ಹೆಜಮಾಡಿ ಕರಾವಳಿ ಕಾವಲು ಠಾಣೆಯಲ್ಲಿ ಸಿಬ್ಬಂದಿ ಕೊರತೆ

«ಪ್ರಸ್ತುತ 11 ಸಿಬ್ಬಂದಿ ಕರ್ತವ್ಯ ನಿರ್ವಹಣೆ * ಠಾಣೆಗೆ ಇಲ್ಲ ಇಂಟರ್‌ಸೆಪ್ಟರ್ ಬೋಟ್»

ಹೇಮನಾಥ್ ಪಡುಬಿದ್ರಿ
ಸುರತ್ಕಲ್ ಇಡ್ಯಾದಿಂದ ಕಾಪು ಕೈಪುಂಜಾಲ್‌ವರೆಗಿನ ವ್ಯಾಪ್ತಿ ಹೊಂದಿರುವ, ನಾಲ್ಕು ವರ್ಷಗಳ ಹಿಂದೆ ಕಾರ್ಯಾರಂಭಗೊಂಡಿರುವ ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಿಬ್ಬಂದಿ ನಿಯೋಜನೆಯಾಗಿಲ್ಲ.
ಠಾಣೆ ಆರಂಭದ ದಿನಗಳಲ್ಲಿ ಓರ್ವ ಇನ್‌ಸ್ಪೆಕ್ಟರ್, ಓರ್ವ ಎಸ್‌ಐ, ಇಬ್ಬರು ಎಎಸ್‌ಐ, ಏಳು ಹೆಡ್‌ಕಾನ್ಸ್‌ಟೆಬಲ್, ಐವರು ಪಿಸಿಗಳು ಹಾಗೂ ಇಬ್ಬರು ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಇಬ್ಬರು ಎಎಸ್‌ಐ, ಏಳು ಹೆಡ್ ಕಾನ್‌ಸ್ಟೇಬಲ್, ಓರ್ವ ಪಿಸಿ, ಓರ್ವ ಚಾಲಕನ ಸಹಿತ 11 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಠಾಣೆ ಪೂರ್ಣ ಪ್ರಮಾಣವಾಗಬೇಕಾದರೆ ಓರ್ವ ಇನ್‌ಸ್ಪೆಕ್ಟರ್, ಐದು ಜನ ಎಸ್‌ಐ, ನಾಲ್ಕು ಜನ ಎಎಸ್‌ಐ, ಏಳು ಹೆಡ್ ಕಾನ್ಸ್‌ಟೆಬಲ್‌ಗಳು, 21 ಪಿಸಿಗಳು ಹಾಗೂ ಇಬ್ಬರು ಚಾಲಕರು ಸೇರಿದಂತೆ ಒಟ್ಟು 40 ಸಿಬ್ಬಂದಿ ಇರಬೇಕು. ಎರಡು ತಿಂಗಳ ಹಿಂದೆಯಷ್ಟೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರೊಬ್ಬರು ಅಕಾಲಿಕವಾಗಿ ನಿಧನರಾಗಿದ್ದು, ಆ ಬಳಿಕ ಪೊಲೀಸ್ ಇಲಾಖೆಯಿಂದ ಮೂರು ಇನ್‌ಸ್ಪೆಕ್ಟರ್‌ಗಳು ಕರಾವಳಿ ಕಾವಲು ಪಡೆಗೆ ಪದೋನ್ನತಿಗೊಂಡರೂ ಯಾರೊಬ್ಬರೂ ಇಲ್ಲಿಗೆ ನಿಯೋಜನೆಯಾಗಿಲ್ಲ.
ಬೋಟ್ ಹಾಗೂ ತಾಂತ್ರಿಕ ಸಿಬ್ಬಂದಿ ಇಲ್ಲ: ಸಮುದ್ರದಲ್ಲಿಯೇ ಕಾರ್ಯಾಚರಿಸುವ ಕರಾವಳಿ ಕಾವಲು ಠಾಣೆಗೆ ಇಂಟರ್‌ಸೆಪ್ಟರ್ ಬೋಟ್ ಬೇಕು. ಆದರೆ ಇಲ್ಲಿ ಬೋಟ್ ಇಲ್ಲ. ಜೆಟ್ಟಿ ಆಗದೆ, ಬೋಟ್ ಬರುವ ಲಕ್ಷಣವೂ ಇಲ್ಲ. ಜೆಟ್ಟಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಂದರು ಇಲಾಖೆಯಿಂದ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಮಹತ್ವಕಾಂಕ್ಷೆಯ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಶೀಘ್ರದಲ್ಲಿ ಆರಂಭವಾದರೆ ಜೆಟ್ಟಿ ನಿರ್ಮಾಣವಾಗಬಹುದು ಎಂಬ ಆಕಾಂಕ್ಷೆ ಇಲ್ಲಿನ ಸಿಬ್ಬಂದಿಯದ್ದು.
