಾಖಾಹಾರಿ ಪ್ರವಾಸಿಗರ ಕಸಿವಿಗೆ ಕಾರಣವಾಗುತ್ತಿದೆ.
    ಕೊಡಗು ಎಂದ ಕೂಡಲೇ ಮಲೆನಾಡು, ಬೆಟ್ಟ, ಗುಡ್ಡ, ಕಾಫಿ ತೋಟದ ಜತೆಗೆ ಇಲ್ಲಿಯ ಬಗೆ ಬಗೆಯ ಮಾಂಸಾಹಾರದ ಖಾದ್ಯಗಳೂ ಪ್ರವಾಸಿಗರ ಕಣ್ಣುಮುಂದೆ ಬರುತ್ತದೆ.

    ಜಿಲ್ಲೆಯ ಹೋಮ್‌ಸ್ಟೇಗಳಿಗೆ ಬರುವವರಿಗೆ ಮಾಂಸದ ಊಟ ಅದರಲ್ಲೂ ಪಂದಿ ಕರಿಯ ಆತಿಥ್ಯ ಇಲ್ಲಿಯ ವಿಶೇಷ. ಕೊಡಗಿನ ವಿಶೇಷ ಮಾಂಸಾಹಾರವನ್ನು ಸವಿಯಲೆಂದೇ ಪ್ರವಾಸ ಹಮ್ಮಿಕೊಳ್ಳುವವರೂ ಇದ್ದಾರೆ. ತಾವು ತಂಗುವ ಹೋಮ್‌ಸ್ಟೇಗಳಿಗೆ ಮೊದಲೇ ಕರೆ ಮಾಡಿ ಸ್ಥಳೀಯ ಸಾಂಪ್ರದಾಯಿಕ ರೀತಿಯ ಮಾಂಸದ ಅಡುಗೆ ಮಾಡಿಸುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆ ಇಲ್ಲ.

    ಮಾಂಸಹಾರಿ ಮತ್ತು ಮಾಂಸಪ್ರಿಯ ಪ್ರವಾಸಿಗರ ಮನಗೆಲ್ಲುವುದಕ್ಕಾಗಿಯೇ ಇಲ್ಲಿನ ಎಲ್ಲಾ ಹೋಮ್‌ಸ್ಟೇ ರೆಸಾರ್ಟ್, ಹೊಟೇಲ್‌ಗಳಲ್ಲಿ ಸಸ್ಯಹಾರದ ಅಡುಗೆ ಜತೆಯಲ್ಲಿ ಮಾಂಸಾಹಾರದ ಖಾದ್ಯ ಸಾಮಾನ್ಯ. ಕೇವಲ ಸಸ್ಯಾಹಾರದ ಊಟ ಕೊಡುವ ಹೊಟೇಲ್‌ಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಸಸ್ಯಾಹಾರವನ್ನಷ್ಟೇ ಕೊಡುವ ಹೋಮ್‌ಸ್ಟೇಗಳು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ಸಾಮಾನ್ಯ ದಿನಗಳಲ್ಲೂ ಇಂತಹ ಹೋಮ್‌ಸ್ಟೇಗಳು ಖಾಲಿ ಇರುವುದಿಲ್ಲ. ರಜಾ ದಿನಗಳಲ್ಲಂತೂ ಸಸ್ಯಹಾರಿ ಪ್ರವಾಸಿಗರು ಕೊಡಗಿನಲ್ಲಿ ತಂಗಲು ಪರದಾಡುವಂತಹ ಸ್ಥಿತಿ ಇದೆ.

