ಆದರ್ಶ ಶಾಲೆಯಲ್ಲಿ ಸೌಕರ್ಯ ಕೊರತೆ

ಗುಂಡ್ಲುಪೇಟೆ: ಆದರ್ಶ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.

ತಾಲೂಕಿನ ಚಿಕ್ಕತುಪ್ಪೂರು ಸಮೀಪ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ 2010ರಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಶಾಲೆ ಪ್ರಾರಂಭವಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪ್ರತ್ಯೇಕ ಅಡುಗೆ ಮನೆ, ಆಹಾರ ಪದಾರ್ಥಗಳ ದಾಸ್ತಾನು ಕೊಠಡಿ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಸುತ್ತಲೂ ಕಾಂಪೌಂಡ್ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ. ಇದರಿಂದ ಶಾಲಾ ಕೊಠಡಿಗಳಲ್ಲಿ ರೇಷನ್ ಅನ್ನು ದಾಸ್ತಾನು ಮಾಡುವುದರ ಜತೆಗೆ ಮತ್ತೊಂದು ಕೊಠಡಿಯಲ್ಲಿ ಅಡುಗೆ ಮಾಡಬೇಕಾಗಿದೆ

ಐವರು ಅಡುಗೆ ಸಿಬ್ಬಂದಿಯಿದ್ದು, ನೆಲದ ಮೇಲೆ ತರಕಾರಿ ಕತ್ತರಿಸಬೇಕಿದೆ. ಅಲ್ಲದೆ ನೆಲದ ಮೇಲೆ ಗ್ಯಾಸ್ ಸ್ಟೌ ಇರಿಸಿ ಹೊರಗಿನಿಂದ ನೀರು ತಂದು ಅಡುಗೆ ಮಾಡಬೇಕಾಗಿದೆ. ಮಕ್ಕಳು ಅಶುಚಿತ್ವದ ನೆಲದ ಮೇಲೆ ಕುಳಿತು ಊಟ ಸೇವಿಸುತ್ತಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುದ್ಧ ಕುಡಿಯುವ ನೀರಿಲ್ಲ: ಶಾಲೆಗೆ ಪ್ರತ್ಯೇಕ ಕೊಳವೆ ಬಾವಿಯಿದ್ದು, ಇದರ ನೀರನ್ನೇ ಅಡುಗೆ, ಶೌಚಗೃಹಕ್ಕೂ ಬಳಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವಿಲ್ಲದ ಪರಿಣಾಮ ಮಕ್ಕಳೂ ಇದೇ ನೀರನ್ನು ಕುಡಿಯಬೇಕಿದೆ. ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು ಕ್ರಮ ವಹಿಸಬೇಕಿದೆ ಎಂದು ಪಾಲಕರಾದ ಪ್ರಕಾಶ್ ಹಾಗೂ ಸಂಪತ್ತು ಒತ್ತಾಯಿಸಿದ್ದಾರೆ.

ಪ್ರತ್ಯೇಕ ತಟ್ಟೆ ಇಲ್ಲ
ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳ ಬಳಿ ಪ್ರತ್ಯೇಕ ತಟ್ಟೆ ಇಲ್ಲ. ತಟ್ಟೆಗಳನ್ನು ವಿದ್ಯಾರ್ಥಿಗಳು ತಮ್ಮ ಮನೆಯಿಂದ ತರಬೇಕಾಗಿದೆ. ಅಲ್ಲದೆ ಪ್ರತ್ಯೇಕ ಊಟದ ಹಾಲ್ ಇಲ್ಲದೆ ಕಾರಿಡಾರಿನಲ್ಲಿ ಕುಳಿತು ಮಾಡಬೇಕಾಗಿದೆ. ಇದರಿಂದ ಬೇಸತ್ತ ಕೆಲವು ಪಾಲಕರು ತಮ್ಮ ಮಕ್ಕಳಿಗೆ ಮನೆಯಿಂದಲೇ ಬಾಕ್ಸ್‌ನಲ್ಲಿ ಮಧ್ಯಾಹ್ನದ ಊಟ ಕಳುಹಿಸುತ್ತಿದ್ದಾರೆ.

ಚಟುವಟಿಕೆಗಳಲ್ಲಿ ಮುಂಚೂಣಿ
ಎಲ್ಲ ವಿಷಯಗಳಿಗೂ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಪ್ರತಿ ವರ್ಷವೂ ಇಲ್ಲಿನ ಮಕ್ಕಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೇಂದ್ರ ಪುರಸ್ಕೃತ ಯೋಜನೆಯಡಿ ಶಾಲೆಯನ್ನು ನಿರ್ಮಿಸಿದ್ದರಿಂದ ಅಡುಗೆ ಮನೆ ಹಾಗೂ ಊಟದ ಹಾಲ್ ನಿರ್ಮಾಣವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಿದ್ಧತೆ ನಡೆಸಲಾಗಿದೆ. ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಿ ಕೊಡುವಂತೆ ಬನ್ನಿತಾಳಪುರ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದೆ.
ಸುಕನ್ಯಾ ಮುಖ್ಯಶಿಕ್ಷಕಿ, ಆದರ್ಶ ಶಾಲೆ

 

Leave a Reply

Your email address will not be published. Required fields are marked *