ಬೋಟ್ ಮಂಜೂರಾದರೆ ಮೂರು ಜನ ಬೋಟ್ ಕ್ಯಾಪ್ಟನ್, ಮೂರು ಜನ ಸಹಾಯಕ ಬೋಟ್ ಕ್ಯಾಪ್ಟನ್, ಮೂವರು ಚಾಲಕರು ಹಾಗೂ ಮೂವರು ಕಲಾಸಿಗಳು, ಓರ್ವ ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಹದಿಮೂರು ಜನ ತಾಂತ್ರಿಕ ಸಿಬ್ಬಂದಿ ನಿಯೋಜನೆಯಾಗಬೇಕಿದೆ. ಈಗಿರುವ ಸಿಬ್ಬಂದಿಯಲ್ಲಿ ಪ್ರತಿದಿನ ಇಬ್ಬರಂತೆ ಆವರ್ತನ ಪದ್ಧತಿಯಲ್ಲಿ ಮಂಗಳೂರಿನ ಕರಾವಳಿ ಕಾವಲು ಠಾಣೆ ಬೋಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸ್ವಯಂ ಸೇವಕರ ಬಳಕೆ: ಠಾಣೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ಈಗಿರುವ ಸಿಬ್ಬಂದಿಗೆ ಅನುಕೂಲವಾಗುವಂತೆ ಸುರತ್ಕಲ್‌ನಿಂದ ಕೈಪುಂಜಾಲ್‌ವರೆಗೆ ಕರಾವಳಿ ನಿಯಂತ್ರಣ ದಳ ರಚಿಸಿ ಸ್ಥಳೀಯವಾಗಿ ಹತ್ತೊಂಬತ್ತು ಜನರನ್ನು ಸ್ವಯಂ ಸೇವಕರಾಗಿ ನಿಯುಕ್ತಿಗೊಳಿಸಲಾಗಿದೆ. ಈ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ಠಾಣೆಗೆ ಅವರು ಮಾಹಿತಿ ನೀಡುತ್ತಾರೆ. ಅಲ್ಲದೆ ಠಾಣಾ ಸಿಬ್ಬಂದಿ ಅಲ್ಲಲ್ಲಿ ನಡೆಸುವ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ಊರವರನ್ನು ಸಂಘಟಿಸುವ ಜವಾಬ್ದಾರಿ ಅವರಿಗೆ ನೀಡಲಾಗಿದೆ.

ಎರಡು ತಿಂಗಳಿನಿಂದ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದ್ದು, ಮಂಗಳೂರಿನ ಇನ್‌ಸ್ಪೆಕ್ಟರ್ ಅವರೇ ಹೆಚ್ಚುವರಿಯಾಗಿ ಹೆಜಮಾಡಿ ಠಾಣೆಯ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಇನ್‌ಸ್ಪೆಕ್ಟರ್ ನಿಯುಕ್ತಿಗೊಳ್ಳಲಿದ್ದಾರೆ.
– ಪ್ರಮೋದ್ ರಾವ್, ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ.