ನಿದ್ದೆಯ ಕೊರತೆಯಿಂದ ವಾರ್ಷಿಕ ಒಂದು ಟ್ರಿಲಿಯನ್​ ಡಾಲರ್​ ನಷ್ಟ

ನವದೆಹಲಿ: ಕೆಲಸದ ಒತ್ತಡ, ಬದಲಾದ ಜೀವನ ಶೈಲಿಯಿಂದಾಗಿ ನಾವು ಸರಿಯಾಗಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ನಿದ್ದೆಯ ಕೊರತೆಯಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಜತೆಯಲ್ಲೇ ಆರ್ಥಿಕವಾಗಿಯೂ ಸಹ ಬಹುದೊಡ್ಡ ನಷ್ಟವುಂಟಾಗುತ್ತಿದ್ದು, ನಿದ್ದೆಯ ಕೊರತೆಯಿಂದಾಗಿ ಜಗತ್ತಿನಾದ್ಯಂತ ಒಂದು ಟ್ರಿಲಿಯನ್​ ಅಮೆರಿಕನ್​ ಡಾಲರ್​ ನಷ್ಟವುಂಟಾಗುತ್ತಿದೆ ಎಂಬುದು ವರದಿಯೊಂದರಿಂದ ತಿಳಿದು ಬಂದಿದೆ.

RAND ಆರ್ಗನೈಸೇಷನ್​ 34 OECD ಸದಸ್ಯ ರಾಷ್ಟ್ರಗಳಲ್ಲಿ ಸಂಶೋಧನೆ ನಡೆಸಿತ್ತು. ಇದರ ಅನ್ವಯ ನಿದ್ರೆಯ ಕೊರತೆ ಕೆಲಸಗಾರರ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ವೈದ್ಯಕೀಯ ವೆಚ್ಚ, ಉತ್ಪಾದಕತೆಯಲ್ಲಿನ ಕುಸಿತ, ವಾಹನ ವೆಚ್ಚ, ಅಪಘಾತ ವೆಚ್ಚ ಹಾಗೂ ಇನ್ನೂ ಹಲವು ವಿಷಯಗಳು ಆರ್ಥಿಕತೆಯನ್ನು ಕುಂಠಿತಗೊಳಿಸುತ್ತವೆ ಎಂದು ವರದಿ ತಿಳಿಸಿದೆ.

ನಿದ್ದೆಯ ಕೊರತೆಯಿಂದಾಗಿ ಅತಿಹೆಚ್ಚು ನಷ್ಟವುಂಟಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನ ಪಡೆದಿದ್ದು ಇಲ್ಲಿ ವಾರ್ಷಿಕ ಸುಮಾರು 411 ಬಿಲಿಯನ್​ ಡಾಲರ್​ ನಷ್ಟವುಂಟಾಗುತ್ತಿದೆ. ಜಪಾನ್​ ದ್ವಿತೀಯ ಸ್ಥಾನದಲ್ಲಿದ್ದು ಒಟ್ಟು 138 ಬಿಲಿಯನ್​ ಡಾಲರ್​, ಜರ್ಮನಿ ಮತ್ತು ಇಂಗ್ಲೆಂಡ್​ನಲ್ಲಿ ಸುಮಾರು 50-60 ಬಿಲಿಯನ್​ ಡಾಲರ್​ ನಷ್ಟವುಂಟಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಪಟ್ಟಿಯಲ್ಲಿ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತವನ್ನು ಪರಿಗಣಿಸಿಲ್ಲ. ಇಲ್ಲಿ ಬಹುತೇಕ ಕೆಲಸಗಾರು ಹೆಚ್ಚಿನ ಕೆಲಸದ ಒತ್ತಡ ಎದುರಿಸುತ್ತಿದ್ದಾರೆ. ಆದರೆ ಇಲ್ಲಿ ಕೆಲಸದ ಒತ್ತಡ ಮತ್ತು ನಿದ್ದೆಯ ಕೊರತೆಯಿಂದ ಆರ್ಥಿಕತೆಯ ಮೇಲೆ ಉಂಟಾಗುತ್ತಿರುವ ನಷ್ಟದ ಕುರಿತು ಅಧ್ಯಯನಗಳು ನಡೆದಿಲ್ಲ. (ಏಜೆನ್ಸೀಸ್​)