    ತಮ್ಮಲ್ಲಿಗೆ ಆಗಮಿಸುವ ಶುದ್ಧ ಶಾಖಾಹಾರಿ ಪ್ರವಾಸಿಗರಿಗೆ ಹೋಮ್‌ಸ್ಟೇ ಮಾಲೀಕರು ಸಾಮಾನ್ಯವಾಗಿ ಸಸ್ಯಹಾರಿ ಹೊಟೇಲ್‌ಗಳಿಂದ ಊಟ, ತಿಂಡಿ ತರಿಸಿಕೊಡುತ್ತಾರೆ. ’ನಮ್ಮಲ್ಲಿ ಮಾಂಸಹಾರವೂ ಇರುವುದರಿಂದ ಇಲ್ಲಿ ಮಾಡಿಕೊಡುವ ಸಸ್ಯಹಾರದ ಅಡುಗೆಯನ್ನು ಸೇವಿಸಲು ಶಾಖಾಹಾರಿಗಳು ಹಿಂದೇಟು ಹಾಕುತ್ತಾರೆ,’ ಎನ್ನುವ ಹೋಮ್ ಸ್ಟೇ ನಿರ್ವಾಹಕರು, ಹೋಂಸ್ಟೇಗಳಿಗೆ ಬಂದು ತಂಗುವುದನ್ನು ಖಾತರಿ ಮಾಡಿಕೊಂಡ ನಂತರವೂ ಮಾಂಸಹಾರದ ಹೋಂಸ್ಟೇ ಎನ್ನುವ ಕಾರಣಕ್ಕೆ ವಾಪಸ್ ತೆರಳಿದ ಪ್ರವಾಸಿಗರೂ ಇದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ.

    ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಹಾರ ಪದ್ಧತಿ ಇರುತ್ತದೆ. ಪರಿಶುದ್ಧ ಸಸ್ಯಹಾರಿಗಳು ಮಾಂಸಹಾರ ಕಂಡರೆ ಸಾಕು ಮಾರುದೂರ ಓಡುತ್ತಾರೆ. ಹಾಗಾಗಿ ಹೋಮ್‌ಸ್ಟೇಗಳಲ್ಲಿ ಮಾಂಸಹಾರದ ಜತೆಗೆ ಸಸ್ಯಹಾರವನ್ನೂ ತಯಾರಿಸಿಕೊಟ್ಟರೆ ಇಂಥವರಿಗೆ ಇರಿಸುಮುರಿಸು ಸಹಜ. ಇದರಿಂದಾಗಿಯೇ ಶುದ್ಧ ಸಸ್ಯಹಾರ ಅಡುಗೆಯನ್ನಷ್ಟೆ ತಯಾರಿಸುವ ಹೋಮ್‌ಸ್ಟೇಗಳನ್ನು ಮಾತ್ರ ಶಾಖಾಹಾರಿಗಳು ಹುಡುಕಾಡುತ್ತಾರೆ. ಆದರೆ ಇಂಥ ಹೋಮ್‌ಸ್ಟೇಗಳು ಕೆಲವೇ ಕೆಲವು ಮಾತ್ರ ಇರುವುದರಿಂದ ಕೊಡಗಿನ ಪ್ರವಾಸಕ್ಕೆ ಬರುವ ಸಸ್ಯಹಾರಿ ಪ್ರವಾಸಿಗರಿಗೆ ಅನಾನುಕೂಲ ಆಗುತ್ತಿದೆ.

    ಕೊಡಗು ಎಂದ ಕೂಡಲೇ ಮಾಂಸಹಾರ ಮಾತ್ರ ಇಲ್ಲಿ ವಿಶೇಷ ಅಂದುಕೊಳ್ಳುವುದು ತಪ್ಪು ಎನ್ನುತ್ತಾರೆ ಪ್ರವಾಸೋದ್ಯಮಿಗಳು. ಕೊಡಗಿನಲ್ಲೂ ವಿಶಿಷ್ಟವಾದ ಸಾಂಪ್ರದಾಯಿಕ ಸಸ್ಯಹಾರಿ ಖಾದ್ಯಗಳು ಬಳಕೆಯಲ್ಲಿವೆ. ಇವುಗಳನ್ನೂ ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕು ಎನ್ನುವ ಸಲಹೆ ಕೊಡುತ್ತಾರೆ. ಶಾಖಾಹಾರಿ ಪ್ರವಾಸಿಗರನ್ನೂ ಕೊಡಗಿನತ್ತ ಸೆಳೆಯಲು ಸಾಕಷ್ಟು ಅವಕಾಶಗಳಿದ್ದು, ಇದನ್ನು ಬಳಸಿಕೊಳ್ಳಬೇಕು. ’ವೆಜ್ ಹೋಮ್‌ಸ್ಟೇ’ಗಳಿಗೆ ಇರುವ ಬೇಡಿಕೆಯನ್ನು ವಾಣಿಜ್ಯೀಕರಣಗೊಳಿಸುವಂತಾಗಬೇಕು. ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳಲ್ಲೂ ಸಸ್ಯಹಾರಕ್ಕೆ ಮಾತ್ರ ಮೀಸಲಾದ ಹೋಮ್‌ಸ್ಟೇಗಳು ಆರಂಭವಾದರೆ ಶುದ್ಧ ಶಾಖಾಹಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು. ಸ್ಥಳೀಯರಿಗೆ ಉದ್ಯೋಗದ ಮತ್ತೊಂದು ದಾರಿಯೂ ತೆರೆದುಕೊಂಡಂತಾಗುತ್ತದೆ ಎನ್ನುವ ಮಾತುಗಳು ಪ್ರವಾಸೋದ್ಯಮ ವಲಯದಲ್ಲಿ ಕೇಳಿಬರುತ್ತಿದೆ. ಮತ್ತೊಂದು ಕಡೆ ಶಾಖಾಹಾರಕ್ಕೆ ಸೀಮಿತವಾಗಿ ಹೋಮ್‌ಸ್ಟೇ ನಡೆಸುವುದು ನಿರ್ವಹಣೆ ವಿಷಯದಲ್ಲಿ ದುಬಾರಿ ಆಗಬಹುದು ಎನ್ನುವ ಅಭಿಪ್ರಾಯವೂ ಇದೆ

