ನಡ್ಸಾಲು ಶಾಲೆ ಮೂಲಸೌಕರ್ಯ ಕೊರತೆ

ಹೇಮನಾಥ್ ಪಡುಬಿದ್ರಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಾಡಾಗಿರುವ ಪಡುಬಿದ್ರಿ ನಡ್ಸಾಲು ಶಾಲೆ ಮೂಲ ಸೌಕರ್ಯದ ಕೊರತೆ ನಡುವೆ ಯಾವುದೇ ಸ್ಪಷ್ಟ ಚಿತ್ರಣವಿಲ್ಲದೆ ಗೊಂದಲದಲ್ಲೇ 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮುಂದಡಿಯಿಡುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಕೆಪಿಎಸ್ ಆಗಿ ಘೋಷಣೆಯಾಗಿರುವ ನಡ್ಸಾಲು ಶಾಲೆಯಲ್ಲಿ ಒಂದರಿಂದ ಪದವಿಪೂರ್ವ ಶಿಕ್ಷಣದವರೆಗಿನ ತರಗತಿಗಳಿವೆ. ಇದೀಗ ಇಲ್ಲಿ ಎಲ್‌ಕೆಜಿಯಿಂದ ಆಂಗ್ಲ ಮಾಧ್ಯಮವನ್ನು ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಕೆಪಿಎಸ್ ಆದ ಬಳಿಕ ಫಲಕ ಅಳವಡಿಸಿ ಅನಾವರಣ ಮಾಡಲಾಗಿದೆ. ಒಂದೆರಡು ಬಾರಿ ಶಾಸಕರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಸಭೆ ನಡೆಸಲಾಗಿದೆ. ಕೆಪಿಎಸ್ ಬಗ್ಗೆ ಅಧಿಕಾರಿಗಳೂ ಹಾಗೂ ಶಿಕ್ಷಕರ ನಡುವೆ ಇನ್ನೂ ಗೊಂದಲಗಳಿವೆ.

ಬೆರಳೆಣಿಕೆ ಮಕ್ಕಳ ದಾಖಲಾತಿ: ಮೊದಲೇ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಈ ಶಾಲೆಯಲ್ಲಿ ಈಗ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಇಲಾಖಾ ಮಟ್ಟದಲ್ಲಿ ಶಿಕ್ಷಕರ ಹಾಗೂ ಆಯಾ ನೇಮಕಕ್ಕೆ ಶಿಕ್ಷಣಾಧಿಕಾರಿಗಳಿಂದ ನಿರ್ದೇಶನವಾಗಿದೆ. ಅದು ಬಿಟ್ಟರೆ ಮಕ್ಕಳ ದಾಖಲಾತಿ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈಗ ಆಂಗ್ಲ ಮಾಧ್ಯಮಕ್ಕೆ ಕೇವಲ ಬೆರಳೆಣಿಕೆ ಮಕ್ಕಳ ದಾಖಲಾತಿಯಾಗಿದೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಎಲ್ಲ ಅಂಗನವಾಡಿಗಳಿಗೆ ನಾಲ್ಕಾರು ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲಾತಿ ನಡೆಸಿದರೂ, ಈ ಬಾರಿಯ ಶೈಕ್ಷಣಿಕ ವರ್ಷ ಆರಂಭಕ್ಕೆ ಎರಡು ದಿನಗಳಿರುವಾಗ ಊರೂರುಗಳಲ್ಲಿ ಆಂಗ್ಲ ಮಾಧ್ಯಮ ದಾಖಲಾತಿ ಬಗ್ಗೆ ಬ್ಯಾನರ್ ಅಳವಡಿಸಿ ಪ್ರಚಾರ ಆರಂಭಿಸಲಾಗಿದೆ. ಆದರೆ ಕನ್ನಡ ಮಾಧ್ಯಮ ವಿಭಾಗಕ್ಕೆ ಇನ್ನಷ್ಟೇ ದಾಖಲಾತಿ ಆಗಬೇಕಿದೆ.

