ಗ್ರಂಥಾಲಯದಲ್ಲಿ ಸೌಕರ್ಯಗಳ ಕೊರತೆ

ಗುಂಡ್ಲುಪೇಟೆ: ಪಟ್ಟಣದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಓದುಗರಿಗೆ ತೀವ್ರ ಅನನುಕೂಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಗ್ರಂಥಾಲಯ ಗ್ರಹಣ ಪೀಡಿತವಾಗಿದೆ. ಗ್ರಂಥಾಲಯ ಇಲಾಖೆಯು ಇಲ್ಲಿಗೆ ಹತ್ತು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ನೀಡಿದ್ದರೂ ವ್ಯವಸ್ಥಿತವಾಗಿ ಸಂಗ್ರಹಿಸಲು ಸಾಧ್ಯವಾಗಿಲ್ಲ. ಸರಬರಾಜು ಮಾಡಿರುವ ಪೀಠೋಪಕರಣಗಳನ್ನು ಅಳವಡಿಸಲು ಸಾಧ್ಯವಾಗದೆ, ಒಂದೆರಡು ಕೊಠಡಿಗಳಲ್ಲಿ ರಾಶಿಹಾಕಲಾಗಿದೆ. ಪರಸ್ಥಳದಿಂದ ಬರುವ ಗ್ರಂಥಪಾಲಕರು ಸಕಾಲದಲ್ಲಿ ಬಾಗಿಲು ತೆರೆಯುತ್ತಿಲ್ಲ.


ಇಲ್ಲಿಗೆ ಪ್ರತಿನಿತ್ಯ ದಿನಪತ್ರಿಕೆಗಳು, ಪುಸ್ತಕಗಳು, ನಿಯತಕಾಲಿಕಗಳ ಓದುಗರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಉದ್ಯೋಗಾಕಾಂಕ್ಷಿಗಳು ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿ ಕುಳಿತು ಓದಲು ಸಾಧ್ಯವಾಗದ ಪರಿಸ್ಥಿತಿಯುಂಟಾಗಿದೆ. ಎಲ್ಲೆಡೆ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಿ ಆಧುನೀಕರಣಗೊಳಿಸುತ್ತಿದ್ದರೂ ಇಲ್ಲಿಗೆ ಸಮರ್ಪಕ ಬೆಳಕಿನ ವ್ಯವಸ್ಥೆಯೇ ಇಲ್ಲದಾಗಿದೆ.


ಬಾಡಿಗೆ ಕಟ್ಟಡ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕೇಂದ್ರ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆಗೆ ಪಡೆಯಲಾಗಿದೆ. ಇತ್ತೀಚೆಗೆ ಪುರಸಭೆ ನಿವೇಶನ ನೀಡಿದ್ದರೂ ಇನ್ನೂ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ.


ಇಲ್ಲಿ ಪುಸ್ತಕಗಳನ್ನು ಸಂಗ್ರಹಿಸಲು, ಪೀಠೋಪಕರಣಗಳನ್ನು ಅಳವಡಿಸಲು ಅಗತ್ಯ ಕೊಠಡಿ, ಬೆಳಕು ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಸೊರಗಿದೆ. ಓದುಗರು ತಮಗೆ ಬೇಕಾದ ಪುಸ್ತಕಗಳನ್ನು ಹುಡುಕಲು ಪರದಾಡುವಂತಾಗಿದೆ. ವಿದ್ಯುತ್ ಕಡಿತಗೊಂಡರೆ ಓದುಗರು ಗ್ರಂಥಾಲಯದಿಂದ ಹೊರಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ನಗರ ಕೇಂದ್ರ ಗ್ರಂಥಾಲದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಲ್ಲಿಗೆ ಹೋಗುವ ಓದುಗರು ತಮ್ಮೊಂದಿಗೆ ಟಾರ್ಚ್ ತೆಗೆದುಕೊಂಡು ಹೋಗಬೇಕಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳು ದೊರಕುತ್ತಿಲ್ಲ. ಇತ್ತೀಚೆಗೆ ಜನರಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸವೇ ತಪ್ಪುತ್ತಿದ್ದು ಓದಲು ಪ್ರೇರೇಪಣೆ ನೀಡಬೇಕಾದ ಗ್ರಂಥಾಲಯ ಇರುವ ಸ್ವಲ್ಪ ಆಸಕ್ತಿಯನ್ನೂ ಕಳೆದುಕೊಳ್ಳುವಂತೆ ಮಾಡಿದೆ.
ಸುರೇಶ್ ನಾಯ್ಕ ತಾಲೂಕು ಕರವೇ ಅಧ್ಯಕ್ಷ

ಪುರಸಭೆ ನೀಡಿರುವ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿ ಸಕಾಲದಲ್ಲಿ ಬರುತ್ತಿಲ್ಲ ಎಂಬ ಆರೋಪವಿದ್ದು ಇನ್ನೊಬ್ಬ ಸಿಬ್ಬಂದಿ ನೇಮಿಸಲಾಗುವುದು. ಯುಪಿಎಸ್ ಅಳವಡಿಕೆ ಹಾಗೂ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಶಿವಸ್ವಾಮಿ ಜಿಲ್ಲಾ ಗ್ರಂಥಾಲಯಾಧಿಕಾರಿ, ಚಾಮರಾಜನಗರ