    ಕೊಡಗು ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ನಾವು ಕೂಡ ಕುಟುಂಬ ಸಹಿತ ಭೇಟಿ ಕೊಟ್ಟಿದ್ದೆವು. ನಮಗೆ ಎಲ್ಲಿ ಹುಡುಕಾಡಿದರೂ ಸಸ್ಯಹಾರಿ ಹೋಮ್‌ಸ್ಟೇ ಸಿಗಲಿಲ್ಲ. ಇದ್ದ ಬೆರಳೆಣಿಕೆಯಷ್ಟು ’ವೆಜ್ ಹೋಮ್‌ಸ್ಟೇ’ಗಳು ಅದಾಗಲೇ ಭರ್ತಿ ಆಗಿತ್ತು. ಇದರಿಂದಾಗಿ ನಮಗೆ ಅಲ್ಲಿ ತಂಗಲು ಸಮಸ್ಯೆ ಆಯಿತು. ಶಾಖಾಹಾರಿಗಳಿಗಾಗಿಯೇ ಕೊಡಗಿನಲ್ಲಿ ಇನ್ನಷ್ಟು ಹೋಮ್‌ಸ್ಟೇಗಳು ಆರಂಭವಾಗುವ ಅಗತ್ಯವಿದೆ.
    ಕೃಷ್ಣಭಟ್, ಪ್ರವಾಸಿ, ಬೆಂಗಳೂರು

    ಪ್ರತ್ಯೇಕವಾಗಿ ಸಸ್ಯಹಾರಕ್ಕೆ ಸೀಮಿತವಾಗಿ ಹೋಮ್‌ಸ್ಟೇ ಮಾಡುವುದು ನಿರ್ವಹಣೆ ವಿಷಯದಲ್ಲಿ ಕಷ್ಟ ಆಗಬಹುದು. ನಮ್ಮಲ್ಲಿ ಬರುವ ಅತಿಥಿಗಳಲ್ಲಿ ಶೇ ೮೦ರಷ್ಟು ಪ್ರವಾಸಿಗರು ಮಾಂಸಹಾರಿಗಳೇ ಆಗಿರುತ್ತಾರೆ. ಒಮ್ಮೊಮ್ಮೆ ಸಸ್ಯಹಾರಿಗಳೂ ಮಾಂಸಹಾರಕ್ಕೆ ಬೇಡಿಕೆ ಇಡುತ್ತಾರೆ. ಸಾಮಾನ್ಯವಾಗಿ ನಾವು ಆಹಾರ ಅಭ್ಯಾಸಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಆಹಾರದ ವ್ಯವಸ್ಥೆ ಮಾಡಿಕೊಡುತ್ತೇವೆ.
    ರವಿರಾಜ್, ಹೋಂ ಸ್ಟೇ ಮಾಲೀಕ, ಕಣಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts