- ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕರೊನಾ ಅಬ್ಬರ ಹಾಗೂ ಲಾಕ್ಡೌನ್ ನಡುವೆ ರಾಜ್ಯದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಮಳೆಗಾಲಕ್ಕೆ ಮುಂಚೆ ವ್ಯಾಕ್ಸಿನೇಷನ್ ಪೂರ್ಣವಾಗುವುದು ಅನುಮಾನ. ಕೋವಿಡ್ ಕಾರಣದಿಂದ ಜಾನುವಾರುಗಳಿಗೆ ಲಸಿಕೆ ಹಾಕಿಸಲು ರೈತರು ಒಂದೆಡೆ ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಗ್ರಾಮಗಳಲ್ಲಿ ಸೋಂಕು ಹೆಚ್ಚಿದ ಕಾರಣ ಅಲ್ಲಿಗೆ ತೆರಳಲು ಇಲಾಖೆ ನೌಕರರು ಹಿಂದೇಟು ಹಾಕುತ್ತಿದ್ದಾರೆ.
ಈ ಮಧ್ಯೆ ಕೋವಿಡ್ ಕಾರಣದಿಂದ ಪಶುವೈದ್ಯ ಇಲಾಖೆಯ ಶೇ.50 ನೌಕರರು ಮಾತ್ರ ಕೆಲಸಕ್ಕೆ ಹಾಜರಾಗುತ್ತಿರುವುದು ಕೂಡ ಲಸಿಕೆ ಕಾರ್ಯ ವಿಳಂಬಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭಕ್ಕೆ ಮುನ್ನ ಪ್ರತಿವರ್ಷ ದನ-ಕರು, ಎಮ್ಮೆ, ಕುರಿ, ಮೇಕೆಗಳಿಗೆ ಚಪ್ಪೆರೋಗ, ಗಳಲೆ ರೋಗ, ಕರುಳು ಬೇನೆ, ಕುರಿ ಸಿಡುಬು ಹತೋಟಿಗೆ ಲಸಿಕೆ ಹಾಕುವುದು ಸಾಮಾನ್ಯ. ಈ ಬಾರಿ ಕರೊನಾ ಇದಕ್ಕೂ ಅಡ್ಡಿಪಡಿಸಿದೆ.
17 ಜಿಲ್ಲೆಗಳಲ್ಲಿ ಲಸಿಕೆ: ರಾಜ್ಯದ 17 ಜಿಲ್ಲೆಗಳಲ್ಲಿ ಗಳಲೆ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು, ಧಾರವಾಡ, ದಾವಣಗೆರೆ, ಕಲಬುರಗಿ, ಗದಗ, ಹಾಸನ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಯ ಅಂದಾಜು 1.95 ಕೋಟಿ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕುವ ಗುರಿ ಇದೆ. ಚಪ್ಪೆರೋಗಕ್ಕೆ ಧಾರವಾಡ, ಚಿತ್ರದುರ್ಗ, ದಾವಣಗೆರೆ, ಹಾಸನ, ಕಲಬುರಗಿ, ಮೈಸೂರು, ಶಿವಮೊಗ್ಗ ಜಿಲ್ಲೆಗಳ 6.56 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ. ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಈ ಕಾರ್ಯ ಪೂರ್ಣವಾಗಬೇಕಿತ್ತು.
ಕೋಟ್
ಕರುಳು ಬೇನೆ, ಕುರಿ ಸಿಡುಬು ರೋಗಗಳ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಿದೆ. ಆದರೆ ಕೋವಿಡ್ ಕಾರಣ ನೌಕರರು ಗ್ರಾಮಗಳಿಗೆ ತೆರಳಲು ಉತ್ಸಾಹ ತೋರಿಸುತ್ತಿಲ್ಲ. ನಮ್ಮಲ್ಲೂ ಹಲವರಿಗೆ ಕೋವಿಡ್ ವಿರುದ್ಧದ ಲಸಿಕೆ ಸಿಕ್ಕಿಲ್ಲ. ಆದ್ಯತೆ ಮೇಲೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
| ಡಾ.ಟಿ.ಕೃಷ್ಣಪ್ಪ ಉಪನಿರ್ದೇಶಕ, ಪಶುವೈದ್ಯ ಇಲಾಖೆ, ಚಿತ್ರದುರ್ಗ