ಪಶುವೈದ್ಯಕೀಯ ಕಾಲೇಜಿಗೆ ಅನುದಾನ ಕೊರತೆ

<ಬಿಡುಗಡೆಯಾಗದ ಹಣ ಕಾಲೇಜು ಆರಂಭ ಇನ್ನೂ ಎರಡು ವರ್ಷ ವಿಳಂಬ

ಮಂಗಳೂರು: ಸರ್ಕಾರ ಮಂಜೂರು ಮಾಡಿದ ಅನುದಾನ 110 ಕೋಟಿ ರೂ. ಬಿಡುಗಡೆ ಮಾಡಿದ್ದು 35.50 ಕೋಟಿ ರೂ.!
ಪುತ್ತೂರಿನ ಕೊಲದ ಪಶುವೈದ್ಯಕೀಯ ಕಾಲೇಜಿನ ಸ್ಥಿತಿ ಇದು. 2018-19ನೇ ಸಾಲಿನಿಂದ ಶೈಕ್ಷಣಿಕ ಚಟುವಟಿಕೆ ಆರಂಭವಾಗ ಬೇಕಿದ್ದರೂ, ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಿದ್ದರೂ, ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ, ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಕಾಲೇಜು ಆರಂಭಗೊಳ್ಳಲು ಇನ್ನೂ ಎರಡು ವರ್ಷ ವಿಳಂಬವಾಗಲಿದೆ. ಇದೀಗ, 2020-21ನೇ ಸಾಲಿನಿಂದ ಕಾರ್ಯಾರಂಭ ಮಾಡಲು ಇಲಾಖೆ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ.

2012-13ನೇ ಸಾಲಿನ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪುತ್ತೂರಿನ ಕೊಲದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ(ಕೊಲ ಫಾರ್ಮ್)ದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಕೊಲ ಫಾರ್ಮ್ ಸುಪರ್ದಿಯಲ್ಲಿದ್ದ 247 ಎಕರೆ ಜಮೀನನ್ನು ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರಿಗೆ ವರ್ಗಾಯಿಸಲಾಗಿತ್ತು.

ವಿಳಂಬ ನೀತಿ: ಜಾಗ ಹಸ್ತಾಂತರವಾದ ಕೂಡಲೇ ಕಾಮಗಾರಿ ಶುರು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಸರ್ಕಾರ ಬದಲಾಯಿತು. ಆದರೆ, ಕಾಮಗಾರಿ ಆರಂಭವಾಗದೆ ಎರಡು ವರ್ಷದಿಂದ ಜಾಗ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಈ ಮಧ್ಯೆ, ರಾಜಕೀಯ ಪ್ರಭಾವ ಬಳಸಿ ಯೋಜನೆಯನ್ನು ತುಮಕೂರಿಗೆ ವರ್ಗಾಯಿಸುವ ಪ್ರಯತ್ನವೂ ನಡೆದಿತ್ತು. ಹಾಸನ ಹಾಗೂ ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಯಾದ ಕಾರಣ ಪುತ್ತೂರು ಪಶು ವೈದ್ಯಕೀಯ ಕಾಲೇಜಿನ ಪ್ರಕ್ರಿಯೆಗೆ ಮತ್ತಷ್ಟು ವಿಳಂಬವಾಯಿತು.

ಸಿಎಂ ಶಿಲಾನ್ಯಾಸ: 2016ರ ಅಕ್ಟೋಬರ್ 9ರಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲದ ಪಶುವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಎರಡು ವರ್ಷದಲ್ಲಿ ಕಾಲೇಜು ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರು. ಹೌಸಿಂಗ್ ಬೋರ್ಡ್‌ನಿಂದ ಆಸ್ಪತ್ರೆ ಕಟ್ಟಡ, ಕಾಲೇಜು ಕಟ್ಟಡ ಸಹಿತ ಒಟ್ಟು 5 ಕಟ್ಟಡಗಳ ಕಾಮಗಾರಿ ಆರಂಭವಾಗಿತ್ತು. ಮತ್ತೆ ಸರ್ಕಾರ ಬದಲಾಯಿತು. ಅನುದಾನ ಮಂಜೂರಾಗಿದ್ದರೂ, ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಕಟ್ಟಡ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ.

ಕಟ್ಟಡ ಕಾಮಗಾರಿ ಪೂರ್ಣವಾಗದ ಕಾರಣ 2018-19ನೇ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಕಾಮಗಾರಿಗೆ ಉಳಿದ ಮೊತ್ತ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. 2020 ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. 2020-21ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗುವುದು.
| ವೆಂಕಟರಾವ್ ನಾಡಗೌಡ, ಪಶುಸಂಗೋಪನೆ ಸಚಿವ

ಪುತ್ತೂರು ಪಶು ವೈದ್ಯಕೀಯ ಕಾಲೇಜಿಗೆ ಮಂಜೂರಾದ 110 ಕೋಟಿ ರೂ.ನಲ್ಲಿ 35.50 ಕೋಟಿ ರೂ. ಬಿಡುಗಡೆಯಾಗಿದೆ. ಆಸ್ಪತ್ರೆ ಕಟ್ಟಡ, ಕಾಲೇಜು ಕಟ್ಟಡ, ಹುಡುಗರ ಹಾಗೂ ಹುಡುಗಿಯರ ಹಾಸ್ಟೆಲ್, ಗೆಸ್ಟ್ ಹೌಸ್ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಶೇ.50 ಕಾಮಗಾರಿ ಪೂರ್ಣಗೊಂಡಿದೆ. ಪೂರ್ತಿ ಹಣ ಬಿಡುಗಡೆಯಾಗದಿದ್ದರೂ, ಕಾಮಗಾರಿ ನಿರಂತರ ನಡೆಯುತ್ತಿದೆ.
|ನಾರಾಯಣ ಭಟ್, ವಿಶೇಷ ಕರ್ತವ್ಯ ಅಧಿಕಾರಿ, ಪುತ್ತೂರು ಪಶು ವೈದ್ಯಕೀಯ ಕಾಲೇಜು