ಭಾರತ್​ ಬಂದ್​: ಹಿರಿಯ ಪೊಲೀಸ್‌ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಸೂಕ್ತ ಕ್ರಮ ಕೈಗೊಳ್ಳಿ ಎಂದ ಗೃಹಸಚಿವ

ಬೆಂಗಳೂರು: ದೇಶಾದ್ಯಂತ ಎರಡು ದಿನ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ವಿವಿಧೆಡೆ ಓಡಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಎಂ ಬಿ ಪಾಟೀಲ್‌ ಸೂಚಿಸಿದ್ದಾರೆ.

ಕೆಲ ಕಡೆ ಬಸ್ ಮೇಲೆ ಕಲ್ಲು ತೂರಾಡುವ ಪ್ರಕರಣ ನಡೆದಿದೆ. ಕಲ್ಲು ತೂರಿದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ರಾಜ್ಯವ್ಯಾಪಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿರುವ ಅವರು, ಪುಟ್ಟರಂಗಶೆಟ್ಟಿ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿಲ್ಲ. ಎಸಿಬಿಗೆ ಪ್ರಕರಣ‌ವನ್ನು ವಹಿಸಲಾಗಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ಯಾರೇ ತಪ್ಪಿತಸ್ಥರಿದ್ದರೂ‌ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಮಾಡಲಿ. ತನಿಖೆ ‌ಮುಗಿಯುವ ಮುಂಚೆ ರಾಜೀನಾಮೆ‌ ಕೊಡುವ ಅಗತ್ಯವಿಲ್ಲ. ಇದೆಲ್ಲವೂ ಷಡ್ಯಂತ್ರವಿರಬಹುದು ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)