ಮೂಲ ಸೌಕರ್ಯ ಕೊರತೆ: ಪ್ರಾಥಮಿಕ ತರಗತಿಗಳ ಮೇಲ್ಛಾವಣಿ ದುರಸ್ತಿ ಮಾಡಿ ಕೇವಲ ಶಾಲೆಯ ಮುಂಭಾಗಕ್ಕೆ ಹಳದಿ, ಕೆಂಪು ಬಣ್ಣ ಬಳಿದಿರುವುದು ಬಿಟ್ಟರೆ ಕೆಪಿಎಸ್ ಸುತ್ತೋಲೆಯಲ್ಲಿರುವ ಸಾಕಷ್ಟು ಮಾನದಂಡಗಳು ಈ ಶಾಲೆಯಲ್ಲಿ ಇನ್ನೂ ಕೈಗೂಡಬೇಕಿದೆ. ಶಾಲೆಯಲ್ಲಿ ಡಿಸೆಂಬರ್ ತಿಂಗಳಿನಿಂದಲೇ ಕುಡಿಯುವ ನೀರಿನ ಸಮಸ್ಯೆ ಇದ್ದು, ಮಕ್ಕಳು ಕುಡಿಯುವ ನೀರು ಹಾಗೂ ಊಟದ ಬಟ್ಟಲು ತೊಳೆಯಲು ಪರದಾಡಬೇಕಾದ ಸ್ಥಿತಿಯಿದೆ.

ಕೊಳವೆ ಬಾವಿ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಬೇಡಿಕೆ ಸಲ್ಲಿಸಿದ್ದರೂ, ಅದು ಇನ್ನೂ ನಿರ್ಮಾಣವಾಗಿಲ್ಲ. ಶಾಲೆಯಲ್ಲಿ ಶೌಚಗೃಹವಿದೆ. ಆಂಗ್ಲ ಮಾಧ್ಯಮ ತರಗತಿಗೆ ಬೇಕಾಗುವ ಆಧುನಿಕ ಶಿಕ್ಷಣ ಸೌಕರ್ಯಗಳಿಲ್ಲ, ಶಾಲೆ ಎದುರು ವಿಶಾಲವಾದ ಆಟದ ಮೈದಾನವಿದ್ದರೂ, ಶಾಲೆಯ ಸುತ್ತ ಆವರಣ ಗೋಡೆ ಇನ್ನೂ ರಚನೆಯಾಗಿಲ್ಲ. ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರಾದ ಅನುದಾನ ಸ್ಥಗಿತಕೊಂಡ ಪರಿಣಾಮ ಕಟ್ಟಡ ರಚನೆಗೆ ತೊಡಕಾಗಿದೆ. ಕೆಪಿಎಸ್ ಆದರೂ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿಭಾಗಗಳಿರುವುದರಿಂದ ಸಂಸ್ಥೆಯನ್ನು ಸಮಗ್ರವಾಗಿ ಯಾರು ನಿರ್ವಹಣೆ ಮಾಡಬೇಕೆನ್ನುವ ಗೊಂದಲ ಶಿಕ್ಷಕರಲ್ಲಿ ಕಾಡುತ್ತಿದೆ. ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಬೇರೆ ಬೇರೆಯಾಗಿರುವುದರಿಂದ ಅಧಿಕಾರಿಗಳಲ್ಲೂ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.

