ನಿರ್ವಹಣೆ ಇಲ್ಲದೆ ಸೊರಗಿದ ಕೋಟಿ ಚೆನ್ನಯ ಥೀಂ ಪಾರ್ಕ್

ಆರ್.ಬಿ.ಜಗದೀಶ್ ಕಾರ್ಕಳ
ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್ ಪಾಳು ಬೀಳುವ ಸ್ಥಿತಿಯಲ್ಲಿದೆ. ಮೂಲಸೌಲಭ್ಯದ ಕೊರತೆ ಇದ್ದು, ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಎರಡು ತಿಂಗಳಿನಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಇಲಾಖೆ ಫ್ಯೂಸ್ ತೆಗೆದಿದ್ದು, ಥೀಂ ಪಾರ್ಕ್ ಪ್ರಸ್ತುತ ಕತ್ತಲೆಯಲ್ಲಿದೆ.

ಮಾನವತ್ವದಿಂದ ದೈವತ್ವಕ್ಕೇರಿದ ಕೋಟಿ-ಚೆನ್ನಯರ ನೆಲೆವೀಡು ಕರ್ನಾಟಕದ ಕರಾವಳಿ ಪ್ರದೇಶ. ಅವರ ಕಾರಣಿಕ ಸ್ಮರಣೆಗಾಗಿ ಕಾರ್ಕಳ ಕ್ರೀಡಾಂಗಣ ಪರಿಸರದಲ್ಲಿ ಥೀಂ ಪಾರ್ಕ್ ನಿರ್ಮಾಣದ ಕನಸು ಕಂಡ ಶಾಸಕ ವಿ.ಸುನೀಲ್ ಕುಮಾರ್ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ವಿಶೇಷ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು. 178 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪಾರ್ಕ್‌ನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಲೋಕಾರ್ಪಣೆ ಮಾಡಿದ್ದರು.
ಆರಂಭದಲ್ಲಿ ಥೀಂ ಪಾರ್ಕ್ ನಿರ್ವಹಣೆ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಕ್ರಮೇಣ ಅನೈತಿಕ ಚಟುವಟಿಕೆ ತಾಣ ಹಾಗೂ ಕುಡುಕರ ಅಡ್ಡೆಯಾಗಿ ಮಾರ್ಪಾಡಾಯಿತು. ಈ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿದ ಬಳಿಕ ಇಲಾಖೆ ಒಂದಿಷ್ಟು ಎಚ್ಚರಗೊಂಡಿತು.

ಬೆಲೆ ಬಾಳುವ ವಸ್ತುಗಳಿಗೆ ಬೆಲೆಯೇ ಇಲ್ಲ!: ಪಾರ್ಕ್‌ನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ದೈವ- ದೇವರ-ಗರಡಿ-ಗುತ್ತು, ಬರ್ಕೆಗಳಲ್ಲಿ ಆರಾಧನೆಗೆ ಹಾಗೂ ದೈನಂದಿನ ಬಳಕೆಗೆ ಉಪಯೋಗಿಸಲಾಗುತ್ತಿದ್ದ ಅಮೂಲ್ಯ ಪರಿಕರಗಳಿವೆ. ಬೇಟೆಯ ಪರಿಕರ, ಮೂರ್ತೆ ವೃತ್ತಿಗೆ ಬೇಕಾದ ತರ್ಕತ್ತಿ, ಕೈತಲೆ, ಕಾರತಲೆ, ಕೋಲು, ತಾಮ್ರದ ಬುತ್ತಿ, ಕೌಳಿಗೆ, ಕಂಚಿನ ಉರುಳಿ, ಯುದ್ಧಕ್ಕೆ ಬಳಸುತ್ತಿದ್ದ ಖಡ್ಗ, ಚೆನ್ನೆಮಣೆ, ಬೀಸುಗತ್ತಿ, ಕಂಚಿನ ಬುಟ್ಟಿ, ಮರದ ಶ್ಯಾವಿಗೆ ಸೇರು, ಮೊಸರು ಕಡಿಯುವ ವಿವಿಧ ಮರದ ಸಲಕರಣೆಗಳು, ಕೊಂಬು, ಕಹಳೆ ವಾಲಗ, ನದಿ ದೋಣಿ, ಎತ್ತಿನ ಗಾಡಿಯ ಚಕ್ರಗಳು, ಹಳೇ ಕಾಲದ ವಿಭಿನ್ನ ಮಾದರಿಯ ವಿಗ್ರಹಗಳು, ಗರಡಿ ಮನೆಗಳ ಜೋಕಾಲಿಗಳು, ಮಂಟಪ, ಗೋಪುರಗಳಿವೆ.

ನಿರ್ವಹಣೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಬೆಲೆ ಬಾಳುವ ಕೆಲ ಅಮೂಲ್ಯ ವಸ್ತುಗಳು ಅಲ್ಲಿಂದ ಕಣ್ಮರೆಯಾಗುತ್ತಿದೆ.

ಸಿಬ್ಬಂದಿಗೆ ವೇತನವಿಲ್ಲ: ಥೀಂ ಪಾರ್ಕ್‌ನಲ್ಲಿ ನಾಲ್ವರು ದುಡಿಯುತ್ತಿದ್ದಾರೆ. ಅವರಿಗೆ ವೇತನ ಸಿಗದೆ 6 ತಿಂಗಳು ಕಳೆದಿದೆ. ಈ ಹಿಂದೆ ನಿರ್ವಹಣೆಗೆ ಬಂದ ಒಟ್ಟು 17 ಲಕ್ಷ ರೂ. ಅನುದಾನದಲ್ಲಿ 4 ಸಿಬ್ಬಂದಿಗೆ ವೇತನ ಸಹಿತ ವಿದ್ಯುತ್ ಬಿಲ್ ಮತ್ತಿತರ ಖರ್ಚನ್ನು ಭರಿಸಲಾಗಿತ್ತು.

ಕಾಲೇಜು ಸಮೀಪ ಥೀಂ ಪಾರ್ಕ್ ಇರುವುದರಿಂದ ಪರೀಕ್ಷಾ ಸಂದರ್ಭ ಓದುವ ಸಲುವಾಗಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು, ಶೌಚಗೃಹ ಇಲ್ಲದಿರುವುರಿಂದ ಅಲ್ಲಿಗೆ ಬರುವವರು ಅಲ್ಪ ಸಮಯದಲ್ಲಿಯೇ ತೆರಳುತ್ತಿದ್ದಾರೆ. ವಿದ್ಯುತ್ ಇಲ್ಲದಿರುವುದರಿಂದ ಸಂಜೆ ಬಳಿಕ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
|ಸುನೀಲ್ ನೆಲ್ಲಿಗುಡ್ಡೆ