ಪ್ರೌಢಶಾಲೆ, ಪಿಯುಸಿ ಬೆರಳೆಣಿಕೆ ದಾಖಲಾತಿ: ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇನ್ನೂ ಆರಂಭವಾಗಿಲ್ಲ. ಕಳೆದ ಕೆಲ ವರ್ಷಗಳಿಂದ ಇಲ್ಲಿನ ಶಿಕ್ಷಕರ ನಡುವಿನ ವೈಮನಸ್ಸಿನಿಂದ ಪ್ರೌಢಶಾಲೆಯಲ್ಲಿ ಫಲಿತಾಂಶದ ಪರಿಣಾಮ ಬೀರುತ್ತಿದೆ. ಎಂಟನೇ ತರಗತಿಗೆ ಇನ್ನೂ ದಾಖಲಾತಿ ಆರಂಭವಾಗಿಲ್ಲ. ಪ್ರೌಢಶಾಲೆ ಫಲಿತಾಂಶ ಹಿನ್ನಡೆಯಿಂದ ಪದವಿ ಪೂರ್ವ ವಿಭಾಗಕ್ಕೂ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ. ಪ್ರೌಢ ವಿಭಾಗದ ಸಹಶಿಕ್ಷಕರೂ ಹಾಗೂ ಪದವಿಪೂರ್ವ ವಿಭಾಗದ ಪ್ರಾಂಶುಪಾಲರೂ ಪ್ರಭಾರಿಯಾಗಿರುವುದರಿಂದ ಇನ್ನಷ್ಟು ಗೊಂದಲಗಳಿವೆ. ಇಲಾಖೆ ಶೀಘ್ರ ಎಚ್ಚೆತ್ತು ಎರಡು ವಿಭಾಗಕ್ಕೂ ಪೂರ್ಣ ಪ್ರಮಾಣದ ಹುದ್ದೆ ನೀಡಬೇಕಿದೆ. ಶಿಕ್ಷಕರೂ ತಮ್ಮ ವೈಯಕ್ತಿಕ ಪ್ರತಿಷ್ಠೆ ಬದಿಗಿರಿಸಿ ಸಂಸ್ಥೆಯ ಉದ್ಧಾರಕ್ಕೆ ಮನ ಮಾಡಬೇಕಿದೆ. ಶಾಲಾಡಳಿತ ಮಂಡಳಿ ಹಾಗೂ ಊರವರು ಕಟಿಬದ್ಧರಾಗಬೇಕಿದೆ.

ಕೆಪಿಎಸ್‌ನ ಅಗತ್ಯತೆ ಪೂರೈಸಲು ಹಿರಿಯಡ್ಕ ಹಾಗೂ ಪಡುಬಿದ್ರಿ ಶಾಲೆಗಳ ತಲಾ 1 ಕೋಟಿ 90 ಲಕ್ಷ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪ್ರೌಢ ಹಾಗೂ ಪದವಿಪೂರ್ವ ತರಗತಿಗಳಿಗೆ ಬೇಕಾಗುವ ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾಗಬೇಕಿದೆ. ಅನುದಾನ ಬಿಡುಗಡೆಗಾಗಿ ಪ್ರಯತ್ನಗಳು ಮುಂದುವರಿದಿದೆ. ಎಲ್ಲ ವಿಭಾಗಗಳು ಒಂದೇ ಸೂರಿನಡಿ ಬರುವುದರಿಂದ ಒಂದೇ ಆಡಳಿತ ಸಮಿತಿಯಿರಲಿದ್ದು, ಸಮಿತಿ ತೀರ್ಮಾನದಂತೆ ಹಿರಿಯಡ್ಕದಲ್ಲಿ ಪ್ರಾಂಶುಪಾಲರಿಗೆ ನಿರ್ವಹಣೆ ಹೊಣೆ ವಹಿಸಲಾಗಿದೆ. ಇಲ್ಲಿಯೂ ದಿನಾಂಕ ನಿಗದಿಪಡಿಸಿ ಶೀಘ್ರ ಸಮಿತಿ ಸಭೆ ನಡೆಸಿ ಕೆಪಿಎಸ್ ಬಗೆಗಿನ ಗೊಂದಲಗಳನ್ನು ಪರಿಹರಿಸಲಾಗುವುದು.
– ಲಾಲಾಜಿ ಆರ್. ಮೆಂಡನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು

Leave a Reply

Your email address will not be published. Required fields are marked *